ಇಳಿಯುತ್ತಿರುವ ದೆಹಲಿಯ ತಾಪಮಾನ ಮತ್ತು ಪ್ರತಿಭಟನಾ ನಿರತ ರೈತರ ಸಾವಿನ ಆತಂಕ

ನವೆಂಬರ್ ಕೊನೆಯ ವಾರದಿಂದ ಈವರೆಗೆ ಪ್ರತಿಭಟನಾ ಸ್ಥಳದಲ್ಲಿ 70 ರೈತರು ತೀರಿ ಹೋಗಿದ್ದಾರೆ. ಅವರಲ್ಲಿ ಬಹುಪಾಲು ರೈತರನ್ನು ಬಲಿ ಪಡೆದದ್ದು ದೆಹಲಿಯ ತೀವ್ರತರವಾದ ಚಳಿ.
ಇಳಿಯುತ್ತಿರುವ ದೆಹಲಿಯ ತಾಪಮಾನ ಮತ್ತು ಪ್ರತಿಭಟನಾ ನಿರತ ರೈತರ ಸಾವಿನ ಆತಂಕ

ದೆಹಲಿ ಮತ್ತದರ ಆಸುಪಾಸಿನ ನಗರಗಳಲ್ಲಿ ಗಾಳಿಯ ಗುಣಮಟ್ಟವು ತೀವ್ರವಾಗಿ ಕುಸಿದಿದೆ. ಮಂಜಿನ ದಟ್ಟ‌ ಪದರವು ರಾಜಧಾನಿಯನ್ನು ಆವರಿಸಿದ್ದು ಗೋಚರತೆಯೂ ಕ್ಷೀಣಿಸಿದೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ದೆಹಲಿಯ ಸರಾಸರಿ ಗಾಳಿಯ ಗುಣಮಟ್ಟ ಸೂಚ್ಯಂಕ 462 ಆಗಿದ್ದು, ಗುರುವಾರ ಸಂಜೆ ನಾಲ್ಕು ಗಂಟೆಗೆ ಈ ಸೂಚ್ಯಂಕ 429ರಷ್ಟಿತ್ತು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಕೊಟ್ಟಿದೆ. AQI (ಗಾಳಿಯ ಗುಣಮಟ್ಟ ಸೂಚ್ಯಂಕ)ಯು 500ರಲ್ಲಿ ನೂರಕ್ಕಿಂತ ಹೆಚ್ಚು ತೋರಿಸುತ್ತಿದ್ದರೆ ಅದು ಆರೋಗ್ಯಕ್ಕೆ ಹಾನಿಕರ ಎಂದೇ ಪರಿಗಣಿಸುತ್ತದೆ. ಶುಕ್ರವಾರದಂದು ದೆಹಲಿಯ ಕನಿಷ್ಠ ತಾಪಮಾನ 6.7° ಸೆಲ್ಸಿಯಸ್‌ನಷ್ಟಿತ್ತು ಎಂದು ಹವಾಮಾನ ಇಲಾಖೆಯನ್ನು ಉಲ್ಲೇಖಿಸಿ PTI ವರದಿ ಮಾಡಿದೆ.

ಇದೇ ವೇಳೆ ನೋಯ್ಡಾದಲ್ಲಿ‌ ಒಂದು ಗಂಟೆ ಹೊತ್ತಿಗೆ AQI 470, ಗಾಜಿಯಾಬಾದ್‌ನಲ್ಲಿ 486 ಮತ್ತು 420ರಷ್ಟಿತ್ತು ಎಂದೂ ಪಿ.ಟಿ.ಐ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜಸ್ತಾನ, ಪಂಜಾಬ್, ಹರ್ಯಾಣ, ಬಿಹಾರದ ಕೆಲವು ಪ್ರದೇಶಗಳಲ್ಲೂ ದಟ್ಟ ಮಂಜು ಆವರಿಸಿದ್ದು ಸುಮಾರು ಹದಿನಾಲ್ಕು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಪ್ರಯಾಣ ಆರಂಭಿಸಿದೆ ಎಂದು ANI ವರದಿ ಮಾಡಿದೆ.

