ಗಡಿಯೊಳಗೆ ನುಗ್ಗಿ ಹಳ್ಳಿ ನಿರ್ಮಿಸಿದರೂ ಚೀನಾದ ವಿರುದ್ಧ ತುಟಿ ಬಿಚ್ಚಿಲ್ಲ ಏಕೆ?

ಗಡಿಯೊಳಗೆ ನುಗ್ಗಿ ಹಳ್ಳಿ ನಿರ್ಮಿಸಿದರೂ ಚೀನಾದ ವಿರುದ್ಧ ತುಟಿ ಬಿಚ್ಚಿಲ್ಲ ಏಕೆ?

ಯಾವುದೋ ನಟಿಯ ಮನೆಯ ಕುಂಡದ ಗಿಡದ ಬಗ್ಗೆ, ನಟನ ಫಿಟ್ನೆಸ್ ಬಗ್ಗೆ, ಕ್ರಿಕೆಟಿಗನ ಕೈ ತರಚಿದ ಬಗ್ಗೆಯೆಲ್ಲಾ ಟ್ವೀಟ್ ಮಾಡುವ, ಇನ್ನಿಲ್ಲದ ಕಾಳಜಿ, ಆತಂಕ ವ್ಯಕ್ತಪಡಿಸುವ ಪ್ರಧಾನಿಗಳು, ಶತ್ರುರಾಷ್ಟ್ರ ದೇಶದೊಳಗೇ ನುಗ್ಗಿ ಒಂದಿಡೀ ಹಳ್ಳಿಯನ್ನೇ ಕಟ್ಟಿದ ಬಗ್ಗೆ ತುಟಿಬಿಚ್ಚದಿರುವುದು ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಸೇನೆ ಮತ್ತು ದೇಶದ ಭದ್ರತೆಯ ವಿಷಯವನ್ನು ರಾಜಕೀಕರಣಗೊಳಿಸಿ, ಚುನಾವಣಾ ಪ್ರಚಾರದ ಸರಕಾಗಿ ಬಳಸಿಕೊಂಡು ಗೆದ್ದುಬಂದ ‘ಚೌಕಿದಾರ್ ನರೇಂದ್ರ ಮೋದಿ’ಯವರ ಆಡಳಿತಾವಧಿಯಲ್ಲೇ ನೆರೆಯ ರಾಷ್ಟ್ರಗಳ ಆಕ್ರಮಣಕಾರಿ ನೀತಿಗಳು ಮುಗಿಲುಮುಟ್ಟಿವೆ.

ಒಂದು ಕಡೆ ನೇಪಾಳ, ಮಾಲ್ಡೀವ್ಸ್ ನಂತಹ ಚಿಕ್ಕಪುಟ್ಟ ರಾಷ್ಟ್ರಗಳು ಕೂಡ ದಶಕಗಳ ಸ್ನೇಹ ಮತ್ತು ಬಾಂಧವ್ಯ ಮರೆತು ಸವಾಲೊಡ್ಡುವ ಮಟ್ಟಕ್ಕೆ ಉದ್ಧಟತನ ತೋರುತ್ತಿದ್ದರೆ, ಮತ್ತೊಂದು ಕಡೆ ಪ್ರಬಲ ನೆರೆ ರಾಷ್ಟ್ರ ಚೀನಾವಂತೂ ಕಳೆದ ಎರಡು ಮೂರು ವರ್ಷಗಳಿಂದ ನಿರಂತರ ಆಕ್ರಮಣ ನಡೆಸುತ್ತಲೇ ಇದೆ. ಇದೀಗ ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕಮ್ಯುನಿಸ್ಟ್ ರಾಷ್ಟ್ರ, ಅರುಣಾಚಲ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 4.5 ಕಿ.ಮೀನಷ್ಟು ಭಾರತದ ಗಡಿ ಒಳಗೆ ನುಗ್ಗಿ ಬರೋಬ್ಬರಿ 101 ಮನೆಗಳ ಒಂದಿಡೀ ಹಳ್ಳಿಯನ್ನೇ ನಿರ್ಮಿಸಿದೆ!

