ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯ

ಮಹಿಳಾ ಪತ್ರಕರ್ತೆ ನೇಹಾ ದೀಕ್ಷಿತ್ ಅವರು ಸಮಾಜ ವಿರೋಧಿ ಶಕ್ತಿಗಳಿಂದ ಬೆದರಿಕೆಯನ್ನು ಎದುರಿಸುತಿದ್ದು ಇದಕ್ಕೆ ಪತ್ರಕರ್ತ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದು ಸೂಕ್ತ ರಕ್ಷಣೆಗಾಗಿ ಸರ್ಕಾರವನ್ನು ಒತ್ತಾಯಿಸಿವೆ.
ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯ

ಇಂದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ನಾವೆಲ್ಲ ಎದೆಯುಬ್ಬಿಸಿ ಹೇಳಿಕೊಳ್ಳುವ ಭಾರತದಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಗ ಮಹಿಳಾ ಪತ್ರಕರ್ತೆಯರ ಮೇಲೂ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ವರದಿ ಆಗುತ್ತಿರುವುದು ನಿಜಕ್ಕೂ ಆತಂಕ ಮೂಡಿಸಿದೆ. ಈಗ ಆಳುವ ಸರ್ಕಾರಗಳ ಪರವಾಗಿರುವ ಪತ್ರಕರ್ತರಿಗೆ ಯಾವಾಗಲೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ನಿಷ್ಪಕ್ಷಪಾತ ವರದಿ ಮಾಡುವ ಪತ್ರಕರ್ತರಿಗೆ ಸದಾ ಬೆದರಿಕೆ ಇದ್ದೇ ಇದೆ. ಇಂದಿನ ದಿನಗಳಲ್ಲಿ ಪತ್ರಕರ್ತರು ತಮ್ಮ ದೈನಂದಿನ ಜೀವನದಲ್ಲಿ ಆತ್ಮರಕ್ಷಣಾ ಕ್ರಮಗಳನ್ನು ತೆಗೆದುಕೊಂಡೇ ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಪ್ರಮುಖ ಮಹಿಳಾ ಪತ್ರಕರ್ತೆ ನೇಹಾ ದೀಕ್ಷಿತ್ ಅವರು ಸಮಾಜ ವಿರೋಧಿ ಶಕ್ತಿಗಳಿಂದ ಬೆದರಿಕೆಯನ್ನು ಎದುರಿಸುತಿದ್ದು ಇದಕ್ಕೆ ಪತ್ರಕರ್ತ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದು ಸೂಕ್ತ ರಕ್ಷಣೆಗಾಗಿ ಸರ್ಕಾರವನ್ನು ಒತ್ತಾಯಿಸಿವೆ.


ನೆಟ್ವರ್ಕ್ ಆಫ್ ವುಮೆನ್ ಇನ್ ಮೀಡಿಯಾ, ಇಂಡಿಯಾ (NWMI) ತನ್ನ ಸದಸ್ಯೆ ಮತ್ತು ಪತ್ರಕರ್ತೆ ನೇಹಾ ದೀಕ್ಷಿತ್ ಅವರನ್ನು ಅಪರಿಚಿತರು ಹಿಂಬಾಲಿಸಿರುವುದು ಮತ್ತು ಅಪರಿಚಿತ ವ್ಯಕ್ತಿಗಳು ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಮಾಧ್ಯಮ ವೃತ್ತಿಪರರನ್ನು