ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?

ವಾಟ್ಸಪ್ ಮಾಲೀಕತ್ವ ಹೊಂದಿರುವ ಫೇಸ್ ಬುಕ್ ಕಂಪನಿ ಮತ್ತು ಆಡಳಿತರೂಢ ಬಿಜೆಪಿ ನಡುವಿನ ನಂಟು ಮತ್ತು ಫೇಸ್ ಬುಕ್ ಭಾರತದಲ್ಲಿ ಆಡಳಿತ ಪಕ್ಷದ ಪರ ಚುನಾವಣೆ, ದೆಹಲಿ ಗಲಭೆಯಂತಹ ಸಂದರ್ಭದಲ್ಲಿ ನಡೆಸಿದ ಲಾಬಿಗಳ ಕುರಿತ ಆಘಾತಕಾರಿ ವರದಿಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಕಠಿಣ ಖಾಸಗೀ ಮಾಹಿತಿ ರಕ್ಷಣೆ ಕಾನೂನು ಜಾರಿಗೆ ಸರ್ಕಾರ ತೋರುತ್ತಿರುವ ಉದಾಸೀನ ಮತ್ತು ವಾಟ್ಸಪ್ ನ ಉದ್ಧಟತನಕ್ಕೆ ಬೇರೆಯದೇ ಅರ್ಥಗಳು ಬರುತ್ತವೆ.
ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?

ಇಬ್ಬರು ಬಳಕೆದಾರರ ನಡುವಿನ ಸಂಭಾಷಣೆ ಸೇರಿದಂತೆ ಬಳಕೆದಾರರ ಖಾಸಗೀ ಮಾಹಿತಿ(ಡೇಟಾ)ಯನ್ನು ಫೇಸ್ ಬುಕ್ ಸೇರಿದಂತೆ ತನ್ನ ಸಂಸ್ಥೆಯ ಇತರೆ ಜಾಲತಾಣ ಆ್ಯಪ್ ಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ ಬೆನ್ನಲ್ಲೇ ಭಾರತದ ಲಕ್ಷಾಂತರ ಮಂದಿ ಇತರೆ ಸಾಮಾಜಿಕ ಜಾಲತಾಣ ಆ್ಯಪ್ ಗಳತ್ತ ವಲಸೆ ಹೋಗಿದ್ದಾರೆ. ಅದರ ಪರಿಣಾಮವಾಗಿ ಜಾಗತಿಕ ಮೆಸೇಜಿಂಗ್ ದೈತ್ಯ ಸಂಸ್ಥೆ ಒಂದು ತನ್ನ ಪ್ರೈವಸಿ ಪಾಲಿಸಿಯ ಬದಲಾವಣೆಯ ನಿಟ್ಟಿನಲ್ಲಿ ಒಂದು ಹೆಜ್ಜೆ ಹಿಂದೆ ಸರಿದಿದ್ದು, ಸದ್ಯಕ್ಕೆ ಮೇ ವರೆಗೆ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದೆ.

ಆ ಹಿನ್ನೆಲೆಯಲ್ಲಿ ಕಳೆದ ಎರಡು ವಾರದಿಂದ ಭಾರತೀಯ ವಾಟ್ಸಪ್ ಬಳಕೆದಾರರಲ್ಲಿ ಮೂಡಿದ್ದ ಆತಂಕ ಸದ್ಯಕ್ಕೆ ದೂರಾದಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಈ ನಡುವೆ ವಾಟ್ಸಪ್ ಪ್ರೈವಸಿ ಪಾಲಿಸಿ ಬದಲಾವಣೆ ವ್ಯಕ್ತಿಗತ ಖಾಸಗೀ ಹಕ್ಕಿನ ಉಲ್ಲಂಘನೆ ಮತ್ತು ಭಾರತೀಯರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಎಂದು ಆ ಸಂಸ್ಥೆಯ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, “ವಾಟ್ಸಪ್ ಒಂದು ಖಾಸಗೀ ಸಂಸ್ಥೆ. ಅದರ ಷರತ್ತುಗಳನ್ನು ಒಪ್ಪಿಕೊಂಡು ಆ ಆ್ಯಪ್ ಬಳಸುವುದು ಅಥವಾ ಬಿಡುವುದು ನಿಮಗೆ ಬಿಟ್ಟದ್ದು. ಆ ಆ್ಯಪ್ ಬದಲಿಗೆ ಬೇರೆಯ ಆ್ಯಪ್ ಬಳಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಹಾಗಾಗಿ ಆ ಕಂಪನಿಯ ಹೊಸ ನಿಯಮವನ್ನು ಒಪ್ಪಿಕೊಳ್ಳುವುದು ಕಡ್ಡಾಯವೇನಲ್ಲವಲ್ಲ” ಎಂದು ಅಭಿಪ್ರಾಯಪಟ್ಟಿದೆ.

ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?
ವಾಟ್ಸಪ್ ಉದ್ಧಟತನಕ್ಕೆ ತಿರುಗೇಟು: ಸಿಗ್ನಲ್ ಆ್ಯಪ್ ನತ್ತ ಬಳಕೆದಾರರ ವಲಸೆ!

ಅಲ್ಲದೆ, “ವಾಟ್ಸಪ್ ಒಂದೇ ಅಲ್ಲ; ಗೂಗಲ್ ಮ್ಯಾಪ್ಸ್ ಸೇರಿದಂತೆ ಬಹುತೇಕ ಆ್ಯಪ್ ಗಳು ಬಳಕೆದಾರರು ಏನೆಲ್ಲಾ ಮಾಹಿತಿಯನ್ನು ಕಲೆಹಾಕುತ್ತವೆ ಎಂಬುದು ಗೊತ್ತಾದರೆ ನೀವು ಬೆಚ್ಚಿಬೀಳುತ್ತೀರಿ” ಎಂದೂ ಹೇಳಿರುವ ಹೈಕೋರ್ಟ್, ಈ ವಿಷಯದಲ್ಲಿ ಯಾವ ಮಾಹಿತಿ ಸೋರಿಕೆಯಾಗುತ್ತದೆ ಎಂದು ನಿಮ್ಮ ಆತಂಕ ಎಂದು ಅರ್ಜಿದಾರರಿಗೆ ಪ್ರಶ್ನಿಸಿದೆ. ಜೊತೆಗೆ, ಈ ವಿಷಯದಲ್ಲಿ ಹೆಚ್ಚಿನ ಚರ್ಚೆ ಅಗತ್ಯವಿರುವುದರಿಂದ ಜ.25ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಈ ನಡುವೆ ವಾಟ್ಸಪ್ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟ್ಗಿ, ವಾಟ್ಸಪ್ ನ ಹೊಸ ಪ್ರೈವೈಸಿ ಪಾಲಿಸಿ ಬದಲಾವಣೆ ಕೇವಲ ಬ್ಯಸಿನೆಸ್ ಚಾಟ್ ಗೆ ಸಂಬಂಧಿಸಿದಂತೆ ಸೀಮಿತವಾಗಿರಲಿದೆ. ಉಳಿದಂತೆ ವೈಯಕ್ತಿಕ ಚಾಟ್ ಮಾಹಿತಿಯನ್ನಾಗಲೀ, ವೈಯಕ್ತಿಕ ವಿವರಗಳನ್ನಾಗಲೀ ವಾಟ್ಸಪ್ ಸಂಸ್ಥೆ ಸೋರಿಕೆ ಮಾಡುವುದಾಗಲೀ, ನೋಡುವುದಾಗಲಿ ಸಾಧ್ಯವಿಲ್ಲ. ಅವುಗಳಿಗೆ ಹಿಂದಿನಂತೆಯೇ ಎನ್ ಕ್ರಿಪ್ಷನ್ ರಕ್ಷಣೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?
ಹೊಸ ಪ್ರೈವೆಸಿ ಪಾಲಿಸಿಯನ್ನು ಮೂರು ತಿಂಗಳುಗಳ ಕಾಲ ತಡೆಹಿಡಿದ ವಾಟ್ಸಪ್

