ವಿವಾದಿತ ಮಸೂದೆಗಳಲ್ಲಿ ನಿಜಕ್ಕೂ ಏನಿದೆ? ವಿರೋಧ, ಸಮರ್ಥನೆಯ ನೆಲೆ ಏನು?

ವಿವಾದಿತ ಮೂರು ಕೃಷಿ ಕಾಯ್ದೆಗಳು ಯಾವುವು? ಅವುಗಳಲ್ಲಿ ಏನಿದೆ? ಏತಕ್ಕಾಗಿ ರೈತರು ಅವುಗಳನ್ನು ಸಾರಾಸಗಟಾಗಿ ವಿರೋಧಿಸುತ್ತಿದ್ದಾರೆ? ಸರ್ಕಾರದ ಸಮರ್ಥನೆಗಳೇನು? ಎಂಬುದನ್ನು ವಿವರಿಸುವ ಪ್ರಯತ್ನ ಇಲ್ಲಿದೆ.
ವಿವಾದಿತ ಮಸೂದೆಗಳಲ್ಲಿ ನಿಜಕ್ಕೂ ಏನಿದೆ? ವಿರೋಧ, ಸಮರ್ಥನೆಯ ನೆಲೆ ಏನು?

ದೇಶದ ಉದ್ದಗಲಕ್ಕೆ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವವರೆಗೆ ತಮ್ಮ ಹೋರಾಟ ನಿಲ್ಲದು ಎಂದು ಪಟ್ಟು ಹಿಡಿದಿರುವ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ 70 ದಿನಗಳನ್ನು ಪೂರೈಸಿದೆ. ಹೋರಾಟಕ್ಕೆ ಬೆಂಬಲವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ರೈತ ಧರಣಿ, ಪ್ರತಿಭಟನೆ, ರಸ್ತೆ ತಡೆಯಂತಹ ಬಗೆಬಗೆಯ ಹೋರಾಟಗಳು ಬಿರುಸುಗೊಂಡಿವೆ.

ರೈತ ಹೋರಾಟದ ವಿರುದ್ಧದ ಸರ್ಕಾರದ ದಮನ ನೀತಿ, ಹತ್ತಿಕ್ಕುವ ಪ್ರಯತ್ನಗಳು, ಕಳಂಕ ಮೆತ್ತುವ ದುಸ್ಸಾಹಸಗಳ ವಿರುದ್ಧ ರೈತರ ಒಗ್ಗಟ್ಟು ಪ್ರದರ್ಶನದ ಮಹಾಪಂಚಾಯಿತಿಗಳಿಗೆ ಭಾಗವಹಿಸುತ್ತಿರುವ ರೈತರ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಇದೆ. ಇಷ್ಟಾಗಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ರೈತರ ಕಡುವಿರೋಧದ ಮೂರು ಕೃಷಿ ಕಾಯ್ದೆಗಳಲ್ಲಿ ಯಾವುದೇ ದೋಷವಿಲ್ಲ; ಅವು ರೈತರ ಹಿತಕ್ಕಾಗಿಯೇ ರೂಪಿಸಿದ ಕಾನೂನುಗಳು. ಈವರೆಗೆ ಯಾವೊಬ್ಬರೂ ಆ ಕಾಯ್ದೆಗಳಲ್ಲಿ ಏನು ಲೋಪವಿದೆ? ಎಲ್ಲಿ ಲೋಪವಿದೆ ಎಂದು ನಿಖರವಾಗಿ ಹೇಳಿಲ್ಲ. ಇದು ಕಾಂಗ್ರೆಸ್ ನಡೆಸುತ್ತಿರುವ ಪಿತೂರಿ, ವಿದೇಶಿ ಶಕ್ತಿಗಳ ಕುಮ್ಮಕ್ಕು, ದೇಶದ್ರೋಹಿಗಳ ಅಪಪ್ರಚಾರ ಎಂದಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂತಹ ಮಾತುಗಳನ್ನು ಶುಕ್ರವಾರ ಕೂಡ ಆಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ದೇಶದಲ್ಲಿ ರೈತ ಹೋರಾಟ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟದ ಪರ ಪ್ರಭಾವಿಗಳು ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಸರ್ಕಾರ ಒತ್ತಡಕ್ಕೆ ಸಿಲುಕಿದೆ. ಬಿಜೆಪಿ ಮತ್ತು ಅದರ ಪರಿವಾರದ ಬೆಂಬಲಿಗರು ಕೂಡ ಈಗ ಸರ್ಕಾರ ರೈತ ಹೋರಾಟದ ವಿಷಯದಲ್ಲಿ ಅನುಸರಿಸುತ್ತಿರುವ ಹಠಮಾರಿತನ ಮತ್ತು ಹತ್ತಿಕ್ಕುವ ಯತ್ನಗಳ ಬಗ್ಗೆ ಸಾರ್ವಜನಿಕವಾಗಿಯೇ ಅಸಮಾಧಾನ ಹೊರಹಾಕತೊಡಗಿದ್ದಾರೆ. ರೈತರು ತಮ್ಮ ಜೀವ ಪಣಕ್ಕಿಟ್ಟು ವಿರೋಧಿಸುತ್ತಿರುವ ಮೂರು ಕೃಷಿ ಕಾಯ್ದೆಗಳಲ್ಲಿ ನಿಜಕ್ಕೂ ಏನಿದೆ? ಯಾವ ಅಂಶಗಳು ರೈತರಿಗೆ ಮತ್ತು ಕೃಷಿಗೆ ಸಂಚಕಾರ ತರಲಿವೆ ಎಂಬ ಬಗ್ಗೆ ಇಡೀ ದೇಶದಲ್ಲಿ ಪಕ್ಷ, ಪಂಥ, ಸಿದ್ಧಾಂತ ಮರೆತು ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ.

