ಇಷ್ಟಾಗಿಯೂ ರೈತರ ಆತಂಕ ಕೇಳದ ಬಿಜೆಪಿ ಸರ್ಕಾರದ ನೈಜ ಹಿತಾಸಕ್ತಿ ಯಾರು?

ತನ್ನದೇ ಪ್ರಜೆಗಳನ್ನು, ಅನ್ನದಾತರನ್ನು ಶತ್ರುಗಳಂತೆ ಕಾಣುವ ಮಟ್ಟಿಗೆ ಸರ್ಕಾರವೊಂದು ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದೆ ಮತ್ತು ಇಷ್ಟೊಂದು ವಿರೋಧದ ಹೊರತಾಗಿಯೂ ಮೂರು ಕಾಯ್ದೆಗಳ ಜಾರಿಗೆ ಪಟ್ಟು ಹಿಡಿದಿದೆ ಎಂದರೆ, ಅದರ ನೈಜ ಹಿತಾಸಕ್ತಿ ರೈತರೇ? ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ!
ಇಷ್ಟಾಗಿಯೂ ರೈತರ ಆತಂಕ ಕೇಳದ ಬಿಜೆಪಿ ಸರ್ಕಾರದ ನೈಜ ಹಿತಾಸಕ್ತಿ ಯಾರು?

ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ಪರೇಡ್ ಮತ್ತು ಹೋರಾಟಕ್ಕೆ ಮಸಿ ಬಳಿಯುವ ಕೆಲವು ಪ್ರಯತ್ನಗಳು ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಒಂದು ರೀತಿಯಲ್ಲಿ ಹೊಸ ಖಚಿತತೆ ಮತ್ತು ದಿಟ್ಟತನ ತಂದುಕೊಟ್ಟಿವೆ.

ಗಣರಾಜ್ಯೋತ್ಸವದ ದಿನ ವಿಭಿನ್ನ ಪ್ರತಿಭಟನೆ ವ್ಯಕ್ತಪಡಿಸುವ ಉದ್ದೇಶದಿಂದ ತ್ರಿವರ್ಣ ಧ್ವಜದೊಂದಿಗೆ ರಾಜಧಾನಿಗೆ ಆಗಮಿಸಿದ್ದ ಸಾವಿರಾರು ಟ್ರ್ಯಾಕ್ಟರುಗಳು, ದೆಹಲಿ ಪೊಲೀಸರು ನೀಡಿದ್ದ ನಿಗದಿತ ಮಾರ್ಗದಲ್ಲೇ ಮೆರವಣಿಗೆ ಹೊರಟಿರುವಾಗ, ಏಕಾಏಕಿ ಒಂದು ಗುಂಪು ಅಡ್ಡಹಾದಿ ಹಿಡಿದು ಕೆಂಪು ಕೋಟೆಗೆ ನುಗ್ಗಿತ್ತು. ಅಲ್ಲಿ ದೇಶದ ರಾಷ್ಟ್ರಧ್ವಜದ ಪಕ್ಕದಲ್ಲಿ ರೈತ ಧ್ವಜ ಮತ್ತು ಸಿಖ್ ಧರ್ಮಧ್ವಜವನ್ನು ಕೆಲವರು ಹಾರಿಸಿದ್ದರು. ಈ ಘಟನೆಯನ್ನು ಕೇಂದ್ರ ಬಿಜೆಪಿ ಸರ್ಕಾರ, ಅದರ ಬಾಲಬಡುಕ ಮಾಧ್ಯಮ ಮತ್ತು ದೆಹಲಿ ಪೊಲೀಸರು ಬಿಂಬಿಸಿದ ಮತ್ತು ನಿರ್ವಹಿಸಿದ ರೀತಿಯೇ ಅಂತಹ ಕಿಡಿಗೇಡಿತನದ ಹಿಂದೆ ಬೇರೇನೋ ಷಢ್ಯಂತ್ರ ಇರುವ ಸುಳಿವು ನೀಡಿತ್ತು.

