ಮಣಿಪುರ: ದೇಶದ್ರೋಹ ಪ್ರಕರಣದಡಿಯಲ್ಲಿ ಪತ್ರಕರ್ತರ ಬಂಧನ

ಇತ್ತೀಚೆಗಷ್ಟೇ ಇಂಫಾಲ್ ಮೂಲದ ಕಿಶೋರ್‌ಚಂದ್ರ ಎನ್ನುವ ಪತ್ರಕರ್ತರನ್ನು ಕಠಿಣ ಕಾನೂನಿನಡಿ ಬಂಧಿಸಲಾಗಿತ್ತು. ತನ್ನ ವಿರುದ್ಧ ಬರೆಯುವ, ಪ್ರಕಟಿಸುವ ಎಲ್ಲಾ ಪತ್ರಕರ್ತರಿಗೂ ಒಂದು ಸಂದೇಶವೆಂಬತೆ ಧಿರೇನ್ ಮತ್ತು ಚೌಬ ಅವರನ್ನು ಬಂಧಿಸಲಾಗಿದೆ.
ಮಣಿಪುರ: ದೇಶದ್ರೋಹ ಪ್ರಕರಣದಡಿಯಲ್ಲಿ ಪತ್ರಕರ್ತರ ಬಂಧನ

ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ಆದಿತ್ಯವಾರ ಹಿರಿಯ ಪತ್ರಕರ್ತರಾದ ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ಆದಿತ್ಯವಾರ ಹಿರಿಯ ಪತ್ರಕರ್ತರಾದ ಪೌಜೆಲ್ ಚೌಬ ಮತ್ತು ಧಿರೇನ್ ಸಡೋಕ್‌ಪಾಮ್ ಅವರನ್ನು ಬಂಧಿಸಿದೆ. ಚೌಬಾ ಅವರು 'ಫ್ರಂಟಿಯರ್ ಮಣಿಪುರ್' ಎನ್ನುವ ಆನ್ಲೈನ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು ಧಿರೇನ್ ಅದೇ‌ ಪತ್ರಿಕೆಯ ಸಂಪಾದಕರು.

ಪೊಲೀಸರ ಪ್ರಕಾರ 'ಪತ್ರಿಕೆಯ ಫೇಸ್‌ಬುಕ್‌ ಪೇಜ್‌ನ ಸಂಪಾದಕರು' ಮತ್ತು ಫ್ರಂಟಿಯರ್ ಮಣಿಪುರ್‌ನಲ್ಲಿ ಲೇಖನ‌ವೊಂದನ್ನು ಬರೆದಿದ್ದ ಎಮ್. ಜಾಯ್ ಲುವಾಂಗ್ ಎನ್ನುವವರನ್ನು UAPA ಮತ್ತು ದೇಶದ್ರೋಹದ ಆರೋಪದಡಿ ಬಂಧಿಸಲಾಗಿದೆ.

ಇತ್ತೀಚೆಗಷ್ಟೇ ಇಂಫಾಲ್ ಮೂಲದ ಕಿಶೋರ್‌ಚಂದ್ರ ಎನ್ನುವ ಪತ್ರಕರ್ತರನ್ನು ಕಠಿಣ ಕಾನೂನಿನಡಿ ಬಂಧಿಸಲಾಗಿತ್ತು. ತನ್ನ ವಿರುದ್ಧ ಬರೆಯುವ, ಪ್ರಕಟಿಸುವ ಎಲ್ಲಾ ಪತ್ರಕರ್ತರಿಗೂ ಒಂದು ಸಂದೇಶವೆಂಬತೆ ಧಿರೇನ್ ಮತ್ತು ಚೌಬ ಅವರನ್ನು ಬಂಧಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಣಿಪುರ ರಾಜ್ಯದ ಪತ್ರಕರ್ತರ ವಲಯದಲ್ಲಿ ಹೆಸರಾಂತ ಪತ್ರಕರ್ತರಾಗಿರುವ ಚೌಬಾ ಅವರು ತನಿಖಾ ವರದಿಗಳಿಗಾಗಿಯೇ ಪ್ರಸಿದ್ಧರು. 'ಇಂಫಾಲ್ ಫ್ರೀ ಪ್ರೆಸ್'ನಲ್ಲಿ ಅವರು ಮಣಿಪುರ ಪೊಲೀಸರು ನಡೆಸಿದ್ದ ನಕಲಿ ಎನ್‌ಕೌಂಟರ್ ಬಗ್ಗೆ ವರದಿ ಬರೆದು ಸುದ್ದಿಯಾಗಿದ್ದರು.

ಇತ್ತೀಚೆಗೆ 'ಮಣಿಪುರ್ ಫ್ರಂಟಿಯರ್' ಮಾದಕ ಜಾಲದ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದು, ಅಲ್ಲಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಆಪ್ತ ಲುಕೋಸೈ ಝೋವ್ ಅವರ ಬಗ್ಗೆಯೂ ಮಾಹಿತಿಗಳಿದ್ದವು.