ಆ ಹಿನ್ನೆಲೆಯಲ್ಲಿ ಮೂರು ಕೃಷಿ ಕಾಯ್ದೆಗಳು ಯಾವುವು? ಅವುಗಳಲ್ಲಿ ಏನಿದೆ? ಏತಕ್ಕಾಗಿ ರೈತರು ಅವುಗಳನ್ನು ಸಾರಾಸಗಟಾಗಿ ವಿರೋಧಿಸುತ್ತಿದ್ದಾರೆ? ಸರ್ಕಾರದ ಸಮರ್ಥನೆಗಳೇನು? ಎಂಬುದನ್ನು ವಿವರಿಸುವ ಪ್ರಯತ್ನವನ್ನು ‘ಪ್ರತಿಧ್ವನಿ’ ಮಾಡಿದೆ.

ಮೂರು ವಿವಾದಿತ ಮಸೂದೆಗಳು ಯಾವುವು?

ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ವಾಣಿಜ್ಯ(ಉತ್ತೇಜನ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿ ಮತ್ತು ಕೃಷಿ ಸೇವಾ(ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ ಮತ್ತು ಅಗತ್ಯ ಸರಕುಗಳ(ತಿದ್ದುಪಡಿ) ಕಾಯ್ದೆ.

ಆ ಕಾಯ್ದೆಗಳು ಯಾವ ಬದಲಾವಣೆಗಳಿಗೆ ಸಂಬಂಧಿಸಿವೆ? ಸರ್ಕಾರದ ಸಮರ್ಥನೆ ಏನು? ರೈತರ ಆತಂಕವೇನು?

1. ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ವಾಣಿಜ್ಯ(ಉತ್ತೇಜನ ಮತ್ತು ನೆರವು) ಕಾಯ್ದೆ: ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಲೆ ಮತ್ತು ಅಳತೆ ಹಾಗೂ ತೂಕದ ವಿಷಯದಲ್ಲಿ ಮೋಸವಾಗದಂತೆ ಕಣ್ಗಾವಲು ವ್ಯವಸ್ಥೆಯಾಗಿ ಕೆಲಸ ಮಾಡುತ್ತಿರುವ ಎಪಿಎಂಸಿ ವ್ಯವಸ್ಥೆಯನ್ನು ಹೊರತುಪಡಿಸಿ, ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಮಾರಾಟದ ಅವಕಾಶ ಕಲ್ಪಿಸುವ ಪ್ರಮುಖ ಉದ್ದೇಶ.

