ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ದೆಹಲಿಯ ಗಡಿಭಾಗಗಳಲ್ಲಿ ಕಳೆದ ಎರಡುವರೆ ತಿಂಗಳಿನಿಂದಲೂ ಕೃಷಿ ಕಾನೂನುಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ರೈತ ಪ್ರತಿಭಟನಾಕಾರರಿಗೆ ಅಂತರಾಷ್ಟ್ರೀಯ ಮಟ್ಟದ ಗಾಯಕರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ನೈತಿಕ ಬೆಂಬಲ ಸೂಚಿಸಿದ್ದಾರೆ. ಆದರೆ, ರೈತ ಹೋರಾಟವನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ತಳೆದುಕೊಂಡ ನಿಲುವು ಮಾತ್ರ ಭಾರತ ಸರ್ಕಾರದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಿಗೆ ಹಾಕಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆ ಇರುವ ದೇಶ ʼಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯʼ ದ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಕ್ಲಾಸ್ ತೆಗೆದುಕೊಳ್ಳುವ ಮಟ್ಟಕ್ಕೆ ಬಂದಿದೆ. ರೈತ ಪ್ರತಿಭಟನೆಯನ್ನು ನಿಗ್ರಹಿಸಲು ದೆಹಲಿಯ ಹಲವೆಡೆ ಇಂಟರ್ನೆಟ್ ಸ್ಥಗಿತಗೊಳಿಸಿದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದೇ ವೇಳೆ ರೈತ ಹೋರಾಟಕ್ಕೆ ಭರಪೂರ ಬೆಂಬಲಗಳೂ ವ್ಯಕ್ತವಾಗುತ್ತಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನ್ನಾ (Rihanna) ಅವರು ತಮ್ಮ ಟ್ವಿಟರ್ ಖಾತೆಯ ಮುಖಾಂತರ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟ ಸಂಬಂಧಿಸಿದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಅಂತರ್ಜಾಲ ನಿರ್ಬಂಧಿಸಿರುವ ಕುರಿತಂತೆ ಸಿಎನ್ಎನ್ ವರದಿಯನ್ನು ಉಲ್ಲೇಖಿಸಿ, ʼನಾವು ಏಕೆ ಇದರ ಕುರಿತು ಮಾತನಾಡುತ್ತಿಲ್ಲʼ ಎಂದು ಆಶ್ಚರ್ಯಭರಿತರಾಗಿ ಪ್ರಶ್ನಿಸಿದ್ದಾರೆ. ರಿಹಾನ್ನ ಅವರ ಈ ಟ್ವೀಟ್ ʼದೆಹಲಿ ರೈತ ಹೋರಾಟʼದ ಕಡೆಗೆ ಅಂತರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ.
ರಿಹಾನ್ನ ಅವರಿಗೆ ಹಲವಾರು ಪ್ರಶಂಸೆಗಳು ವ್ಯಕ್ತವಾಗಿದ್ದು, ಯುನೈಟೆಡ್ ಕಿಂಗ್ಡಂ ಸಂಸದೆ ಕ್ಲಾಡಿಯಾ ವೆಬ್ಬೆ (Claudia Webbe MP) ರಿಹಾನ್ನರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಿಹಾನ್ನ ಅವರು ಟ್ವೀಟ್ ಮಾಡಿದ ಬೆನ್ನಿಗೆ, ಕಿರಿಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಬೆಂಬಲ ಘೋಷಿಸಿದ್ದಾರೆ.
ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದ ಪ್ರತಿಭಟನೆ ಕುರಿತು ಟ್ವೀಟ್ ಮಾಡುತ್ತಿದ್ದಂತೆಯೇ, ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅಂತಹ ಸೆಲೆಬ್ರಿಟಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಸದಾ ವಿವಾದಾತ್ಮಕ ಹಾಗೂ ಧ್ವೇಷಭರಿತ ಪ್ರತಿಕ್ರಿಯೆ ಮೂಲಕ ಚರ್ಚೆಯಲ್ಲಿರುವ ನಟಿ ಕಂಗನಾ ರಾನಾವತ್ (Kangana Ranaut)
ರಿಹಾನ್ನರನ್ನು ಮೂರ್ಖಳೆಂದು ಕರೆದಿದ್ದಾರೆ.
