ತಮ್ಮ ಅಧಿಕಾರಾವಧಿಯಲ್ಲಿ 30,573 ಸುಳ್ಳು ಹೇಳಿದ ಟ್ರಂಪ್

ಅಧ್ಯಕ್ಷರಾದ ಮೊದಲ ವರ್ಷದಲ್ಲಿ ದಿನಂಪ್ರತಿ ಸರಾಸರಿ 6 ಸುಳ್ಳು ಹೇಳುತ್ತಿದ್ದರೆ, ಎರಡನೇ ವರ್ಷದಲ್ಲಿ16, ಮೂರನೇ ವರ್ಷದಲ್ಲಿ 22 ಮತ್ತು ನಾಲ್ಕನೇ ವರ್ಷದಲ್ಲಿ ಸರಾಸರಿ 39 ಸುಳ್ಳುಗಳನ್ನು ಹೇಳಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ 30,573 ಸುಳ್ಳು ಹೇಳಿದ ಟ್ರಂಪ್

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಸತ್ಯದ ಮೇಲಿನ ಆಕ್ರಮಣವೂ ಶುರುವಾಗಿತ್ತು. ತಮ್ಮ ಅಧಿಕಾರಾವಧಿಯಲ್ಲಿ ಅವರು ಸುಮಾರು 30,573 ಸುಳ್ಳು ಪ್ರತಿಪಾದನೆಗಳನ್ನು ಮಾಡಿದ್ದಾರೆ ಎಂದು ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಅಧ್ಯಕ್ಷೀಯ ಪದಗ್ರಹಣದ ಸಂದರ್ಭದಿಂದ ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ಟ್ರಂಪ್ ಹೇಳಿದ ಸುಳ್ಳುಗಳು ಒಂದೆರಡಲ್ಲ. ಅಧ್ಯಕ್ಷೀಯ ಪದಗ್ರಹಣಕ್ಕೆ 'ಇತಿಹಾಸ ಕಂಡರಿಯದ' ಜನ ಸೇರಿದ್ದರು ಎಂಬಲ್ಲಿಂದ ಆರಂಭವಾದ ಅವರ ಸುಳ್ಳುಗಳು ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳುಗಳಿಂದ ತಿಂಗಳಿಗೆ ಹೆಚ್ಚುತ್ತಾ ಹೋಯಿತು.

ಹತ್ತು ವರ್ಷಗಳಿಂದಲೂ 'ಫ್ಯಾಕ್ಟ್ ಚೆಕ್ಕರ್ಸ್' ಅಮೆರಿಕದ ಎರಡೂ ಪಕ್ಷಗಳು ನೀಡುವ ಹೇಳಿಕೆಗಳನ್ನು ಪರಿಶೀಲಿಸುತ್ತಾ ಬಂದಿದೆ‌. ' ಟ್ವಿಟ್ಟರಿನಲ್ಲಿ ಟ್ರಂಪ್‌ನ ಈ ವಾರದ ತಪ್ಪುಗಳು' ಎಂದು ನೂರು ದಿನಗಳಿಗಾಗಿ ಶುರುವಾದದ್ದು ಬಳಕೆದಾರರ ಮನವಿಯ ಮೇರೆಗೆ ನಾಲ್ಕು ವರ್ಷ ಮುಂದುವರಿಯಿತು.

"ಅಧ್ಯಕ್ಷ ಪದವಿಯಲ್ಲಿದ್ದೂ ಪದೇ ಪದೇ ಟ್ರಂಪ್ ಹೇಳುತ್ತಿದ್ದ ಸುಳ್ಳುಗಳಿಂದಾಗಿ ಅಮೆರಿಕನ್ನರು ಪ್ರಾಮಾಣಿಕ ವರದಿಗಳ ಬಗ್ಗೆ ಹೆಚ್ಚು ಆಲೋಚಿಸತೊಡಗಿದರು" ಎನ್ನುತ್ತಾರೆ. ಪ್ರೆಸಿಡೆನ್ಸಿಯಲ್ ಹಿಸ್ಟೋರಿಯನ್ ಮೈಕೆಲ್ ಬೆಸ್ಕ್ಲೋಸ್. 'ಫ್ಯಾಕ್ಟ್ ಚೆಕ್ಕರ್ಸ್'ನಲ್ಲಿರುವ ದತ್ತಾಂಶವು ಟ್ರಂಪ್ ಅವರ ಸುಳ್ಳುಗಳು ಎಷ್ಟು ನಾಟಕೀಯವಾಗಿ ಏರಿಕೆಯಾಗುತ್ತಿತ್ತು ಎನ್ನುವುದನ್ನು ಸೂಚಿಸುತ್ತದೆ.

ಅಧ್ಯಕ್ಷರಾದ ಮೊದಲ ವರ್ಷದಲ್ಲಿ ದಿನಂಪ್ರತಿ ಸರಾಸರಿ 6 ಸುಳ್ಳು ಹೇಳುತ್ತಿದ್ದರೆ, ಎರಡನೇ ವರ್ಷದಲ್ಲಿ16, ಮೂರನೇ ವರ್ಷದಲ್ಲಿ 22 ಮತ್ತು ನಾಲ್ಕನೇ ವರ್ಷದಲ್ಲಿ ಸರಾಸರಿ 39 ಸುಳ್ಳುಗಳನ್ನು ಹೇಳಿದ್ದಾರೆ.

