ದೆಹಲಿಯ ಎಂಪಿ/ಎಂಎಲ್ಎ ವಿಶೇಷ ನ್ಯಾಯಾಲಯವು ಆಮ್ ಆದ್ಮಿ ಪಾರ್ಟಿಯ ಶಾಸಕ ಸೋಮನಾಥ್ ಭಾರ್ತಿ ಅವರಿಗೆ ಎರಡು ವರ್ಷಗಳ ಕಾರಾಗೃಹ ಸಜೆ ವಿಧಿಸಿದೆ. 2016ರಲ್ಲಿ ದೆಹಲಿಯ ಏಮ್ಸ್ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಜಾಮೀನು ಪಡೆದುಕೊಂಡಿದ್ದ ಸೋಮನಾಥ್ ಅವರು, ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ದ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ.
ಈ ಪ್ರಕರಣದ ಇತರ ಆರೋಪಿಸಗಳಾಗಿದ್ದ ದಲೀಪ್ ಝಾ, ಜಗತ್ ಸೈನಿ, ರಾಕೇಶ್ ಪಾಂಡೆ ಮತ್ತು ಸಂದೀಪ್ ಅವರನ್ನು ಕೋರ್ಟ್ ನಿರ್ದೋಷಿಗಳೆಂದು ತೀರ್ಪಿತ್ತಿದೆ. ಇವರ ಮೇಲೆ ಸಂದೇಹದ ಹೊರತಾಗಿ ಯಾವುದೇ ಗುರುತರವಾದ ಸಾಕ್ಷ್ಯಗಳನ್ನು ಒದಗಿಸುವಲ್ಲಿ ತನಿಕಾಧಿಕಾರಿಗಳು ವಿಫಲರಾಗಿದ್ದಾರೆಂದು ನ್ಯಾಯಾಲಯ ಹೇಳಿದೆ.
ಸೋಮನಾಥ್ ಭಾರ್ತಿ ಅವರ ವಿರುದ್ದ ವಾದಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಏಮ್ಸ್ನಲ್ಲಿ ನಡೆದ ಗಲಭೆಯ ಕುರಿತು ಮಾಹಿತಿ ನೀಡಿದ್ದಾರೆ. 2016ರ ಸೆಪ್ಟೆಂಬರ್ನಲ್ಲಿ ಆರೋಪಿಯಾಗಿರುವ ಸೋಮನಾಥ್ ಭಾರ್ತಿ ಅವರು ತಮ್ಮ ಸುಮಾರು 300 ಬೆಂಬಲಿಗರೊಡನೆ, ದೆಹಲಿಯ ಏಮ್ಸ್ ಆಸ್ಪತ್ರೆಯ ಗೋಡೆಯ ಬಳಿ ಜಮಾಯಿಸಿದ್ದರು. ನಂತರ ಜೆಸಿಬಿ ಬಳಸಿ ಆಸ್ಪತ್ರೆಯ ತಡೆಗೋಡೆಯನ್ನು ಕೆಡವಲು ಯತ್ನಿಸಿದ್ದಾರೆ. ಜಮಾಯಿಸದ್ದ ಜನರು ಏಮ್ಸ್ನ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಎಂದು ಆರೋಪಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ್ದ ಸೋಮನಾಥ್ ಪರ ವಕೀಲರು, ಸಾರ್ವಜನಿಕ ಆಸ್ಥಿಯನ್ನು ಏಮ್ಸ್ ಅನಧಿಕೃತವಾಗಿ ಬಳಸಿಕೊಂಡಿತ್ತು. ಆ ಸ್ಥಳವು ಪಾರ್ಕಿಂಗ್ ಉದ್ದೇಶಕ್ಕಾಗಿ ಮೀಸಲಾಗಿಡಲಾಗಿತ್ತು. ತೆರವು ಕಾರ್ಯವನ್ನು PWD ಇಲಾಖೆ ಹಾಗೂ ಏಮ್ಸ್ನ ಸಹಯೋಗದೊಂದಿಗೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.