ಸುಮಾರು 27 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಆದರೆ ಡಿಸೆಂಬರ್ ನಲ್ಲಿ ವಿಶೇಷ ಕೋರ್ಟ್ ಅವರನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಮಣಿಪುರ ಹೈಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ಬೃಂದಾ ಲುಕೋಸೈ ಝೋವ್ ಅವರನ್ನು ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳು ಒತ್ತಡ ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ. ಮಾತ್ರವಲ್ಲ ಡ್ರಗ್ ಮಾಫಿಯಾದ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿಗಳು ಬೃಂದಾ ಅವರಿಗೆ ನೀಡಿದ್ದ ಪೊಲೀಸ್ ಪದಕವನ್ನು ಝೋವ್ ಅವರ ಬಿಡುಗಡೆಯ ನಂತರ ಮರಳಿಸಿದ್ದಾರೆ.

ಜನವರಿ ಹದಿನೇಳರಂದು 'ಫ್ರಂಟಿಯರ್ ಮಣಿಪುರ್‌'ನಲ್ಲಿ 'revolutionary journey in a mess' ಎನ್ನುವ ಶೀರ್ಷಿಕೆಯಡಿಯಲ್ಲಿ ಬರೆದ ಲೇಖನ ಪ್ರಕಟವಾಗಿತ್ತು. ಬಳಿಕ ಲೇಖಕ ಮತ್ತು ಸಂಪಾದಕರನ್ನು 'ದ್ವೇಷ ಹರಡಲು/ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು/ಕ್ರಿಮಿನಲ್ ಪಿತೂರಿ ಮಾಡಲು‌ ಪ್ರಯತ್ನಿಸಲಾಗಿದೆ' ಎಂದು UAPA ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಜನವರಿ ಹದಿನೇಳರಂದು‌ ಚೌಬ ಮನೆಗೆ ಹೋದ ಪೊಲೀಸ್ ತಂಡ ಅವರ ಜೊತೆ ತೆರಳುವಂತೆ ಕೇಳಿಕೊಂಡಿದ್ದರು. ಆದರೆ ಚೌಬಾ ಅವರ ಮನವಿಯನ್ನು ನಿರಾಕರಿಸಿ ತಾನೇ ಪೊಲೀಸ್ ಸ್ಟೇಷನ್ ಗೆ ಹೋಗಿದ್ದರು. ಅಲ್ಲೇ ಅವರನ್ನು ಬಂಧಿಸಲಾಗಿದೆ. ಅದೇ ದಿನ ಸಂಜೆ ಧಿರೇನ್ ಅವರನ್ನು ವಿಚಾರಣೆಗೆಂದು ಕರೆಸಿ ಬಂಧಿಸಲಾಗಿದೆ.

ಈ ಕೇಸನ್ನು ವಹಿಸಿಕೊಂಡಿರುವ ಗುಣಧರ್ ಸಿಂಗ್ 'ದಿ ವೈರ್' ಜೊತೆ ಮಾತಾಡುತ್ತಾ "ಚೌಬ ಅವರನ್ನು ಬಂಧಿಸಲಾಗಿದೆಯೋ ಅಥವಾ ಪೊಲೀಸ್ ಸ್ಟೇಷನ್‌ನಲ್ಲಿ ಇರಿಸಲಾಗಿದೆಯೋ ಅನ್ನುವುದು ಇನ್ನೂ ಸ್ಪಷ್ಟವಿಲ್ಲ.‌ ಧಿರೇನ್ ಅವರನ್ನು ಕರೆಸಿದ್ದು ವಿಚಾರಣೆಗೆಂದು. ಈಗವರನ್ನು ಬಂಧಿಸಿದ್ದರೂ ಸೋಮವಾರವಷ್ಟೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬಹುದು. ನಾವು ಜಾಮೀನು ಕೋರಿ ಅಂದೇ ಕೋರ್ಟಿಗೆ ಅರ್ಜಿ ಸಲ್ಲಿಸಲಿದ್ದೇವೆ" ಎಂದು ಹೇಳಿದ್ದಾರೆ.

ಪೊಲೀಸರು "ಲೇಖಕರು ಬಹಿರಂಗವಾಗಿ ದಂಗೆಯ ಸಿದ್ದಾಂತವನ್ನು ಮತ್ತು ಚಟುವಟಿಕೆಗಳನ್ನು ಬೆಂಬಲಿಸಿದ್ದಾರೆ. ಮತ್ತು ಸಶಸ್ತ್ರ ಕ್ರಾಂತಿಕಾರಿ ನಾಯಕರು ಕ್ಷೀಣಿಸುತ್ತಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಣಿಪುರದ ಜನತೆಯನ್ನು ನೇರವಾಗಿ ಕ್ರಾಂತಿಗೆ ಆಹ್ವಾನಿಸಿದ್ದಾರೆ.‌ ಅವರ ಲೇಖನವು ಸ್ಪಷ್ಟವಾಗಿ ಸಶಸ್ತ್ರ ಕ್ರಾಂತಿಕಾರಿಗಳನ್ನು ಬೆಂಬಲಿಸುತ್ತವೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಗಳನ್ನು ವಸಾಹತಯಶಾಹಿ ನಿಯಮವೆಂದು ಕರೆದು ಜನತೆಯಲ್ಲಿ ಆತಂಕ ಉಂಟು ಮಾಡಲು‌ ಪ್ರಯತ್ನಿಸಿದೆ" ಎಂದು ಹೇಳಿಕೆ ನೀಡಿದ್ದಾರೆ.