ನಿಗದಿತ ಮಾರ್ಗವನ್ನು ಬಿಟ್ಟು ರೈತರ ಒಂದು ಗುಂಪು ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಹೇಗೆ ಬಿಟ್ಟರು? ಅದರಲ್ಲೂ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಿಯೋಜನೆಯಾಗಿದ್ದ ಭಾರೀ ಭದ್ರತಾ ಸರ್ಪಗಾವಲನ್ನು ದಾಟಿ ಅವರು ಸೀದಾ ಕೆಂಪುಕೋಟೆಗೆ ಹೇಗೆ ಹೋದರು? ಎಂಬ ಸಂಗತಿ ಹಲವರನ್ನು ಕಾಡಿತ್ತು. ಜೊತೆಗೆ ಅಲ್ಲಿ ರಾಷ್ಟ್ರಧ್ವಜದ ಪಕ್ಕದಲ್ಲಿ ಹಾರಿಸಿದ ಧ್ವಜವನ್ನು ಖಲೀಸ್ತಾನ ಧ್ವಜ ಎಂದೂ, ರಾಷ್ಟ್ರಧ್ವಜಕ್ಕೆ ಅವಮಾನಿಸಲಾಗಿದೆ ಎಂದೂ ಗೋಧಿ ಮಾಧ್ಯಮ ವರದಿ ಮಾಡಿದ್ದು ಕೂಡ ಅಂತಹ ಅನುಮಾನಗಳನ್ನು ಪುಷ್ಟೀಕರಿಸಿತ್ತು. ಜೊತೆಗೆ ರೈತರ 60 ದಿನಗಳ ಹೋರಾಟದ ವೇಳೆ ಎಂದೂ ಅವರೊಂದಿಗೆ ಮಾತುಕತೆಗಾಗಲೀ, ಹೋರಾಟದಲ್ಲಿ ಜೀವ ತೆತ್ತ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಅನ್ನದಾತರ ಸಾವಿನ ಬಗ್ಗೆಯಾಗಲೂ ಕಿಂಚಿತ್ತೂ ಆಸಕ್ತಿ ತೋರದ ಪ್ರಧಾನಮಂತ್ರಿಗಳು ಮತ್ತು ಗೃಹ ಸಚಿವರು, ಈ ಘಟನೆಯ ಬೆನ್ನಲ್ಲೇ ರೈತ ನಾಯಕರ ವಿರುದ್ಧ ಕ್ರಮಕ್ಕೆ ವಹಿಸಿದ ಕಾಳಜಿ ಕೂಡ ಹೋರಾಟವನ್ನು ಹೇಗಾದರೂ ಮುರಿಯಬೇಕೆಂಬ ಸರ್ಕಾರದ ಅಜೆಂಡಾವನ್ನು ಬಹಿರಂಗಪಡಿಸಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಎಲ್ಲಾ ಸದ್ಯದ ವಿದ್ಯಮಾನಗಳ ಜೊತೆಗೆ ರೈತ ಹೋರಾಟ ಮತ್ತು ಅವರು ವಿರೋಧಿಸುತ್ತಿರುವ ಮೂರು ಕೃಷಿ ಕಾಯ್ದೆಗಳ ವಿಷಯದಲ್ಲಿ ಆರಂಭದಿಂದಲೂ ಪ್ರಧಾನಿ ಮೋದಿಯವರ ಆಡಳಿತದ ನಡೆಗಳೇ ಸರ್ಕಾರದ ಕಾಳಜಿ ನಿಜಕ್ಕೂ ಯಾರ ಪರ ಎಂಬುದನ್ನು ಅನಾಯಾಸವಾಗಿ ಬಯಲುಮಾಡುತ್ತಿವೆ.