ಸಮರ್ಥನೆ: ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಸಿಗಲಿದೆ. ರೈತರಿಗೆ ಹೆಚ್ಚು ಆಯ್ಕೆಗಳು ಸಿಗುತ್ತವೆ. ಉತ್ತಮ ಬೆಲೆ ಸಿಗುವ ಕಡೆ ಮಾರಾಟ ಮಾಡುವ ಅವಕಾಶ ಸಿಗಲಿದೆ. ಎಪಿಎಂಸಿ ಸೆಸ್ ಅಥವಾ ಲೆವಿಯಿಂದ ರೈತರಿಗೆ ಮುಕ್ತಿ ಸಿಗಲಿದೆ ಎಂಬುದು ಸರ್ಕಾರದ ಸಮರ್ಥನೆ.

ಆತಂಕ: ಎಪಿಎಂಸಿ ಮೂಲಕ ನಡೆಯುವ ಕೃಷಿ ಉತ್ಪನ್ನಗಳಿಗೆ ಮಾತ್ರ ಇರುವ ಕನಿಷ್ಟ ಬೆಂಬಲ ಬೆಲೆ(ಎಂಎಸ್ ಪಿ) ಸೌಲಭ್ಯದಿಂದ ರೈತರು ವಂಚಿತರಾಗುತ್ತಾರೆ. ಆರಂಭದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ಸಿಕ್ಕರೂ, ಕೃಷಿ ಉತ್ಪನ್ನ ಮಾರುಕಟ್ಟೆ ವಲಯದಲ್ಲಿ ಕಾರ್ಪೊರೇಟ್ ಕಂಪನಿಗಳು ಏಕಸ್ವಾಮ್ಯ ಸ್ಥಾಪಿಸಿದ ಬಳಿಕ ರೈತರ ಶೋಷಣೆ ಆರಂಭವಾಗಲಿದೆ. ಕ್ರಮೇಣ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯೇ ಇಲ್ಲವಾಗುತ್ತದೆ. ಸದ್ಯ ಕೃಷಿ ಉತ್ಪನ್ನಗಳ ವಿಷಯದಲ್ಲಿ ಇರುವ ಸರ್ಕಾರದ ಮಧ್ಯಸ್ಥಿಕೆ ಇಲ್ಲದ ಸ್ಥಿತಿಯಲ್ಲಿ ಬೆಳೆಗಾರ ಮತ್ತು ವ್ಯಾಪಾರಿ ನಡುವಿನ ನೇರ ವಹಿವಾಟು ವ್ಯವಸ್ಥೆ ಜಾರಿಯಲ್ಲಿರುವುದರಿಂದ ರೈತರಿಗೆ ಬೆಲೆ ಮತ್ತು ತೂಕದಲ್ಲಿ ಅನ್ಯಾಯವಾದಾಗ ಪ್ರಶ್ನಿಸುವ, ನ್ಯಾಯ ಕೇಳುವ ವ್ಯವಸ್ಥೆಯೇ ಇರುವುದಿಲ್ಲ. ಜೊತೆಗೆ ಅಗತ್ಯ ವಸ್ತು ಕಾಯ್ದೆಗೂ ತಿದ್ದುಪಡಿ ತಂದಿರುವುದರಿಂದ, ಕೃಷಿ ಉತ್ಪನ್ನಗಳನ್ನು ಯಾರು ಎಷ್ಟು ಬೇಕಾದರೂ ಖರೀದಿಸಬಹುದು ಮತ್ತು ಎಷ್ಟು ದಿನ ಬೇಕಾದರೂ ದಾಸ್ತಾನು ಮಾಡಬಹುದು ಎಂಬ ಕಾನೂನು ಮಾಡಿರುವುದರಿಂದ ಬೃಹತ್ ಕಂಪನಿಗಳು ಸುಗ್ಗಿ ಕಾಲದಲ್ಲಿ ಅಗ್ಗದ ಬೆಲೆಗೆ ಖರೀದಿಸಿ, ದಾಸ್ತಾನು ಮಾಡಿ, ಮಾರುಕಟ್ಟೆಯಲ್ಲಿ ಕೃತಕ ಹಾಹಾಕಾರ ಸೃಷ್ಟಿಸಿ ಅತ್ತ ಬೆಳೆಗಾರರನ್ನೂ, ಇತ್ತ ಬಳಕೆದಾರರನ್ನೂ ಶೋಷಿಸುತ್ತಾರೆ.

