ಮೋದಿ ಸರ್ಕಾರದ ‘ಅಂಕಿಅಂಶಗಳ ಪ್ರಾಮಾಣಿಕತೆ’ಯನ್ನು ಒರೆಗೆ ಹಚ್ಚಲಿರುವ ಬಜೆಟ್

ಪ್ರಧಾನಿ ಮೋದಿ ಅವರು ನಮ್ಮ ದೇಶದ ಆರ್ಥಿಕತೆಯು ‘ವಿ’ ಆಕಾರದ ಚೇತರಿಕೆ ಕಾಣಲಿದೆ ಎಂದು ಹೇಳಿದ್ದಾರಾದರೂ ಮೇಲ್ನೋಟಕ್ಕೆ ಅಂತಹ ಪರಿಸ್ಥಿತಿ ಕಾಣುತ್ತಿಲ್ಲ. ನಿರುದ್ಯೋಗ ಸಮಸ್ಯೆ, ನಿಧಾನಗತಿಯ ಚೇತರಿಕೆಯು ಬೇರೆಯದೇ ವಸ್ತುಸ್ಥಿತಿಯನ್ನು ಬಿಂಬಿಸುತ್ತಿವೆ
ಮೋದಿ ಸರ್ಕಾರದ ‘ಅಂಕಿಅಂಶಗಳ ಪ್ರಾಮಾಣಿಕತೆ’ಯನ್ನು ಒರೆಗೆ ಹಚ್ಚಲಿರುವ ಬಜೆಟ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು “ಹಿಂದೆಂದೂ ಕಂಡುಕೇಳರಿಯದ ಬಜೆಟ್” ಮಂಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಐಟಿ ಸೆಲ್ ಪ್ರಾಮಾಣಿಕವಾಗಿ ಶ್ರಮಿಸುತ್ತಲೇ ಇದೆ. ಬಜೆಟ್ ಮಂಡನೆಗೆ ಇನ್ನು ನಾಲ್ಕು ದಿನಗಳು ಬಾಕಿ ಇರುವ ಹೊತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರ “ಹಿಂದೆಂದೂ ಕಂಡುಕೇಳರಿಯದ ಬಜೆಟ್” ಮೋದಿ ಸರ್ಕಾರದ ಹತ್ತಾರು ಜುಮ್ಲಾಗಳ ಪಟ್ಟಿಗೆ ಸೇರುವುದೇ ಎಂಬುದೀಗ 5 ಟ್ರಿಲಿಯನ್ ಡಾಲರ್ ಪ್ರಶ್ನೆ.

ವಸ್ತುಸ್ಥಿತಿ ಹೇಗಿದೆ ಎಂದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದೆ ಕಂಡಿರುವ ಮತ್ತು ಮುಂದೆಯೂ ಕಾಣುವಂತಹ ಬಜೆಟ್ ಮಂಡಿಸುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಮೋದಿ ಸರ್ಕಾರದ ತರ್ಕರಹಿತ ನೀತಿಗಳಿಂದಾಗಿ ದೇಶದ ಆರ್ಥಿಕತೆ ಎಷ್ಟು ಕುಸಿದಿದೆ ಎಂಬುದನ್ನು ಬಜೆಟ್ ನಲ್ಲಿ ಮಂಡಿಸಲಿರುವ ಅಂಕಿಅಂಶಗಳು ಹೇಳಬೇಕು. ಆದರೆ, ವಾಸ್ತವಸ್ಥಿತಿಯನ್ನು ಜನತೆಗೆ ತಿಳಿಸುವ ಪ್ರಾಮಾಣಿಕತೆಯನ್ನು ಮೋದಿ ಸರ್ಕಾರ ತೋರಿಸುತ್ತದೆಯೋ ಅಥವಾ ಅಂಕಿಅಂಶಗಳನ್ನು ತಿರುಚಿ ವಸ್ತುಸ್ಥಿತಿಯನ್ನು ಮರೆ ಮಾಚುತ್ತದೋ ಎಂಬುದು ಕುತೂಹಲ ಮೂಡಿಸಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಲಭ್ಯ ಇರುವ ಅಂಕಿಅಂಶಗಳು ನಿರ್ಮಲಾ ಸೀತಾರಾಮನ್ ಅವರ ಇಚ್ಚೆಯಂತೆ ಬಜೆಟ್ ಮಂಡಿಸಲು ಅವಕಾಶ ನೀಡಲಾರವು. ಏಕೆಂದರೆ ದೇಶದ ಮೇಲೆ ಸಾಲದ ಹೊರೆ ಹೆಚ್ಚುತ್ತಲೇ ಇದೆ. ದೇಶದ ಸಾಲದ ಹೊರೆಯು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಇಂತಿಷ್ಟು ಅನುಪಾತದ ಮಿತಿ ಕಾಯ್ದುಕೊಳ್ಳುವುದು ವಾಡಿಕೆ. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತವು ಅಗತ್ಯ ಮಿತಿಯನ್ನು ಮೀರಿಬಿಟ್ಟಿದೆ. ಮಹಿಂದ್ರಾಅಂಡ್ ಮಹಿಂದ್ರಾದ ಮುಖ್ಯ ಅರ್ಥಶಾಸ್ತ್ರಜ್ಞ ಸಚ್ಚಿದಾನಂದ ಮಿಶ್ರ ಅವರ ಪ್ರಕಾರ, ಪ್ರಸಕ್ತ ವಿತ್ತೀಯ ವರ್ಷದ ಅಂದರೆ 2021ನೇ ಸಾಲಿನ ಸಾಲದ ಹೊರೆಯು ಜಿಡಿಪಿಯ ಶೇ.60ರಷ್ಟಕ್ಕೆ ಏರಲಿದೆ. ಇದು 2020ರಲ್ಲಿದ್ದ ಶೇ.49.3ಕ್ಕೆ ಹೋಲಿಸಿದರೆ, ಒಟ್ಟಾರೆ ಲೆಕ್ಕದಲ್ಲಿ ಶೇ.10.7ರಷ್ಟೂ ಮತ್ತು ವಾರ್ಷಿಕ ಲೆಕ್ಕದಲ್ಲಿ ಶೇ.20ರಷ್ಟು ಏರಿಕೆ ಆದಂತಿದೆ. ಈ ಪ್ರಮಾಣದ ಏರಿಕೆಯು ಹದಿನೈದು ವರ್ಷಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. ಮುಂದಿನ ವರ್ಷದಲ್ಲಿ ಜಿಡಿಪಿ ಚೇತರಿಕೆ ಕಾಣುವುದರಿಂದಾಗಿ ಒಟ್ಟಾರೆ ಜಿಡಿಪಿ ಮತ್ತು ಸಾಲದ ಅನುಪಾತವು ಕೊಂಚ ತಗ್ಗಬಹುದು. ಆದರೆ, ಜಿಡಿಪಿ ಮತ್ತು ಸಾಲದ ಹೊರೆ ನಡುವಿನ ಅನುಪಾತ ಹೆಚ್ಚಾಗುವುದು ದೇಶದ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿಂದೆ 2003ನೇ ವಿತ್ತೀಯ ವರ್ಷದಲ್ಲಿ ಜಿಡಿಪಿ- ಸಾಲದ ಅನುಪಾತವು ಶೇ.61.5ಕ್ಕೆ ಜಿಗಿದಿತ್ತು. ಆದರೆ, 2011ನೇ ವಿತ್ತೀಯ ವರ್ಷದ ಹೊತ್ತಿಗೆ ಈ ಅನುಪಾತವನ್ನು ಶೇ.50.5ಕ್ಕೆ ತಗ್ಗಿಸಲಾಗಿತ್ತು. ಅದೃಷ್ಟವಶಾತ್ ಆಗ ಆರ್ಥಿಕತಜ್ಞರೇ ಆಗಿದ್ದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಈಗ ಪರಿಸ್ಥಿತಿ ಬೇರೆಯೇ ಇದೆ!

