2021 ರ ಬಜೆಟ್ ಅಧಿವೇಶನ ಜನವರಿ 28 ರಿಂದ ಆರಂಭವಾಗಿದೆ. ಬಜೆಟ್ನ ಆರಂಭದ ದಿನದಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿದ್ದಾರೆ. ಈ ವೇಳೆ ರೈತರ ಹೋರಾಟ ಮತ್ತು ಕೃಷಿ ಕಾನೂನುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ರೈತರ ಪ್ರತಿಭಟನೆಯ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ್ನು ಸರ್ಕಾರ ಗೌರವಿಸಲಿದೆ. ಆದರೆ ಕೃಷಿಕಾಯ್ದೆಗಳನ್ನು ಜಾರಿಗೆ ತರುವ ಮುನ್ನ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಚಿಂತಕರೊಂದಿಗೆ ವ್ಯಾಪಕ ಚರ್ಚೆ ನಡೆಸಿ ಕೃಷಿಕಾಯ್ದೆಗಳನ್ನು ಜಾರಿಗೆ ತಂದಿರುವುದೆಂದು ಸಮರ್ಥಿಸಿಕೊಂಡಿದ್ದಾರೆ.
ಜನವರಿ 26 ರಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸಿದ್ದಾರೆ. ಮತ್ತು ಕೆಂಪು ಕೋಟೆಯ ಬಳಿ ರಾಷ್ಟ್ರೀಯ ಧ್ವಜವನ್ನು ಅವಮಾನಿಸಿದ ಘಟನೆಗಳು ನಡೆದಿರುವುದು ದುರದೃಷ್ಟಕರ ಸಂಗತಿ ಎಂದು ಭಾಷಣದ ವೇಳೆ ರಾಮನಾಥ್ ಕೋವಿಂದ್ ಉಲ್ಲೇಖಿಸಿದ್ದಾರೆ.
ನಮ್ಮ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜೋತ್ಸವ ದಿನವೆಂದು ಆಚರಿಸುತ್ತೇವೆ. ಸಂವಿಧಾನವು ನಮಗಿರುವ ಸ್ವತಂತ್ರದ ಬಗ್ಗೆ ತಿಳಿಸುತ್ತದೆ. ಇಲ್ಲಿ ನಾವು ಕಾನೂನನ್ನು ಗೌರವಿಸಬೇಕು ಮತ್ತು ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಬ್ದಾರಿ ಎಂದಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಕೃಷಿ ಕಾನೂನುಗಳನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ನ್ಯಾಯಾಲಯ ತೀರ್ಪನ್ನು ಸರ್ಕಾರ ಗೌರವಿಸುತ್ತದೆ. ಕೃಷಿ ಕಾಯ್ದೆಗೆ ಸಂಬಂಧಿಸಿದಂತಹ ತಿದ್ದುಪಡಿಗಳು ಜಾರಿಗೆ ತರುವುದಕ್ಕೂ ಮುನ್ನ ವ್ಯಾಪಕ ಚರ್ಚೆ ನಡೆಸಿ ನಂತರ ಕಾಯ್ದೆಗಳನ್ನು ಅಂಗೀಕರಿಸಲಾಗಿದೆ ಎಂದು ಅಧಿವೇಶನದಲ್ಲಿ ಹೇಳಿದ್ದಾರೆ.
ದೇಶದಲ್ಲಿ ಶೇಕಡಾ 80 ಕ್ಕಿಂತಲೂ ಹೆಚ್ಚು ಸಣ್ಣ ಹಿಡುವಳಿದಾರರಿದ್ದಾರೆ. ಸುಮಾರು 10 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ದೇಶದಲ್ಲಿ ಸಣ್ಣ ಹಿಡುವಳಿ ಹೊಂದಿದ ರೈತರಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಮೂರು ಕೃಷಿಕಾಯ್ದೆಗಳು ಸಣ್ಣ ಹಿಡುವಳಿದಾರರ ಸುಧಾರಣೆ ಮತ್ತು ಲಾಭ ಪಡೆಯಲು ಸಹಕಾರಿಯಾಗಲಿವೆ ಎಂದು ರಾಮನಾಥ್ ಕೋವಿಂದ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.