ಅಧಿಕೃತವಾಗಿ ಭಾರತದ ಗಡಿಯೊಳಗೆ ಕಿಮೀ.ಗಟ್ಟಲೆ ಒಳನುಗ್ಗಿ, ಸುಬನ್ಸಿರಿ ಜಿಲ್ಲೆಯ ತ್ಸರಿ ಶು ನದಿ ದಡದಲ್ಲಿ ಚೀನಾ ಈ ಹಳ್ಳಿಯನ್ನು ನಿರ್ಮಿಸಿರುವುದು ಉಪಗ್ರಹ ಚಿತ್ರಗಳ ಮೂಲಕ ದೃಢಪಟ್ಟಿದೆ. ಉಪಗ್ರಹ ಚಿತ್ರ ಪರಿಣತಿಯ ಪ್ಲಾನೆಟ್ ಲ್ಯಾಬ್ಸ್ ಇಂಕ್ ಮೂಲಕ ಎನ್ ಡಿಟಿವಿ ಪಡೆದಿರುವ ಅಧಿಕೃತ ಉಪಗ್ರಹ ಚಿತ್ರಗಳಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ 101 ಮನೆಗಳ ನಿರ್ಮಾಣ ಪೂರ್ಣಗೊಂಡಿರುವುದು ಕಂಡುಬಂದಿದೆ. ಸರಿಸುಮಾರು ಒಂದು ವರ್ಷದ ಹಿಂದೆ; ಅಂದರೆ 2019ರ ಆಗಸ್ಟ್ ನ ಅದೇ ನಿರ್ದಿಷ್ಟ ಜಾಗದ ಚಿತ್ರವನ್ನು ಪರಿಶೀಲಿಸಿದಾಗ ಅಲ್ಲಿ ರಸ್ತೆ ಹೊರತುಪಡಿಸಿ ಯಾವುದೇ ಕಟ್ಟಡಗಳು ಕಾಣುವುದಿಲ್ಲ. ಆದರೆ ಕೇವಲ ಒಂದು ವರ್ಷದಲ್ಲಿ ಆ ಜಾಗದಲ್ಲಿ ನೂರೊಂದು ಕಾಂಕ್ರೀಟ್ ಮನೆಗಳ ವ್ಯವಸ್ಥಿತ ಊರು ನಿರ್ಮಾಣವಾಗಿರುವುದು ಕಂಡುಬಂದಿದೆ ಎಂದು ಎನ್ ಡಿಟಿವಿ ಸಾಕ್ಷ್ಯಾಧಾರ ಸಹಿತ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ವರ್ಷದ ಜೂನ್ ನಲ್ಲಿ ಲಡಾಕ್ ಬಳಿ ನಡೆದ ಗಡಿ ಸಂಘರ್ಷದಲ್ಲಿ; ದಶಕಗಳಲ್ಲೇ ಕಂಡರಿಯದ ಪ್ರಮಾಣದಲ್ಲಿ 20 ಮಂದಿ ಭಾರತೀಯ ಯೋಧರನ್ನು ಚೀನಾ ಸೇನೆ ಕೊಂದುಹಾಕಿತ್ತು. ಗಾಲ್ವಾನ್ ಕಣಿವೆಯ ಆ ಬರ್ಬರ ಘಟನೆಯ ಬಳಿಕ ಕೂಡ ಚೀನಾ ಆ ಪ್ರದೇಶದಲ್ಲಿ ನಿರಂತರ ಗಡಿ ತಂಟೆ ಮುಂದುವರಿಸಿತ್ತು. ಈಗಲೂ ಲಡಾಕ್ ವಲಯದಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಡುವೆ ಆಗಾಗ ತಿಕ್ಕಾಟ ಮುಂದುವರಿದಿದೆ. ಕೊರೆವ ಚಳಿಯ ನಡುವೆಯೂ ಸಾವಿರಾರು ಮಂದಿ ಭಾರತೀಯ ಯೋಧರು ಗಡಿಯಲ್ಲಿ ನಿರಂತರ ಪಹರೆ ಮುಂದುವರಿಸಿದ್ದಾರೆ. ಆದರೆ, ದೇಶದ ಭದ್ರತೆ ಮತ್ತು ಸಮಗ್ರತೆಯ ವಿಷಯದಲ್ಲಿ ತಾವು ಕೈಗೊಂಡ ಕ್ರಮಗಳು ದೇಶವನ್ನು ಬಲಿಷ್ಠ ಭಾರತವನ್ನಾಗಿಸಿವೆ ಎಂದು ಮಾತುಮಾತಿಗೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಅಧಿಕಾರದ ಚುಕ್ಕಾಣಿ ಹಿಡಿದವರು ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂಬ 130 ಕೋಟಿ ಭಾರತೀಯರು ನಿರೀಕ್ಷೆ ಮಾತ್ರ ನಿಜವಾಗಲೇ ಇಲ್ಲ!