ವಿವಾದಿತ ಮಸೂದೆಗಳಲ್ಲಿ ನಿಜಕ್ಕೂ ಏನಿದೆ? ವಿರೋಧ, ಸಮರ್ಥನೆಯ ನೆಲೆ ಏನು?
ರೈತರು ಬೇಡ ಎನ್ನುತ್ತಿರುವ ಆ ಮೂರು ಮರಣಶಾಸನಗಳ ವಿವರ

2. ಬೆಲೆ ಖಾತರಿ ಮತ್ತು ಕೃಷಿ ಸೇವಾ(ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ: ಎಪಿಎಂಸಿ ವ್ಯವಸ್ಥೆಯ ಹೊರಗೆ ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಮಾರುವ ಅವಕಾಶವನ್ನು ಮೊದಲ ಕಾಯ್ದೆ ಒದಗಿಸಿದರೆ, ಈ ಎರಡನೇ ಕಾಯ್ದೆ, ಹಾಗೆ ಮುಕ್ತ ಮಾರುಕಟ್ಟೆಯಲ್ಲಿ ವ್ಯವಹರಿಸಲು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ವಲಯದ ಕಂಪನಿಗಳೊಂದಿಗೆ ಬೆಳೆ ಕಟಾವಿಗೆ ಪೂರ್ವಭಾವಿ ಒಪ್ಪಂದ ಮಾಡಿಕೊಳ್ಳಲು ಬೇಕಾದ ಕಾನೂನುಗಳನ್ನು ಒಳಗೊಂಡಿದೆ. ಅಂದರೆ ಇದು ಒಪ್ಪಂದ ಕೃಷಿ ಕುರಿತ ಕಾನೂನು. ಕೃಷಿ ವಲಯದಲ್ಲಿ ಕಾರ್ಪೊರೇಟ್ ಹೂಡಿಕೆಗೆ ಕಾನೂನು ಬಲ ಒದಗಿಸುತ್ತದೆ.

ಸಮರ್ಥನೆ: ಬೆಲೆ ಕಟಾವಿಗೆ ಮುಂಚೆಯೇ ರೈತರು ವ್ಯಾಪಾರಿ ಸಂಸ್ಥೆ, ವ್ಯಕ್ತಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ ಸುಗ್ಗಿ ವೇಳೆಯ ಬೆಲೆ ಏರಿಳಿತದ ಅಪಾಯದಿಂದ ಈ ಕಾಯ್ದೆ ರೈತರಿಗೆ ರಕ್ಷಣೆ ಒದಗಿಸುತ್ತದೆ. ಜೊತೆಗೆ ವ್ಯಾಪಾರಿ ಸಂಸ್ಥೆಗಳೊಂದಿಗೆ ಬೆಳೆಯ ತಾಂತ್ರಿಕತೆ, ಒಳಸುರಿಗಳ ನೆರವು ಪಡೆಯುವ ಅವಕಾಶವನ್ನೂ ನೀಡುತ್ತದೆ. ಜೊತೆಗೆ ಬೆಳೆ ಇರುವಲ್ಲಿಯೇ ಖರೀದಿ ಮಾಡುವುದರಿಂದ ರೈತನಿಗೆ ತನ್ನ ಉತ್ಪನ್ನದ ಮಾರುಕಟ್ಟೆ ವೆಚ್ಚ ಉಳಿತಾಯವಾಗುತ್ತದೆ.

