ದೇಶದ ಆಡಳಿತ ವ್ಯವಸ್ಥೆಯ ಅಸಲೀತನ ಬೆತ್ತಲುಗೊಳಿಸಿದ ರೈತ ಹೋರಾಟ!

ಅಷ್ಟಕ್ಕೂ ಈಗ ಈ ರೈತ ಹೋರಾಟ ಕೇವಲ ಮೂರು ಕೃಷಿ ಕಾಯ್ದೆಗಳ ಕುರಿತ ರೈತರ ವಿರೋಧವಾಗಿ ಮಾತ್ರ ಉಳಿದಿಲ್ಲ. ಆಡಳಿತ ವ್ಯವಸ್ಥೆ, ಆಡಳಿತ ನೀತಿಗಳು ದೇಶದ ಜನಸಂಖ್ಯೆಯ ಶೇ.70ರಷ್ಟು ಪ್ರಮಾಣದಲ್ಲಿ ಇರುವ ರೈತ ಸಮುದಾಯದಲ್ಲಿ ಹುಟ್ಟಿಸಿರುವ ಅವಿಶ್ವಾಸ ಮತ್ತು ಅಪನಂಬಿಕೆಯ ವಿರುದ್ಧದ ಆಕ್ರೋಶವಾಗಿ ಹೋರಾಟ ಬದಲಾಗಿದೆ.
ದೇಶದ ಆಡಳಿತ ವ್ಯವಸ್ಥೆಯ ಅಸಲೀತನ ಬೆತ್ತಲುಗೊಳಿಸಿದ ರೈತ ಹೋರಾಟ!

ಕೃಷಿಕರಿಗೇ ಬೇಡವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಶತಾಯಗತಾಯ ಜಾರಿಗೊಳಿಸಲು ಮೊಂಡು ಹಿಡಿದಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶದ ರೈತರು ನಡೆಸುತ್ತಿರುವ ಹೋರಾಟ ಇನ್ನಷ್ಟು ತೀವ್ರಗೊಂಡಿದೆ.

ದೆಹಲಿ ಗಡಿಯಲ್ಲಿ ಕಳೆದ 58 ದಿನಗಳಿಂದ ನಡೆಯುತ್ತಿರುವ ರೈತರ ಧರಣಿಯಲ್ಲಿ ಬುಧವಾರ ರೈತರೊಬ್ಬರು ಸರ್ಕಾರದ ರೈತ ವಿರೋಧಿ ಧೋರಣೆ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನಗಳಿಂದ ರೋಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಆ ಮೂಲಕ ಈವರೆಗೆ ಸಾವುಕಂಡಿರುವ ಪ್ರತಿಭಟನಾನಿರತ ರೈತರ ಸಂಖ್ಯೆ 80ರ ಗಡಿ ದಾಟಿದೆ. ಕೊರೆವ ಚಳಿ, ಶೀತಗಾಳಿ, ಮಳೆ ಮುಂತಾದ ವ್ಯತಿರಿಕ್ತ ಪರಿಸ್ಥಿತಿಗಳು ಮತ್ತು ರಸ್ತೆ ಅಪಘಾತಗಳ ಜೊತೆಗೆ ಸರ್ಕಾರದ ಅಮಾನವೀಯ ವರಸೆಗಳು ಅನ್ನದಾತರ ಜೀವ ಬಲಿ ತೆಗೆದುಕೊಳ್ಳುತ್ತಿವೆ.

