ಮುಂದಿನ ವರ್ಷ ಜಿಡಿಪಿ ಶೇ.11ರಷ್ಟು ವೃದ್ಧಿಸುತ್ತದೆಯೇ? ಹೌದೆನ್ನುತ್ತಿದೆ ಆರ್ಥಿಕ ಸಮೀಕ್ಷೆ!

2021-22ನೇ ಸಾಲಿನ ಪೂರ್ವಾರ್ಧದಲ್ಲಿ ಜಿಡಿಪಿಯು ಶೇ.14.2ರಷ್ಟು ಹಿಗ್ಗಲಿದೆ ಎಂದು ಆರ್ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ತಿಳಿಸಿತ್ತು.
ಮುಂದಿನ ವರ್ಷ ಜಿಡಿಪಿ ಶೇ.11ರಷ್ಟು ವೃದ್ಧಿಸುತ್ತದೆಯೇ? ಹೌದೆನ್ನುತ್ತಿದೆ ಆರ್ಥಿಕ ಸಮೀಕ್ಷೆ!

ಪ್ರಸಕ್ತ ವಿತ್ತೀಯ ವರ್ಷದಲ್ಲಿ (2020-21ನೇ ಸಾಲಿನಲ್ಲಿ) ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನವು (ಜಿಡಿಪಿ) ಶೇ.7.7ರಷ್ಟು ಕುಸಿಯಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದೆ. ಇದೇ ವೇಳೆ, 2021-22ನೇ ವಿತ್ತೀಯ ವರ್ಷದಲ್ಲಿ ದೇಶದ ಜಿಡಿಪಿ ಶೇ.11ರಷ್ಟು ಜಿಗಿಯಲಿದೆ ಎಂದೂ ಮುನ್ನಂದಾಜು ಮಾಡಿದೆ. ಆರ್ಥಿಕ ಸಮೀಕ್ಷೆಯ ಪ್ರಸಕ್ತ ವಿತ್ತೀಯ ವರ್ಷದಲ್ಲಿನ ಆರ್ಥಿಕತೆ ಕುಸಿತದ ಅಂದಾಜು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಷ್ಟ್ರೀಯ ಸಾಂಖಿಕ ಕಚೇರಿ ಮುನ್ನಂದಾಜಿಸಿರುವಂತೆಯೇ ಇದೆ.

ಆದರೆ, 2021-22ನೇ ಸಾಲಿನಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂಬ ಭಾರಿ ನಿರೀಕ್ಷೆಯೊಂದಿಗೆ ಶೇ.11ರಷ್ಟು ಜಿಡಿಪಿ ಜಿಗಿಯುವ ಮುನ್ನಂದಾಜಿಗೆ ಕೇವಲ ನಿರೀಕ್ಷೆಗಳ ಲೆಕ್ಕಾಚಾರಗಳಿದೆಯೇ ಹೊರತು, ಅಂಕಿಅಂಶಗಳ ಸಮರ್ಥನೆಗಳೇನನ್ನೂ ಸಮೀಕ್ಷೆ ನೀಡಿಲ್ಲ. ಬಜೆಟ್ ಮಂಡನೆಯ ಮುನ್ನ ದಿನವಾದ ಶುಕ್ರವಾರ ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯನ್ ಅವರು ಆರ್ಥಿಕ ಸಮೀಕ್ಷೆಯನ್ನು ಸಿದ್ದಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆರ್ಥಿಕ ಸಮೀಕ್ಷೆಯಲ್ಲಿ, ಚೇತರಿಕೆಯು ನಿಧಾನಗತಿಯಲ್ಲಿರುತ್ತದೆ ಚೇತರಿಕೆ ತುಂಬಲು ಈಗ ಕೈಗೊಂಡಿರುವ ಕ್ರಮಗಳೇನೇನೂ ಸಾಲದು ಎಂಬ ಆರ್ಬಿಐ ಮಾಜಿ ಗವರ್ನರ್ ರಘುರಾಮನ್ ಸೇರಿದಂತೆ ವಿವಿಧ ಆರ್ಥಿಕ ತಜ್ಞರು ಮಾಡಿರುವ ಸಲಹೆಗಳನ್ನು ಪರೋಕ್ಷವಾಗಿ ಟೀಕಿಸಲಾಗಿದೆ. 2021-22ನೇ ಸಾಲಿನಲ್ಲಿ ಶೇ.11ರಷ್ಟು ಜಿಡಿಪಿ ಜಿಗಿಯುತ್ತದೆ ಎಂಬುದನ್ನು ಸಮರ್ಥಿಸಲು ಒದಗಿಸಿರುವ ಪ್ರಮುಖ ಪರಿಕರಗಳು ಎಂದರೆ, ಆರ್ಬಿಐ ಮುನ್ನಂದಾಜು ಮತ್ತು ವಿಶ್ವಬ್ಯಾಂಕ್ ನ ಹೇಳಿಕೆಗಳಷ್ಟೇ. 2021-22ನೇ ಸಾಲಿನ ಪೂರ್ವಾರ್ಧದಲ್ಲಿ ಜಿಡಿಪಿಯು ಶೇ.14.2ರಷ್ಟು ಹಿಗ್ಗಲಿದೆ ಎಂದು ಆರ್ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ತಿಳಿಸಿತ್ತು.