ಆತಂಕ: ಫಸಲು ಬರುವ ಮುಂಚೆಯೇ ಕಂಪನಿಗಳೊಂದಿಗೆ ಅದರ ಪ್ರಮಾಣ ಮತ್ತು ಮೌಲ್ಯದ ಕುರಿತು ಒಪ್ಪಂದ ಮಾಡಿಕೊಳ್ಳುವುದರಿಂದ ಸುಗ್ಗಿಯ ವೇಳೆಯ ಮಾರುಕಟ್ಟೆ ದರ ರೈತನಿಗೆ ಸಿಗಲಾರದು. ಜೊತೆಗೆ ತನ್ನ ಬೆಳೆಯನ್ನು ತನ್ನ ಕೈಯಲ್ಲಿಟ್ಟುಕೊಂಡು ಬೆಲೆ ನ್ಯಾಯಯುತ ಬೆಲೆಗೆ ಬೇಡಿಕೆ ಇಡುವ ರೈತನ ಸ್ವಾತಂತ್ರ್ಯ ಹರಣವಾಗುತ್ತದೆ. ಖಾಸಗೀ ಕಂಪನಿಗಳು, ರಫ್ತುದಾರರು, ಸಗಟು ಮಾರಾಟಗಾರರು, ಮತ್ತು ಕೃಷಿ ಉತ್ಪನ್ನ ಸಂಸ್ಕರಣೆದಾರರು ರೈತರೊಂದಿಗೆ ಬಿತ್ತನೆಗೆ ಪೂರ್ವದಲ್ಲೇ ಫಸಲಿನ ದರ ನಿಗದಿ ಮಾಡಿ ವಂಚಿಸುವ ಸಾಧ್ಯತೆಗಳಿವೆ. ಕಾಯ್ದೆಯಲ್ಲಿ ರೈತರಿಗೆ ಅಂತಹ ವಂಚನೆಯ ವಿರುದ್ಧ ಪರಿಣಾಮಕಾರಿ ಸುರಕ್ಷತಾ ಕ್ರಮಗಳಿಲ್ಲ.

ವಿವಾದಿತ ಮಸೂದೆಗಳಲ್ಲಿ ನಿಜಕ್ಕೂ ಏನಿದೆ? ವಿರೋಧ, ಸಮರ್ಥನೆಯ ನೆಲೆ ಏನು?
ಹೊಸ ಕೃಷಿ ಸುಧಾರಣೆಗಳ ಹಿಂದೆ ಇರುವ ಅಸಲೀ ಅಜೆಂಡಾ ಯಾವುದು?

3. ಅಗತ್ಯ ಸರಕುಗಳ(ತಿದ್ದುಪಡಿ) ಕಾಯ್ದೆ: ಈ ಮೊದಲು ಅಗತ್ಯವಸ್ತು ಕಾಯ್ದೆಯ ವ್ಯಾಪ್ತಿಯಲ್ಲಿದ್ದ ಏಕದಳ ಮತ್ತು ದ್ವಿದಳ ಧಾನ್ಯ, ಎಣ್ಣೆಕಾಳು, ಈರುಳ್ಳಿ, ಆಲೂಗಡ್ಡೆ ಮುಂತಾದ ಕೃಷಿ ಉತ್ಪನ್ನಗಳನ್ನು ಆ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಅವುಗಳ ಖರೀದಿ, ಸಾಗಣೆ ಮತ್ತು ದಾಸ್ತಾನಿನ ಮೇಲೆ ಇದ್ದ ನಿರ್ಬಂಧವನ್ನು ತೆಗೆದುಹಾಕುವ ಕಾಯ್ದೆ.

ಸಮರ್ಥನೆ: ಈ ದಿನಬಳಕೆಯ ಕೃಷಿ ಉತ್ಪನ್ನಗಳ ಮೇಲೆ ಅಗತ್ಯ ವಸ್ತು ಕಾಯ್ದೆಯ ಕಡಿವಾಣ ಇದ್ದಿದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ವಲಯದಲ್ಲಿ ವಿದೇಶಿ ಸಂಸ್ಥೆಗಳು ಸೇರಿದಂತೆ ಕಾರ್ಪರೇಟ್ ವಲಯ ಹೂಡಿಕೆಗೆ ಹಿಂಜರಿಯುತ್ತಿತ್ತು. ಈಗ ಆ ಕಾಯ್ದೆ ವ್ಯಾಪ್ತಿಯಿಂದ ಈ ಉತ್ಪನ್ನಗಳನ್ನು ಹೊರಗಿಟ್ಟಿರುವುದರಿಂದ ವಿದೇಶಿ ನೇರ ಹೂಡಿಕೆ(ಎಫ್ ಡಿಐ) ಹರಿದುಬರಲಿದೆ. ಆ ಮೂಲಕ ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆ ಬರಲಿದೆ.