ಇಡೀ ದೇಶ ಕರೋನಾ ಸಂಕಷ್ಟದಲ್ಲಿ ಇರುವಾಗ, ರೈತರೂ ಸೇರಿದಂತೆ ಇಡೀ ದೇಶದ ಜನ ವೈರಾಣುವಿನಿಂದ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿರುವಾಗ ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಸರ್ಕಾರ ಈ ಮೂರೂ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಮೊದಲನೆಯದಾಗಿ ಕೃಷಿ ವಿಷಯ ಸಂವಿಧಾನದ ಪ್ರಕಾರ, ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಆ ವಿಷಯದ ಕುರಿತ ಹೊಸ ಕಾಯ್ದೆ-ಕಾನೂನು ರೂಪಿಸುವುದು ಸಂವಿಧಾನಬಾಹಿರ ಕ್ರಮ. ಎರಡನೆಯದಾಗಿ ಆ ಮೂರೂ ಕಾಯ್ದೆಗಳನ್ನು ಯಾರನ್ನು ಉದ್ದೇಶಿಸಿ ರೂಪಿಸಲಾಗಿದೆಯೋ, ಅವರನ್ನು; ಅಂದರೆ ರೈತರನ್ನು ವಿಶ್ವಾಸಕ್ಕೆ ಪಡೆಯುವುದಿರಲಿ, ಕನಿಷ್ಟ ರೈತ ಪ್ರತಿನಿಧಿಗಳೊಂದಿಗೆ ಸಮಾಲೋಚನೆಯನ್ನು ಕೂಡ ಮಾಡದೇ ಅವುಗಳನ್ನು ಕದ್ದುಮುಚ್ಚಿ ಜಾರಿಗೆ ತರಲಾಯಿತು. ಈ ಮೂರೂ ಕಾಯ್ದೆಗಳ ರಚನೆಯ ಹಂತದಲ್ಲಿ ಯಾವೆಲ್ಲಾ ಸಂವಿಧಾನಿಕ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ, ಯಾವೆಲ್ಲಾ ರೈತ ಪ್ರತಿನಿಧಿಗಳೊಂದಿಗೆ, ಕೃಷಿ ತಜ್ಞರೊಂದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಲು ಕೋರಿ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗಳಿಗೆ ಸರ್ಕಾರ ಉತ್ತರ ಕೊಡಲು ನಿರಾಕರಿಸಿರುವುದೇ ಈ ವಿಷಯದಲ್ಲಿ ಅದು ಎಷ್ಟು ಪಾರದರ್ಶಕವಾಗಿದೆ ಎಂಬುದಕ್ಕೆ ನಿದರ್ಶನ.

ಕರೋನಾ ಲಾಕ್ ಡೌನ್ ನಡುವೆ ಹೀಗೆ ಸುಗ್ರೀವಾಜ್ಞೆ ಎಂಬ ಕಳ್ಳಹಾದಿಯ ಮೂಲಕ ಜಾರಿಗೆ ಬಂದ ಈ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆಯುವಾಗಲಾದರೂ ಸಂವಿಧಾನಿಕ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆಯೇ? ಎಂದರೆ ಅದೂ ಇಲ್ಲ. ಆಡಳಿತ ಪಕ್ಷ ಬಿಜೆಪಿ, ಲೋಕಸಭೆಯಲ್ಲಿ ತಾನು ಹೊಂದಿರುವ ಭಾರೀ ಬಹುಮತದ ಅಮಲಿನಲ್ಲಿ ಸದನದಲ್ಲಿ ಚರ್ಚೆಯನ್ನೇ ಮಾಡದೇ ಪ್ರತಿಪಕ್ಷಗಳ ವಿರೋಧದ ನಡುವೆ, ಮಸೂದೆಗಳನ್ನು ಏಕಪಕ್ಷೀಯವಾಗಿ ಅನುಮೋದನೆ ಪಡೆಯಿತು. ಆಗಲೂ ಆಡಳಿತಾರೂಢ ಎನ್ ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಆ ಮಸೂದೆಯನ್ನು ವಿರೋಧಿಸಿ ಸರ್ಕಾರದಿಂದಲೇ ಹೊರನಡೆಯಿತು. ಅದರ ಏಕೈಕ ಸಚಿವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಕಾಲಿದಳದ ಈ ಪ್ರಬಲ ವಿರೋಧಕ್ಕೆ ಕಾರಣ; ಅದಾಗಲೇ ಪಂಜಾಬ್ ಸೇರಿದಂತೆ ದೇಶದ ಹಲವೆಡೆ ಮೂರು ಮಸೂದೆಗಳ ವಿರುದ್ಧ ಭುಗಿಲೆದ್ದಿದ್ದ ರೈತರ ಆಕ್ರೋಶವೇ ಎಂಬುದು ಗುಟ್ಟೇನಲ್ಲ. ಒಂದು ಕಡೆ ಹೊಸ ಕಾನೂನುಗಳ ಫಲಾನುಭವಿಗಳಾದ ರೈತರು ಮತ್ತು ತಮ್ಮದೇ ಮಿತ್ರಪಕ್ಷಗಳ ಪ್ರಬಲ ವಿರೋಧದ ಹೊರತಾಗಿಯೂ ಸರ್ಕಾರ, ಲೋಕಸಭೆಯ ಅನುಮೋದನೆಯ ಬಳಿಕ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿತು.

ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತದ ಕೊರತೆಯ ಹೊರತಾಗಿಯೂ, ಪ್ರತಿಪಕ್ಷಗಳ ವಿರೋಧ, ಗದ್ದಲದ ನಡುವೆಯೇ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ಪಡೆಯುವ ಮೂಲಕ ತಂತ್ರಗಾರಿಕೆಯ ಮೂಲಕ ಮಸೂದೆಗೆ ಅಂಗೀಕಾರವಾಗಿದೆ ಎಂದು ಘೋಷಿಸಲಾಯಿತು.

ಹೀಗೆ, ಮೂರು ವಿವಾದಿತ ಕೃಷಿ ಕಾಯ್ದೆಗಳ ರಚನೆ, ಲಾಕ್ ಡೌನ್ ನಡುವೆ ಸುಗ್ರೀವಾಜ್ಞೆ ಮೂಲಕ ಜಾರಿ, ಸಂಸತ್ ಅಂಗೀಕಾರದಲ್ಲಿ ನಡೆಸಿದ ತಂತ್ರಗಾರಿಕೆ,.. ಹೀಗೆ ಪ್ರತಿ ಹಂತದಲ್ಲೂ ಸರ್ಕಾರ ಕುತಂತ್ರ, ಷಢ್ಯಂತ್ರ ಮತ್ತು ಕಳ್ಳಹಾದಿಯ ನಡೆಯನ್ನೇ ಅನುಸರಿಸಿದೆ. ಪ್ರತಿ ಹಂತದಲ್ಲೂ ಕಾಯ್ದೆಯ ಹಕ್ಕುದಾರ ರೈತರನ್ನು ಯಾಮಾರಿಸಲಾಗಿದೆ. ಪ್ರತಿಪಕ್ಷಗಳನ್ನು, ಅವರು ಎತ್ತಿದ ಸಂವಿಧಾನಿಕ ಮಾನ್ಯತೆ, ಕೃಷಿ ವಲಯಕ್ಕೆ ಅಪಾಯಕಾರಿ, ದೇಶದ ಸಣ್ಣ ಮತ್ತು ಮಧ್ಯಮ ರೈತರ ಬದುಕಿಗೆ ಸಂಚಕಾರ ಎಂಬ ಆತಂಕಗಳಿಗೆ ಯಾವ ಸಮಜಾಯಿಷಿಯನ್ನಾಗಲೀ, ವಿವರಣೆಯನ್ನಾಗಲೀ ಕೊಡುವ ಗೋಜಿಗೇ ಹೋಗದೆ, ಪ್ರತಿಪಕ್ಷಗಳನ್ನೂ ಯಾಮಾರಿಸಿ ಉಭಯ ಸದನಗಳಲ್ಲಿ ಮಸೂದೆಗೆ ಅಂಗೀಕಾರ ಪಡೆಯಲಾಗಿದೆ.