ಬೆದರಿಸುವ ಇಂತಹ ಎಲ್ಲ ಪ್ರಯತ್ನಗಳನ್ನು NWMI ಖಂಡಿಸುತ್ತದೆ ಮತ್ತು ನಮ್ಮ ಸಹೋದ್ಯೋಗಿಯ ಜತೆಗೆ ನಿಲ್ಲುತ್ತದೆ. ನಮ್ಮ ವೃತ್ತಿಯನ್ನು ಭದ್ರತೆಯೊಂದಿಗೆ ಮತ್ತು ಭಯವಿಲ್ಲದೆ ನಿರ್ವಹಿಸುವ ಹಕ್ಕನ್ನು ನಾವು ಆಗ್ರಹಿಸುತ್ತೇವೆ ಎಂದು ಅದು ಹೇಳಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಪತ್ರಕರ್ತೆ ದೀಕ್ಷಿತ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿರುವ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್ 2020 ರಿಂದ ಅವರನ್ನು ಅಪರಿಚಿತರು ಹಿಂಬಾಲಿಸುತಿದ್ದಾರೆ. ಕಳೆದ ಜನವರಿ 25 ರಂದು ರಾತ್ರಿ 9 ಗಂಟೆಗೆ ಅಪರಿಚಿತರು ಆಕೆಯ ನಿವಾಸವನ್ನು ಪ್ರವೇಶಿಸಲು ಯತ್ನಿಸಿದರು. ದೀಕ್ಷಿತ್ ಅವರು ಎಚ್ಚರಿಕೆ ನೀಡಿದಾಗ ದುಷ್ಕರ್ಮಿಗಳು ಓಡಿಹೋದರು. ಮರುದಿನ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂರು ಅಥವಾ ನಾಲ್ಕು ವಿಭಿನ್ನ ಧ್ವನಿಗಳ ಮೂಲಕ ಒಂದು ಡಜನ್ಗಿಂತ ಹೆಚ್ಚು ದೂರವಾಣಿ ಸಂಖ್ಯೆಗಳನ್ನು ಬಳಸಿ, ಅವರನ್ನು ಹಿಂಬಾಲಿಸಿದವರು ಅವರಿಗೆ ಪದೇ ಪದೇ ದೂರವಾಣಿ ಕರೆ ಮಾಡಿ ಅವರ ಮೇಲೆ ಆಸಿಡ್ ಎರಚುವ , ಅತ್ಯಾಚಾರ ಅಲ್ಲದೆ ಕೊಲ್ಲುವ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದುಷ್ಕರ್ಮಿಗಳು ಕರೆ ಮಾಡಿದವರು ತಮ್ಮ ಮನೆಯಿಂದ ಕಚೇರಿಗೆ ಹಿಂಬಾಲಿಸುವುದು ಸೇರಿದಂತೆ ತಮ್ಮ ಪತಿ ಸಾಕ್ಷ್ಯಚಿತ್ರ ನಿರ್ಮಾಪಕ ನಕುಲ್ ಸಿಂಗ್ ಸಾಹ್ನಿ ಅವರನ್ನು ಕೊಲ್ಲುವುದಾಗಿ ಕೂಡ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ.


ನೇಹಾ ದೀಕ್ಷಿತ್ ಅವರಿಗೆ ಆನ್ಲೈನ್ನಲ್ಲಿ ಸಾಕಷ್ಟು ಬಾರಿ ಬೆದರಿಕೆ ಒಡ್ಡಲಾಗಿದೆಯಾದರೂ ಈಗ ಭೌತಿಕವಾಗಿ ಬೆದರಿಕೆಗಳು ಬರುತ್ತಿರುವುದಕ್ಕೆ NWMI ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರಶಸ್ತಿ ವಿಜೇತ ಪತ್ರಕರ್ತೆ ನೇಹಾ ದೀಕ್ಷಿತ್ ಅವರು ಸಂಘ ಪರಿವಾರದವರು 31 