ಮೊದಲೇ ಹದಗೆಟ್ಟಿದ್ದ ಆರ್ಥಿಕತೆಯು ಕೋವಿಡ್-19 ನಿಂದಾಗಿ ಪಾತಾಳಕ್ಕೆ ಇಳಿದಿದೆ. ಪ್ರಧಾನಿ ಮೋದಿ ಅವರು ನಮ್ಮ ದೇಶದ ಆರ್ಥಿಕತೆಯು ‘ವಿ’ ಆಕಾರದ ಚೇತರಿಕೆ ಕಾಣಲಿದೆ ಎಂದು ಹೇಳಿದ್ದಾರಾದರೂ ಮೇಲ್ನೋಟಕ್ಕೆ ಅಂತಹ ಪರಿಸ್ಥಿತಿ ಕಾಣುತ್ತಿಲ್ಲ. ನಿರುದ್ಯೋಗ ಸಮಸ್ಯೆ, ನಿಧಾನಗತಿಯ ಚೇತರಿಕೆಯು ಬೇರೆಯದೇ ವಸ್ತುಸ್ಥಿತಿಯನ್ನು ಬಿಂಬಿಸುತ್ತಿವೆ. ಈ ನಡುವೆ ದೇಶದ ಪ್ರಮುಖ ಕಾರ್ಪೊರೆಟ್ ಕಂಪನಿಗಳು ಕೋವಿಡ್-19 ಸಂಕಷ್ಟದ ನಡುವೆಯೂ ತಮ್ಮ ಲಾಭಾಂಶ ಪ್ರಮಾಣ ವೃದ್ಧಿಯಾಗಿದೆ ಎಂಬುದನ್ನು ಅಂಕಿಅಂಶಗಳ ಮೂಲಕ ಹೇಳುತ್ತಿವೆ. ಇದು ಮೋದಿ ಸರ್ಕಾರವು ಕಾರ್ಪೊರೆಟ್ ತೆರಿಗೆಯನ್ನು ಶೇ.35ರಿಂದ ಶೇ.25ಕ್ಕೆ ತಗ್ಗಿಸಿದ್ದರ ಪರಿಣಾಮವೇ ಹೊರತು ವಾಸ್ತವಿಕವಾಗಿ ವಹಿವಾಟು ಹೆಚ್ಚಾಗಿ ಲಾಭಾಂಶ ಹೆಚ್ಚಾಗಿಲ್ಲ ಎಂಬುದು ವಾಸ್ತವಿಕ ಸಂಗತಿ. ತೆರಿಗೆಯಲ್ಲಿ ಉಳಿಯುವ ಮೊತ್ತ ಲಾಭಾಂಶಕ್ಕೆ ಸೇರುತ್ತದೆ. ಹೀಗಾಗಿ ಕಾರ್ಪೊರೆಟ್ ಸಂಸ್ಥೆಗಳ ಲಾಭಾಂಶಗಳು ದೇಶದ ಆರ್ಥಿಕತೆಯು ಚೇತರಿಕೆಯಾಗುತ್ತಿರುವುದರ ಮಾನದಂಡವಲ್ಲ. ಆದರೆ, ಮೋದಿ ಸರ್ಕಾರವು ಇದೇ ಕಾರ್ಪೊರೆಟ್ ಅಂಕಿಅಂಶಗಳನ್ನು ತನ್ನ ವಾದಕ್ಕೆ ಬಳಸಿಕೊಳ್ಳುತ್ತಿದೆ.