20 ಮಂದಿ ಯೋಧರನ್ನು ಹೀನಾಯವಾಗಿ ಕೊಂದು ಹಾಕಿದ ಚೀನಾಕ್ಕೆ ಅದರದೇ ವರಸೆಯಲ್ಲಿ ಪ್ರತ್ಯುತ್ತರ ಕೊಡುವ ಬದಲು, ಪ್ರಧಾನಿ ಮೋದಿಯವರು ಚೀನಾದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿ ತಾವು ಸೇಡು ತೀರಿಸಿಕೊಂಡಿದ್ದಾಗಿ ಹೇಳಿದರು. ವಾಸ್ತವದ ಗಡಿಯಲ್ಲಿ ನಡೆದ ಯೋಧರ ಹತ್ಯಾಕಾಂಡಕ್ಕೆ, ಅದೇ ವಾಸ್ತವಿಕ ತಿರುಗೇಟು ನೀಡುವ ಬದಲು ಅವಾಸ್ತವಿಕ ವರ್ಚುವಲ್ ಡಿಜಿಟಲ್ ಸಮರ ಸಾರಿದ ಚೌಕಿದಾರ್ ಮೋದಿಯವರ ಕ್ರಮ ಆಗ ಸಾಕಷ್ಟು ವ್ಯಂಗ್ಯ, ವಿಡಂಬನೆಗೆ ವಸ್ತುವಾಗಿತ್ತು. ಜೊತೆಗೆ ಚೀನಾದ ಉತ್ಪನ್ನಗಳೂ ಸೇರಿದಂತೆ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೂ ಆಡಳಿತ ಪಕ್ಷ ಬಿಜೆಪಿಯ ಕೆಲವು ಮುಖಂಡರು ಕರೆ ನೀಡಿದ್ದರು. ಆದರೆ, ಮೋದಿಯವರ ಆ್ಯಪ್ ಬ್ಯಾನ್ ಆಗಲೀ, ಬಿಜೆಪಿಯ ಚೀನಾ ವಸ್ತು ಬಹಿಷ್ಕಾರವಾಗಲೀ ಭಾರತದಲ್ಲಿ ಚೀನಾದ ವ್ಯಾಪಾರ ವಹಿವಾಟಿನ ಮೇಲಾಗಲೀ, ಅಥವಾ ಅದರ ಗಡಿ ತಂಟೆ-ತಕರಾರುಗಳ ಬಗ್ಗೆಯಾಗಲೀ ಯಾವುದೇ ಪರಿಣಾಮ ಬೀರಲಿಲ್ಲ ಎಂಬುದು ಬಯಲಾಗಲು ಸಾಕಷ್ಟು ಸಮಯವೇನೂ ಹಿಡಿಯಲಿಲ್ಲ. ಅಂತಹ ಕ್ರಮಗಳ ಬೆನ್ನಲ್ಲೇ ಹೊರಬಿದ್ದ ಹಲವು ಆರ್ಥಿಕ ಸಮೀಕ್ಷೆಗಳು ಮತ್ತು ಗಡಿಯಲ್ಲಿ ಮುಂದುವರಿದ ನಿರಂತರ ಸೇನಾ ಜಮಾವಣೆ ಸ್ವತಃ ಮೋದಿ ಮತ್ತು ಬಿಜೆಪಿ ನಾಯಕರ ಅಂತಹ ಯತ್ನಗಳು ಕೇವಲ ದೇಶದ ಜನರ ಕಣ್ಣೊರೆಸುವ ಪ್ರಯತ್ನಗಳು, ಟೋಕನಿಸಂನ ಯತ್ನಗಳು ಎಂಬುದನ್ನು ಜಗಜ್ಜಾಹೀರು ಮಾಡಿದವು.

