ದೇವಸ್ಥಾನಗಳ ದಾಳಿ ಹಿಂದೆ BJP& TDP! ಕೋಮುಗಲಭೆ ಸೃಷ್ಟಿಸಲು ನಡೆಯಿತೆ ಷಡ್ಯಂತ್ರ?

ಭೂ ವಿವಾದ ಇರುವಲ್ಲಿನ ಆಂಜನೇಯ ಮೂರ್ತಿಯ ಮೇಲೆ ಚಪ್ಪಲಿ ಹಾರ ಹಾಕಿ ಅಪವಿತ್ರೀಕರಣಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಟಿಡಿಪಿ ಕಾರ್ಯಕರ್ತನೋರ್ವನನ್ನು ಬಂಧಿಸಲಾಗಿದೆ
ದೇವಸ್ಥಾನಗಳ ದಾಳಿ ಹಿಂದೆ BJP& TDP! ಕೋಮುಗಲಭೆ ಸೃಷ್ಟಿಸಲು ನಡೆಯಿತೆ ಷಡ್ಯಂತ್ರ?

ಆಂಧ್ರಪ್ರದೇಶ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌತಮ್ ಸಾವಂಗ್, ದೇವಸ್ಥಾನಗಳ ಅಪವಿತ್ರೀಕರಣ ಹಾಗೂ ದಾಳಿಯ ಹಿಂದೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಯ ಕಾರ್ಯಕರ್ತರ ಕೈವಾಡವನ್ನು ಬಹಿರಂಗಪಡಿಸಿದ್ದಾರೆ. ದೇವಸ್ಥಾನದ ಮೇಲಿನ ದಾಳಿಯ ಹಿಂದೆ ಬಿಜೆಪಿಯ ಕಾರ್ಯಕರ್ತರನ್ನು ಬಂಧಿಸಿದಾಗಿನಿಂದ ʼಹಿಂದೂ ಅಸ್ಮಿತೆʼ ರಾಜಕಾರಣದ ಮೂಲಕ ಪ್ರವರ್ಧಮಾನಕ್ಕೆ ಬಂದ ಬಿಜೆಪಿಯ ಹಿಂದೂ ಪ್ರೇಮದ (?) ಕುರಿತು ಚರ್ಚೆಗಳೆದ್ದಿವೆ.

ಅಮರಾವತಿಯಲ್ಲಿ ಕಳೆದ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗೌತಮ್ ಸಾವಂಗ್ ದೇವಸ್ಥಾನಗಳ ಮೇಲಿನ ದಾಳಿಗಳ ಪ್ರಕರಣದಲ್ಲಿ ಬಿಜೆಪಿ ಹಾಗೂ ಟಿಡಿಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರು ದೇವಸ್ಥಾನ ಮೇಲಿನ ದಾಳಿಯ ಕುರಿತು ಹಲವು ನಕಲಿ ಸಂದೇಶಗಳನ್ನು ಸೃಷ್ಟಿಸಿ ಹರಿಯಬಿಟ್ಟು ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸಿರುವುದಾಗಿ ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಮೇಲಿನ ದಾಳಿ ಹಾಗೂ ಅಪವಿತ್ರೀಕರಣದ ಒಂಭತ್ತು ಪ್ರಕರಣಗಳಲ್ಲಿ ಟಿಡಿಪಿ ಹಾಗೂ ಬಿಜೆಪಿ ಕಾರ್ಯಕರ್ತರ ಕೈವಾಡವಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 13 ಟಿಡಿಪಿ ಕಾರ್ಯಕರ್ತರನ್ನು ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದವರಿಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಎರಡೇ ತಿಂಗಳಲ್ಲಿ ಆಂಧ್ರಪ್ರದೇಶದ 40 ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿರುವ ಕುರಿತು ಪ್ರಕರಣಗಳು ದಾಖಲಾಗಿವೆ. ದಾಳಿ ಮಾಡಿದ ದುಷ್ಕರ್ಮಿಗಳು ಪೂಜಾ ಮೂರ್ತಿಗಳನ್ನು ಹಾನಿಗೆಡವಿ, ದೇವಾಲಯಗಳನ್ನು ಅಪವಿತ್ರೀಕರಣಗೊಳಿಸಿದ್ದರು ಎಂದು ದಿ ವೈರ್‌ ವರದಿ ಮಾಡಿದೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ನೆಲ್ಲೂರಿನ ಕೊಂಡಬಿತ್ರಗುಂಟ ಗ್ರಾಮದಲ್ಲಿರುವ ಪ್ರಸನ್ನ ವೆಂಕಟೇಶ್ವರ ದೇವಸ್ಥಾನಕ್ಕೆ ಸೇರಿದ ರಥವನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಗಿತ್ತು
ಕಳೆದ ವರ್ಷದ ಫೆಬ್ರವರಿಯಲ್ಲಿ ನೆಲ್ಲೂರಿನ ಕೊಂಡಬಿತ್ರಗುಂಟ ಗ್ರಾಮದಲ್ಲಿರುವ ಪ್ರಸನ್ನ ವೆಂಕಟೇಶ್ವರ ದೇವಸ್ಥಾನಕ್ಕೆ ಸೇರಿದ ರಥವನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಗಿತ್ತು