ಭಾರಿ ಪ್ರಮಾಣದ ಬಡ್ಡಿಯ ಹೊರೆ: ಸಾಲದ ಹೊರೆ ಹೆಚ್ಚಾದಂತೆ ಬಡ್ಡಿ ಪಾವತಿಯ ಹೊರೆಯೂ ಹೆಚ್ಚುತ್ತದೆ. ಬಡ್ಡಿ ಪಾವತಿಯ ಹೊರೆ ಹೆಚ್ಚಾದಷ್ಟೂ ಅಭಿವೃದ್ಧಿಗೆ ವಿನಿಯೋಗಿಸುವ ಬಂಡವಾಳದ ಪ್ರಮಾಣವು ಕಡಿತಗೊಳ್ಳುತ್ತದೆ. ಇದು ಒಟ್ಟಾರೆ ಮುಂಬರುವ ವರ್ಷಗಳಲ್ಲಿನ ಆರ್ಥಿಕ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಸಾಲ ಶೂಲದ ವಿಷವೃತ್ತ. ಈ ವಿಷವೃತ್ತದಿಂದ ಹೊರಬರಬೇಕಾದರೆ, ಕಾರ್ಯಸಾಧ್ಯ ಮತ್ತು ಅನುಷ್ಠಾನ ಸಾಧ್ಯವಾದ ಪ್ರಾಮಾಣಿಕ ಯೋಜನೆಗಳನ್ನು ಸರ್ಕಾರ ಪ್ರಕಟಿಸಬೇಕಿದೆ. ಕೇವಲ ಘೋಷಣೆಗಾಗಿ ಲಕ್ಷಾಂತರ ಕೋಟಿ ಘೋಷಣೆ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ. ಸಾಲದ ಹೊರೆ ಮತ್ತಷ್ಟು ಹೆಚ್ಚುತ್ತದೆ. ‘ಮನಿಕಂಟ್ರೋಲ್ ಡಾಟ್ಕಾಮ್’ ನಲ್ಲಿ ಸಚ್ಚಿದಾನಂದ ಮಿಶ್ರ ಅವರು ಪ್ರಕಟಿಸಿರುವ ವಿಶ್ಲೇಷಣೆ ಪ್ರಕಾರ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಬರುವ ಆದಾಯದ ಪೈಕಿ ಶೇ.47ರಷ್ಟು ಬರೀ ಬಡ್ಡಿ ಪಾವತಿಗೆ ವಿನಿಯೋಗ ಆಗಲಿದೆ. ಅಂದರೆ, ಸಾಮಾನ್ಯ ವೆಚ್ಚಗಳು ಮತ್ತು ಬಂಡವಾಳ ಹೂಡಿಕೆಗೆಳಿಗಾಗಿ ಸರ್ಕಾರದ ಬಳಿ ಉಳಿಯುವುದು ಶೇ.53ರಷ್ಟು ಮಾತ್ರ. 2020ನೇ ವಿತ್ತೀಯ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಬಂದ ಆದಾಯದ ಪೈಕಿ ಶೇ.36.3ರಷ್ಟು ಮಾತ್ರ ಸಾಲದ ಮೇಲಿನ ಬಡ್ಡಿ ಪಾವತಿಗೆ ವಿನಿಯೋಗವಾಗಿತ್ತು. ಸಾಮಾನ್ಯ ವೆಚ್ಚ ಮತ್ತು ಬಂಡವಾಳ ಹೂಡಿಕೆಗಳಿಗೆ ಶೇ.63.7ರಷ್ಟು ಆದಾಯ ಲಭ್ಯವಾಗಿತ್ತು. ಕ್ಷಿಪ್ರವಾಗಿ ಜಿಗಿದಿರುವ ಈ ಅಂತರವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ, ಮುಖ್ಯವಾಗಿ ವಿತ್ತ ಸಚಿವರ ಮುಂದಿರುವ ಅತಿದೊಡ್ಡ ಸವಾಲು.