ಮತ್ತೊಂದು ಗಮನಾರ್ಹ ವಿಷಯವೆಂದರೆ; ದೇಶದ ವಾಯುವ್ಯ ಗಡಿಯ ಪಾಕಿಸ್ತಾನದ ವಿಷಯದಲ್ಲಿ; ಭೂಪಟದಿಂದಲೇ ಅದನ್ನು ಒರೆಸಿ ಹಾಕುವ ವೀರಾವೇಶದ ಮಾತನಾಡುವ ಆಳುವ ಪಕ್ಷದ ಮಂದಿ, ಮತ್ತೊಂದು ಬದಿಯ ಈಶಾನ್ಯ ಗಡಿಯ ಚೀನಾದ ಉದ್ಧಟತನ, ಆಕ್ರಮಣಗಳ ಹೊರತಾಗಿಯೂ ನೇರವಾಗಿ ಎಚ್ಚರಿಕೆ ನೀಡುವ, ಎದೆಗಾರಿಕೆ ತೋರುವ ಪ್ರಯತ್ನವನ್ನೇ ಮಾಡದಿರುವುದು. ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ವಿಷಯದಲ್ಲಿ ಸರ್ಕಾರ ಮತ್ತು ಆಡಳಿತಕ್ಕೆ ಇಡೀ ದೇಶದ ಜನತೆ ಬೆಂಬಲವಾಗಿ ನಿಲ್ಲುತ್ತಾರೆ. ರಾಜಕೀಯ ಪಕ್ಷಗಳು ಕೂಡ ಪಕ್ಷಾತೀತವಾಗಿ ಸರ್ಕಾರದ ಪರ ನಿಂತು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ರಕ್ಷಣೆಗೆ ಯಾವುದೇ ಕ್ರಮಕೈಗೊಂಡರೂ ತಮ್ಮ ಬೆಂಬಲವಿದೆ ಎನ್ನುತ್ತವೆಎ. ಆದಾಗ್ಯೂ ಚೀನಾ ವಿಷಯದಲ್ಲಿ ಸರ್ಕಾರ ಯಾಕೆ ದಿಟ್ಟ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಮಾತೆತ್ತಿದರೆ ದೇಶಭಕ್ತಿಯ ಉದ್ದುದ್ದ ಭಾಷಣ ಮಾಡುವ, ಆತ್ಮನಿರ್ಭರ ಭಾರತ, ಬಲಿಷ್ಠ ಭಾರತ, ಸಶಕ್ತ ಭಾರತ,.. ಮುಂತಾದ ಘೋಷಣೆಗಳನ್ನು ಹೊಸೆಯುವ ಮಂದಿ, ದೇಶದ ಗಡಿಯೊಳಗೆ ನುಗ್ಗಿ ನಮ್ಮದೇ ಯೋಧರನ್ನು ಹತ್ಯೆಗೈಯುವ, ನಮ್ಮದೇ ನೆಲದಲ್ಲಿ ತಮ್ಮ ಊರು ಕಟ್ಟುವ, ನಮ್ಮದೇ ಗಡಿಯಲ್ಲಿ ತಮ್ಮ ಸೇನಾ ಜಮಾವಣೆ ನಡೆಸುವ ಚೀನಾದ ವಿರುದ್ಧ ಯಾಕೆ ಮೃದು ಧೋರಣೆ ತಳೆದಿದ್ದಾರೆ ಎಂಬುದು ಈಗ ಚರ್ಚೆಯಾಗುತ್ತಿರುವ ಸಂಗತಿ.

ಆ ವಿದ್ಯಮಾನದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ದೇಶದ ಭದ್ರತೆಗೆ ಸಂಬಂಧಿಸಿದಂತೆ ಗಡಿಯಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳ ಮೇಲೆ ಸರ್ಕಾರ ನಿರಂತರ ಕಣ್ಣಿಟ್ಟಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ರಕ್ಷಣೆಯ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತದೆ” ಎಂದಷ್ಟೇ ಪ್ರತಿಕ್ರಿಯಿಸಿದೆ. ಗಡಿ ಉಲ್ಲಂಘಿಸಿ, ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಆತಂಕ ಒಡ್ಡಿ ನಿರ್ಮಿಸಿರುವ ಹಳ್ಳಿಯ ಬಗ್ಗೆಯಾಗಲೀ, ಆ ಭಾಗದಲ್ಲ ಚೀನಾ ನಿರಂತರವಾಗಿ ನಡೆಸುತ್ತಿರುವ ರಸ್ತೆ, ಸೇನಾ ಕಾವಲು ಗೋಪುರ ನಿರ್ಮಾಣದಂತಹ ಚಟುವಟಿಕೆಗಳ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ.

ಇನ್ನು ಅರುಣಾಚಲ ಪ್ರದೇಶದಲ್ಲಿ ಚೀನಾ ಹೊಸ ಹಳ್ಳಿಯನ್ನೇ ನಿರ್ಮಿಸಿದೆ ಎಂಬ ಸಂಗತಿ ಉಪಗ್ರಹ ಚಿತ್ರ ಸಹಿತ ಬಹಿರಂಗವಾಗಿ ದಿನಗಳೇ ಉರುಳಿದರೂ ರಕ್ಷಣಾ ಸಚಿವರಾಗಲೀ, ಪ್ರಧಾನಿ ಮೋದಿಯವರಾಗಲೀ ಆ ಬಗ್ಗೆ ಪ್ರತಿಕ್ರಿಯಿಸಿಲ್ಲ. ನಟಿಯ ಮನೆಯ ಕುಂಡದ ಗಿಡದ ಬಗ್ಗೆ, ನಟನ ಫಿಟ್ನೆಸ್ ಬಗ್ಗೆ, ಕ್ರಿಕೆಟಿಗನ ಕೈ ತರಚಿದ ಬಗ್ಗೆಯೆಲ್ಲಾ ಟ್ವೀಟ್ ಮಾಡುವ, ಇನ್ನಿಲ್ಲದ ಕಾಳಜಿ, ಆತಂಕ ವ್ಯಕ್ತಪಡಿಸುವ ಪ್ರಧಾನಿಗಳು, ದೇಶದೊಳಗೇ ನುಗ್ಗಿ ಶತ್ರುರಾಷ್ಟ್ರ ಒಂದಿಡೀ ಹಳ್ಳಿಯನ್ನೇ ಕಟ್ಟಿದ ಬಗ್ಗೆ ತುಟಿಬಿಚ್ಚದಿರುವುದು ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

