ಕೋವಿಡ್ ಲಸಿಕೆ ಸಾವು: ಸರ್ಕಾರದ ಗುಟ್ಟು, ವಿಶ್ವಾಸಾರ್ಹತೆಗೆ ಪೆಟ್ಟು!

ಒಂದು ಕಡೆ ಜನರ ಜೀವದ ಪ್ರಶ್ನೆಯಾದರೆ, ಮತ್ತೊಂದು ಕಡೆ ಸಾರ್ವಜನಿಕ ತೆರಿಗೆ ಹಣದ ಪ್ರಶ್ನೆ. ಆದ್ದರಿಂದ ಲಸಿಕೆಯ ಸಾವುಗಳ ಕುರಿತು ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳದೇ ಹೋದರೆ, ಎರಡೂ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ!
ಕೋವಿಡ್ ಲಸಿಕೆ ಸಾವು: ಸರ್ಕಾರದ ಗುಟ್ಟು, ವಿಶ್ವಾಸಾರ್ಹತೆಗೆ ಪೆಟ್ಟು!

ಈ ವಾರಾಂತ್ಯದ ಹೊತ್ತಿಗೆ, ಒಂದು ಕಡೆ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿರುವ ಅನ್ನದಾತ ರೈತ ಹೋರಾಟಗಾರರ ಪರ ಜಗತ್ತಿನ ಮೂಲೆಮೂಲೆಯಿಂದ ಗಟ್ಟಿ ದನಿಗಳು ಮೊಳಗುತ್ತಿದ್ದರೆ, ಮತ್ತೊಂದು ಕಡೆ ಜನಾರೋಗ್ಯಕ್ಕೆ ಸವಾಲಾಗಿರುವ ಕೋವಿಡ್ ಸೋಂಕು ಮತ್ತು ಲಸಿಕೆಯ ವಿಷಯದಲ್ಲಿ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.

ದೇಶದ ಮುಂಚೂಣಿ ವೈದ್ಯಕೀಯ ಕಣ್ಗಾವಲು ಸಂಸ್ಥೆ ಐಸಿಎಂಆರ್ ನಡೆಸಿದ ಮೂರನೇ ಸುತ್ತಿನ ಸೀರೋ ಸರ್ವೇ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಡಿಸೆಂಬರ್ ಅಂತ್ಯದ ಹೊತ್ತಿಗೆ ದೇಶದ ಶೇ.21.5ರಷ್ಟು ಮಂದಿ; ಅಂದರೆ ಸುಮಾರು ಐದು ಮಂದಿಯಲ್ಲಿ ಒಬ್ಬರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿಂದೆ ಕಳೆದ ಆಗಸ್ಟ್ ನಲ್ಲಿ ನಡೆದಿದ್ದ ಸೀರೋ ಸರ್ವೆ ಯಲ್ಲಿ ದೇಶದ ಶೇ.7.1ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಐಸಿಎಂಆರ್ ಹೇಳಿತ್ತು. ಆ ಹಿನ್ನೆಲೆಯಲ್ಲಿ ಡಿಸೆಂಬರ್ ಮುಂಚಿನ ನಾಲ್ಕು ತಿಂಗಳಲ್ಲಿ ದೇಶದ ಕರೋನಾ ವೈರಾಣು ಸಂಪರ್ಕಕ್ಕೆ ಬಂದವರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೇಶದ ದೈನಂದಿನ ಹೊಸ ಕರೋನಾ ಪ್ರಕರಣಗಳ ಪ್ರಮಾಣದಲ್ಲಿ ಕಳೆದ ನಾಲ್ಕು ತಿಂಗಳ ಈ ಅವಧಿಯಲ್ಲಿ ಭಾರೀ ಕುಸಿತವಾಗಿದೆ. ಆಗಸ್ಟ್ ಅಂತ್ಯದ ಹೊತ್ತಿಗೆ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 65-70 ಸಾವಿರ ಆಸುಪಾಸಿನಲ್ಲಿದ್ದರೆ, ಸದ್ಯ ಹೊಸ ಪ್ರಕರಣಗಳ ಪ್ರಮಾಣ 12 ಸಾವಿರದ ಆಸುಪಾಸಿನಲ್ಲಿದೆ. ಹಾಗೇ ಕೋವಿಡ್ ಸಾವಿನ ಪ್ರಮಾಣ ಆಗಸ್ಟ್ ಅಂತ್ಯದ ಹೊತ್ತಿಗೆ ಒಂದು ಸಾವಿರದ ಆಸುಪಾಸಿನಲ್ಲಿದ್ದರೆ, ಸದ್ಯ ಆ ಪ್ರಮಾಣ 110ರ ಆಸುಪಾಸಿನಲ್ಲಿದೆ. ಆದರೆ, ಒಂದು ಕಡೆ ದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳ ಪ್ರಮಾಣ ಸೆಪ್ಟೆಂಬರ್ ಮಧ್ಯಂತರದ ಹೊತ್ತಿಗೆ ಸರಿಸುಮಾರು ಒಂದು ಲಕ್ಷಕ್ಕೆ ಏರಿದ್ದರೆ, ಈಗ ಕೇವಲ 12 ಸಾವಿರಕ್ಕೆ ಕುಸಿದಿದೆ. ಹಾಗಿದ್ದರೂ ಐಸಿಎಂಆರ್ ನ ಸೀರೋ ಸರ್ವೆಯಲ್ಲಿ; ಸೋಂಕಿತರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ ಎಂದಿದೆ! ಇದು ಹೇಗೆ? ಎಂಬ ಪ್ರಶ್ನೆ ಕಾಡುವುದು ಸಹಜ. ವಾಸ್ತವವಾಗಿ ಕರೋನಾ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದರೂ, ರೋಗ ಲಕ್ಷ್ಮಣಗಳೊಂದಿಗೆ ಕರೋನಾ ಪರೀಕ್ಷೆಗೆ ಹೋಗುವವರ ಪ್ರಮಾಣದಲ್ಲಿ ಆಗಿರುವ ಭಾರೀ ಕುಸಿತದಿಂದಾಗಿ ಈ ವೈರುಧ್ಯ ಕಾಣುತ್ತಿದೆ.