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ಹಾಗೂ ಟಿಡಿಪಿ ದಾಳಿಗಳ ಕುರಿತು ಜಗನ್‌ ಮೋಹನ್‌ ರೆಡ್ಡಿ ಸರ್ಕಾರವನ್ನು ತೀಕ್ಷ್ಣವಾಗಿ ಟೀಕಿಸಿದ್ದವು. ಇದೀಗ ರಾಜ್ಯ ಪೊಲೀಸ್‌ ಡಿಜಿಪಿಯೇ ದೇವಸ್ಥಾನ ದಾಳಿಯ ಇವೆರಡು ಪಕ್ಷಗಳ ಕೈವಾಡವನ್ನು ಬಹಿರಂಗಗೊಳಿಸಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಉಭಯ ಸಂಕಟಕ್ಕೆ ಬಿದ್ದಿವೆ.

ಕುತೂಹಲಕಾರಿ ಅಂಶವೇನೆಂದರೆ, ಸ್ವತಃ ಜಗನ್‌ ಮೋಹನ್‌ ರೆಡ್ಡಿಯೇ ದೇವಸ್ಥಾನಗಳ ಮೇಲಿನ ಈ ದಾಳಿಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ. ತನ್ನ ಸರ್ಕಾರದ ವಿರುದ್ಧ ನಡೆಯುತ್ತಿರುವ ʼಗೆರಿಲ್ಲಾ ಯುದ್ಧʼವೆಂದು ಆರೋಪಿಸಿದ್ದರು. ಅದಾದ ಬೆನ್ನಿಗೆ ಆಂಧ್ರ ಪೊಲೀಸರು ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಸದ್ಯ 40 ಕ್ಕೂ ಹೆಚ್ಚು ಪ್ರಕರಣಗಳಲ್ಲಿ 9 ಪ್ರಕರಣಗಳಲ್ಲಿ ಬಿಜೆಪಿ ಮತ್ತು ಟಿಡಿಪಿ ಕಾರ್ಯಕರ್ತರ ಕೈವಾಡವಿರುವುದನ್ನು ಡಿಜಿಪಿ ಸ್ಪಷ್ಟಪಡಿಸಿದ್ದಾರೆ. ಉಳಿದ ಪ್ರಕರಣಗಳಲ್ಲಿ ಕೆಲವು ಅಕ್ರಮ ನಿಧಿ ಶೋಧಕರು, ಮಾಠಮಂತ್ರದ ಚಟುವಟಿಕೆಯಲ್ಲಿ ಹಾಗೂ ಮದ್ಯಪಾನಿಗಳಿಂದ ಸಂಭವಿಸಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಅದಾಗ್ಯೂ, ʼರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಕೆಲವು ರಾಜಕೀಯ ಪಕ್ಷಗಳ ಕಡೆಯಿಂದ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆʼ ಎಂದು ಡಿಜಿಪಿ ಸಾವಂಗ್ ಆರೋಪಿಸಿದ್ದಾರೆ.

"ಈ ಪ್ರಕರಣಗಳ ತನಿಖೆಯಲ್ಲಿ, ಈ ಸರಣಿ ಘಟನೆಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಹಾಗೂ ರಾಜಕೀಯ ಪಕ್ಷಗಳು ಉದ್ದೇಶಪೂರ್ವಕ ಪ್ರಯತ್ನಗಳು ಬಹಿರಂಗಗೊಂಡಿದೆ. ಇವುಗಳನ್ನು ಮುಂದಿಟ್ಟು ರಾಜ್ಯದಲ್ಲಿ ಸುಳ್ಳು ಪ್ರಚಾರ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಯತ್ನಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ಒಂಬತ್ತು ಪ್ರಕರಣಗಳಲ್ಲಿ, ರಾಜಕೀಯ ಪಕ್ಷದ ಸದಸ್ಯರು ಅಥವಾ ಪಕ್ಷಗಳ ಅಂಗಸಂಸ್ಥೆಗಳ ನೇರ ಮತ್ತು ನಿರ್ದಿಷ್ಟ ಪಾಲ್ಗೊಳ್ಳುವಿಕೆ ಕಂಡುಬಂದಿದೆ ಎಂದು ಅವರು ತಿಳಿಸಿರುವುದಾಗಿ The News Minute ವರದಿ ಮಾಡಿದೆ.