ಬಳಿಕ ಮಸೂದೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾಯ್ದೆಯಾಗಿ, ಕಾನೂನಾಗಿ ಜಾರಿಗೆ ಬರುವ ಹಂತದಲ್ಲಿ ಸಹಜವಾಗೇ ರೈತರ ಸಹನೆಯ ಕಟ್ಟೆಯೊಡೆಯಿತು. ರೈತರು, ಪ್ರಮುಖವಾಗಿ ಈ ಕಾಯ್ದೆಗಳಿಂದ ಬೆಂಬಲ ಬೆಲೆ ವ್ಯವಸ್ಥೆ ಮತ್ತು ಎಪಿಎಂಸಿ ವ್ಯವಸ್ಥೆಗಳು ಇಲ್ಲವಾಗಲಿವೆ ಎಂಬುದನ್ನು ಅರಿತು ಆತಂಕಗೊಂಡ ಪಂಜಾಬ್, ಹರ್ಯಾಣ, ರಾಜಸ್ತಾನ ಮುಂತಾದ ಉತ್ತರಭಾರತದ ಬಹುತೇಕ ಆಹಾರ ಧಾನ್ಯ ಬೆಳೆಗಾರರು ದೆಹಲಿ ಚಲೋ ಆರಂಭಿಸಿದರು. ಸಾವಿರಾರು ಸಂಖ್ಯೆಯಲ್ಲಿ ರಾಜಧಾನಿಯತ್ತ ರೈತರು ಹೆಜ್ಜೆ ಹಾಕಿದಾಗ ಕೂಡ ಪ್ರಧಾನಿಯಾಗಲೀ, ಅವರ ಸಂಪುಟ ಸಹೋದ್ಯೋಗಿಗಳಾಗಲೀ ರೈತ ಸಂಘಟನೆಗಳ ಪ್ರಮುಖರೊಂದಿಗೆ ಸೌಜನ್ಯಕ್ಕೂ ಮಾತುಕತೆ ನಡೆಸುವ, ಅವರ ಆತಂಕಗಳನ್ನು ಪರಿಹಾರ ಮಾಡುವ ಪ್ರಯತ್ನ ಮಾಡಲೇ ಇಲ್ಲ. ಬದಲಾಗಿ ದೆಹಲಿಯ ಗಡಿಯಲ್ಲಿ ಹೆದ್ದಾರಿಗಳನ್ನೇ ಕೊರೆದು ಬೃಹತ್ ಕಂದನ ನಿರ್ಮಿಸಿ, ಬೃಹತ್ ಕಂಟೇನರ್ ಅಡ್ಡಲಾಗಿ ಇಟ್ಟು ಬ್ಯಾರಿಕೇಡ್ ಹಾಕಿ, ರೈತರನ್ನು ತಡೆಯಲಾಯಿತು. ಜಲಪಿರಂಗಿ, ಲಾಠಿ ಏಟು ಕೊಟ್ಟು ಅವರನ್ನು ಶತೃದೇಶದವರಂತೆ ಕಾಣಲಾಯಿತು.