ಕೋವಿಡ್-19 ತಂದ ಸಂಕಷ್ಟದಿಂದಾಗಿ ಪ್ರಸಕ್ತ ವಿತ್ತೀಯ ವರ್ಷದ ಒಟ್ಟಾರೆ ಆರ್ಥಿಕ ಕುಸಿತವು ಶೇ.7.7ರಷ್ಟಾಗಲಿದ್ದು, 2021-22ನೇ ಸಾಲಿನಲ್ಲಿ ವಾಸ್ತವಿಕ ಆರ್ಥಿಕ ಅಭಿವೃದ್ಧಿಯು ಶೇ.11ರಷ್ಟು ಮತ್ತು ಸಾಂಕೇತಿಕ ಆರ್ಥಿಕ ಅಭಿವೃದ್ಧಿಯು ಶೇ.15.4ರಷ್ಟಾಗಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಕೋವಿಡ್-19 ತಂದಿಟ್ಟ ಆರ್ಥಿಕ ಆಘಾತದ ನಡುವೆಯೂ ಭಾರತವು, ಸುಭದ್ರ ರುಪಾಯಿ, ಉತ್ತಮವಾಗಿರುವ ಚಾಲ್ತಿಖಾತೆ, ಚೌಕಾಶಿ ಮಾಡಲು ಶಸಕ್ತವಾಗಿರುವ ವಿದೇಶಿ ಮೀಸಲು, ಉತ್ಪಾದನಾ ವಲಯದಿಂದ ಬಂದಿರುವ ಉತ್ತೇಜಕ ಮುನ್ಸೂಚನೆಗಳ ನೆರವಿನಿಂದಾಗಿ ಬೃಹದಾರ್ಧಿಕತೆಯು ಸುಸ್ಥಿರವಾಗಿದ್ದು ‘ವಿ’ ಆಕಾರದ ತ್ವರಿತ ಚೇತರಿಕೆ ಸಾಧಿಸಲಿದೆ ಆರ್ಥಿಕ ಸಮೀಕ್ಷೆ ವಿವರಿಸಿದೆ.

ದಾವೋಸ್ ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ದೇಶದ ಆರ್ಥಿಕತೆಯು ‘ವಿ’ ಆಕಾರದಲ್ಲಿ ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿಕೊಂಡಿದ್ದರು. ಇಡೀ ಸಮೀಕ್ಷೆಯು ಪ್ರಧಾನಿಗಳ ದಾವೋಸ್ ಜಾಗತಿಕ ಆರ್ಥಿಕ ವೇದಿಕೆಯ ಭಾಷಣವನ್ನೇ ದ್ವನಿಸುವಂತಿದೆ.