ಎಪಿಎಂಸಿ ವ್ಯವಸ್ಥೆ, ಬೆಂಬಲ ಬೆಲೆ ವ್ಯವಸ್ಥೆ ಮತ್ತು ಅಗತ್ಯ ವಸ್ತು ಕಾಯ್ದೆಗಳನ್ನು ತೆಗೆದುಹಾಕಿ, ದೇಶದ ಕೃಷಿ ಭೂಮಿ, ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಆಡಳಿತ ಪಕ್ಷದ ಆಪ್ತರಾಗಿರುವ ಕೆಲವೇ ಮಂದಿ ಕಾರ್ಪೊರೇಟ್ ಕಂಪನಿಗಳ ಏಕಸ್ವಾಮ್ಯಕ್ಕೆ ಒಪ್ಪಿಸುವ ಮೂರು ಕೃಷಿ ಕಾಯ್ದೆಗಳು ಜಾರಿಯಾಗಕೂಡದು ಎಂಬುದು ರೈತರ ಪಟ್ಟು. ರೈತರ ಬದುಕು ಮತ್ತು ದೇಶದ ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಈ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದಾಗಿ ಹೇಳುತ್ತಿರುವ ಪ್ರಧಾನಿ ಮೋದಿಯವರ ಸರ್ಕಾರ, ಸರಿಸುಮಾರು ಎರಡು ತಿಂಗಳ ಈ ನಿರಂತರ ಹೋರಾಟದ ಅವಧಿಯಲ್ಲಿ ನಡೆದ ಹತ್ತು ಸುತ್ತಿನ ಮಾತುಕತೆಗಳಲ್ಲಿ ಒಮ್ಮೆ ಕೂಡ ತನ್ನ ಹೊಸ ಕಾಯ್ದೆಗಳು ಹೇಗೆ ರೈತರ ಮತ್ತು ಕೃಷಿ ಹಿತ ಕಾಯುತ್ತವೆ ಎಂಬುದನ್ನು ಮನವರಿಕೆ ಮಾಡುವ ಯತ್ನ ಮಾಡಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹತ್ತು ಸುತ್ತಿನ ವಿಫಲ ಮಾತುಕತೆಗಳು; ರೈತರ ಬೆರಳೆಣಿಕೆಯ ಬೇಡಿಕೆಗಳ ವಿಷಯದಲ್ಲಿ ಸರ್ಕಾರ ಎಷ್ಟು ನಿರ್ದಯಿಯಾಗಿದೆ, ಎಷ್ಟು ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ ಎಂಬುದರ ಜೊತೆಗೆ, ಈ ಬಿಕ್ಕಟ್ಟನ್ನು ಆ ಕಾಯ್ದೆಗಳ ನಿಜವಾದ ಫಲಾನುಭವಿಗಳಾದ ರೈತರ ಮನವೊಲಿಕೆ ಅಥವಾ ಅವರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ಯಾವ ಕಾಳಜಿಯೂ ಇಲ್ಲ ಎಂಬುದನ್ನೂ ತೋರಿಸುತ್ತಿದೆ. ಮುಖ್ಯವಾಗಿ ಆರಂಭದಿಂದ ಈವರೆಗೆ ಕೃಷಿ ಸಚಿವರು ಮತ್ತಿತರ ಸಂಪುಟ ಸಹೋದ್ಯೋಗಿಗಳೇ, ಅದರಲ್ಲೂ ಬಹುತೇಕ ಕಿರಿಯ ಸಚಿವರು; ರೈತ ಸಂಘಟನೆಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆಯೇ ವಿನಃ ಸರ್ಕಾರದ ಪ್ರಮುಖ ಸಚಿವರಾಗಲೀ, ಹಿರಿಯ ಸಂಪುಟ ಸಹೋದ್ಯೋಗಿಗಳಾಗಲೀ ಈ ಮಾತುಕತೆಗಳಲ್ಲಿ ರೈತರೊಂದಿಗೆ ಸಮಾಲೋಚನೆಗೆ ಬಂದಿಲ್ಲ. ಇನ್ನು ಸ್ವತಃ ಪ್ರಧಾನಿ ಮೋದಿಯವರಂತೂ, ಕಳೆದ 58 ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದರೂ ಒಮ್ಮೆಯೂ ಕೂಡ ರೈತ ನಾಯಕರೊಂದಿಗೆ ಮಾತುಕತೆ ಇರಲಿ, ಕನಿಷ್ಟ ಧರಣಿ ನಿರತರ ಸರಣಿ ಸಾವು- ನೋವುಗಳ ಬಗ್ಗೆ ತಮ್ಮ ಟ್ವೀಟರ್ ಮತ್ತಿತರ ಜಾಲತಾಣದಲ್ಲಿ ಕೂಡ ಸ್ಪಂದಿಸುವ ಮಟ್ಟಿನ ಕಾಳಜಿಯನ್ನೂ ತೋರಿಲ್ಲ!.