ಆದರೆ, ಪ್ರಶ್ನೆ ಇರುವುದು ಇದೇ ವಾಟ್ಸಪ್ ಸಂಸ್ಥೆ, ತನ್ನ ಸೇವೆಯನ್ನು ನೀಡುತ್ತಿರುವ ಯುರೋಪ್ ದೇಶಗಳಲ್ಲಿ ಇಂತಹ ಯಾವುದೇ ಪ್ರೈವೈಸಿ ಪಾಲಿಸಿ ಬದಲಾವಣೆಯ ಜಾರಿಗೆ ತಂದಿಲ್ಲ. ಬದಲಾಗಿ ಭಾರತ ಸೇರಿದಂತೆ ಕೆಲವೇ ಕೆಲವು ದೇಶಗಳಲ್ಲಿ ಇಂತಹ ಬದಲಾವಣೆ ತಂದು, ತಮ್ಮ ವೈಯಕ್ತಿಕ ಮಾಹಿತಿಯನ್ನು ವಾಟ್ಸಪ್, ಫೇಸ್ ಬುಕ್ ಸೇರಿದಂತೆ ಇತರೆ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಅನುಮತಿ ನೀಡಬೇಕು, ಇಲ್ಲವೇ ಆಪ್ ತೊರೆಯಬೇಕು ಎಂದು ಸಂದೇಶ ಕಳಿಸಿದೆ ಯಾಕೆ ? ಎಂಬುದು!

ಈ ಅಂಶವನ್ನು ಸ್ವತಃ ಅರ್ಜಿದಾರ ವಕೀಲ ಚೈತನ್ಯ ರೋಹಿಲ್ಲಾ, ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ನೋಡಿದರೆ, ಮುಖ್ಯವಾಗಿ ಭಾರತದಲ್ಲಿ ಇನ್ನೂ ಜಾರಿಗೆ ಬರದೆ ಧೂಳು ತಿನ್ನುತ್ತಿರುವ ಹೊಸ ಖಾಸಗೀ ಮಾಹಿತಿ ರಕ್ಷಣೆ(ಡೇಟಾ ಪ್ರೊಟೆಕ್ಷನ್) ಕಾನೂನಿನ ಗೈರು ಭಾರತೀಯರ ಪಾಲಿಗೆ ಎಷ್ಟು ದುಬಾರಿಯಾಗಬಹುದು ಎಂಬುದಕ್ಕೆ ವಾಟ್ಸಪ್ ನ ಈ ಹೊಸ ಬೆಳವಣಿಗೆ ಉದಾಹರಣೆ.

ಕಳೆದ ಎರಡು ವರ್ಷಗಳಿಂದ ಜಾರಿಯಾಗದೆ, ಮೂಲೆ ಸೇರಿರುವ ಖಾಸಗೀ ಮಾಹಿತಿ ರಕ್ಷಣೆ ಕಾನೂನು ಮತ್ತು ಸಂವಿಧಾನ ಖಾತರಿಪಡಿಸಿರುವ ಭಾರತೀಯರ ಖಾಸಗೀತನದ ಹಕ್ಕು, ಇಂಟರ್ ನೆಟ್ ಮತ್ತು ಡಿಜಿಟಲ್ ಯುಗಕ್ಕೆ ತಕ್ಕಂತೆ ಪುನರ್ ವ್ಯಾಖ್ಯಾನವಾಗದೇ ಅಸ್ಪಷ್ಟತೆ ಮತ್ತು ಗೊಂದಲದಲ್ಲೇ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಟ್ಸಪ್ ನ ಹೊಸ ಬೆಳವಣಿಗೆಯನ್ನು ನೋಡಬೇಕಿದೆ. ನಾಗರಿಕರ ಖಾಸಗೀತನ ಮತ್ತು ಮಾಹಿತಿ ರಕ್ಷಣೆಯ ಕಠಿಣ ಕಾನೂನುಗಳು(ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್- ಜಿಡಿಪಿಆರ್) ಇರುವ ಯುರೋಪಿಯನ್ ಒಕ್ಕೂಟದಲ್ಲಿ ವಾಟ್ಸಪ್ ತನ್ನ ಹೊಸ ಪ್ರೈವೈಸಿ ಪಾಲಿಸಿ ಜಾರಿಗೆ ತರುತ್ತಿಲ್ಲ. ಅಲ್ಲಿ ಚಾಟ್ ಸೇರಿದಂತೆ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಲೀ, ಅಥವಾ ಬೇರೆಯವರೊಂದಿಗೆ ಹಂಚಿಕೊಳ್ಳುವುದಕ್ಕಾಗಲೀ ಒಪ್ಪುವುದು ಅಥವಾ ಬಿಡುವುದು ಬಳಕೆದಾರರ ಆಯ್ಕೆಗೆ ಬಿಟ್ಟದ್ದು. ಅವರ ಒಪ್ಪಿಗೆ ಇಲ್ಲದೆ ವಾಟ್ಸಪ್ ಅಂತಹ ಮಾಹಿತಿ ಬಳಸಲಾಗದು.

ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?
ವಾಟ್ಸಾಪ್‌ ಚಾಟ್‌ ಲೀಕ್: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್ ಗೋಸ್ವಾಮಿ!

ಆದರೆ, ಅಂತಹ ಸ್ಪಷ್ಟ ಕಾನೂನುಗಳು ಇಲ್ಲದಿರುವ ಭಾರತದಂತಹ ಕಡೆ ಬಳಕೆದಾರರು ತನ್ನ ಹೊಸ ನೀತಿಯನ್ನು ಒಪ್ಪಿಕೊಳ್ಳುವ ಮೂಲಕ ಫೇಸ್ ಬುಕ್ ಸೇರಿದಂತೆ ಮೂರನೇ ಪಾರ್ಟಿಗಳೊಂದಿಗೆ ತಮ್ಮ ಚಾಟ್ ಸೇರಿದಂತೆ ಮಾಹಿತಿ ಹಂಚಿಕೊಳ್ಳಲು ಒಪ್ಪಬೇಕು, ಇಲ್ಲವೇ ಆ್ಯಪ್ ಬಳಕೆಯನ್ನು ರದ್ದುಪಡಿಸಲಾಗುವುದು ಎಂಬ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ. ದೇಶದಲ್ಲಿ ಕೊರತೆ ಇರುವ ಇಂತಹ ಕಾನೂನು ಸ್ಪಷ್ಟತೆಯನ್ನು ವಾಟ್ಸಪ್ ಸೇರಿದಂತೆ ನೂರಾರು ಜಾಲತಾಣ ಮತ್ತು ಆ್ಯಪ್ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಆತಂಕ ಈಗ ನಿಜವಾಗಿದೆ. ಸಂಸತ್ತಿನಲ್ಲಿ ಮಂಡನೆಯಾಗಿ ಇನ್ನೂ ಅನುಮೋದನೆಗೆ ಬಾಕಿ ಇರುವ ಖಾಸಗೀ ಮಾಹಿತಿ ರಕ್ಷಣೆ ಮಸೂದೆಯ ಸೆಕ್ಷನ್ 5ರ ಪ್ರಕಾರ, ಯಾವುದೇ ಡಿಜಿಟಲ್ ಮಾಹಿತಿಯನ್ನು ಅದನ್ನು ಪಡೆದುಕೊಂಡ ಉದ್ದೇಶಕ್ಕಲ್ಲದೆ ಅನ್ಯ ಉದ್ದೇಶಕ್ಕೆ, ಅನ್ಯ ಬಳಕೆಗೆ ಬಳಸುವಂತಿಲ್ಲ. ಹಾಗೊಂದು ವೇಳೆ ಆ ಮಸೂದೆ ಎರಡು ವರ್ಷ ಹಿಂದೆಯೇ ಅನುಮೋದನೆಯಾಗಿ ಜಾರಿಗೆ ಬಂದಿದ್ದರೆ, ವಾಟ್ಸಪ್ ಈಗ ಹೇಳುತ್ತಿರುವಂತೆ ವಾಟ್ಸಪ್ ಚಾಟ್ ಮತ್ತು ಇತರೆ ಮಾಹಿತಿಯನ್ನು ಬಳಕೆದಾರರು ಅದನ್ನು ಹಂಚಿಕೊಂಡಿರುವ ಉದ್ದೇಶಕ್ಕಲ್ಲದೆ ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವೇ ಇರುತ್ತಿರಲಿಲ್ಲ. ಅಷ್ಟೇ ಅಲ್ಲ; ಹೀಗೆ ನಿಮ್ಮ ಮಾಹಿತಿಯನ್ನು ಅನ್ಯರೊಂದಿಗೆ ಹಂಚಿಕೊಳ್ಳುತ್ತೇವೆ. ಅದಕ್ಕೆ ಅನುಮತಿ ನೀಡುವುದಾದರೆ ನೀವು ನಮ್ಮ ಆ್ಯಪ್ ಬಳಸಿ, ಇಲ್ಲವೇ ಆ್ಯಪ್ ರದ್ದಾಗಲಿದೆ ಎಂದು ಹೇಳುವ ವಾಟ್ಸಪ್ ಉದ್ಧಟತನ ಕ್ರಿಮಿನಲ್ ಅಪರಾಧವಾಗಿರುತ್ತಿತ್ತು!

