ಭಾರತದ ಗಡಿಯೊಳಗೆ ಹಳ್ಳಿಯನ್ನೇ ನಿರ್ಮಿಸಿದ ಚೀನಾ..!

ಭಾರತದ ಗಡಿಯೊಳಗೆ ಸುಮಾರು 4.5 ಕಿ.ಮೀ. ಒಳ ನುಸುಳಿರುವ ಚೀನಾ 101 ಮನೆಗಳಿರುವ ಹಳ್ಳಿಯನ್ನೇ ನಿರ್ಮಿಸಿಬಿಟ್ಟಿದೆ. ಇಷ್ಟಾಗಿಯೂ ಸರ್ಕಾರ ಮಗುಮ್ಮಾಗಿ ಕುಳಿತಿದೆ.
ಭಾರತದ ಗಡಿಯೊಳಗೆ ಹಳ್ಳಿಯನ್ನೇ ನಿರ್ಮಿಸಿದ ಚೀನಾ..!

ಚೀನಾ ಮತ್ತು ಭಾರತದ ನಡುವಿನ ಗಡಿ ಸಂಘರ್ಷ ಇನ್ನೂ ತಣ್ಣಗಾಗಿಲ್ಲ ಎಂಬುದಕ್ಕೆ ಪುರಾವೆ ಲಭಿಸಿದೆ. ಚೀನಾ ಭಾರತದ ಗಡಿಯೊಳಗೆ ನುಸುಳಿಲ್ಲ, ಭಾರತದ ಒಂದಿಂಚು ಭೂಮಿಯನ್ನೂ ಚೀನಾಕ್ಕೆ ಬಿಟ್ಟುಕೊಡಲ್ಲ ಎಂಬ ಭಾರತದ ವಾದದ ನಡುವೆಯೇ, ಚೀನಾ ಸೇನೆಯು 101 ಮನೆಗಳಿರುವ ಒಂದು ಹಳ್ಳಿಯನ್ನು ಭಾರತದ ಗಡಿಯೊಳಗೆ ಸೃಷ್ಟಿಸಿಕೊಂಡಿದೆ. NDTVಯು ಇದನ್ನು ಪುರಾವೆಗಳ ಸಮೇತ ಬಹಿರಂಗಪಡಿಸಿದೆ.

ಕಳೆದ ನವೆಂಬರ್‌ 1ರಂದು ಪಡೆದ ಉಪಗ್ರಹ ಆಧಾರಿತ ಚಿತ್ರಗಳನ್ನು ಎನ್‌ಡಿಟಿವಿಯು ತಜ್ಞರಿಗೆ ತೋರಿಸಿದಾಗ, ಚೀನಾವು ಭಾರತದ ಸರಹದ್ದಿನೊಳಗೆ ಸುಮಾರು 4.5 ಕಿಲೋಮೀಟರ್‌ನಷ್ಟು ನುಸುಳಿದೆ ಎಂಬುದು ಸ್ಪಷ್ಟವಾಗಿದೆ. ಅರುಣಾಚಲ ಪ್ರದೇಶದ ತ್ಸಾರಿ ಚು ನದಿಯ ದಡದಲ್ಲಿರುವ ವಿವಾದಿತ ಗಡಿ ಪ್ರದೇಶದಲ್ಲಿ ಈ ಹಳ್ಳಿಯನ್ನು ನಿರ್ಮಿಸಲಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಚೀನಾ-ಭಾರತ ನಡುವಿನ ಗಾಲ್ವಾನ್‌ ಗಡಿ ಸಂಘರ್ಷದಲ್ಲಿ ಭಾರತದ 20 ಜನ ಸೈನಿಕರು ಹುತಾತ್ಮರಾಗಿದ್ದರು. ಹೀಗಾಗಿ, ಲಡಾಖ್‌ನ ಗಡಿ ಭಾಗದಲ್ಲಿ ಎರಡೂ ದೇಶಗಳು ಸೇನೆ ಜಮಾವಣೆಯಲ್ಲಿ ತೊಡಗಿಕೊಂಡಿದ್ದವು. ಆದರೆ, ಈ ಪ್ರದೇಶದಿಂದ ಸಾವಿರಾರು ಕಿಲೋಮೀಟರ್‌ ದೂರ ಇರುವ ಅರುಣಾಚಲ ಪ್ರದೇಶದ ಗಡಿ ಬಳಿ ಈಗ ಚೀನಾ ಹಳ್ಳಿಯನ್ನು ನಿರ್ಮಿಸಿದೆ.

ಆಗಸ್ಟ್‌ 2019ರ ಉಪಗ್ರಹ ಆಧಾರಿತ ಚಿತ್ರ ಹಾಗೂ ನವೆಂಬರ್‌ 2020ರ ಉಪಗ್ರಹ ಆಧಾರಿತ ಚಿತ್ರಗಳು ಚೀನಾ ಗಡಿಯೊಳಗೆ ನುಸುಳಿದ್ದನ್ನು ಸ್ಪಷ್ಟಪಡಿಸುತ್ತವೆ. ಕೇವಲ ಕಾಡು ಪ್ರದೇಶವಾಗಿದ್ದ ಸ್ಥಳದಲ್ಲಿ ದುತ್ತನೆ ಹಳ್ಳಿಯೊಂದು ತಲೆ ಎತ್ತಿದೆ.

ಈ ಕುರಿತಾಗಿ NDTV ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯವು, ಚೀನಾ ಈ ರೀತಿ ಕಳೆದ ವರ್ಷಗಳಿಂದ ಗಡಿ ಪ್ರದೇಶದಲ್ಲಿ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಭಾರತವು ತನ್ನ ಮೂಲಭೂತ ಸೌಕರ್ಯ ಅಭಿವೃದ್ದಿ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸುತ್ತದೆ, ಎಂದು ಹೇಳಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನವೆಂಬರ್‌ನಲ್ಲಿ ನಡೆದ ಸಂಸತ್‌ ಅಧಿವೇಶನದಲ್ಲಿ ಅರುಣಾಚಲ ಪ್ರದೇಶದ ಸಂಸದ ತಾಪಿರ್‌ ಗಾವ್‌ ಅವರು, ಅರುಣಾಚಲ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾ ಅತಿಕ್ರಮಣದ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದರು. ಮುಖ್ಯವಾಗಿ ಈಗ ಚೀನಾವು ಹಳ್ಳಿ ನಿರ್ಮಿಸಿರುವ ಸುಬಾನ್‌ಸಿರಿ ಜಿಲ್ಲೆಯಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚಾಗಿ ಕಾಣುತ್ತಿವೆ ಎಂದು ಹೇಳಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com