ಕರೋನಾ ಸಂಕಷ್ಟ ಮತ್ತು ವಿವೇಚನಾಹೀನ ಲಾಕ್ ಡೌನ್ ನಿಂದ ಬಸವಳಿದು ಹೋಗಿರುವ ದೇಶದ ಆರ್ಥಿಕತೆ ಅಧೋಗತಿಯ ಹಾದಿಯಲ್ಲಿ ಸಾಗುತ್ತಿರುವ ನಡುವೆ ಮತ್ತೊಂದು ಬಜೆಟ್ ಬಂದಿದೆ.
ಆ ಹಿನ್ನೆಲೆಯಲ್ಲಿ ಇಂದಿನಿಂದ(ಜ.29) ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಸಂಪ್ರದಾಯದಂತೆ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಸೋಮವಾರ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವೆಯಾಗಿ ನಿರ್ಮಲಾ ಅವರಿಗೆ ಇದು ಮೂರನೇ ಬಜೆಟ್.
ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ. ಆ ಮೂಲಕ ಬಜೆಟ್ ಅಧಿವೇಶನದ ಮೊದಲ ಹಂತಕ್ಕೆ ಚಾಲನೆ ಸಿಗಲಿದೆ. ಜನವರಿ 29ರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಬಜೆಟ್ ಅಧಿವೇಶನ ನಡೆಯಲಿದ್ದು, ಮುಂದುವರಿದ ಎರಡನೇ ಹಂತದ ಅಧಿವೇಶನ ಮಾರ್ಚ್ 8ರಿಂದ ಆರಂಭವಾಗಿ ಏಪ್ರಿಲ್ 8ಕ್ಕೆ ಅಂತ್ಯವಾಗಲಿದೆ.
ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡನೆಗೆ ಮುಂಚೆ; ಅಂದರೆ ಜನವರಿ 29ರಂದು, ಅಧಿವೇಶನದ ಮೊದಲ ದಿನವೇ ದೇಶದ ಆರ್ಥಿಕ ಸ್ಥಿತಿಗತಿಗಳ ಕುರಿತ ಆರ್ಥಿಕ ಸಮೀಕ್ಷೆ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಹಣಕಾಸು ಹರಿವು, ಮೂಲಸೌಕರ್ಯ, ಕೃಷಿ, ಉದ್ಯಮ, ಉದ್ಯೋಗ, ಬೆಲೆ, ಆಮದು ಮತ್ತು ರಫ್ತು, ವಿದೇಶೀ ವಿನಿಮಯ ಮತ್ತಿತರ ದೇಶದ ಆರ್ಥಿಕತೆ ಮತ್ತು ಅದರ ರೂಪುರೇಷೆಗಳನ್ನು ವಿವರಿಸುವ ಬಜೆಟ್ ಮೇಲೆ ಪರಿಣಾಮ ಬೀರುವ ಅಂಶಗಳ ಕುರಿತು ಆರ್ಥಿಕ ಸಮೀಕ್ಷೆ ಮುನ್ನೋಟ ಒದಗಿಸಲಿದೆ.
ಈ ನಡುವೆ ಸರ್ಕಾರದ ರೈತ ವಿರೋಧಿ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರಮುಖ ಪ್ರತಿಪಕ್ಷಗಳು ಬಜೆಟ್ ಅಧಿವೇಶನದ ಮೊದಲ ದಿನದ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ವೇಳೆ ಅಧಿವೇಶನದಿಂದ ದೂರ ಉಳಿಯಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಈ ನಿರ್ಧಾರ ಕೈಗೊಂಡಿವೆ. ಆದರೆ, ಸಮಾಜವಾದಿ ಪಕ್ಷ ಅಧಿವೇಶನದಲ್ಲಿ ಭಾವಹಿಸುವುದಾಗಿ ಹೇಳಿದೆ.
ರಾಷ್ಟ್ರಪತಿಗಳ ಭಾಷಣವನ್ನು ಪ್ರತಿಪಕ್ಷಗಳು ಬಹಿಷ್ಕರಿಸುತ್ತಿರುವುದು ಇದೇ ನಿರಂತರ ಎರಡನೇ ಬಾರಿಯಾಗಿದ್ದು, ಕಳೆದ ವರ್ಷ ಕೂಡ ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಿದ್ದವು. ಈ ಬಾರಿ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಆ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ತಾವು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸುವುದಾಗಿ ಪ್ರತಿಪಕ್ಷಗಳ ಪರವಾಗಿ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಕೃಷಿ ಮತ್ತು ಉತ್ಪಾದನಾ ರಂಗದ ಮೇಲೆ ಬಲವಾದ ಪೆಟ್ಟು ನೀಡಿರುವ ಕೋವಿಡ್ ಸಂಕಷ್ಟ ಮತ್ತು ಯೋಜನಾರಹಿತ ಲಾಕ್ ಡೌನ್ ಬಳಿಕ ಇದೀಗ ದಾಖಲೆಯ ದುಬಾರಿ ಬೆಲೆ ಏರಿಕೆ ಕಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಜನಸಾಮಾನ್ಯರ ಬದುಕನ್ನು ಬಾಣಲೆಯಿಂದ ಬೆಂಕಿಗೆ ದೂಡಿವೆ. ಇದೇ ಮೊದಲ ಬಾರಿಗೆ ಲೀಟರ್ ಪೆಟ್ರೋಲಿಗೆ ಬರೋಬ್ಬರಿ ನೂರು ರೂಪಾಯಿ ತೆರಬೇಕಾದ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ತೈಲ ಬೆಲೆಯಲ್ಲಿನ ಈ ಭಾರೀ ಏರಿಕೆ ಸಹಜವಾಗೇ ಸರಕು ಮತ್ತು ಸೇವೆಗಳ ಬೆಲೆ ಏರಿಕೆಗೂ ಕಾರಣವಾಗಿದ್ದು, ಜನರ ಜೀವನಮಟ್ಟದ ಮೇಲೆ ದೊಡ್ಡ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿವೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆ, ಹಣದುಬ್ಬರ ಮತ್ತು ಜನರ ಕೊಳ್ಳುವ ಶಕ್ತಿಯ ಮೇಲೆ ಆಗಿರುವ ಪರಿಣಾಮಗಳನ್ನು ಈ ಬಜೆಟ್ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಾರೆ ಕೋವಿಡ್ ಮತ್ತು ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಈ ಬಾರಿಯ ಸಚಿವೆ ನಿರ್ಮಲಾ ಅವರ ಮೂರನೇ ಬಜೆಟ್ ಮೇಲೆ ದೇಶದ ಕಣ್ಣು ನೆಟ್ಟಿದೆ.