ಟ್ರಂಪ್ ಸುಳ್ಳು ಹೇಳದ ವಿಷಯಗಳೇ ಇಲ್ಲ ಎನ್ನಬಹುದು. ಅವರಿಗೆ ತೊದರೆಯಲ್ಲಿದ್ದೇನೆ ಅಂತ ಅನ್ನಿಸಿದಾಗಲ್ಲಾ ಯಾವುದಾದರೂ ಒಂದು 'ವಿಹಂಗಮ‌ ಸುಳ್ಳಿ'ನ ಮೊರೆ ಹೋಗಿ ತಮ್ಮ ಬೆಂಬಲಿಗರನ್ನು ಸಮಾಧಾನಿಸುತ್ತಿದ್ದರು ಮತ್ತು ವಿರೋಧಿಗಳ ಮೇಲೆ ಆಕ್ರಮಣ ಮಾಡುತ್ತಿದ್ದರು. ಅವರ ಅರ್ಧಕ್ಕಿಂತ ಹೆಚ್ಚು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿರುವುದು ಅಥವಾ ಈಗ ಸಸ್ಪೆಂಡ್ ಆಗಿರುವ ಟ್ವಿಟರ್ ಅಕೌಂಟಿನಲ್ಲಿ ಪ್ರತಿಪಾದಿಸಿರುವುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಲಸೆಯ ಬಗ್ಗೆ ಟ್ರಂಪ್ ಹೇಳಿರುವ ಸುಳ್ಳುಗಳು ಏರಿಕೆಯಾದದ್ದು ಮಧ್ಯಾವದಿ ಚುನಾವಣೆಯ ಸಂದರ್ಭದಲ್ಲಿ. ದಾಖಲೆಗಳಿಲ್ಲದ ವಲಸಿಗರು ಗಡಿ ದಾಟುತ್ತಿದ್ದಾರೆ ಎಂದು ಹುಯಿಲೆಬ್ಬಿಸಿಬಿಟ್ಟಿದ್ದರು. 2019ರಲ್ಲಿ ಉಕ್ರೇನಿನ ಅಧ್ಯಕ್ಷರು ಈಗಿನ ಅಮೆರಿಕದ ಪ್ರೆಸಿಡೆಂಟ್ ಜೋ ಬೈಡನ್ ವಿರುದ್ಧ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಸುಳ್ಳು ಹೇಳಿದ್ದರು.

2019- 20 ರಲ್ಲಂತೂ ಕರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಇಡೀ ಜಗತ್ತು ದಿಗ್ಭ್ರಮೆಯಲ್ಲಿದ್ದರೆ ಟ್ರಂಪ್ ರಾಜಕೀಯ ಲಾಭಕ್ಕಾಗಿ ಸುಳ್ಳನ್ನು ಮಾತ್ರ ಪ್ರದಿಪಾದಿಸಿ ಅಸಹ್ಯ ಹುಟ್ಟಿಸಿದ್ದರು. ವರ್ಷಾಂತ್ಯದಲ್ಲಿ ಲೆಕ್ಕ ಹಾಕುವಾಗ ಕರೋನಾಗೆ ಸಂಬಂಧಿಸಿದಂತೆಯೇ 2500 ಸುಳ್ಳು ಹೇಳಿದ್ದರು. ಮಾಜಿ ಅಧ್ಯಕ್ಷ ಒಬಾಮಾ ವೆಂಟಿಲೇಟರ್ ನಿರ್ಮಿಸದೇ ಇದ್ದುದರಿಂದ ಕರೋನಾ ನಿರ್ವಹಿಸಲಾಗಿಲ್ಲ, ವೈರಸ್ 'ಮಿರಾಕಲ್'ನಂತೆ ಮಾಯವಾಗುತ್ತದೆ, ನಾವು ಕರೋನಾ ಗೆದ್ದಾಯಿತು... ಜಗತ್ತು ಕರೋನಾದ ವಿರುದ್ಧ ಹೋರಾಡುತ್ತಿದ್ದರೆ ಅತ್ಯಂತ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷರು ಅಸಂಬದ್ಧವಾಗಿ ಮಾತಾಡುತ್ತಿದ್ದರು.

1981 ರಲ್ಲಿ ಅಧ್ಯಕ್ಷರಾಗಿದ್ದ ರೊನಾಲ್ಡೊ ರೇಗನ್ ಮಾಡಿದ್ದ ಟ್ಯಾಕ್ಸ್ ಕಟ್ ಆಫ್ ಗಿಂತಲೂ ಅಧಿಕ ಕಟ್ ಆಫ್ ಮಾಡಲಾಗುವುದು ಎಂದು ಟ್ರಂಪ್ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದರು. ರೆನಾಲ್ಡ್ ಅವರ ಟ್ಯಾಕ್ಸ್ ಕಟ್ ಆಫ್ ಜಿಡಿಪಿಯ 2.9%ರಷ್ಟಿತ್ತು, ಟ್ರಂಪ್ ಕಟ್ ಆಫ್ ಕೇವಲ 0.9%. ಇಷ್ಟಿದ್ದೂ ಟ್ರಂಪ್ ಇತಿಹಾಸದ ಅತ್ಯಂತ ದೊಡ್ಡ ಟ್ಯಾಕ್ಸ್ ಕಟ್ ಆಫ್ ತಾನು ಮಾಡಿದ್ದೇನೆ ಎಂದು ಮುನ್ನೂರು ಬಾರಿ ಸುಳ್ಳು ಹೇಳಿದ್ದರು.

