ಕಳೆದ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆನ್ನೆಲುಬುನಂತಿರುವ ಖಾಲ್ಸಾ ಏಡ್ ಎಂಬ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ 2021ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.
ಜ. 16ರಂದು ಈ ಸಂಸ್ಥೆಗೆ ದೇಣಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳವು ಸಮನ್ಸ್ ನೀಡಿತ್ತು.
ಕೆನಡಾದ ಸಂಸದರಾದ ಉಪಲ್ ಅವರು ಖಾಲ್ಸಾ ಸಂಸ್ಥೆಯನ್ನು ನಾಮನಿರ್ದೇಶನಕ್ಕೆ ಮನವಿ ಮಾಡಿ ಜ. 14ರಂದು ಪತ್ರ ಬರೆದಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಂಗ್ಲೆಂಡಿನ ಮೂಲದ ಖಾಲ್ಸಾ ಏಡ್ ಸಂಸ್ಥೆ 1999ರಲ್ಲಿ ರವೀಂದರ್ ಸಿಂಗ್ ಅವರಿಂದ ಸ್ಥಾಪನೆಯಾಯಿತು. ಸಿಖ್ ಸಮುದಾಯದ ಈ ಸಂಸ್ಥೆಯು ನಿಧಾನವಾಗಿ ವಿಶ್ವದಾದ್ಯಂತ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿ ತು. ''ಮನುಕುಲವನ್ನು ಒಂದೆಂದು ಭಾವಿಸಿ, ಮಾನವೀಯತೆಯ ಸೇವೆ'' ಮಾಡುವುದು ಈ ಸಂಸ್ಥೆಯ ಧ್ಯೇಯ.
ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಖಾಲ್ಸಾ ಏಡ್, ಪ್ರವಾಹ ಸೇರಿದಂತೆ ಯಾವುದೇ ರೀತಿಯ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಎಲ್ಲ ರೀತಿಯ ನೆರವನ್ನು ಒದಗಿಸಿದೆ.
ಇಲ್ಲಿ ಉಲ್ಲೇಖಿಸಬಹುದಾದ ಕೆಲವು ನೆರವಿನ ಚಟುವಟಿಕೆಗಳು ಇಂತಿವೆ
* 1999ರ ಟರ್ಕಿ ಭೂಕಂಪದ ವೇಳೆ ಸಂತ್ರಸ್ತರಿಗೆ ಮೂಲ ಸೌಕರ್ಯ.
* 2000ದಲ್ಲಿ ಒರಿಸಾದಲ್ಲಿ ಚಂಡಮಾರುತದಿಂದ ಉಂಟಾದ ಅನಾಹುತದ ರಕ್ಷಣಾ ಕಾರ್ಯಕ್ಕೆ ಸ್ವಯಂ ಸೇವಕರ ರವಾನೆ
* ಆಫ್ಘಾನಿಸ್ತಾನದಲ್ಲಿ 2003ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಉಪಕರಣ ಹಾಗೂ ಆರ್ಥಿಕ ನೆರವು.
*2016ರಲ್ಲಿ ಲಂಡನ್ನಲ್ಲಿ ಉಂಟಾದ ಪ್ರವಾಹದಿಂದಾಗಿ ಸಂತ್ರಸ್ತರಿಗೆ ಶಿಬಿರಗಳ ಸ್ಥಾಪನೆ ಮತ್ತು ನೆರವು.
* ಬಾಂಗ್ಲಾ-ಮಯನ್ಮಾರ್ ಗಡಿಯಲ್ಲಿದ್ದ ರೊಹಿಂಗ್ಯಾ ನಿರಾಶ್ರಿತರಿಗೆ ಸೇವೆ.
* 2018ರಲ್ಲಿ ಇಡೀ ಕೇರಳವನ್ನು ನಡುಗಿಸಿದ ಪ್ರವಾಹದ ವೇಳೆ ಅತಿ ದೊಡ್ಡ ನೆರವಿನ ಕಾರ್ಯವನ್ನು ನಡೆಸಿದ ಹೆಗ್ಗಳಿಕೆ ಖಾಲ್ಸಾ ಸಂಸ್ಥೆಯದ್ದು.
ಈಗ ಪಂಜಾಬಿನಿಂದ ಆರಂಭವಾಗಿ ಕೃಷಿ ನೀತಿಗಳ ವಿರುದ್ಧ ನಡೆಯುತ್ತಿರುವ ಭಾರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಒದಗಿಸಿದ್ದು, ಬಟ್ಟೆ, ಊಟ, ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲಕ್ಕೆ ನಿಂತಿದ್ದೆ. ಸರ್ಕಾರ ವಿರುದ್ಧದ ಹೋರಾಟಕ್ಕೆ ಈ ರೀತಿಯಲ್ಲಿ ಬೆನ್ನಿಗೆ ನಿಂತ ಕಾರಣಕ್ಕೆ ಭಯೋತ್ಪಾದಕ ಸಂಸ್ಥೆ ಎಂದು ದೂಷಿಸಿದ್ದು ಅಲ್ಲದೆ, ವಿಚಾರಣೆಗೆ ಕರೆದಿತ್ತು. ಆದರೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಮುಂದೂಡಿದೆ.