ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪದೇ ಪದೇ ಮುಜುಗರಕ್ಕೆ ತಳ್ಳುವಂತಹ ಹೇಳಿಕೆ ನೀಡುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯಂ ಸ್ವಾಮಿ ಈ ಬಾರಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕೇಂದ್ರದ ಕಾಲೆಳೆದಿದ್ದಾರೆ.
2021-22 ರ ಸಾಲಿನ ಬಜೆಟಿನಲ್ಲಿ ಪೆಟ್ರೋಲಿಯಂ ಮೇಲೆ ಪ್ರತ್ಯೇಕ ಸುಂಕ ಹೇರಿದ ಕೇಂದ್ರದ ಕುರಿತಂತೆ ಸಾಕಷ್ಟು ವಿರೋಧಗಳು, ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸುಬ್ರಮಣಿಯಂ ಸ್ವಾಮಿ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಸ್ವಾಮಿ, ರಾಮನ ನಾಡಿನಲ್ಲಿ ಪೆಟ್ರೋಲ್ ಬೆಲೆ ₹93, ಸೀತಾ (ದೇವಿ) ಳ ನಾಡಲ್ಲಿ ₹ 53, ರಾವಣನ ನಾಡಿನಲ್ಲಿ ₹51 ಎಂದು ಟ್ವೀಟ್ ಮಾಡಿದ್ದಾರೆ.
ಸ್ವಾಮಿ ಟ್ವೀಟ್ ಮಾಡಿದ ಕೇವಲ ಎರಡೇ ಗಂಟೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು 11 ಸಾವಿರದಷ್ಟು ಮಂದಿ ಇದನ್ನು ಹಂಚಿದ್ದಾರೆ. ಹಾಗೂ, 1.5 ಸಾವಿರದಷ್ಟು ಪ್ರತಿಕ್ರಿಯೆಗಳು ಬಂದಿವೆ.
ಸ್ವಾಮಿ ಟ್ವೀಟಿಗೆ ಪ್ರತಿಕ್ರಿಯಿಸಿರುವ ವ್ಯಕ್ತಿ, ಜಯದ್ರಥನ ಪಾಕಿಸ್ತಾನದಲ್ಲಿ ₹ 51-55 ಗಳಿವೆ ಎಂದು ಹೇಳಿದ್ದಾರೆ.
ಸುಬ್ರಮಣಿಯಂ ಸ್ವಾಮಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಇನ್ನೋರ್ವ ವ್ಯಕ್ತಿ, ಇದಕ್ಕೆ ರಾಮ ಹಾಗೂ ಸೀತಾ ಅವರನ್ನು ಯಾಕೆ ಎಳೆದು ತರುತ್ತಿದ್ದೀರಾ? ಪೆಟ್ರೋಲ್ ಬೆಲೆಯೊಂದಿಗೆ ಸೀತಾ-ರಾಮ ಅವರಿಗೆ ಏನು ಸಂಬಂಧ, ರಾಜಕೀಯದೊಂದಿಗೆ ಧರ್ಮವನ್ನು ಯಾಕೆ ಬೆರೆಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈ ವ್ಯಕ್ತಿಗೆ ಉತ್ತರಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ನರೇಂದ್ರ ಮೋದಿ ಯಾಕೆ ಪ್ರತಿ ಚುನಾವಣೆ ಸಂಧರ್ಭದಲ್ಲೂ ಜೈ ಶ್ರೀ ರಾಂ ಘೋಷಣೆ ಕೂಗುತ್ತಾರೆ, ಅವರೇಕೆ ರಾಜಕೀಯದೊಂದಿಗೆ ಧರ್ಮವನ್ನು ಬೆರೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಸ್ವಾಮಿ ವ್ಯಂಗ್ಯ ಭರಿತ ಟ್ವೀಟ್, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.