“ಡೇಟಾ ಪ್ರೈವೈಸಿ ಮತ್ತು ಖಾಸಗೀತನ ರಕ್ಷಣೆ ವಿಷಯದಲ್ಲಿ ಭಾರತದಲ್ಲಿ ಇರುವ ಕಾನೂನು ಶೂನ್ಯತೆ ಇಂತಹ ಕ್ರಮಗಳಿಗೆ ದಾರಿಮಾಡಿದೆ. ಈ ಕುರಿತ ಶಾಸನ ದೀರ್ಘ ಕಾಲದಿಂದ ಧೂಳು ತಿನ್ನುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರ ಖಾಸಗೀ ಮಾಹಿತಿ ಮತ್ತು ಖಾಸಗೀತನವೇ ಅಪಾಯಕ್ಕೆ ಸಿಲುಕಿದೆ. ಅವರ ಮಾಹಿತಿ ಮತ್ತು ಡೇಟಾ ದುರ್ಬಳಕೆಯಾಗುವ ದುರವಸ್ಥೆ ಇದೆ” ಎಂದು ಸಾಫ್ಟ್ ವೇರ್ ಫ್ರೀಡಂ ಲಾ ಸೆಂಟರ್ ಕಾನೂನು ನಿರ್ದೇಶಕ ಪ್ರಶಾಂತ್ ಸುಗತನ್ ಅಭಿಪ್ರಾಯಪಟ್ಟಿದ್ದಾರೆ.

ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?
ಸೋರಿಕೆಯಾದ ಅರ್ನಾಬ್‌ ಗೋಸ್ವಾಮಿ ವಾಟ್ಸಾಪ್‌ ಮೆಸೇಜ್‌ಗಳ ಸಂಪೂರ್ಣ ವಿವರ

ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸುಗತನ್ ವ್ಯಕ್ತಪಡಿಸಿರುವ ಈ ಆತಂಕ, ವಾಟ್ಸಪ್ ನ ಹೊಸ ನೀತಿಗಳ ಹಿನ್ನೆಲೆಯಲ್ಲಿ ಮತ್ತಷ್ಟು ನಿಜವಾಗುತ್ತಿದ್ದು, ಕೃಷಿ ಕಾಯ್ದೆಗಳಂತಹ ಕೃಷಿಕರಿಗೇ ಬೇಡದ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ತೋರುವ ಆಸಕ್ತಿ ಮತ್ತು ತರಾತುರಿಯನ್ನು ಪ್ರಧಾನಿ ಮೋದಿಯವರು, ಇಂತಹ ಎಲ್ಲಾ ಭಾರತೀಯರ ಖಾಸಗೀತನ ರಕ್ಷಣೆಯ ಕುರಿತ ಕಾನೂನುಗಳ ವಿಷಯದಲ್ಲಿ ಯಾಕೆ ತೋರುತ್ತಿಲ್ಲ? ಎಂಬ ಪ್ರಶ್ನೆ ಎದ್ದಿದೆ.

