ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಹ್ಯಾಷ್ಟ್ಯಾಗ್ ಬಳಸುತ್ತಿರುವ ಹಾಗು ನಕಲಿ, ಪ್ರಚೋದನಕಾರಿ ಟ್ವೀಟರ್ ಖಾತೆಗಳನ್ನು ತಡೆಹಿಡಿಯುವಂತೆ ಕೇಂದ್ರ ಸರ್ಕಾರ ಟ್ವಿಟರ್ಗೆ ಆದೇಶ ನೀಡಿತ್ತು.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಪ್ರಚೋದನಕಾರಿ ಮಾಹಿತಿ ಹಂಚಿಕೊಂಡ ಖಾತೆಗಳನ್ನು ಸರ್ಕಾರದ ಆದೇಶದ ಮೇರೆಗೆ ಟ್ವಿಟರ್ ತಾತ್ಕಾಲಿಕ ತಡೆಯೊಡ್ಡಿ ಮತ್ತೆ ಬಳಕೆಗೆ ಅವಕಾಶ ನೀಡಿತ್ತು. ಟ್ವಿಟರ್ನ ಈ ನಡೆ ಸರ್ಕಾರ ಖಂಡಿಸಿ ನೋಟಿಸ್ ನೀಡಿದೆ. ಸರ್ಕಾರದ ಆದೇಶದ ಹೊರತಾಗಿಯೂ ಟ್ವಿಟರ್ ಏಕಪಕ್ಷೀಯವಾಗಿ ಕೆಲಸ ಮಾಡಿದೆ. ಮತ್ತೆ ಖಾತೆಗಳನ್ನು ತಡೆಯುವಂತೆ ಸರ್ಕಾರ ಟ್ವಿಟರ್ ಸಂಸ್ಥೆಗೆ ಎಚ್ಚರಿಸಿದೆ. ಸರ್ಕಾರದ ನಿರ್ದೇಶನ ಪಾಲಿಸದಿದ್ದರೆ ಕ್ರಮಕೈಗೊಳ್ಳುವುದಾಗಿ ನೊಟೀಸ್ನಲ್ಲಿ ತಿಳಿಸಿದೆ.
ಕೇಂದ್ರ ಜಾರಿಗೆ ತಂದ ಹೊಸ ಕೃಷಿ ಕಾನೂಗಳನ್ನು ವಿರೋಧಿಸಿ ನವೆಂಬರ್ನಲ್ಲಿ ಆರಂಭಗೊಂಡ ರೈತರ ಪ್ರತಿಭಟನೆ ನಿರಂತರವಾಗಿ ಸಾಗಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಪೋಸ್ಟ್ ಮಾಡುವ ಟ್ವಿಟರ್ ಖಾತೆಗಳನ್ನು ತಡೆಹಿಡಿಯುವಂತೆ ಟ್ವಿಟರ್ಗೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಇದರಿಂದ ಟ್ವಿಟರ್ ಸಂಬಂಧ ಪಟ್ಟ ಹಲವು ಖಾತೆಗಳಿಗೆ ತಡೆಯೊಡ್ಡಿತ್ತು.
ʼಮೋದಿ ರೈತ ಹತ್ಯಾಕಾಂಡದ ಯೋಜನೆʼ (#ModiPlanningFarmerGenocide) ಈ ರೀತಿಯ ಹ್ಯಾಶ್ಟ್ಯಾಗ್ ಅನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಭಾವೋದ್ರೇಕ, ದ್ವೇಷ ಪೂರಿತ, ಮತ್ತು ತಪ್ಪು ಮಾಹಿತಿ ನೀಡುತ್ತಿದೆ ಎಂದು ಕೇಂದ್ರ ಆರೋಪಿಸಿದೆ.
ಫೆಬ್ರವರಿ 1 ರಂದು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳುತ್ತಿದ್ದ, ಅನೇಕ ಖಾತೆಗಳನ್ನು ಟ್ವಿಟರ್ ತಡೆಹಿಡಿದಿತ್ತು. ನಂತರ ಆ ಟ್ವಿಟರ್ ಖಾತೆಗಳ ನಿರ್ಬಂಧವನ್ನು ವಾಪಾಸ್ ಪಡೆಯಲಾಗಿತ್ತು.
ರೈತರ ಪ್ರತಿಭಟನೆ ಕುರಿತು ನಿರ್ದಿಷ್ಟ ಹ್ಯಾಶ್ಟ್ಯಾಗ್ ಬಳಕೆ, ನಕಲಿ, ಪ್ರಚೋದನಕಾರಿ ಮಾಹಿತಿ ಹಂಚಿಕೊಂಡ 250 URLಗಳನ್ನು ತಡೆಹಿಡಿಯಲಾಗಿದೆ. ಈ ಕುರಿತಾಗಿ ಜನವರಿ 30 ರಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಎಂಇಟಿಟಿ) ಟ್ವಿಟರ್ಗೆ ನಿರ್ದೇಶನ ನೀಡಿತ್ತು ಎಂದು ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.
ರೈತರ ಆಂದೋಲನವನ್ನು ಗಮನದಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಬಂಧ ಪಟ್ಟ ಸಂಸ್ಥೆಗಳ ಕೋರಿಕೆಯ ಮೇರೆಗೆ ತಡೆಹಿಡಿಯಲಾಗಿದೆ ಎಂದು ಟ್ವಿಟರ್ ತಿಳಿಸಿತ್ತು.
ತಾತ್ಕಾಲಿಕವಾಗಿ ಟ್ವಿಟರ್ ತಡೆಹಿಡಿದ ಖಾತೆಗಳಾದ ಕಿಸಾನ್ ಏಕ್ತಾ ಮೋರ್ಚಾ, ಫಾರ್ಮರ್ ಯುನಿಯನ್ ಬಿಕೆಯು, ಏಕ್ತಾ ಉರ್ಗಾಹನ್ ಟ್ವಿಟರ್ ಖಾತೆಗಳು ಸಾವಿರ ಸಂಖ್ಯೆಯಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದವು. ರೈತರು ಹೋರಾಟ ನಡೆಸುತ್ತಿರುವ ದೆಹಲಿಯ ಗಡಿಭಾಗಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೋದಿ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ನಾನಾ ರೀತಿಯ ಕುಮ್ಮಕ್ಕು ನಡೆಸುತ್ತಿದೆ ಎಂದು ರೈತ ಮುಖಂಡರು ಮತ್ತು ಹೋರಾಟ ಬೆಂಬಲಿಸುತ್ತಿರುವ ಸಮುದಾಯವು ಆರೋಪಿಸುತ್ತಿದೆ.