ಜಿಗಿಯುತ್ತಿರುವ ಪ್ರಾಥಮಿಕ ಕೊರತೆ: ದೇಶದ ಆರ್ಥಿಕತೆಯ ಆರೋಗ್ಯ ಹದಗೆಡುತ್ತಿರುವ ಸೂಚನೆಯನ್ನು ಪ್ರಾಥಮಿಕ ಕೊರತೆಯ ಹಿಗ್ಗುವಿಕೆಯು ಸೂಚಿಸುತ್ತದೆ. 2020ನೇ ವಿತ್ತೀಯ ವರ್ಷದಲ್ಲಿ ಪ್ರಾಥಮಿಕ ಕೊರತೆಯು ಜಿಡಿಪಿಯ ಶೇ.1.6ರಷ್ಟು ಇತ್ತು. ಇದು 2021ನೇ ವಿತ್ತೀಯ ವರ್ಷದಲ್ಲಿ ಜಿಡಿಪಿಯ ಶೇ.3.3ಕ್ಕೆ ಜಿಗಿಯುವ ಸಾಧ್ಯತೆ ಇದೆ. ವಾಸ್ತವವಾಗಿ ಬಜೆಟ್ ನಲ್ಲಿ ಪ್ರಥಾಮಿಕ ಕೊರತೆಯ ಮಿತಿಯನ್ನು ಶೇ.0.4ರಷ್ಟು ಎಂದು ಅಂದಾಜಿಸಲಾಗಿತ್ತು. ಕೇಂದ್ರ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ತೀವ್ರಪ್ರಮಾಣದ ಕಡಿತವಾದ ಹಿನ್ನೆಲೆಯಲ್ಲಿ ಶೇ.3.3ಕ್ಕೆ ಜಿಗಿದಿದೆ. ಒಂದು ವೇಳೆ ನರೇಂದ್ರ ಮೋದಿ ಸರ್ಕಾರವು ಕಾರ್ಪೊರೆಟ್ ಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇ.35ರಿಂದ ಶೇ.25ಕ್ಕೆ ತಗ್ಗಿಸಿ, ವಾರ್ಷಿಕ 1.45 ಲಕ್ಷ ಕೋಟಿ ಆದಾಯ ಕೊರತೆ ಅನುಭವಿಸದೇ ಹೊಗಿದ್ದರೆ, ಕೋವಿಡ್ ಸಂಕಷ್ಟ ಕಾಲದಲ್ಲೂ ಪ್ರಾಥಮಿಕ ಕೊರತೆಯು ಜಿಡಿಪಿಯ ಶೇ.2ರ ಆಜುಬಾಜಿನಲ್ಲಿ ಇರುತ್ತಿತ್ತು. ಹಾಲಿ ವರ್ಷದ ವಿತ್ತೀಯ ಕೊರತೆ ಮತ್ತು ಹಿಂದಿನ ವರ್ಷಗಳಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಪಾವತಿಯ ನಂತರದ ಉಳಿಯುವ ಕೊರತೆಯೇ ಪ್ರಾಥಮಿಕ ಕೊರತೆ. ಪ್ರಾಥಮಿಕ ಕೊರತೆ ತಗ್ಗಿದಷ್ಟೂ ಆರ್ಥಿಕತೆಯ ಆರೋಗ್ಯ ಸುಧಾರಿಸುತ್ತದೆ.