ಅಷ್ಟೇ ಅಲ್ಲ; ಧರ್ಮ, ದೇಶಪ್ರೇಮದಂತಹ ತಮ್ಮ ಸಿದ್ಧ ಮಾದರಿಯ ‘ಉನ್ಮಾದ ರಾಜಕಾರಣ’ಕ್ಕೆ ಬಲಿಯಾಗದೆ, ‘ಹೋರಾಟಕ್ಕೆ ಖಲೀಸ್ತಾನ ಹಿನ್ನೆಲೆ’, ‘ರಾಷ್ಟ್ರವಿರೋಧಿ ಶಕ್ತಿಗಳ ಕೈವಾಡ’ದಂತಹ ಕಳಂಕ ಬಳಿಯುವ ಯತ್ನಗಳಿಗೂ ಪಕ್ಕಾಗದೆ, ಪಟ್ಟು ಹಿಡಿದು ದೆಹಲಿಯ ಗಡಿಗಳಲ್ಲಿ ಕೂತಿರುವ ರೈತರನ್ನು ಅಲ್ಲಿಂದ ಚದುರಿಸಲು ಸರ್ಕಾರ ಇನ್ನಿಲ್ಲದ ಹರಸಾಹಸಗಳನ್ನು ಮಾಡುತ್ತಿದೆ. ಎರಡು ತಿಂಗಳ ಹಿಂದೆ, ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ದೆಹಲಿಗೆ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರನ್ನು ತಡೆಯಲು ಸರ್ಕಾರ, ಹೆದ್ದಾರಿಗಳಲ್ಲಿ ಕಂದಕ ತೋಡಿ, ಬೃಹತ್ ಕಂಟೇನರ್ ಅಡ್ಡ ಇಟ್ಟು, ಅರೆಸೇನಾ ಪಡೆ ಕಾವಲು ಹಾಕಿತು. ಅದರಿಂದಾಗಿ ರೈತರು ದೆಹಲಿಯ ಗಡಿಯಲ್ಲೇ ಡೇರೆ ಹಾಕಿ ಆಹೋರಾತ್ರಿ ಹೋರಾಟ ಆರಂಭಿಸಿದ್ದರು. ಆ ಬಳಿಕ ಹೋರಾಟವನ್ನು ಹತ್ತಿಕ್ಕುವ ಮತ್ತು ಹೋರಾಟಗಾರರ ಎದೆಗುಂದಿಸುವ ಯತ್ನವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಯ ಮೂಲಕ ಹೋರಾಟಗಾರರಿಗೆ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಸಂಘಟನೆಗಳ ಸಂಪರ್ಕವಿದೆ ಎಂದು; ಆ ಕುರಿತ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಹೋರಾಟಗಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆದರೆ, ರೈತರು ಇದು ಸರ್ಕಾರದ ಹೋರಾಟ ದಮನದ ಪ್ರಯತ್ನ, ಹಾಗಾಗಿ ಇಂತಹ ನೋಟೀಸ್ ಗಳಿಗೆ ಸೊಪ್ಪುಹಾಕುವುದಿಲ್ಲ ಮತ್ತು ವಿಚಾರಣೆಗೆ ಹಾಜರಾಗುವುದೂ ಇಲ್ಲ ಎಂದಿದ್ದಾರೆ.