ಜನ ವೈರಾಣು ಸಂಪರ್ಕಕ್ಕೆ ಬಂದಿದ್ದರೂ, ವೈರಾಣು ದುರ್ಬಲವಾಗಿರುವ ಕಾರಣಕ್ಕೋ ಅಥವಾ ದೇಶದ ಜನರಲ್ಲಿ ಆ ವೈರಾಣುವಿಗೆ ಈಗಾಗಲೇ ನೈಸರ್ಗಿಕ ಪ್ರತಿರೋಧದ ಪ್ರತಿಕಾಯಗಳು ಅಭಿವೃದ್ಧಿಯಾಗಿರುವ ಕಾರಣಕ್ಕೋ ಸೋಂಕಿತರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಪ್ರಮಾಣ ತೀರಾ ಅತ್ಯಲ್ಪ. ಹಾಗಾಗಿ ವೈರಾಣು ಸಂಪರ್ಕಕ್ಕೆ ಬಂದವರು ಹೆಚ್ಚಿದ್ದರೂ, ದೇಶದ ಕರೋನಾ ಸೋಂಕಿತ ಅಧಿಕೃತ ಅಂಕಿಅಂಶಗಳ ಗ್ರಾಫ್ ನಿರಂತರ ಕುಸಿತದ ಹಾದಿಯಲ್ಲಿದೆ!

ಅಂದರೆ; ಕೋವಿಡ್ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯವಾಗಿ ಕುಸಿದಿರುವ ಹೊತ್ತಲ್ಲೂ ಕೋವಿಡ್ ಲಸಿಕೆಯ ಅಭಿಯಾನ ಮುಂದುವರಿದಿದೆ. ಲಸಿಕೆ ಅಭಿಯಾನ ದೇಶದಲ್ಲಿ ಆರಂಭವಾಗಿ; (ಜ16ರಿಂದ) ಈವರೆಗೆ ಮೂರು ವಾರಗಳಲ್ಲಿ 45 ಲಕ್ಷಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಕೂಡ ಈ ವಾರಾಂತ್ಯದ ಹೊತ್ತಿಗೆ ವೈದ್ಯಕೀಯೇತರ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ ಆರಂಭವಾಗಿದೆ.