ಆತಂಕ: ಬೃಹತ್ ಕಾರ್ಪರೇಟ್ ಸಂಸ್ಥೆಗಳು ಈ ತಿದ್ದುಪಡಿಯ ಲಾಭ ಪಡೆಯಲಿವೆ. ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುವಾಗ ಅಗ್ಗದ ಬೆಲೆಗೆ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ದಾಸ್ತಾನು ಮಾಡಿ, ಬಳಿಕ ಗ್ರಾಹಕ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳ ಮಾಡಿ ಮಾರುತ್ತವೆ. ಆ ಮೂಲಕ ಕೃಷಿಕರು ಮತ್ತು ಗ್ರಾಹಕರಿಬ್ಬರೂ ಈ ಬೃಹತ್ ಕಂಪನಿಗಳು ಅಡಿಯಾಳಾಗುವ ವ್ಯವಸ್ಥೆ ಸೃಷ್ಟಿಯಾಗುತ್ತದೆ. ನಿತ್ಯ ಬಳಕೆಯ ಆಹಾರೋತ್ಪನ್ನಗಳನ್ನು ಅಗತ್ಯ ವಸ್ತು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವುದು ಸರ್ಕಾರವೇ ಕಾಳಸಂತೆಯನ್ನು ಅಧಿಕೃತ ಮಾಡಿದಂತೆ.

ವಿವಾದಿತ ಮಸೂದೆಗಳಲ್ಲಿ ನಿಜಕ್ಕೂ ಏನಿದೆ? ವಿರೋಧ, ಸಮರ್ಥನೆಯ ನೆಲೆ ಏನು?
ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!

ಕನಿಷ್ಟ ಬೆಂಬಲ ಬೆಲೆ(ಎಂಎಸ್ ಪಿ) ರದ್ದಾಗುತ್ತದೆಯೇ?

ಸದ್ಯ ದೇಶದಲ್ಲಿ ಗೋಧಿ, ಭತ್ತ, ರಾಗಿ, ಜೋಳ ಸೇರಿದಂತೆ ಸುಮಾರು 23 ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಆ ಪೈಕಿ ಸರ್ಕಾರವೇ ನೇರವಾಗಿ ಮಾರುಕಟ್ಟೆ ಪ್ರವೇಶಿಸಿ ಎಂಎಸ್ ಪಿ ಬೆಲೆಯಲ್ಲಿ ಖರೀದಿ ಮಾಡುವುದು ಕೇವಲ ಭತ್ತ, ಗೋಧಿ ಮುಂತಾದ ಕೆಲವೇ ಕೆಲವು ಆಹಾರ ಧಾನ್ಯಗಳನ್ನು ಮಾತ್ರ. ಮಾಹಿತಿಯ ಪ್ರಕಾರ ದೇಶದ ಶೇ.6ರಷ್ಟು ಕೃಷಿಕರು ಮಾತ್ರ ಸರ್ಕಾರದ ಎಂಎಸ್ ಪಿ ಯ ನೇರ ಪ್ರಯೋಜನ ಪಡೆಯುತ್ತಿದ್ಧಾರೆ. ಆದರೆ, ಎಪಿಎಂಸಿ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕೃಷಿ ಉತ್ಪನ್ನ ವಹಿವಾಟು ಈ ಎಂಎಸ್ ಪಿ ದರದ ಆಧಾರದ ಮೇಲೆಯೇ ನಡೆಯುತ್ತದೆ. ಹಾಗಾಗಿ ಎಪಿಎಂಸಿಯ ಹೊರಗಿನ ವಹಿವಾಟು ಕೂಡ ಸದ್ಯ (ಎಂಎಸ್ ಪಿ ಘೋಷಿತ ಉತ್ಪನ್ನಗಳ ವಿಷಯದಲ್ಲಿ) ಆ ಬೆಲೆಯ ಆಧಾರದ ಮೇಲೆಯೇ ನಿಗದಿಯಾಗುತ್ತಿರುವುರಿಂದ ರೈತರಿಗೆ ಕನಿಷ್ಟ ಬೆಲೆಯ ಖಾತರಿ ಇದೆ.