ಮತ್ತೊಂದು ಕಡೆ, ಸುಪ್ರೀಂಕೋರ್ಟ್ ಕೂಡ ಸರ್ಕಾರ ಮತ್ತು ರೈತರ ನಡುವಿನ ಬಿಕ್ಕಟ್ಟು ಶಮನದ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ, ನ್ಯಾಯಾಲಯ ರೈತರು ಮತ್ತು ಸರ್ಕಾರದ ನಡುವಿನ ಸಮನ್ವಯಕ್ಕಾಗಿ ನೇಮಕ ಮಾಡಿರುವ ಸಮಿತಿಯ ವಿಷಯದಲ್ಲಿ ಇರಬಹುದು, ಅಥವಾ ಹೋರಾಟದಲ್ಲಿ ಭಾಗಿಯಾದ ವಯೋವೃದ್ದ ಮತ್ತು ಮಹಿಳಾ ರೈತರ ವಿಷಯದಲ್ಲಿ ಇರಬಹುದು, ತಳೆದ ನಿಲುವುಗಳು ಸಾಕಷ್ಟು ವಿವಾದಕ್ಕೆ ಈಡಾಗಿವೆ. ಅದರಲ್ಲೂ, ರೈತ ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಬಾರದು, ಅವರು ತಮ್ಮ ಮನೆಗಳಿಗೆ ವಾಪಸ್ಸಾಗಬೇಕು ಎಂಬ ನ್ಯಾಯಾಲಯದ ತಾಕೀತು, ಕೇವಲ ರೈತ ಹೋರಾಟದ ವಿಷಯವಷ್ಟೇ ಅಲ್ಲದೆ, ಒಟ್ಟಾರೆ ಮಹಿಳೆಯರ ವಿಷಯದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಮನೋಧೋರಣೆ ಎಂಥದ್ದು ಎಂಬ ವ್ಯಾಪಕ ಚರ್ಚೆಗೂ ಇಂಬು ನೀಡಿದೆ. ಈ ನಡುವೆ, ಸಮನ್ವಯ ಸಮಿತಿಯ ವಿಷಯದಲ್ಲಿ ಕೂಡ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ತಾವು ನೇಮಕ ಮಾಡಿದ ಸಮಿತಿಯ ಬಗ್ಗೆ ಯಾರೂ ಅನುಮಾನಪಡುವುದಾಗಲೀ ಅಥವಾ ಟೀಕೆಗಳನ್ನಾಗಲೀ ಮಾಡಬಾರದು ಎಂದು ಫರ್ಮಾನು ಹೊರಡಿಸಿರುವುದು ಕೂಡ ರೈತ ಹೋರಾಟದ ವಿಷಯದಲ್ಲಿ ನ್ಯಾಯಾಂಗ ಕೂಡ ಕಠಿಣ ಧೋರಣೆ ತಳೆದಿದೆ ಎಂಬ ಮಾತುಗಳಿಗೆ ಕಾರಣವಾಗಿದೆ.

ಅಷ್ಟಕ್ಕೂ ಈಗ ಈ ರೈತ ಹೋರಾಟ ಕೇವಲ ಮೂರು ಕೃಷಿ ಕಾಯ್ದೆಗಳ ಕುರಿತ ರೈತರ ವಿರೋಧವಾಗಿ ಮಾತ್ರ ಉಳಿದಿಲ್ಲ. ಆಡಳಿತ ವ್ಯವಸ್ಥೆ, ಆಡಳಿತ ನೀತಿಗಳು ದೇಶದ ಜನಸಂಖ್ಯೆಯ ಶೇ.70ರಷ್ಟು ಪ್ರಮಾಣದಲ್ಲಿ ಇರುವ ರೈತ ಸಮುದಾಯದಲ್ಲಿ ಹುಟ್ಟಿಸಿರುವ ಅವಿಶ್ವಾಸ ಮತ್ತು ಅಪನಂಬಿಕೆಯ ವಿರುದ್ಧದ ಆಕ್ರೋಶವಾಗಿ ಹೋರಾಟ ಬದಲಾಗಿದೆ. ದೇಶದ ಮೂರನೇ ಎರಡಷ್ಟು ಸಂಖ್ಯೆಯಲ್ಲಿರುವ ಮತ್ತು ದೇಶದ ಜಿಡಿಪಿಗೆ ಬಹುದೊಡ್ಡ ಕೊಡುಗೆ ನೀಡುವ ಕೃಷಿ ವಲಯವನ್ನು ಸರ್ಕಾರ ಮತ್ತು ಆಳುವ ಮಂದಿ ಕೇವಲ ಮತ ರಾಜಕಾರಣದ ದಾಳವಾಗಿ ಬಳಸಿಕೊಂಡುಬಂದ ಧೋರಣೆಯ ವಿರುದ್ಧದ ಸಂಘಟಿತದ ದನಿಯಾಗಿ ಈ ಹೋರಾಟ ವಿಸ್ತರಿಸಿದೆ.