ಹಾಗೆ ನೋಡಿದರೆ, ಭಾರತದಲ್ಲಿ ನಾಗರಿಕ ಖಾಸಗೀತನ ರಕ್ಷಣೆ ಮತ್ತು ಖಾಸಗೀತನ ಹಕ್ಕಿನ ವಿಷಯದಲ್ಲಿ ಸಾಕಷ್ಟು ಉಡಾಫೆ ಮತ್ತು ಉದಾಸೀನಗಳು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಇಂಟರ್ ನೆಟ್ ಯುಗಕ್ಕೆ ತಕ್ಕಂತೆ ಯುರೋಪ್ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ರಕ್ಷಣಾತ್ಮಕ ಕಾನೂನು ಕ್ರಮಗಳನ್ನು ಮುಂಚಿತವಾಗಿ ಜಾರಿಗೊಳಿಸಿ ತಮ್ಮ ನಾಗರಿಕರ ಹಿತ ಕಾಯುವ ಪ್ರಯತ್ನ ಮಾಡಿವೆ. ಆದರೆ, ಭಾರತದಲ್ಲಿ ಸ್ವತಃ ಸರ್ಕಾರವೇ ‘ಆಧಾರ್’ ನೊಂದಿಗೆ ಜೋಡಣೆಯಾಗಿದ್ದ ದೇಶದ ಕೋಟ್ಯಂತರ ಜನರ ಖಾಸಗೀ ಮಾಹಿತಿಯನ್ನು ಚಿಲ್ಲರೆ ಕಾಸಿಗೆ ಮಾರಿಕೊಂಡ ಆಘಾತಕಾರಿ ಘಟನೆಗಳನ್ನು ಕಂಡಿದ್ದೇವೆ.

ಇದೀಗ ವಾಟ್ಸಪ್ ನ ಈ ಹೊಸ ಷರತ್ತು ಅಂತಹ ಉದಾಸೀನ ಮತ್ತು ಉಡಾಫೆಯ ಮುಂದುವರಿದ ಭಾಗದಂತೆ ಕಾಣುತ್ತಿದೆ. ಈ ನಡುವೆ, ವಾಟ್ಸಪ್ ಮಾಲೀಕತ್ವ ಹೊಂದಿರುವ ಫೇಸ್ ಬುಕ್ ಕಂಪನಿ ಮತ್ತು ಆಡಳಿತರೂಢ ಬಿಜೆಪಿ ನಡುವಿನ ನಂಟು ಮತ್ತು ಫೇಸ್ ಬುಕ್ ಭಾರತದಲ್ಲಿ ಆಡಳಿತ ಪಕ್ಷದ ಪರ ಚುನಾವಣೆ, ದೆಹಲಿ ಗಲಭೆಯಂತಹ ಸಂದರ್ಭದಲ್ಲಿ ನಡೆಸಿದ ಲಾಬಿಗಳ ಕುರಿತ ಆಘಾತಕಾರಿ ವರದಿಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಕಠಿಣ ಖಾಸಗೀ ಮಾಹಿತಿ ರಕ್ಷಣೆ ಕಾನೂನು ಜಾರಿಗೆ ಸರ್ಕಾರ ತೋರುತ್ತಿರುವ ಉದಾಸೀನ ಮತ್ತು ವಾಟ್ಸಪ್ ನ ಉದ್ಧಟತನಕ್ಕೆ ಬೇರೆಯದೇ ಅರ್ಥಗಳು ಬರುತ್ತವೆ. ಆ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ವಾಟ್ಸಪ್ ನಡೆಗಳ ನಡುವೆ ಮೇಲ್ನೋಟಕ್ಕೆ ಕಾಣದ ಏಕಸೂತ್ರವಿರುವಂತೆ ಭಾಸವಾಗದೇ ಇರದು!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com