ಆದರೆ, ಈ ಹೊಸ ಕಾಯ್ದೆಗಳು ಎಪಿಎಂಸಿ ಹೊರಗಿನ ಮುಕ್ತ ವಹಿವಾಟಿಗೆ ಅವಕಾಶ ನೀಡುವುದರಿಂದ ಎಂಎಸ್ ಪಿಯ ಖಾತರಿ ಸಿಗುವುದಿಲ್ಲ ಎಂಬುದು ರೈತರ ಆತಂಕ. ಆದರೆ, ಎಪಿಎಂಸಿ ರದ್ದಾಗುವುದಿಲ್ಲ ಮತ್ತು ಎಂಎಸ್ ಪಿ ಕೂಡ ರದ್ದಾಗುವುದಿಲ್ಲ ಎಂಬುದು ಸರ್ಕಾರದ ಸ್ಟಷ್ಟನೆ. ಆದರೆ, ಎಪಿಎಂಸಿ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಮಾತ್ರ ಎಂಎಸ್ ಪಿ ಚಾಲ್ತಿಯಲ್ಲಿರುವುದರಿಂದ ಹೊರಗಿನ ವ್ಯವಹಾರಕ್ಕೆ ಆ ಖಾತರಿ ಇಲ್ಲ ಮತ್ತು ಕ್ರಮೇಣ ಎಪಿಎಂಸಿ ಹೊರಗಿನ ವಹಿವಾಟು ಮೇಲುಗೈ ಪಡೆಯುವುದರಿಂದ ಸ್ವತಃ ಎಪಿಎಂಸಿಗಳೇ ಅಪ್ರಸ್ತುತವಾಗಲಿವೆ ಮತ್ತು ಅದರೊಂದಿಗೆ ಎಂಎಸ್ಪಿ ಕೂಡ ರದ್ದಾಗಲಿದೆ ಎಂಬುದು ರೈತರ ಆತಂಕ. ಭವಿಷ್ಯದ ಕುರಿತ ಈ ಆತಂಕಕ್ಕೆ ಸರ್ಕಾರದ ಬಳಿ ಯಾವುದೇ ಸಮಜಾಯಿಷಿ ಇಲ್ಲ! ಹಾಗಾಗಿ ಸಹಜವಾಗೇ, ಸರ್ಕಾರ ತಮ್ಮನ್ನು ವಂಚಿಸುತ್ತಿದೆ. ಏನೋ ಹುನ್ನಾರದೊಂದಿಗೆ ಈ ಹೊಸ ಕಾಯ್ದೆ ಜಾರಿಗೆ ತರಲಾಗಿದೆ ಎಂಬ ಅನುಮಾನ ರೈತರಲ್ಲಿದೆ.

ಹಾಗಾಗಿ ಮುಖ್ಯವಾಗಿ ಎಂಎಸ್ ಪಿ ಮತ್ತು ಎಪಿಎಂಸಿ ವ್ಯವಸ್ಥೆಯನ್ನು ಖಾತರಿಪಡಿಸಿ, ಎಪಿಎಂಸಿಯ ಹೊರಗೂ ಎಂಎಸ್ ಪಿ ಕಡ್ಡಾಯ ಮಾಡಿ ಎಂಬುದು ಪ್ರತಿಭಟನಾನಿರತ ರೈತರ ಬೇಡಿಕೆಗಳಲ್ಲಿ ಒಂದು.

ಇಂತಹ ಅನುಮಾನ ಮತ್ತು ವಾಸ್ತವಿಕ ಆತಂಕದ ಹಿನ್ನೆಲೆಯಲ್ಲಿಯೇ ರೈತರು ಕಳೆದ 70 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ಧಾರೆ. ಕಾರ್ಪೊರೇಟ್ ಮತ್ತು ವಿದೇಶಿ ಕಂಪನಿಗಳ ಹಿತಾಸಕ್ತಿ ಕಾಯುವ ಏಕೈಕ ಉದ್ದೇಶದಿಂದಲೇ ಸರ್ಕಾರ, ರೈತರ ತೀವ್ರ ವಿರೋಧದ ಹೊರತಾಗಿಯೂ ವಿವಾದಿತ ಕಾಯ್ದೆಗಳನ್ನು ವಾಪಸು ಪಡೆಯಲು ಸಿದ್ಧವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com