ಭೂ ಸುಧಾರಣಾ ತಿದ್ದುಪಡಿ ಸೇರಿದಂತೆ ಕಾಯ್ದೆ- ಕಾನೂನುಗಳಿರಬಹುದು, ಕೃಷಿ ಯಂತ್ರೋಪಕರಣ, ರಸಗೊಬ್ಬರ, ಬೆಂಬಲ ಬೆಲೆ ಮುಂತಾದ ಕೃಷಿ ಸಬ್ಸಿಡಿ ವ್ಯವಸ್ಥೆಗಳಿರಬಹುದು, ಅಂತಿಮವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಂತಹ ಮತಬ್ಯಾಂಕ್ ಗಿಮಿಕ್ ಗಳಿರಬಹುದು, ಎಲ್ಲವೂ ಅಂತಿಮವಾಗಿ ರೈತನ ಬದುಕನ್ನು ಸುಧಾರಿಸುವಲ್ಲಿ ಸಫಲವಾಗುವುದಕ್ಕಿಂತ ಹೆಚ್ಚಾಗಿ ಕೃಷಿ ವಲಯದ ಉದ್ಯಮ, ವ್ಯವಹಾರ, ಪ್ರಭಾವಿ ವ್ಯಕ್ತಿಗಳ ಹಿತ ಕಾಯಲು ಬಳಕೆಯಾಗಿವೆ. ಕೃಷಿಕರ ಬದುಕನ್ನು ಬದಲಾಯಿಸುವ ಘೋಷಣೆಯೊಂದಿಗೆ ದಶಕಗಳಿಂದ ಜಾರಿಗೆ ಬರುತ್ತಿರುವ ನೂರಾರು ಯೋಜನೆ- ನೀತಿಗಳು ಅಂತಿಮವಾಗಿ ದಂಧೆಕೋರರ ಜೇಬು ತುಂಬಿಸಿವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆಗಳು.

ಇದೀಗ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳಂತೂ ದೇಶದ ಅನ್ನದಾತನಿಂದ ಕೃಷಿ ಭೂಮಿಯನ್ನೂ, ಬದುಕನ್ನೂ ಕಿತ್ತುಕೊಳ್ಳುವ ಹುನ್ನಾರದಂತೆ ರೈತರಿಗೆ ಕಾಣಿಸುತ್ತಿವೆ. ಕನಿಷ್ಟ ಬೆಂಬಲ ಬೆಲೆಯಂತಹ ವಿಷಯದಲ್ಲಿ ಸರ್ಕಾರ ತನ್ನ ಸ್ಪಷ್ಟ ನಿಲುವು ಹೇಳಬೇಕು, ಈ ಕಾಯ್ದೆಗಳ ಜಾರಿಯ ಹೊರತಾಗಿಯೂ ಆ ವ್ಯವಸ್ಥೆ ಮುಂದುವರಿಯುತ್ತದೆ ಎಂದಾದರೆ, ಅದಕ್ಕೆ ಕಾನೂನು ಬಲ ನೀಡಬೇಕು ಎಂಬ ರೈತರ ಬೇಡಿಕೆಗೆ ಪ್ರತಿಯಾಗಿ, ಸರ್ಕಾರ ಆ ವಿಷಯದಲ್ಲಿ ತಾನೇನೂ ಹೇಳಲಾರೆ, ಬೇಕಿದ್ದರೆ ನೀವು ಕೋರ್ಟಿಗೆ ಹೋಗಿ ಎಂದಿದೆ. ಹಾಗೇ ಕೃಷಿ ಕಾಯ್ದೆಗಳ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿರುವ ಸರ್ಕಾರ, ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ರೈತರಿಗೆ ಬುಧವಾರವೂ ಸಲಹೆ ನೀಡಿದೆ!