ಆದರೆ, ಐದು ದಿನಗಳ ಹಿಂದೆ; ಜನವರಿ 31ರಂದು ದೇಶದಾದ್ಯಂತ ಕೋವಿಡ್ ಲಸಿಕೆ ತೆಗೆದುಕೊಂಡ 11 ಮಂದಿ ದಿಢೀರ್ ಸಾವು ಕಂಡಿದ್ದರು. ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ ಲಸಿಕೆ ಪಡೆದ ವೈದ್ಯಕೀಯ ಮತ್ತು ಕೋವಿಡ್ ವಿರುದ್ಧದ ಹೋರಾಟದ ಮುಂಚೂಣಿ ಕಾರ್ಯಕರ್ತರ ಪೈಕಿ ಲಸಿಕೆ ತೆಗೆದುಕೊಂಡವರಲ್ಲೇ 23ರಿಂದ 56 ವರ್ಷ ವಯೋಮಾನದವರಲ್ಲೇ ಈ ಸಾವು ಸಂಭವಿಸಿದ್ದವು. ಹಾಗಾಗಿ ಲಸಿಕೆ ಮತ್ತು ಈ ಸಾವುಗಳ ನಡುವಿನ ನಂಟಿನ ಕುರಿತು ದೇಶಾದ್ಯಂತ ಆತಂಕವೆದ್ದಿತ್ತು. ಲಸಿಕೆ ಅಭಿಯಾನ ಆರಂಭವಾಗಿ ಈ ಇಪ್ಪತ್ತು ದಿನಗಳಲ್ಲಿ ಈವರೆಗೆ ಒಟ್ಟು 16 ಮಂದಿ ಲಸಿಕೆ ಪಡೆದುಕೊಂಡ ಕೆಲವೇ ತಾವು ಮತ್ತು ಕೆಲವೇ ದಿನಗಳಲ್ಲಿ ಸಾವು ಕಂಡಿರುವುದು ವರದಿಯಾಗಿದೆ. ಹೀಗೆ ಸಾವು ಕಂಡ ಎಲ್ಲರೂ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿರುವ ಆಕ್ಸ್ ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದವರೇ ಎಂಬುದು ಗಮನಾರ್ಗ ಸಂಗತಿ. ಹೀಗೆ ಸಾವು ಕಂಡವರಲ್ಲಿ ಬಹುತೇಕರಿಗೆ ಯಾವುದೇ ಇತರೆ ಆರೋಗ್ಯ ಸಮಸ್ಯೆಗಳಿರಲಿಲ್ಲ ಮತ್ತು ಎಲ್ಲರೂ ಹಠಾತ್ ಹೃದಯಾಘಾತ, ಇಲ್ಲವೇ ಮೆದುಳು ಲಕ್ವಾ(ಬ್ರೈನ್ ಸ್ಟ್ರೋಕ್)ನಿಂದಲೇ ಸಾವು ಕಂಡಿದ್ದಾರೆ ಎಂದೂ ವರದಿಗಳು ಹೇಳಿವೆ.