ಆರ್ಥಿಕತೆ ಕುಸಿತದ ಅವಧಿಯಲ್ಲಿ ಸಾಲ ನೀಡಿಕೆ ನಿಯಮಗಳ ಸಡಿಲಿಕೆ ಜತೆಗೆ ವಿತ್ತೀಯ ವಿನಿಯೋಗ ಹೆಚ್ಚಿಸುವುದು ಅಗತ್ಯವೆಂದೂ ಸಮೀಕ್ಷೆ ಹೇಳಿದೆ. ಆ ಮೂಲಕ ಸೋಮವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ಸಾಲ ನೀಡಿಕೆ ಮೇಲಿನ ನಿಯಮಗಳ ಸಡಿಲಿಕೆ ಮತ್ತು ಮತ್ತಷ್ಟು ವಿನಿಯೋಗಗಳನ್ನು ನೀರಿಕ್ಷಿಸಬಹುದಾಗಿದೆ. ಅಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋದರವನ್ನು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಸಿದ್ದು, ಬಹುತೇಕ ಎಲ್ಲಾ ಸಾಲಗಳ ಮೇಲಿನ ಬಡ್ಡಿದರವೂ ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಈ ಕನಿಷ್ಠ ಮಟ್ಟದ ಅವಧಿಯು ಒಂದೆರಡು ವರ್ಷ ಮುಂದುವರೆಸುವ ಸಾಧ್ಯತೆಗಳು ನಿಚ್ಛಳವಾಗಿರುವುದನ್ನು ಆರ್ಥಿಕ ಸಮೀಕ್ಷೆಯು ದ್ವನಿಸುತ್ತಿದೆ.

ಹೆಚ್ಚು ಸಕ್ರಿಯವಾದ ಮತ್ತು ಪ್ರತಿ ಆವರ್ತಕ ವಿತ್ತೀಯ ನೀತಿಯನ್ನು ಪ್ರತಿಪಾದಿಸಿರುವ ಆರ್ಥಿಕ ಸಮೀಕ್ಷೆಯು ಇದು ಜಬಾಬ್ದಾರಿಇಲ್ಲದ ನೀತಿಯೇನೂ ಅಲ್ಲ ಎಂದು ಸಮರ್ಥಿಸಿಕೊಂಡಿದೆ. ರೇಟಿಂಗ್ ಏಜೆನ್ಸಿಗಳು ಕಾಲಕಾಲಕ್ಕೆ ಏರಿಳಿಸುತ್ತಿರುವ ಸಾವರಿನ್ ರೇಟಿಂಗ್ ಕುರಿತಂತೆಯೂ ಪ್ರಸ್ತಾಪಿಸಿರುವ ಆರ್ಥಿಕ ಸಮೀಕ್ಷೆಯು, ಇಂತಹ ರೇಟಿಂಗ್ ಗಳು ನಮ್ಮ ಆರ್ಥಿಕತೆಯ ನೈಜ ಮೂಲಭೂತ ಸಾಮರ್ಥ್ಯವನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ಹೇಳಿದೆ. ರೇಟಿಂಗ್ ಏಜೆನ್ಸಿಗಳು ನೀಡುತ್ತಿರುವ ಕ್ರೆಡಿಟ್ ರೇಟಿಂಗ್ ಗಳು ನಮ್ಮ ನೈಜ ಮೂಲಭೂತ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತಿಲ್ಲದಿರುವುದರಿಂದ ರೇಟಿಂಗ್ ಇಳಿಕೆಯಿಂದಾಗಿ ಆರ್ಥಿಕತೆಯ ಸಾಂಕೇತಿಕ ಸೂಚಕ ಸಾಧನಗಳಾಗಿರುವ ಸೆನ್ಸೆಕ್ಸ್ ಗಳಿಕೆ, ವಿದೇಶಿ ವಿನಿಮಯ ದರ, ಸರ್ಕಾರದ ಸೆಕ್ಯುರಿಟಿಗಳ ಗಳಿಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಹಿಂದಿನ ಸಾವರಿನ ರೇಟಿಂಗ್ ಕುಗ್ಗಿಸಿದ ಸಂದರ್ಭದಲ್ಲಿ ಬೃಹತಾರ್ಥಿಕತೆಯ ಸಾಂಕೇತಿಕ ಸೂಚಕಗಳಾವುವು ಕುಸಿತಯ ಹಾದಿಯಲ್ಲಿ ಸಾಗಿಲ್ಲ. ಹೀಗಾಗಿ ಭಾರತದ ಹಣಕಾಸು ನೀತಿಯು ಇಂತಹ ಗದ್ದಲಗಳಿಗೆ ಗಮನಹರಿಸದೇ ಭಯಮುಕ್ತವಾದ ಮನೋಭಾವ ಪ್ರತಿಬಿಂಬಿಸುವ ಅಗತ್ಯವಿದೆ ಎಂದೂ ಸಮೀಕ್ಷೆ ಹೇಳಿದೆ.

