ಕರೋನಾ ವಿರುದ್ದದ ಹೋರಾಟಕ್ಕೆ ಭಾರತವು ವಿದೇಶದಿಂದ ಹಾಗೂ ವಿದೇಶಿ ಹಣಕಾಸು ಸಂಸ್ಥೆಗಳಿಂದ ಸುಮಾರು ರೂ. 41,746 ಕೋಟಿ ಸಾಲ ಪಡೆದಿರುವ ಮಾಹಿತಿ RTI ಮೂಲಕ ತಿಳಿದುಬಂದಿದೆ.
ಜಪಾನ್ ಮತ್ತು ಫ್ರಾನ್ಸ್ನೊಂದಿಗೆ ರೂ. 52,246.32 ಕೋಟಿಗಳಷ್ಟು ಮೊತ್ತದ ಸಾಲವನ್ನು ನೀಡಲು ಐದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮುಂದೆ ಬಂದಿದ್ದವು. ಇಂಟರ್ ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್ಟ್ರಕ್ಷನ್ ಆಂಡ್ ಡೆವಲಪ್ಮೆಂಟ್, ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್, ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಸೇರಿದಂತೆ ಫ್ರಾನ್ಸ್ ಮತ್ತು ಜಪಾನ್ನಿಂದ ದ್ವಿಪಕ್ಷೀಯ ಸಾಲವನ್ನು ಭಾರತ ಪಡೆದಿತ್ತು ಎಂದು RTI ಕಾರ್ಯಕರ್ತರಾದ ವೆಂಕಟೇಶ್ ನಾಯಕ್ ಎಂಬವರು ಪಡೆದಿರುವ ದಾಖಲೆಗಳು ಬಹಿರಂಗಪಡಿಸಿವೆ.
ರೂ. 52,246.32 ಕೋಟಿಗಳಲ್ಲಿ ಶೇ. 80ರಷ್ಟು ಅಂದರೆ, ರೂ. 41,746 ಕೋಟಿಯಷ್ಟು ಸಾಲವನ್ನು ಮಾತ್ರ ಭಾರತವು ವಿನಿಯೋಗಿಸಿದೆ. ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್, ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಫ್ರಾನ್ಸ್ನಿಂದ ಪಡೆದ ಸಾಲವನ್ನು ಭಾರತವು ಸಂಪೂರ್ಣವಾಗಿ ಬಳಸಿಕೊಂಡಿದೆ.
ಒಟ್ಟು ಸಾಲದ ಮೊತ್ತದಲ್ಲಿ ರೂ. 5620 ಕೋಟಿ ಮೊತ್ತವನ್ನು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ದಿಗೆ ನೀಡಲಾಗಿದೆ.
ಕೋವಿಡ್ ವಿರುದ್ದದ ಹೋರಾಟದಲ್ಲಿ ಸಹಕಾರಿಯಾಗಲು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿದೆ. ಇದಕ್ಕೆ ಸುಮಾರು ಹತ್ತ ಸಾವಿರ ಕೋಟಿಗೂ ಹೆಚ್ಚು ಮೊತ್ತದ ದಾನ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಇದರ ನಡುವೆಯೂ RTI ವ್ಯಾಪ್ತಿಯಡಿಯಲ್ಲಿ ಪಿಎಂ ಕೇರ್ಸ್ ನಿಧಿಯನ್ನು ತರದೇ ಇರುವುದರಿಂದ ಸರ್ಕಾರದ ಪಾರದರ್ಶಕತೆ ಪ್ರಶ್ನೆಗೀಡಾಗಿದೆ. ಇಷ್ಟು ಅನುದಾನ ಬಂದಿದ್ದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸಾವಿರಾರು ಕೋಟಿಗಳ ಅನುದಾನ ಏಕೆ ಪಡೆಯಬೇಕಾಯಿತು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.