ʼಪ್ರತಿಭಟಿಸುತ್ತಿರುವವರು ರೈತರಲ್ಲ, ಭಯೋತ್ಪಾದಕರು. ಹಾಗಾಗಿ ಯಾರೂ ಈ ಕುರಿತು ಪ್ರತಿಕ್ರಿಯಿಸುತ್ತಿಲ್ಲ. ನಿನ್ನಂತಹ ಡಮ್ಮಿಗಳಿಗೆ ನಾವು ನಮ್ಮ ದೇಶವನ್ನು ಮಾರುವುದಿಲ್ಲ. ಸುಮ್ಮನೆ ಕುಳಿತುಕೊ ನೀನು ಮೂರ್ಖಳುʼ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಆದರೆ, ಅಂತರಾಷ್ಟ್ರೀಯ ಬೆಂಬಲ ಇಲ್ಲಿಗೆ ನಿಲ್ಲಲಿಲ್ಲ. ಅಮೆರಿಕಾದ ಹೋರಾಟಗಾರ್ತಿ, ಜಾಮಿ ಮಾರ್ಗಲಿನ್ (Jamie Margolin) ಕೂಡಾ ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿದ್ದಾರೆ. ಭಾರತೀಯ ರೈತರ ಹೋರಾಟದೊಂದಿಗೆ ಇಡೀ ಜಗತ್ತೇ ನಿಲ್ಲುವ ಅಗತ್ಯವಿದೆ. ರೈತರಿಲ್ಲದೆ ಆಹಾರವಿಲ್ಲ. ದಯವಿಟ್ಟು ರೈತ ಹೋರಾಟಕ್ಕೆ ಬೆಂಬಲ ನೀಡಿ ಎಂದು ಅವರು ಕರೆ ನೀಡಿದ್ದಾರೆ.
ಇಂಟರ್ನೆಟ್ ಸ್ಥಗಿತದ ಕುರಿತಂತೆ ಮಾಜಿ ಪಾರ್ನ್ ನಟಿ ಮಿಯಾ ಖಲೀಫಾ ಕೂಡಾ ಪ್ರತಿಕ್ರಿಯಿದ್ದಾರೆ.
ಅಮೇರಿಕಾದ ಪ್ರಖ್ಯಾತ ವ್ಲಾಗರ್, ಸಾಮಾಜಿಕ ಜಾಲತಾಣದಲ್ಲಿ 2.5 ಕೋಟಿಗೂ ಅಧಿಕ ಹಿಂಬಾಲಕರಿರುವ ಅಮಾಂಡ ಸೆರ್ನಿ (Amanda Cerny) ಕೂಡಾ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ʼಜಗತ್ತು ಗಮನಿಸುತ್ತಿದೆ, ಸಮಸ್ಯೆಯನ್ನು ಅರ್ಥೈಸಲು ನೀವು ಭಾರತೀಯರೋ, ಪಂಜಾಬಿಗಳೋ, ದಕ್ಷಿಣ ಏಷಿಯಾದವರೋ ಆಗಿರಬೇಕಾದ ಅಗತ್ಯವಿಲ್ಲ. ಮಾನವೀಯತೆಯ ಬಗ್ಗೆ ಕಾಳಜಿ ಇದ್ದರೆ ಸಾಕು. ಎಂದಿಗೂ ವಾಕ್-ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ನಾಗರೀಕ ಸಮಾನ ಹಕ್ಕು ಹಾಗೂ ಕಾರ್ಮಿಕರ ಘನತೆಗಾಗಿ ಕೊರಳು ನೀಡಿ ಎಂದು ಕರೆ ನೀಡಿದ್ದಾರೆ.
ಭಾರತ ಸರ್ಕಾರಕ್ಕೆ ವೈಯಕ್ತಿಕ ಸ್ವಾತಂತ್ರ್ಯ, ವಾಕ್ –ಪತ್ರಿಕಾ ಸ್ವಾತಂತ್ರ್ಯದ ಕುರಿತಂತೆ ಅಂತರಾಷ್ಟ್ರೀಯ ಮಟ್ಟದಿಂದ ಟೀಕೆಗಳು ವ್ಯಕ್ತವಾಗುವುದು ಇದೇ ಮೊದಲಲ್ಲ. ಆರ್ಟಿಕಲ್-370 ರದ್ದತಿ, ಕಾಶ್ಮೀರ ನಿರ್ಬಂಧ, ಸಿಎಎ-ಎನ್ಆರ್ಸಿ ವೇಳೆಯಲ್ಲೂ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಅಂತರಾಷ್ಟ್ರೀಯ ಸಮುದಾಯದಿಂದ ಟೀಕೆಗೊಳಗಾಗಿತ್ತು.