ಮತ್ತಷ್ಟು ಕಾಲ ಕಡಿಮೆ ಬಡ್ಡಿದರ ಕಾಯ್ದುಕೊಳ್ಳಲು ಆರ್ಬಿಐ ನಿರ್ಧಾರ

ಪ್ರಸ್ತುತ ರೆಪೊದರ (ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸುವ ಬಡ್ಡಿದರ)ವು ಶೇ.4ರಷ್ಟಿದೆ. ಇದು ಅತ್ಯಂತ ಕನಿಷ್ಠ ಬಡ್ಡಿದರವಾಗಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಗ್ರಾಹಕರಿಗೆ ಬ್ಯಾಂಕುಗಳಿಂದ ಇದುವರೆಗೆ ಲಭ್ಯವಾಗುತ್ತಿರುವ ಸುಲಭ ಬಡ್ಡಿದರದ ಸಾಲ ಸೌಲಭ್ಯಗಳು ಮತ್ತಷ್ಟು ತಿಂಗಳುಗಳ ಕಾಲ ಮುಂದುವರೆಯಲಿದೆ.
ಮತ್ತಷ್ಟು ಕಾಲ ಕಡಿಮೆ ಬಡ್ಡಿದರ ಕಾಯ್ದುಕೊಳ್ಳಲು ಆರ್ಬಿಐ ನಿರ್ಧಾರ

ದೇಶದ ಆರ್ಥಿಕತೆಯು ತ್ವರಿತವಾಗಿ ಚೇತರಿಸಿಕೊಳ್ಳುತ್ತದೆ ಎಂಬ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ವಾದವನ್ನೇ ಧ್ವನಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮುಂದಿನ ವಿತ್ತೀಯ ವರ್ಷದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.10.5ರಷ್ಟಾಗಲಿದೆ ಎಂದು ಮುನ್ನಂದಾಜು ಮಾಡಿದ್ದಾರೆ. ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯ ನಂತರ ಬಡ್ಡಿ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ.

ಪ್ರಸ್ತುತ ರೆಪೊದರ (ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸುವ ಬಡ್ಡಿದರ)ವು ಶೇ.4ರಷ್ಟಿದೆ. ಇದು ಅತ್ಯಂತ ಕನಿಷ್ಠ ಬಡ್ಡಿದರವಾಗಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಗ್ರಾಹಕರಿಗೆ ಬ್ಯಾಂಕುಗಳಿಂದ ಇದುವರೆಗೆ ಲಭ್ಯವಾಗುತ್ತಿರುವ ಸುಲಭ ಬಡ್ಡಿದರದ ಸಾಲ ಸೌಲಭ್ಯಗಳು ಮತ್ತಷ್ಟು ತಿಂಗಳುಗಳ ಕಾಲ ಮುಂದುವರೆಯಲಿದೆ. ತತ್ಪರಿಣಾಮ, ಮನೆ, ವಾಹನ, ಗೃಹೋಪಯೋಗಿ ವಸ್ತುಗಳು ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವು ಕನಿಷ್ಠ ಮಟ್ಟದಲ್ಲಿದ್ದು, ಗ್ರಾಹಕರು ಹೆಚ್ಚಿನ ಖರೀದಿ ಮಾಡಲು ನೆರವಾಗಲಿದೆ. ಇದು ಗೃಹ, ವಾಹನ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಬೇಡಿಕೆ ಹೆಚ್ಚಿಸಲಿದೆ. ಆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಚೈತನ್ಯಬರಲಿದ್ದು, ಒಟ್ಟಾರೆ ಜಿಡಿಪಿ ತ್ವರಿತವಾಗಿ ಜಿಗಿಯಲಿದೆ ಎಂಬುದು ಆರ್ಬಿಐನ ಲೆಕ್ಕಾಚಾರ.

ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಗೆ ಮಾರುಕಟ್ಟೆಯಲ್ಲಿ ನಗದು ಹರಿವಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಹಲವು ನಿಯಮಗಳನ್ನು ಸಡಿಲಿಸಲಾಗಿದ್ದು, ಕೆಲವು ನಿಯಮಗಳ ಮಾರ್ಪಾಡನ್ನೂ ಮಾಡಲಾಗಿದೆ.