ವಿಚಿತ್ರವೆಂದರೆ ಇದೇ ಲೇಖನ 'ಕಂಗ್ಲಾ ಪಾವೊ' ಎನ್ನುವ ಪತ್ರಿಕೆಯಲ್ಲಿ ಅಕ್ಟೋಬರ್ 2020ರಲ್ಲಿ‌ ಮತ್ತು 'ಇಂಫಾಲ್ ಟೈಮ್ಸ್'ನಲ್ಲಿ ಜನವರಿ 3ರಂದು ಪ್ರಕಟವಾಗಿತ್ತು. ಆದರೆ ಎಫ್.ಐ. ಆರ್‌ನಲ್ಲಿ ಇವರೆಡೂ ಪತ್ರಿಕೆಗಳ ಹೆಸರಿಲ್ಲ.

ಚೌಬ ಅವರ ಪತ್ನಿ ಸನಹಂಬಿ ದೇವಿ ಅವರು 'ಆಲ್ ಮಣಿಪುರ್ ವರ್ಕಿಂಗ್ ಜರ್ನಲಿಸ್ಟ್ಸ್' (AMWJ) ಅಧ್ಯಕ್ಷರಿಗೆ ಪತ್ರ ಬರೆದಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. AMWJ ಸದಸ್ಯರು ಈ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಸೇರಲು ನಿರ್ಧರಿಸಿದ್ದರು.

ಸೋಮವಾರ ಪತ್ರಕರ್ತರ ಸಂಘ ಇಬ್ಬರು ಪತ್ರಕರ್ತರ ಬಂಧನವನ್ನು ಖಂಡಿಸಿದ್ದು "ಸರ್ಕಾರ ಹಲವು ವರ್ಷಗಳಿಂದ ಬಂಡಾಯಗಾರರೊಂದಿಗೆ ಮಾತುಕಥೆಯಲ್ಲಿ ತೊಡಗಿದ್ದು ಅವರಲ್ಲಿ ಹಲವರು ಈಗ ಮಂತ್ರಿಗಳಾಗಿದ್ದಾರೆ. ಅವರ ವಿರುದ್ಧ ಇಲ್ಲದ ದೇಶದ್ರೋಹದ ಕೇಸು ಪತ್ರಕರ್ತರ ಮೇಲೇಕೆ?" ಎಂದು ಪ್ರಶ್ನಿಸಿದೆ. ಇದೇ ಸಂದರ್ಭದಲ್ಲಿ ಮಣಿಪುರ ಪೊಲೀಸರ ನಡೆಯನ್ನು ಖಂಡಿಸಿರುವ ಎಡಿಟರ್ ಗಿಲ್ಡ್ "ಇಂತಹ ಕಠಿಣ ಕಾನೂನುಗಳ ದುರ್ಬಳಕೆಯಿಂದ ಯಾವ ಮಾಧ್ಯಮಗಳೂ ಸುರಕ್ಷಿತವಲ್ಲ" ಎಂದು ಆತಂಕ ವ್ಯಕ್ತಪಡಿಸಿದೆ.

ಒಂದೆಡೆ ರಾಷ್ಟ್ರೀಯವಾದದ ಹೆಸರಿನಲ್ಲೇ ಸೈನಿಕ ದಾಳಿಯನ್ನು ಸಂಭ್ರಮಿಸುವ ಪತ್ರಿಕಾ ಕಛೇರಿಗಳು ಮತ್ತು ಪತ್ರಕರ್ತರು ಮತ್ತೊಂದೆಡೆ ಸರ್ಕಾರದ ವಿರುದ್ಧ ಬರೆದದ್ದಕ್ಕಾಗಿ ಬಂಧಿಸಲ್ಪಡುವ ಪತ್ರಕರ್ತರು. ಭಾರತ ಎರಡು ವೈರುಧ್ಯಗಳ ಮಧ್ಯೆ ಬದುಕುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಚೆನ್ನಾಗಿರುವ ಬೇರೆ ಉದಾಹರಣೆ ಸಿಗದು. ಸರ್ಕಾರದ ಕಾವಲುಗಾರರಾಗಿರುವವರಿಗೆ ಸರ್ಕಾರದ ರಕ್ಷಣೆ ಸಿಗುತ್ತಿರುವುದು ನಿರ್ಭೀತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗಿರುವ ಪತ್ರಿಕೋದ್ಯಮಕ್ಕೆ ಶೋಭೆಯಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com