ರೈತರು ಪಟ್ಟು ಬಿಡದೆ ಹೆದ್ದಾರಿಯಲ್ಲೇ ಬಿಡಾರ ಹೂಡಿ, ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯುವವರೆಗೆ ತಾವು ಕದಲುವುದಿಲ್ಲ ಎಂದು ಕೂತರು. ಆಗಲೂ ತತಕ್ಷಣಕ್ಕೆ ರೈತರನ್ನು ಉಪೇಕ್ಷಿಸಲಾಯಿತು, ಅವರಿಗೆ ವಿದೇಶಿ ಶಕ್ತಿಗಳ ಕುಮ್ಮಕ್ಕಿದೆ, ಖಲೀಸ್ತಾನ ಪ್ರತ್ಯೇಕತಾವಾದಿ ಸಂಘಟನೆಗಳ ಬೆಂಬಲವಿದೆ ಎಂದು ಹೇಳುವ ಮೂಲಕ ಅನ್ನದಾತರ ಹೋರಾಟಕ್ಕೆ ಮಸಿ ಬಳಿಯುವ ಷಢ್ಯಂತ್ರಗಳನ್ನು ಜಾರಿಗೆ ತರಲಾಯಿತು. ಆ ಯಾವ ಕುತಂತ್ರಗಳಿಗೂ ಅವರು ಜಗ್ಗದೇ, ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ದೇಶದ ಮೂಲೆಮೂಲೆಯ ರೈತರು ಹೋರಾಟಕ್ಕೆ ಬಂದು ಸೇರತೊಡಗಿದಾಗ, ನೆಪಮಾತ್ರದ ಮಾತುಕತೆಯ ತಂತ್ರ ಹೂಡಲಾಯಿತು. ಸರ್ಕಾರ ಮತ್ತು ರೈತರ ನಡುವೆ ನಡೆದ ಹತ್ತು ಸುತ್ತಿನ ಮಾತುಕತೆಗಳೂ ಯಾವ ಪ್ರಗತಿಯನ್ನೂ ಕಾಣದೆ ವಿಫಲವಾದವು ಎಂಬುದೇ ಆ ಮಾತುಕತೆಗಳ ಹಿಂದೆ ಸರ್ಕಾರಕ್ಕೆ ಬಿಕ್ಕಟ್ಟು ಬಗೆಹರಿಸುವ ನೈಜ ಕಾಳಜಿಗಿಂತ, ತಾವು ಮಾತುಕತೆಗೆ ಮುಂದಾದರೂ ರೈತರು ಸಿದ್ಧರಿಲ್ಲ ಎಂಬ ಸಂದೇಶ ರವಾನಿಸುವ ಮೂಲಕ ಮತ್ತೆ ರೈತರನ್ನೇ ಜನರ ಕಣ್ಣಲ್ಲಿ ಆರೋಪಿಗಳನ್ನಾಗಿಸುವ ತಂತ್ರಗಾರಿಕೆ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ನಿದರ್ಶನ.

ಒಂದು ಕಡೆ ರೈತರೊಂದಿಗೆ ಸರಣಿ ಮಾತುಕತೆಗಳು ವಿಫಲವಾಗುತ್ತಿರುವ ಹೊತ್ತಿಗೇ ರೈತ ಹೋರಾಟದ ವಿಷಯವನ್ನೇ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರ್ಕಾರ, ಈ ಹಿಂದೆ ಸಿಎಎ-ಎನ್ ಆರ್ ಸಿ ಹೋರಾಟಗಾರರನ್ನು, ಗಲಭೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಬಲೆಯಲ್ಲಿ ಸಿಲುಕಿಸಿ ಎತ್ತಂಗಡಿ ಮಾಡಿದ ದಾಳವನ್ನೇ ಉರುಳಿಸಿತು. ನ್ಯಾಯಾಲಯ ಕೂಡ ಮಹಿಳೆಯರು ಮತ್ತು ವಯಸ್ಸಾದ ಹಿರಿಯ ನಾಗರಿಕರು ಹೋರಾಟದಲ್ಲಿ ಯಾಕೆ ಇರಬೇಕು ಎಂಬಂತಹ ಪ್ರಶ್ನೆಗಳನ್ನು ಕೇಳುವ ಮೂಲಕ ಅನ್ನದಾತರಲ್ಲಿ ಆತಂಕ ಹುಟ್ಟಿಸಿತು.