ವಿತ್ತೀಯ ಕೊರತೆ ಹಿಗ್ಗಲಿದೆ: ವಿತ್ತೀಯ ಕೊರತೆಯನ್ನು ತಗ್ಗಿರುವುದು ಮತ್ತು ನಿಯಂತ್ರಣದಲ್ಲಿರುವುದು ಆರ್ಥಿಕತೆಯು ಸರಿದಾರಿಯಲ್ಲಿರುವುದರ ಸಂಕೇತ. ಹೀಗಾಗಿ ಪ್ರತಿ ವರ್ಷದ ಬಜೆಟ್ ನಲ್ಲಿ ವಿತ್ತೀಯಕೊರತೆ ಮಿತಿಯನ್ನು ಮುನ್ನಂದಾಜು ಮಾಡಲಾಗುತ್ತದೆ ಮತ್ತು ಅದನ್ನು ಬಹುತೇಕ ಶೇ.1ರಷ್ಟು ಹೆಚ್ಚಳದೊಂದಿಗೆ ಕಾಯ್ದುಕೊಳ್ಳಲಾಗುತ್ತದೆ. ಆದರೆ, 2021ನೇ ಸಾಲಿನಲ್ಲಿ ಶೇ.3.5ರಷ್ಟು ವಿತ್ತೀಯ ಕೊರತೆ ಮಿತಿಯ ಮುನ್ನಂದಾಜು ಇದ್ದರೂ ಅದು ಈಗಾಗಲೇ ಶೇ.7ರಷ್ಟು ದಾಟಿರುವ ಸಾಧ್ಯತೆ ಇದೆ. ಆ ಬಗ್ಗೆ ಬಜೆಟ್ ನಲ್ಲಿ ವಿತ್ತ ಸಚಿವರು ಮಾಹಿತಿ ನೀಡಬೇಕು. 2022ರ ವಿತ್ತೀಯ ವರ್ಷದಲ್ಲಿ ಈ ಪ್ರಮಾಣವು ಶೇ.7ರಷ್ಟರಲ್ಲೇ ಸ್ಥಿರಗೊಳ್ಳುವ ಸಾಧ್ಯತೆ ಇದೆ. ಮೋದಿ ಸರ್ಕಾರ ಹೇಳಿಕೊಳ್ಳುತ್ತಿರುವಂತೆ ಆರ್ಥಿಕತೆಯು ‘ವಿ’ ಆಕಾರದಲ್ಲಿ ಚೇತರಿಕೆ ಕಂಡರೆ ಮಾತ್ರ, ಅದು ಏರುಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ.

ಜಿಡಿಪಿ ಹೆಚ್ಚಳವಾದಂತೆ ವಿತ್ತೀಯ ಕೊರತೆಯ ಪ್ರಮಾಣವನ್ನು ತಗ್ಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಜಿಡಿಪಿಯು ಇಳಿಜಾರಿನಿಂದ ಸ್ಥಿರಮಟ್ಟಕ್ಕೇರುವುದನ್ನು ಮೀರಿ, ಜಿಗಿಯುವ ಸಾಧ್ಯತೆ ಸದ್ಯಕ್ಕೆ ಇಲ್ಲ.

ಬಂಡವಾಳ ಹಿಂತೆಗೆತದ ಗುರಿ ಸಾಧಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. 2021ನೇ ಸಾಲಿನಲ್ಲಿ ಬಂಡವಾಳ ಹಿಂತೆಗೆತದಿಂದ 2.1 ಲಕ್ಷ ಕೋಟಿ ರುಪಾಯಿಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ವಿತ್ತೀಯ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಸಂಗ್ರಹವಾಗಿರುವ ಮೊತ್ತವು ಕೇವಲ 15,200 ಕೋಟಿ ರುಪಾಯಿಗಳು ಮಾತ್ರ. ಮೂರು ತಿಂಗಳಲ್ಲಿ ಇನ್ನೂ 1.90 ಲಕ್ಷ ಕೋಟಿ ಸಂಗ್ರಹ ಮಾಡುವುದಂತೂ ಸಾಧ್ಯವೇ ಇಲ್ಲ. ಬಂಡವಾಳ ಹಿಂತೆಗೆತದ ಬಾಬ್ತು ಸುಮಾರು 1.75 ಕೋಟಿಯಷ್ಟು ಕೊರತೆಯಾಗುತ್ತಿದೆ. ಇದು ವಿತ್ತೀಯ ಕೊರತೆಯ ಪ್ರಮಾಣವನ್ನು ಹೆಚ್ಚಿಸಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com