“ಭಾರತದ ಗಡಿಯೊಳಗೆ ಚೀನಾ ತನ್ನ ನಾಗರಿಕರ ವಾಸದ ವಸತಿ ಸಮುಚ್ಚಯವನ್ನೇ ನಿರ್ಮಾಣ ಮಾಡಿದೆ. ಕಳೆದ ಕೆಲವು ದಶಕಗಳಿಂದ ಆ ಕಣಿವೆಯಲ್ಲಿ ಚೀನಾ ನಡೆಸುತ್ತಿರುವ ವಿವಿಧ ಗಡಿ ಉಲ್ಲಂಘಟನೆಯ ಚಟುವಟಿಕೆಗಳ ಅತಿರೇಕದ ನಡೆ ಇದು. ಈಗಲೂ ಭಾರತ ಈ ಬಗ್ಗೆ ಸೂಕ್ತ ಮತ್ತು ಸಕಾಲಿಕ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಭಾರತ ಮತ್ತು ಚೀನಾ ಗಡಿಯುದ್ದಕ್ಕೂ ಇದರ ಬೇರೆ ಬೇರೆ ರೀತಿಯ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂಬ ಎಚ್ಚರಿಕೆಯನ್ನು ಚೀನಾ-ಭಾರತ ಗಡಿ ಮತ್ತು ಸೇನಾ ವಿಶ್ಲೇಷಕರು ನೀಡಿದ್ದಾರೆ.

ಅಷ್ಟಾಗಿಯೂ, ಇಂತಹ ಗಂಭೀರ ವಿಷಯದಲ್ಲಿ ರಾಜಕಾರಣದ ಕ್ಷುಲ್ಲಕತನ ಬಿಟ್ಟು ದೇಶದ ರಕ್ಷಣೆಯ ಎಚ್ಚರಿಕೆಯ ಕ್ರಮಕ್ಕೆ ಮುಂದಾಗುವ ಬದಲು ಆಡಳಿತರೂಢ ಬಿಜೆಪಿ ನಾಯಕರು ಬಾಲಿಶಃ ಮತ್ತು ನಗೆಪಾಟಲಿನ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಬಿಜೆಪಿ ಸಂಸದ ತಾಪಿರ್ ಗವೊ ಎಂಬುವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಚೀನಾ ಅರುಣಾಚಲ ಪ್ರದೇಶದಲ್ಲಿ 1980ರಿಂದಲೇ ಆ ಹಳ್ಳಿಯ ನಿರ್ಮಾಣದಲ್ಲಿ ತೊಡಗಿದೆ. ಇದೇನೂ ಹೊಸದಾಗಿ ಮೋದಿ ಅವಧಿಯಲ್ಲಿ ನಿರ್ಮಾಣವಾದ ಹಳ್ಳಿಯಲ್ಲ ಎಂದಿದ್ದಾರೆ!

2019ರ ಆಗಸ್ಟ್ ಮತ್ತು 2020ರ ನವೆಂಬರಿನ ಎರಡು ಪ್ರತ್ಯೇಕ ಉಪಗ್ರಹ ಚಿತ್ರಗಳು ಆ ಹಳ್ಳಿ ನಿರ್ಮಾಣದ ಕಥೆಯನ್ನು ಮುಖಕ್ಕೆ ರಾಚಿದಂತೆ ಹೇಳುತ್ತಿರುವಾಗಲೂ ಬಿಜೆಪಿ ನಾಯಕರು ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ! ಹಾಗೇ ಸ್ವಯಂ ಘೋಷಿತ ‘ದೇಶಭಕ್ತ’ರ ದೇಶಭಕ್ತಿ ಎಷ್ಟು ಅಸಲೀ, ಎಷ್ಟು ನಕಲಿ ಎಂಬುದೂ ಬಯಲಾಗಿದೆ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com