ಈಗಾಗಲೇ ಜಾರಿಯಲ್ಲಿರುವ, ಬ್ಯಾಂಕುಗಳು ಆರ್ಬಿಐನಲ್ಲಿ ಕಡ್ಡಾಯವಾಗಿ ಇಡಬೇಕಾದ ನಗದು ಮೀಸಲು ಪ್ರಮಾಣದ ಸಡಿಲಿಕೆಯನ್ನು ಮುಂದುವರೆಸಲು ನಿರ್ಧಾರಿಸಿದೆ. ಅಂದರೆ, ಬ್ಯಾಂಕುಗಳಲ್ಲಿ ಹೆಚ್ಚಿನ ನಗದು ಲಭ್ಯವಾಗುತ್ತಿದ್ದು, ಅದು ಸಾಲಗಳ ಮೂಲಕ ಗ್ರಾಹಕರಿಗೆ ತಲುಪಲಿದೆ. ಇದರಿಂದ ಮಾರುಕಟ್ಟೆಯಲ್ಲಿ ನಗದು ಹರಿವು ಅಬಾಧಿತವಾಗಿರಲಿದೆ. ಸದ್ಯಕ್ಕೆ ಇನ್ನೂ ಆರು ತಿಂಗಳುಗಳ ಕಾಲ ಈ ಸಡಿಲಿಕೆ ಮುಂದುವರೆಯಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ 1.65 ಲಕ್ಷ ಕೋಟಿ ರುಪಾಯಿ ನಗದು ಲಭ್ಯವಾಗಲಿದೆ. ಇದು ಸಾಲದ ಹೆಚ್ಚಳ ಮತ್ತು ಕೆಳಹಂತದಲ್ಲಿನ ಆರ್ಥಿಕತೆ ಚೇತರಿಕೆಗೆ ನೆರವಾಗಲಿದೆ. ಇದರ ಜತೆಗೆ ಸಣ್ಣ ಮಧ್ಯಮ ಉದ್ಯಮಗಳಿಗೆ ನೀಡಲಾಗುತ್ತಿರುವ ಸುಲಭದರ ಮತ್ತು ಸಲೀಸು ಸಾಲದ ಅವಧಿಯನ್ನು ಇನ್ನೂ ಒಂಭತ್ತು ತಿಂಗಳಕಾಲ ವಿಸ್ತರಿಲಾಗಿದೆ. ಇದು ಕೋವಿಡ್ ಸೋಂಕಿನಿಂದ ಸಂಕಷ್ಟದಲ್ಲಿರುವ ಈ ಉದ್ಯಮಗಳಿಗೆ ಹೆಚ್ಚಿನ ನೆರವಾಗಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೂರು ದುಮ್ಮಾನಗಳಿಗೆ ಏಕಗವಾಕ್ಷಿ ಯೋಜನೆಯನ್ನು ಆರ್ಬಿಐ ಘೋಷಿಸಿದೆ. ಇದುವರೆಗೆ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರತ್ಯೇಕ ದೂರುದುಮ್ಮಾನ ನಿರ್ವಹಣಾಧಿಕಾರಿಗಳಿದ್ದರು(ಒಂಬುಡ್ಸ್ಮನ್). ಈಗ ಈ ಮೂರು ಮಾದರಿಯ ಹಣಕಾಸು ವ್ಯವಸ್ಥೆಯ ದೂರು ದುಮ್ಮಾನಗಳನ್ನು ಒಬ್ಬರೆ ನಿರ್ವಹಣಾಧಿಕಾರಿಗಳು ನಿಭಾಯಿಸಲಿದ್ದಾರೆ. ಇದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಸರ್ಕಾರಿ ಸಾಲಪತ್ರಗಳನ್ನು ಈಗ ನೇರವಾಗಿ ಖರೀದಿ ಮಾಡಲು ಹೂಡಿಕೆದಾರರಿಗೆ ಆರ್ಬಿಐ ಅವಕಾಶ ಮಾಡಿಕೊಟ್ಟಿದೆ. ಬ್ಯಾಂಕುಗಳಲ್ಲಿಟ್ಟ ಠೇವಣಿಗಿಂತಲೂ ಹೆಚ್ಚು ಸುರಕ್ಷಿತವಾಗಿರುವ ಸರ್ಕಾರಿ ಸಾಲಪತ್ರಗಳು(ಗವರ್ನಮೆಂಟ್ ಸೆಕ್ಯುರಿಟೀಸ್) ಹೂಡಿಕೆ ಮೇಲೆ ಹೆಚ್ಚಿನ ಗಳಿಕೆಯನ್ನೂ ತಂದುಕೊಡುತ್ತಿವೆ. ದೀರ್ಘಕಾಲದಲ್ಲಿ ಸರ್ಕಾರಿ ಸಾಲಪತ್ರಗಳಲ್ಲಿ ಸಾಮಾನ್ಯಹೂಡಿಕೆದಾರರು ಪಾಲ್ಗೊಳ್ಳುವಿಕೆ ಹೆಚ್ಚಲಿದೆ. ಇನ್ನುಮುಂದೆ ಸಣ್ಣ ಹೂಡಿಕೆದಾರರು ಸರ್ಕಾರಿ ಸಾಲಪತ್ರಗಳನ್ನು ಬ್ಯಾಂಕುಗಳಾಗಲೀ, ಹಣಕಾಸು ಸಂಸ್ಥೆಗಳ ಮೂಲಕವಾಗಲಿ ಖರೀದಿಸುವ ಅಗತ್ಯವಿಲ್ಲ. ನೇರವಾಗಿ ಆರ್ಬಿಐ ಮೂಲಕ ಹೂಡಿಕೆ ಮಾಡಬಹುದಾಗಿದೆ. ಸರ್ಕಾರಿ ಸಾಲಪತ್ರಗಳ ಮಾರಾಟ ಎಂದರೆ, ಸರ್ಕಾರವು ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯುವುದು ಎಂದರ್ಥ. ಈ ಸಾಲದ ಮೇಲೆ ಸರ್ಕಾರ ಬಡ್ಡಿ ನೀಡುತ್ತದೆ. ಜನಸಾಮಾನ್ಯರೂ ಸರ್ಕಾರಿ ಸಾಲಪತ್ರಗಳನ್ನು ಖರೀದಿಸುವುದೆಂದರೆ, ನೇರವಾಗಿ ಸರ್ಕಾರಕ್ಕೆ ಸಾಲ ನೀಡಿದಂತೆ. ಹೆಚ್ಚು ಸುರಕ್ಷಿತ.