ಈ ನಡುವೆ ರೈತರು ಗಣರಾಜ್ಯೋತ್ಸವದ ದಿನ ಪ್ರತ್ಯೇಕ ಪರೇಡ್ ನಡೆಸುವುದಾಗಿ ಘೋಷಿಸುವ ಹೊತ್ತಿಗೆ, ರೈತ ನಾಯಕರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಕೂಡ ಬೆಳಕಿಗೆ ಬಂದಿತು. ಹತ್ಯೆಗೆ ನಿಯೋಜಿತನಾದ ವ್ಯಕ್ತಿ ಎಂದು ಯುವಕನೊಬ್ಬನನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸಿದ ರೈತ ನಾಯಕರು, ಸರ್ಕಾರದ ಭಾಗವಾಗಿರುವ ಮಂದಿಯೇ ಆತನ ಹಿಂದಿದ್ದಾರೆ. ರೈತ ಹೋರಾಟವನ್ನು ಎದುರಿಸಲಾಗದ ಸರ್ಕಾರ ಇಂತಹ ಹೇಯ ದಾರಿಗಳನ್ನು ಹಿಡಿದಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಆ ಬಳಿಕ ಇದೀಗ ಜನವರಿ 26ರ ಗಣರಾಜ್ಯೋತ್ಸವದ ದಿನ ದೇಶದ ಇತಿಹಾಸದಲ್ಲೇ ಕಂಡರಿಯದ ಟ್ರ್ಯಾಕ್ಟರ್ ಪರೇಡ್ ವೇಳೆ ಕೆಲವು ಕಿಡಿಗೇಡಿಗಳು ರೈತ ಹೋರಾಟವನ್ನು ದಿಕ್ಕುತಪ್ಪಿಸುವ ಯತ್ನ ಮಾಡಿದ್ದಾರೆ. ವಿಪರ್ಯಾಸವೆಂದರೆ, ಈ ಬಾರಿ ಕೂಡ ಅಂತಹ ಕೃತ್ಯ ಎಸಗಿದ ಪ್ರಮುಖರಿಬ್ಬರು ಆಡಳಿತ ಪಕ್ಷ ಬಿಜೆಪಿಯ ಆಪ್ತರು. ಸ್ವತಃ ಪ್ರಧಾನಿ ಮತ್ತು ಗೃಹ ಸಚಿವರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳುವಷ್ಟು ಪಕ್ಷದಲ್ಲಿ ಆಪ್ತ ನಂಟು ಹೊಂದಿರುವವರು!

ಒಟ್ಟಾರೆ, ಕಳೆದ ಆರು ತಿಂಗಳ ಅವಧಿಯಲ್ಲಿ ಮೂರು ವಿವಾದಿತ ಕೃಷಿ ಕಾಯ್ದೆಗಳ ಆರಂಭದಿಂದ ಈವರೆಗೆ ಸರ್ಕಾರ ಯಾವ ಹಂತದಲ್ಲೂ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಬದಲಾಗಿ, ಕಳ್ಳಹಾದಿ, ಕುತಂತ್ರ, ಷಢ್ಯಂತ್ರದ ಮೂಲಕವೇ ದೇಶದ ಜನಸಂಖ್ಯೆಯ ಶೇ.70ರಷ್ಟು ಇರುವ ಮತ್ತು ಅನ್ನ ಕೊಡುವ ರೈತ ಸಮುದಾಯವನ್ನು ಯಾಮಾರಿಸುತ್ತಿದೆ. ದೇಶದ್ರೋಹಿಗಳೆಂದು ಬಿಂಬಿಸುತ್ತಿದೆ. ಶತ್ರುರಾಷ್ಟ್ರದವರಂತೆ ಕಾಣುತ್ತಿದೆ. ತನ್ನದೇ ಪ್ರಜೆಗಳನ್ನು, ಅನ್ನದಾತರನ್ನು ಶತ್ರುಗಳಂತೆ ಕಾಣುವ ಮಟ್ಟಿಗೆ ಸರ್ಕಾರವೊಂದು ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದೆ ಮತ್ತು ಇಷ್ಟೊಂದು ವಿರೋಧದ ಹೊರತಾಗಿಯೂ ಮೂರು ಕಾಯ್ದೆಗಳ ಜಾರಿಗೆ ಪಟ್ಟು ಹಿಡಿದಿದೆ ಎಂದರೆ, ಅದರ ನೈಜ ಹಿತಾಸಕ್ತಿ ರೈತರೇ? ದೇಶದ ಜನಸಾಮಾನ್ಯರೆ? ಅಥವಾ ಎಲ್ಲರೂ ಬಲ್ಲಂತೆ ಅಧಿಕಾರಸ್ಥರ ಆಪ್ತ ಎರಡು-ಮೂರು ಮುಂದಿ ಕಾರ್ಪೊರೇಟ್ ಕುಳಗಳೇ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯವಿಲ್ಲ. ಅಲ್ಲವೆ?

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com