ಮುಖ್ಯವಾಗಿ, ಕಳೆದ ಸೆಪ್ಟೆಂಬರಿನಲ್ಲಿ ಬೊಮ್ಮಾರು ಪ್ರದೇಶದಲ್ಲಿ ಗಣಪತಿ ಮೂರ್ತಿಗೆ ಅಪಮಾನಿಸಲಾಗಿದೆ ಎಂದು ಸುಳ್ಳು ಮಾಹಿತಿ ಹರಡಿದ ಪ್ರಕರಣದಲ್ಲಿ ಬಿಜೆಪಿ ಹಾಗೂ ಟಿಡಿಪಿಯ ತಲಾ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದರೆ, ಬಡ್ವೇಲ್‌ನಲ್ಲಿ ನಡೆದ ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ ಟಿಡಿಪಿ ಕಾರ್ಯಕರ್ತರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಭೂ ವಿವಾದ ಇರುವಲ್ಲಿನ ಆಂಜನೇಯ ಮೂರ್ತಿಯ ಮೇಲೆ ಚಪ್ಪಲಿ ಹಾರ ಹಾಕಿ ಅಪವಿತ್ರೀಕರಣಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಟಿಡಿಪಿ ಕಾರ್ಯಕರ್ತನೋರ್ವನನ್ನು ಬಂಧಿಸಲಾಗಿದೆ. ಕುರ್ನೂಲ್‌ ಜಿಲ್ಲೆಯ ಮದ್ದಿಕೆರ ಎಂಬಲ್ಲಿನ ಮಾದಮ್ಮ ದೇವಸ್ಥಾನದಲ್ಲಿ ಅಕ್ರಮ ನಿಧಿ ಶೋಧಿಸಿ ಅಪವಿತ್ರೀಕರಣಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಟಿಡಿಪಿ ಕಾರ್ಯಕರ್ತರನ್ನು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ವಿಶಾಖಪಟ್ಟಣದ ಗೋಲುಗೊಂಡ ಮಂಡಲ್‌ ಎಂಬಲ್ಲಿ ವಿನಾಯಕ ಮೂರ್ತಿಯ ಕೈ ತುಂಡರಿಸಲಾಗಿದೆ ಎಂದು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಟಿಡಿಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ. (ಮಾಹಿತಿ: ದಿ ವೈರ್)

ಆಂಧ್ರಪ್ರದೇಶ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌತಮ್ ಸಾವಂಗ್
ಆಂಧ್ರಪ್ರದೇಶ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌತಮ್ ಸಾವಂಗ್

ದೇವಾಲಯಗಳ ಮೇಲಿನ ಸರಣಿ ದಾಳಿ ದೊಡ್ಡ ಪಿತೂರಿಯ ಭಾಗವೆಂದು ಡಿಜಿಪಿ ಆರೋಪಿಸಿದ್ದಾರೆ. ಇದರ ಹಿಂದಿರುವ ಷಡ್ಯಂತ್ರಗಳನ್ನು ಬಯಲು ಮಾಡಲು ಹೆಚ್ಚಿನ ತನಿಖೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಡಿಜಿಪಿ ನೀಡಿರುವ ಮಾಹಿತಿ ಪ್ರಕಾರ ದೇವಸ್ಥಾನ ಸಂಬಂಧಿಸಿದ ಅಪರಾಧಗಳಲ್ಲಿ 180 ಪ್ರಕರಣಗಳನ್ನು ಈಗಾಗಲೇ ಬೇಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ 337 ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ಕೋಮು ಪ್ರಚೋದಕ ಸಂದೇಶಗಳನ್ನು ರವಾನಿಸಿದ ಆರೋಪದ ಮೇಲೆ 4,643 ಮಂದಿಯನ್ನು ಗುರುತಿಸಲಾಗಿದೆ.

(Inputs: NDTV, The Wire, The News Minute)

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com