ನಗದು ಹರಿವು ಮತ್ತಷ್ಟು ಸಲೀಸಾಗಲು ನೆರವಾಗುವಂತೆ ಅಂತಾರಾಷ್ಟ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ (ಐಎಫ್ಎಸ್ಸಿ) ಮೂಲಕ ನಾಗರಿಕರು ಮುಕ್ತ ಪಾವತಿ ಯೋಜನೆಯಡಿ(ಎಲ್ಆರ್ಎಸ್) ಹಣವನ್ನು ವರ್ಗಾಹಿಸಲು ಆರ್ಬಿಐ ಅನುಮತಿ ನೀಡಿದೆ. ಇದರಿಂದ ದೇಶೀಯ ಐಎಫ್ಎಸ್ಸಿಗಳಲ್ಲಿ ಹಣಕಾಸು ವರ್ಗಾವಣೆ ವಹಿವಾಟು ಹೆಚ್ಚಲಿದೆ. 2021-22ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ (ಗಿಫ್ಟ್) ಸಿಟಿಗೆ ಪ್ರೋತ್ಸಾಹ ಘೋಷಿಸಿದ ಬೆನ್ನಲ್ಲೇ ಆರ್ಬಿಐ ಈ ನಿರ್ಧಾರ ಕೈಗೊಂಡಿದೆ. ಬರುವ ದಿನಗಳಲ್ಲಿ ಗಿಫ್ಟ್ ಸಿಟಿಯು ವಹಿವಾಟು ಮತ್ತು ಗುಣಮಟ್ಟದಲ್ಲಿ ಮುಂಚೂಣಿ ದೇಶಗಳ ಐಎಫ್ಎಸ್ಸಿ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ.

ದೇಶದಲ್ಲಿ ವಿವಿಧ ಉದ್ಯಮಗಳು ತ್ವರಿತವಾಗಿ ಚೇತರಿಸಿಕೊಳ್ಳುತ್ತಿರುವುದು ಮತ್ತು ಕೋವಿಡ್ ಸೋಂಕಿಗೆ ಲಸಿಕೆ ಹಾಕುತ್ತಿರುವುದರಿಂದಾಗಿ ಆರ್ಥಿಕತೆ ಚೇತರಿಕೆಯು ಹಿಂದಿನ ನಿರೀಕ್ಷೆಗಳಿಗಿಂತ ತ್ವರಿತವಾಗಿ ಚೇತರಿಸಿಕೊಳ್ಳಲಿದೆ. ಹೀಗಾಗಿ ಮುಂದಿನ ವಿತ್ತೀಯ ವರ್ಷದಲ್ಲಿ ಶೇ.10.5ರಷ್ಟು ಜಿಗಿತ ಕಾಣಲಿದೆ ಎಂಬುದು ಆರ್ಬಿಐ ಮುನ್ನಂದಾಜು. ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವಬ್ಯಾಂಕ್ ಹಾಗೂ ವಿವಿಧ ರೇಟಿಂಗ್ ಏಜೆನ್ಸಿಗಳು ಸಹ ಶೇ.10-11ರಷ್ಟು ಚೇತರಿಕೆಯ ಮುನ್ನಂದಾಜು ಮಾಡಿವೆ. ಪ್ರಸಕ್ತ ವಿತ್ತೀಯ ವರ್ಷದ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 23.5ರಷ್ಟು ಕುಸಿತ ದಾಖಲಿಸಿತ್ತು. ನಂತರ ಕುಸಿತದ ಪ್ರಮಾಣವು ನಿಧಾನವಾಗಿ ತಗ್ಗುತ್ತಿದೆ.