ಕೋವಿಡ್-19ರ ಸಂಕಷ್ಟದಿಂದ ಉದ್ಭವಿಸಿರುವ ಆರ್ಥಿಕತೆಯ ಚೇತರಿಕೆಗೆ ವಿಸ್ತೃತವಾದ ಪರಿಹಾರ ಮಾರ್ಗೋಪಾಯಗಳನ್ನೇನೂ ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಿಲ್ಲ. ಈಗಾಗಲೇ ಘೋಷಿತ ಯೋಜನೆಗಳ ಮುಂದುವರಿಕೆ ಮತ್ತು ವಿಸ್ತರಣೆಯ ಅಗತ್ಯವನ್ನು ಒತ್ತಿ ಹೇಳಲಾಗಿದೆ.

ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆಗಳಲ್ಲಿ ಸಮೀಕ್ಷೆ ವರ್ಷ ಮತ್ತು ಅದರ ಹಿಂದಿನ ವರ್ಷದ ಆರ್ಥಿಕತೆಯ ಸಾಧನೆ- ವೈಫಲ್ಯಗಳನ್ನು ಸ್ಥೂಲವಾಗಿ ಪ್ರಸ್ತಾಪಿಸಲಾಗುತ್ತದೆ. ಮತ್ತು ಸಾಧನೆಗಳನ್ನು ಕಾಯ್ದುಕೊಳ್ಳುವ ಮತ್ತು ವೈಫಲ್ಯಗಳನ್ನು ತಿದ್ದಿಕೊಳ್ಳುವ ಮಾರ್ಗೋಪಾಯಗಳನ್ನು ಪ್ರಸ್ತಾಪಿಸಲಾಗುತ್ತದೆ. ಅದು ವಿತ್ತ ಸಚಿವರಿಗೆ ನೀಡುವ ನೇರ ಮತ್ತು ಪರೋಕ್ಷ ಸಲಹೆಗಳೂ ಆಗಿರುತ್ತವೆ. ಆದರೆ, ಈ ಆರ್ಥಿಕ ಸಮೀಕ್ಷೆಯಲ್ಲಿ ಅಂತಹ ಪ್ರಸ್ತಾಪಗಳೇನೂ ಇಲ್ಲ. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಹಿಂದಿನ ವೈಫಲ್ಯಗಳನ್ನು ಪ್ರಸ್ತಾಪಿಸದೇ ಮುಂದಿನ ಗುರಿಗಳನ್ನಷ್ಟೇ ಹೇಳಿಬಿಡುವ ಸಾಧ್ಯತೆಯ ಮುನ್ಸೂಚನೆಯಂತಿದೆ.

ಬಜೆಟ್ ಕೇವಲ ಮುಂದಿನ ವರ್ಷದ ಹಣಕಾಸಿನ ಲೆಕ್ಕಚಾರವಷ್ಟೇ ಅಲ್ಲಾ, ಹಿಂದಿನ, ಹಾಲಿ ವರ್ಷದ ಲಾಭ ನಷ್ಟದ, ಸಾಫಲ್ಯ ವೈಫಲ್ಯದ ಆಮೂಲಾಗ್ರ ವಿಶ್ಲೇಷಣೆಯೂ ಆಗಿರಬೇಕಾಗುತ್ತದೆ. ಆರ್ಥಿಕ ಸಮೀಕ್ಷೆಯು ಅಂತಹ ಬಜೆಟ್ ನಿರೀಕ್ಷಿಸುವಂತಿಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸಿದಂತಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com