ಪಶ್ಚಿಮ ಬಂಗಾಳ ಚುನಾವಣೆ: ಐದು ರಥ ಯಾತ್ರೆಗಳನ್ನು ನಡೆಸಲಿರುವ ಬಿಜೆಪಿ

ಫೆಬ್ರವರಿ 6 ರಂದು ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರು ನವದ್ವೀಪ್‌ (ನಬದ್ವೀಪ್‌)ನಿಂದ ಮೊದಲ ಹಂತದ ರಥ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಈ ರೀತಿಯ ಐದು ರಥ ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ರಥಯಾತ್ರೆಯು 25 ದಿನಗಳ ಕಾಲ ನಡೆಯಲಿದೆ.
ಪಶ್ಚಿಮ ಬಂಗಾಳ ಚುನಾವಣೆ: ಐದು ರಥ ಯಾತ್ರೆಗಳನ್ನು ನಡೆಸಲಿರುವ ಬಿಜೆಪಿ

ದಿನೇ ದಿನೇ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಏರುತ್ತಲೇ ಇದೆ. ಈವರೆಗೆ ರೋಡ್‌ ಶೋಗಳ ಮುಖಾಂತರ ಮತದಾರರನ್ನು ಸೆಳೆಯುವ ತಂತ್ರವನ್ನು ಅನುಸರಿಸಿದ್ದ ಬಿಜೆಪಿ ಈ ರಥ ಯಾತ್ರೆಗೆ ಸಜ್ಜಾಗಿದೆ. ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರು ಕಳೆದ ಎರಡು ತಿಂಗಳಲ್ಲಿ ಹಲವು ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಪ್ರಯತ್ನ ಮಾಡಿದ್ದಾರೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಹಿಡಿಯಲೇಬೇಕೆಂಬ ಪ್ರಯತ್ನ ಬಿಜೆಪಿಯಿಂದ ಸಾಗುತ್ತಿದೆ.

ಶನಿವಾರ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರು ನವದ್ವೀಪ್‌ (ನಬದ್ವೀಪ್‌)ನಿಂದ ಮೊದಲ ಹಂತದ ರಥ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಈ ರೀತಿಯ ಐದು ರಥ ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ರಥಯಾತ್ರೆಯು 25 ದಿನಗಳ ಕಾಲ ನಡೆಯಲಿದೆ.

ಫೆಬ್ರುವರಿ 11ರಂದು ಕೋಚ್‌-ಬಿಹಾರ್‌ನಿಂದ ಅಮಿತ್‌ ಶಾ ರಥ ಯಾತ್ರೆಯ ನೇತೃತ್ವವಹಿಸಲಿದ್ದಾರೆ. ನಂತರದ ಮೂರು ರಥ ಯಾತ್ರೆಗಳು ಝಾರ್‌ಗ್ರಾಮ್‌, ಕಕ್‌ದ್ವೀಪ್‌ ಮತ್ತು ತಾರಾಪೀಠ್‌ನಿಂದ ಆರಂಭವಾಗಲಿವೆ. ಈ ಐದು ರಥ ಯಾತ್ರೆಗಳು ರಾಜ್ಯದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ರಥ ಯಾತ್ರೆಯ ಕುರಿತಾಗಿ ಈಗ ಪಶ್ಚಿಮ ಬಂಗಾಳದಲ್ಲಿ ಅಪಸ್ವರ ಎದ್ದಿದೆ. ರಥ ಯಾತ್ರೆ ಸಾಂವಿಧಾನಿಕ ಎಂದು ಬಿಜೆಪಿ ಹೇಳಿದರೆ, ಇದು ಪ್ರಚೋದನಾತ್ಮಕ ಯಾತ್ರೆ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ. ಈ ರಥ ಯಾತ್ರೆಯು ರಾಜ್ಯದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸಲಿದೆ ಎಂದು ವಕೀಲರೊಬ್ಬರು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ದೂರನ್ನೂ ದಾಖಲಿಸಿದ್ದಾರೆ.

ಈ ಯಾತ್ರೆಗಳನ್ನು ʼಪರಿವರ್ತನಾ ಯಾತ್ರೆʼ ಎಂದು ಕರೆದಿರುವ ಬಿಜೆಪಿಯು ಇದು ರಾಜ್ಯದಲ್ಲಿ ಬದಲಾವಣೆಯನ್ನು ತರಲು ನಡೆಸುವ ಯಾತ್ರೆ ಎಂದಿದೆ.

“ಇದು ಕೇವಲ ರಾಜಕೀಯ ಕಾರಣಕ್ಕೆ ನಡೆಸುತ್ತಿರುವ ಯಾತ್ರೆ. ರಾಮ ಮಂದಿರವನ್ನು ಕಟ್ಟಲು ನಡೆಸುತ್ತಿರುವ ರಥ ಯಾತ್ರೆಯಲ್ಲ. ಈ ಯಾತ್ರೆಯು ಮಮತಾ ಬ್ಯಾನರ್ಜಿ ಸರ್ಕಾರದ ಹಗರಣಗಳನ್ನು ಜನರ ಮುಂದಿಡಲಿದೆ,” ಎಂದು ಪಶ್ಚಿಮ ಬಂಗಾಳ ಬಿಜೆಪಿ ವಕ್ತಾರ ಸಮಿಕ್‌ ಭಟ್ಟಾಚಾರ್ಯ ಹೇಳಿದ್ದಾರೆ.

ಈ ರಥ ಯಾತ್ರೆಯ ವಿರುದ್ದ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ಜನರಿಗೆ ಬಿಜೆಪಿಯ ಕುರಿತು ಅನುಕಂಪ ಬರದೇ ಇರುವ ರೀತಿ ಟಿಎಂಸಿ ಕಾರ್ಯತಂತ್ರ ಹೆಣೆದಿದೆ. ಎಲ್ಲಾ ಜವಾಬ್ದಾರಿಯನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಮೇಲೆ ಹಾಕಿ, ರಾಜ್ಯದ ಜಾತ್ಯಾತೀತ ಮೌಲ್ಯಗಳನ್ನು ಕೆಡಿಸದಂತೆ ಮನವಿ ಮಾಡಿಕೊಂಡಿದೆ.

ಒಟ್ಟಿನಲ್ಲಿ, ಈ ಬಾರಿಯ ಪಶ್ಚಿಮ ಬಂಗಾಳ ಚುನಾವಣೆ ಈಗಾಗಲೇ ಕುತೂಹಲ ಮೂಡಿಸಿದೆ. ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಹಣಾಹಣಿಯನ್ನು ಇಲ್ಲಿ ನಿರೀಕ್ಷಿಸಬಹುದಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com