ಜನರಿಗೇನು ಅನುಕೂಲ?: ಸುಲಭ ಬಡ್ಡಿದರದ ಸಾಲ ಲಭ್ಯತೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲ. ಇದು ಸಾಲದ ಬೇಡಿಕೆ ಹೆಚ್ಚಿಸುತ್ತದೆ. ಆದರೆ, ಕೋವಿಡ್ ಸಂಕಷ್ಟದ ಅವಧಿಯಲ್ಲಿ ಗಳಿಕೆ ಕಳೆದುಕೊಂಡಿರುವ ಗ್ರಾಹಕರಿಗೆ ಸುಲಭ ಬಡ್ಡಿದರದ ಸಾಲವು ಹೆಚ್ಚಿನ ನೆರವಾಗಲಿದೆ. ವ್ಯಾಪಾರ ವಹಿವಾಟು ನಡೆಸುವವರಿಗೆ ಸಲೀಸಾಗಿ ಸಾಲ ಲಭ್ಯವಾಗಲಿದೆ. ಈಗಾಗಲೇ ನಿಶ್ಚಿತ ಆದಾಯ ಗಳಿಸುತ್ತಿರುವ ವೇತನ ವರ್ಗಕ್ಕೆ ಕಡಮೆ ಬಡ್ಡಿದರದ ಸಾಲ ಲಭ್ಯತೆಯಿಂದಾಗಿ ಮನೆ, ನಿವೇಶನ, ವಾಹನ ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗೆ ಅನುಕೂಲವಾಗಲಿದೆ. ಇದು ಬಳಕೆ ಮತ್ತು ಉಪಭೋಗವನ್ನು ಹೆಚ್ಚಿಸುವುದರಿಂದ ಒಟ್ಟಾರೆ ಬೇಡಿಕೆ ವೃದ್ಧಿಸುತ್ತದೆ, ಉತ್ಪಾದನೆಯೂ ಚೇತರಿಸಿಕೊಳ್ಳುತ್ತದೆ. ತತ್ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ.

ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವಾಗ ಮುಕ್ತ ನಿಲುವನ್ನು ಆರ್ಬಿಐ ಪ್ರತಿಪಾದಿಸಿದೆ. ಸಾಲದ ವಿಷಯದಲ್ಲಿ ಮುಕ್ತ ನಿಲವು ಎಂದರೆ- ಮುಂಬರುವ ದಿನಗಳಲ್ಲಿ ಬಡ್ಡಿದರವನ್ನು ಹೆಚ್ಚಿಸುವ ಅಥವಾ ಅಗತ್ಯ ವಿದ್ದರೆ ಮತ್ತಷ್ಟು ತಗ್ಗಿಸುವ ನಿಲವಾಗಿದೆ. ಆದರೆ, ಈಗಾಗಲೇ ಐತಿಹಾಸಿಕ ಮಟ್ಟಕ್ಕೆ ಬಡ್ಡಿದರ ಕುಸಿದಿರುವುದರಿಂದ ಆರ್ಥಿಕತೆ ಚೇತರಿಕೆಯಾದಂತೆ ಬಡ್ಡಿದರಗಳ ಏರಿಕೆಯಾಗುತ್ತವೆ. ಆದರೆ, ಇನ್ನೂ ಒಂದುವರ್ಷದ ಮಟ್ಟಿಗೆ ಸುಲಭ ಬಡ್ಡಿದರದ ಸಾಲಗಳು ಲಭ್ಯವಾಗಲಿವೆ. ಮತ್ತಷ್ಟು ಬಡ್ಡಿದರ ಇಳಿಯುವ ಸಾಧ್ಯತೆಗಳಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com