ಬುಡಕಟ್ಟು ಬಾಲಕಿಯರನ್ನು ಅಸ್ಸಾಂ ನಿಂದ ಇತರ ರಾಜ್ಯಗಳಿಗೆ ಕಳ್ಳಸಾಗಣೆ ಮಾಡಿರುವ ಕುರಿತು 'ಆಪರೇಷನ್ #ಬೇಬಿಲಿಫ್ಟ್' ಎಂಬ ಐದು ಭಾಗಗಳ ತನಿಖಾ ವರದಿಯನ್ನು ಪ್ರಕಟಿಸಿದ ನಂತರ ಆನ್ಲೈನ್ ಕಿರುಕುಳ ಮತ್ತು ಸಾವಿನ ಬೆದರಿಕೆಗಳನ್ನು ಎದುರಿಸಿದರು. ಜುಲೈ-ಆಗಸ್ಟ್ 2016 ರಲ್ಲಿ ಔಟ್ಲುಕ್ ನಿಯತಕಾಲಿಕದಲ್ಲಿ ಇವರ ತನಿಖಾ ವರದಿಯು ಪ್ರಕಟಗೊಂಡಿತ್ತು. ನಂತರ ಪತ್ರಿಕೆಯ ಸಂಪಾದಕ ಕೃಷ್ಣ ಪ್ರಸಾದ್ ಅವರು ರಾಜೀನಾಮೆ ನೀಡಿದ್ದರು. ಈಗ ಪ್ರಕಟಗೊಂಡಿರುವ ವರದಿಗಳಿಗೂ ನಂತರದ ಪ್ರಕರಣಗಳಿಗೆ ಸಂಬಂಧವಿದೆ ಎನ್ನಲಾಗಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೈದ್ಧಾಂತಿಕ ಮೂಲ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸದಸ್ಯರು ದೀಕ್ಷಿತ್ ವಿರುದ್ಧ ಹೇಳಿಕೆ ನೀಡಿದರೆ, ಬಿಜೆಪಿ ಬೆಂಬಲಿಗರು ಅಸ್ಸಾಂನಲ್ಲಿ ಅವರ ವಿರುದ್ಧದ ಮಾನಹಾನಿ ಮತ್ತು ಕೋಮು ದ್ವೇಷ ಪ್ರಚೋದನೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಮಹಿಳಾ ಪತ್ರಕರ್ತರು ತಮ್ಮ ಕೆಲಸಕ್ಕಾಗಿ ಕಿರುಕುಳ ಮತ್ತು ಟ್ರೋಲ್ ಮಾಡುವ ಪ್ರಕರಣಗಳ ಪಟ್ಟಿಯಲ್ಲಿ ಈ ನಿದರ್ಶನ ಇತ್ತೀಚಿನದು. ನೇಹಾ ದೀಕ್ಷಿತ್ ಅವರಲ್ಲದೆ, ಬಲಪಂಥೀಯ ಬೆಂಬಲಿಗರು ದುರುಪಯೋಗ ಮತ್ತು ಕೋಮುವಾದದ ಪ್ರೊಫೈಲಿಂಗ್ನಿಂದ ಹಿಡಿದು ಅತ್ಯಾಚಾರ ಮತ್ತು ಕೊಲ್ಲುವ ಬೆದರಿಕೆಗಳನ್ನು ಹಾಕಿದ್ದಾರೆ. ಬೆದರಿಕೆ ಎದುರಿಸುತ್ತಿರುವವರಲ್ಲಿ ಲೇಖಕ-ಕಾರ್ಯಕರ್ತೆ ಮೀನಾ ಕಂದಸ್ವಾಮಿ, ಪತ್ರಕರ್ತೆಯರಾದ ಅನುರಾಧಾ ಭಾಸಿನ್, ಅನ್ನಾ ಎಂ.ಎಂ. ವೆಟ್ಟಿಕಾಡ್, ಧನ್ಯಾ ರಾಜೇಂದ್ರನ್, ಕವಿನ್ ಮಲಾರ್, ರಾಣಾ ಅಯೂಬ್, ಸಂಧ್ಯಾ ರವಿಶಂಕರ್, ಸುಪ್ರಿಯಾ ಶರ್ಮಾ, ಅರ್ಫಾ ಖಾನೂಮ್ ಶೆರ್ವಾನಿ, ಮತ್ತು ಬರ್ಖಾ ದತ್ ಪ್ರಮುಖರಾಗಿದ್ದಾರೆ. ಆನ್ಲೈನ್ ನಿಂದನೆ ಮತ್ತು ಬೆದರಿಕೆಗಳು ಭೌತಿಕವಾಗಿ ಮಾರ್ಪಟ್ಟಿರುವ ಕಾರಣದಿಂದ ಧಾಳಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.