ಸರ್ಕಾರ ಮತ್ತು ಆಳುವ ಮಂದಿಯ ಇಂತಹ ಸರ್ವಾಧಿಕಾರಿ ಮತ್ತು ಹಠಮಾರಿತನ ಸಹಜವಾಗೇ, ವ್ಯವಸ್ಥೆಯ ಮೇಲಿನ ರೈತರ ವಿಶ್ವಾಸ ಕಳೆದಿದೆ. ಆ ಹಿನ್ನೆಲೆಯಲ್ಲಿಯೇ ಅವರು ಮೂರು ಕಾಯ್ದೆಗಳನ್ನು ರದ್ದು ಮಾಡುವವರೆಗೆ ತಾವು ಧರಣಿ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವಿಪರ್ಯಾಸವೆಂದರೆ, ದೇಶದ ಬಹುತೇಕ ಮುಕ್ಕಾಲು ಪಾಲು ಜನಸಮುದಾಯ ಆಡಳಿತದ ವಿರುದ್ಧ ಹೋರಾಟದ ದನಿ ಮೊಳಗಿಸಿದೆ. ತಮ್ಮ ಹಿತ ಕಾಯುವ ಹೆಸರಲ್ಲಿ ತಮ್ಮ ಬದುಕು ಕಿತ್ತುಕೊಳ್ಳುವ ಕಾನೂನುಗಳ ವಿರುದ್ಧ ಸೆಟೆದು, ಕೇವಲ ದೆಹಲಿ ಮಾತ್ರವಲ್ಲದೆ, ದೇಶದ ಉದ್ದಗಲಕ್ಕೆ ಬೀದಿಗಿಳಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದ ದಿನ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನೂ ಹಮ್ಮಿಕೊಂಡಿದ್ದಾರೆ. ಆದರೆ, ಆಡಳಿತದ ಚುಕ್ಕಾಣಿ ಹಿಡಿದವರು ಅಷ್ಟು ದೊಡ್ಡ ಸಂಖ್ಯೆಯ ಜನಸಮುದಾಯದ ಹಕ್ಕೊತ್ತಾಯಕ್ಕೆ ಬೆಲೆ ಕೊಡುವ ಸೌಜನ್ಯವನ್ನೂ ತೋರಿಲ್ಲ. ದೊಡ್ಡ ಜನಸಮೂಹದ ತೀವ್ರ ವಿರೋಧದ ನಡುವೆಯೂ ತಮ್ಮ ಮೂಗಿನ ನೇರಕ್ಕೆ ರೂಪಿಸಿದ ಕಾನೂನು-ಕಾಯ್ದೆಗಳನ್ನು ಒತ್ತಾಯಪೂರ್ವಕವಾಗಿ, ದಮನ ಕ್ರಮಗಳ ಮೂಲಕ ಹೇರುವ ಪ್ರಯತ್ನ ಮುಂದುವರಿಸಿದ್ದಾರೆ!

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದರೆ; ದೇಶದಲ್ಲಿ ಸದ್ಯ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದ ಕಡೆ ದೃಢ ಹೆಜ್ಜೆಗಳನ್ನು ಇಡುತ್ತಿದೆ ಮತ್ತು ಅದೇ ಹೊತ್ತಿಗೆ ನೊಂದ ಮತ್ತು ಆತಂಕಿತ ಜನಸಮುದಾಯ ವ್ಯವಸ್ಥೆಯಿಂದ ಅರಾಜಕತೆಯ ಕಡೆಗೆ ಜಾರುತ್ತಿದೆ ಎಂಬ ಅನುಮಾನಗಳನ್ನು ಹುಟ್ಟಿಸದೇ ಇರದು!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com