ಜನವರಿ 31ರಂದು ಒಂದೇ ದಿನ ಲಸಿಕೆ ತೆಗೆದುಕೊಂಡ 11 ಮಂದಿಯ ಸಾವಿನ ಹಿನ್ನೆಲೆಯಲ್ಲಿ; ದೇಶದ ವೈದ್ಯಕೀಯ ಮತ್ತು ಆರೋಗ್ಯ ವಲಯದ 20ಕ್ಕೂ ಹೆಚ್ಚು ಮಂದಿ ಪರಿಣಿತರು, ವಿಜ್ಞಾನಿಗಳು, ವೈದ್ಯರು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಹಾಗೂ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ವಿ ಜಿ ಸೊಮಾನಿ ಅವರಿಗೆ ಪತ್ರ ಬರೆದು, ಕೂಡಲೇ ಆ ಸಾವುಗಳ ಕುರಿತು ತನಿಖೆ ನಡೆಸಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಒತ್ತಾಯಿಸಿದ್ದರು. ಆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೋವಿಡ್ ಲಸಿಕೆಯ ಪರಿಣಾಮಗಳ ಕುರಿತು ಕಣ್ಗಾವಲು, ಅಧ್ಯಯನ ಮತ್ತು ವಿಶ್ಲೇಷಣೆಗಾಗಿಯೇ ರಚಿಸಿರುವ ನ್ಯಾಷನಲ್ ಅಡ್ವರ್ಸ್ ಈವೆಂಟ್ ಫಾಲೋಯಿಂಗ್ ಇಮ್ಯೂನೈಸೇಷನ್(ಎಇಎಫ್ ಐ) ಕಮಿಟಿಯ ಸಲಹೆಗಾರ ಡಾ ಎನ್ ಕೆ ಅರೋರಾ, ಲಸಿಕೆ ಪಡೆದ ಬಳಿಕ ಸಾವು ಕಂಡಿರುವ ವೈದ್ಯಕೀಯ ಮತ್ತು ಮುಂಚೂಣಿ ಕಾರ್ಯಕರ್ತರ ಸಂಪೂರ್ಣ ವಿವರಗಳನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಆದರೆ, ಜನವರಿ 16ರಿಂದ ಆರಂಭವಾಗಿ ಈವರೆಗೆ ಲಸಿಕೆ ಪಡೆದ ಬಳಿಕ ಸಂಭವಿಸಿರುವ ಯಾವ ಸಾವಿನ ಕುರಿತ ವಿವರಗಳನ್ನೂ ಈವರೆಗೆ ಸರ್ಕಾರ ಸಾರ್ವಜನಿಕಗೊಳಿಸಿಲ್ಲ. ಪ್ರತಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿಯೂ ಎಇಎಫ್ ಐ ಸಮಿತಿಗಳಿದ್ದು, ಕೋವಿಡ್ ಲಸಿಕೆಗೆ ಸಂಬಂಧಿಸಿದ ಸಾವು ಸೇರಿದಂತೆ ಇತರೆ ವ್ಯತಿರಿಕ್ತ ಪರಿಣಾಮಗಳ ಕುರಿತು ಕಣ್ಗಾವಲು ಇಡಲು ಮತ್ತು ಅಧ್ಯಯನ ನಡೆಸಿ ಆ ಪರಿಣಾಮಗಳು ನಿಜವಾದ ಕಾರಣ ಲಸಿಕೆಯೇ ಅಥವಾ ಇತರೆ ಸಂಗತಿಗಳೇ ಎಂಬುದನ್ನು ವೈದ್ಯಕೀಯ ತಪಾಸಣೆ, ಸಂಶೋಧನೆಯ ವಿವರ ಸಹಿತ ಸಾರ್ವಜನಿಕವಾಗಿ ಪ್ರಕಟಿಸುವ ಹೊಣೆ ಹೊತ್ತಿವೆ. ಆದಾಗ್ಯೂ ದೇಶದ ಯಾವುದೇ ಮೂಲೆಯಿಂದಲೂ ಈವರೆಗೆ ಸಂಭವಿಸಿರುವ ಲಸಿಕೆ ತೆಗೆದುಕೊಂಡವರ ಸಾವಿನ ಕುರಿತ ಯಾವುದೇ ಅಧಿಕೃತ ಮಾಹಿತಿಯನ್ನು ಈ ಎಇಎಫ್ ಐಗಳು ಪ್ರಕಟಿಸಿಲ್ಲ!

ಲಸಿಕೆಯ ಕುರಿತು ಜನಸಾಮಾನ್ಯರಲ್ಲಿ ಇರುವ ಭಯ ಮತ್ತು ಪೂರ್ವಗ್ರಹಗಳನ್ನು ದೂರಮಾಡುವ ಮಹತ್ತರ ಉದ್ದೇಶದಿಂದಲೇ ರಚನೆಯಾಗಿರುವ ಎಇಎಫ್ ಐಗಳ ಈ ನಡೆ ಸಹಜವಾಗೇ ವೈದ್ಯಕೀಯ ಮತ್ತು ಆರೋಗ್ಯ ವಲಯದ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಲಸಿಕೆಯ ವಿಷಯದಲ್ಲಿ ಸಾರ್ವಜನಿಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಈ ಮಾಹಿತಿಯನ್ನು ಎಲ್ಲಾ ವಿವರಗಳೊಂದಿಗೆ ಸಾಧ್ಯವಾದಷ್ಟು ಬೇಗ ಬಹಿರಂಗಪಡಿಸುವುದು ಮುಖ್ಯ ಎಂದು ಅವರು ಆರೋಗ್ಯ ಸಚಿವರು ಮತ್ತು ಡಿಸಿಜಿಐಗೆ ಆಗ್ರಹಿಸಿದ್ದಾರೆ. ಈ ಸಾವುಗಳ ಕುರಿತು ನಿಜವಾದ ಕಾರಣ, ಲಸಿಕೆ ತೆಗೆದುಕೊಂಡ ವಿವರ, ಸಾವಿಗೆ ಲಸಿಕೆ ಕಾರಣವಲ್ಲ ಎಂದಾದರೆ, ನಿಜವಾಗಿಯೂ ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎಂಬುದನ್ನು ವೈದ್ಯಕೀಯ ಶೋಧನೆಯ ಮೂಲಕ ಸಾಬೀತುಪಡಿಸುವ ವಿವರಗಳನ್ನು ನಾವು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಪ್ರಕಟಿಸದೇ ಹೋದರೆ, ಲಸಿಕೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ಸಾಧ್ಯವಿಲ್ಲ ಎಂದೂ ಅವರು ಮುಂದಿರುವ ಸವಾಲಿನ ಬಗ್ಗೆ ಗಮನ ಸೆಳೆದಿದ್ದಾರೆ.