ವಾಸ್ತವವಾಗಿ, ಭಾರತದಲ್ಲಿ ಮಹಿಳಾ ಪತ್ರಕರ್ತರು ತಮ್ಮ ಕೆಲಸದ ಅವಧಿಯಲ್ಲಿ ಅಪಾರ ಹಿಂಸಾಚಾರವನ್ನು ಅನುಭವಿಸಿದ್ದಾರೆ, ಇದು ಮರಳು ಗಣಿಗಾರಿಕೆಯ ತನಿಖೆ ನಡೆಸುತ್ತಿರುವ ಪತ್ರಕರ್ತರ ಮೇಲಿನ ದಾಳಿ, ಶಬರಿಮಲೆ ಸಮಸ್ಯೆ, ಭ್ರಷ್ಟಾಚಾರ ಅಥವಾ ಜನಸಮೂಹ ಹಿಂಸಾಚಾರದಂತಹ ಘರ್ಷಣೆಯನ್ನು ಒಳಗೊಂಡಿದೆ. ಕಳೆದ ಕೆಲವು ವರ್ಷಗಳಿಂದ, ಪತ್ರಕರ್ತರ ಮೇಲಿನ ದೈಹಿಕ ದಾಳಿಯ ಹೆಚ್ಚಳವು ಅವರು ಕಾರ್ಯನಿರ್ವಹಿಸುವ ಅಸುರಕ್ಷಿತ ಪರಿಸ್ಥಿತಿಗಳ ಜೊತೆಗೆ ಅನೇಕ ದಾಳಿಯನ್ನು ಮುಚ್ಚಿಹಾಕಲಾಗಿದೆಯೆಂದು ಒತ್ತಿಹೇಳುತ್ತದೆ. ಈ ಪ್ರಕರಣಗಳ ಬಗ್ಗೆ ಯಾವುದೇ ಪರಿಣಾಮಕಾರಿ ತನಿಖೆ ನಡೆದಿಲ್ಲ ಪತ್ರಿಕಾ ಸಂಘಟನೆಗಳ ಸದಸ್ಯರು ಇಂತಹ ಆನ್ಲೈನ್ ಕಿರುಕುಳವನ್ನು ಖಂಡಿಸಿದ್ದಾರೆ, ಈ ರೀತಿ ಕಿರುಕುಳ ನೀಡುವವರಿಗೆ ಅದರ ರಾಜಕೀಯ ಮಾಲೀಕರು ಬೆಂಬಲ ನೀಡುತಿದ್ದಾರೆ ಎಂದು ಆರೋಪಿಸಲಾಗಿದೆ. ಅಂತಹ ಕ್ರಿಮಿನಲ್ ತಂತ್ರಗಳ ವಿರುದ್ಧ ಬಲವಾದ ಸಂದೇಶವನ್ನು ರವಾನಿಸುವಲ್ಲಿ ಪತ್ರಕರ್ತರು ಸೋತಿದ್ದಾರೆ. ತನಿಖಾ ಪತ್ರಿಕೋದ್ಯಮ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಈ ಬೆದರಿಕೆ ಪರಿಣಾಮ ಬೀರುತ್ತಿದೆ. ಪತ್ರಕರ್ತರನ್ನು ಬೆದರಿಸಿ ಸುಮ್ಮನಾಗಿಸುವ ಈ ನಿರಂತರ ಪ್ರಯತ್ನಗಳನ್ನು ಎನ್ಡಬ್ಲ್ಯೂಎಂಐ ಸೇರಿದಂತೆ ಅನೇಕ ಸಂಘಟನೆಗಳು ಖಂಡಿಸಿದ್ದು ಸೂಕ್ತ ರಕ್ಷಣೆಗಾಗಿ ಒತ್ತಾಯಿಸಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com