2020ರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಮೆರಿಕ ಮತ್ತು ಮೆಕ್ಸಿಕೊ ನಡುವಿನ ಗೋಡೆಗೆ ಮೆಕ್ಸಿಕನ್ನರೇ ಪಾವತಿಸಿದ್ದಾರೆ ಎಂದು ಒಂದೇ ಸುಳ್ಳನ್ನು ಐವತ್ತು ಬಾರಿ ಹೇಳಿದ್ದಾರೆ. 2016ರಲ್ಲಿ ಪ್ರಚಾರ ಸಭೆಗಳಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇನೆಂದು ತಮ್ಮ ಬೆಂಬಲಿಗರಿಗೆ ಖಚಿತಪಡಿಸಲು ಈ ಸುಳ್ಳನ್ನು ಹೇಳಲಾಗಿತ್ತು.

ಕೇವಲ ತನ್ನ ಅಧ್ಯಕ್ಷಗಿರಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಚುನಾವಣೆಗೆ ಒಂದು ದಿನ ಇರುವಾಗ 500 ಸುಳ್ಳುಗಳನ್ನು ಹೇಳಿದ್ದಾರೆ. ವಿದೇಶಿ ವ್ಯಾಪರದಲ್ಲಿನ ಸಾಧಿಸಿದ ಪ್ರಗತಿ, ವಿದೇಶ ವ್ಯವಹಾರಗಳು, ಆರ್ಥಿಕತೆ, ಕರೋನಾ ಪ್ರತಿಯೊಂದು ವಿಷಯದಲ್ಲೂ ಟ್ರಂಪ್ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದರು. ಸಾಕ್ಷಿ ಸಮೇತ ಅವರ ಸುಳ್ಳನ್ನು ಸಾಬೀತುಪಡಿಸಿದರೂ ಅದನ್ನೇ ತಪ್ಪೆಂದು ಸಾಧಿಸುವ ಬಂಡತನ ಅವರಲ್ಲಿತ್ತು.

ಪದೇ ಪದೇ 'ಚುನಾವಣೆಯಲ್ಲಿ ಅಕ್ರಮ ನಡೆದಿದೆ' ಎಂದು ಅವರು ಹೇಳಿದ ಸುಳ್ಳೇ ಕ್ಯಾಪಿಟಾಲ್ ಮೇಲಿನ ಅವರ ಬೆಂಬಲಿಗರ ದಾಳಿಗೆ ಮುಖ್ಯ ಕಾರಣ. ಅವರು ಮತ್ತು ಅವರ ಬೆಂಬಲಿಗರು ಚುನಾವಣೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಹಾಕಿದ್ದ 60 ಕೇಸುಗಳು 'ಬೋಗಸ್' ಎಂದು ತಿರಸ್ಕೃತವಾಗಿದ್ದರೂ ಅವರು ಈ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಲಿಲ್ಲ. ಚುನಾವಣಾ ಅಕ್ರಮ, ಕಳ್ಳತನದ ಓಟಿಂಗ್‌ಗಳ ಬಗ್ಗೆಯೇ ಸುಮಾರು 800 ರಷ್ಟು ಸುಳ್ಳು ಹೇಳಿದ್ದಾರೆ ಎಂದು ಫ್ಯಾಕ್ಟ್ ಚೆಕ್ಕರ್ಸ್ ವರದಿ ನೀಡುತ್ತದೆ.

ಫ್ಯಾಕ್ಟ್ ಚೆಕ್ಕರ್ಸ್ ತನ್ನ ದತ್ತಾಂಶ ಸಂಗ್ರಹಣೆಗೆ ಟ್ರಂಪ್ ಭಾಷಣಗಳು, ಚುನಾವಣಾ ರ‌್ಯಾಲಿ, ಸಂದರ್ಶನಗಳು, ಪತ್ರಿಕಾಗೋಷ್ಠಿ ಮತ್ತು ನಾಲ್ಕು ವರ್ಷಗಳಲ್ಲಿ ಅವರು ಮಾಡಿರುವ 25000 ಟ್ವೀಟ್‌ಗಳನ್ನು ಬಳಸಿಕೊಂಡಿದೆ. ಅವರ ಫೇಸ್‌ಬುಕ್‌ ಅಕೌಂಟಿನ ಮಾಹಿತಿಯನ್ನು ಪರಿಗಣಿಸಿಲ್ಲ.

ಕೃಪೆ: ಎನ್‌ಡಿಟಿವಿ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com