ದೇಶದಲ್ಲಿ ಈಗಾಗಲೇ ಬಹುತೇಕ ಎಲ್ಲಾ ಬಗೆಯ ಲಾಕ್ ಡೌನ್ ನಿರ್ಬಂಧವನ್ನು ತೆರವು ಮಾಡಲಾಗಿದೆ. ದೈಹಿಕ ಅಂತರ, ಮಾಸ್ಕ್ ಬಳಕೆ ಮತ್ತು ಕೈತೊಳೆಯುವುದು ಸೇರಿದಂತೆ ಕೋವಿಡ್ ಸಂಬಂಧಿತ ಇತರೆ ಮಾರ್ಗದರ್ಶಿ ನಿಯಮಗಳನ್ನು ಕೂಡ ಸಾರ್ವಜನಿಕ ಜೀವನದಲ್ಲಿ ಬಹುತೇಕ ಗಾಳಿಗೆ ತೂರಲಾಗುತ್ತಿದೆ. ಜನರೂ ಆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಸಡ್ಡೆ ತೋರಿದ್ದರೆ, ಅಂತಹ ಕ್ರಮಗಳನ್ನು ಖಾತರಿಪಡಿಸಬೇಕಾದ ಸಂಬಂಧಿತ ಆಡಳಿತ ಮತ್ತು ಕಾನೂನು ವ್ಯವಸ್ಥೆಗಳು ಕೈಚೆಲ್ಲಿವೆ. ಈ ನಡುವೆ ಸೀರೋ ಸರ್ವೆ ವರದಿ ಕೂಡ ದೇಶದಲ್ಲಿ ಬಹುತೇಕ ಐವರಲ್ಲಿ ಒಬ್ಬರು ವೈರಾಣು ವಿರುದ್ಧ ನೈಸರ್ಗಿಕ ಪ್ರತಿರೋಧ ಬೆಳೆಸಿಕೊಂಡಿದ್ದಾರೆ ಎಂದಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ದಿನೇದಿನೆ ಉದಾಸೀನ ಮತ್ತು ಅನುಮಾನಗಳು ಹೆಚ್ಚಾಗುತ್ತಿವೆ.

ಈ ನಡುವೆ, ಲಸಿಕೆಗಾಗಿ ಸರ್ಕಾರ ತನ್ನ ಬಜೆಟ್ ನಲ್ಲಿ ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿಗಳಷ್ಟು ಭರ್ಜರಿ ಮೊತ್ತವನ್ನು ಮೀಸಲಿಡುವುದಾಗಿ ಘೋಷಿಸಿದೆ. ಹಾಗಾಗಿ ಈ ವಿಷಯದಲ್ಲಿ ಭಾರೀ ಹಣಕಾಸು ಲೆಕ್ಕಾಚಾರದ ಪ್ರಶ್ನೆಯೂ ಇದೆ. ಹಾಗಾಗಿ ಒಂದು ಕಡೆ ಜನರ ಜೀವದ ಪ್ರಶ್ನೆಯಾದರೆ, ಮತ್ತೊಂದು ಕಡೆ ಸಾರ್ವಜನಿಕ ತೆರಿಗೆ ಹಣದ ಪ್ರಶ್ನೆ. ಆದ್ದರಿಂದ ಲಸಿಕೆಯ ಸಾವುಗಳ ಕುರಿತು ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳದೇ ಹೋದರೆ, ಎರಡೂ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com