ಶನಿವಾರ ಬೆಳಗ್ಗೆ ವಿಸಿಬಿಲಿಟಿ (ಗೋಚರತೆ)ಯು ಶೂನ್ಯಕ್ಕೆ ಇಳಿದಿದ್ದು ಐವತ್ತು‌ ಮೀಟರ್ ಒಳಗಿನ ವಸ್ತುಗಳೂ ಗೋಚರಿಸುವುದಿಲ್ಲ. ಶುಕ್ರವಾರ ಸಂಜೆ 460ರಷ್ಟಿದ್ದ AQI ಶನಿವಾರ ಬೆಳಗ್ಗೆ 9 ಗಂಟೆಗೆ 436ರಷ್ಟಿದೆ. ಈಗಾಗಲೇ ದೆಹಲಿಯಿಂದ ಹೊರಡುವ 80 ವಿಮಾನಗಳು ಮತ್ತು ದೆಹಲಿ ಏರ್ಪೋರ್ಟ್‌ಗೆ ತಲುಪಬೇಕಿದ್ದ 50 ವಿಮಾನಗಳು ತಡವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಶುಕ್ರವಾರ 6.7°ಯಷ್ಟಿದ್ದ ತಾಪಮಾನ ಶನಿವಾರ ಮತ್ತಷ್ಟು ಕುಸಿದಿದ್ದು 6.6°c ನಷ್ಟಿದೆ.

ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥರಾದ ಕುಲ್‌ದೀಪ್ ಶ್ರೀವಾಸ್ತವ ಅವರು "ಗಾಳಿಯ ವೇಗದ ಪ್ರಮಾಣವೂ ಕುಗ್ಗಿದ್ದು, ವಾತಾವರಣದಲ್ಲಿನ ತೇವಾಂಶವು ಮಾಲಿನ್ಯಕಾರಕಗಳನ್ನು ಇನ್ನಷ್ಟು ಭಾರವಾಗಿಸುತ್ತಿದೆ" ಎನ್ನುತ್ತಾರೆ.

ತೀವ್ರತರವಾದ ಚಳಿಯು ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಅದರಲ್ಲೂ ಹೃದಯ ಸಂಬಂಧಿತ ಕಾಯಿಲೆ ಇದ್ದವರು ಜೀವ ಕಳೆದುಕೊಳ್ಳುವ ಸಂಭವ ಹೆಚ್ಚು. ವಾತಾವರಣದಲ್ಲಿ ಚಳಿ ಇದ್ದಾಗ ದೇಹವನ್ನು ಬೆಚ್ಚಗಿಡಲು ಹೃದಯ ಸಾಮಾನ್ಯಕ್ಕಿಂತ ತುಸು ಹೆಚ್ಚೇ ಕೆಲಸ ಮಾಡಬೇಕಾಗುತ್ತದೆ. ಸಹಜವಾಗಿಯೇ ಹೃದಯ ಬಡಿತ ವೇಗವಾಗುತ್ತದೆ ಮತ್ತು ರಕ್ತದೊತ್ತಡವೂ ಏರಿಕೆಯಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಹಲವು ರೈತರು ತೀವ್ರತರವಾದ ಚಳಿ ಮತ್ತು ಶೀತಲ ಗಾಳಿಯಿಂದ ಈಗಾಗಲೇ ಮೃತಪಟ್ಟಿದ್ದಾರೆ. ಡಿಸೆಂಬರ್ ಹದಿಮೂರರಂದು ಟಿಕ್ರಿಯಲ್ಲಿ ಜೀವ ತೆತ್ತ ಹರ್ಯಾಣದ 44 ವರ್ಷದ ರೈತ ಚಳಿಯಿಂದ ಸತ್ತಿದ್ದಾರೆ ಎಂದು ಅವರ ಕುಟುಂಬಸ್ಥರು ವಿಷಾದ ಪಡುತ್ತಾರೆ. ನವೆಂಬರ್ ಕೊನೆಯ ವಾರದಿಂದ ಈವರೆಗೆ ಪ್ರತಿಭಟನಾ ಸ್ಥಳದಲ್ಲಿ 70 ರೈತರು ತೀರಿ ಹೋಗಿದ್ದಾರೆ. ಅವರಲ್ಲಿ ಬಹುಪಾಲು ರೈತರನ್ನು ಬಲಿ ಪಡೆದದ್ದು ದೆಹಲಿಯ ತೀವ್ರತರವಾದ ಚಳಿ.

ಲಾಭರಹಿತ ಸಂಸ್ಥೆಗಳು ಈಗಾಗಲೇ ಪ್ರತಿಭಟನಾ ನಿರತ ರೈತರಿಗೆ ಬೆಚ್ಚನೆಯ ಉಡುಪು, ಕೈಗವಚ, ಶೂ, ಜಾಕೆಟ್‌ಗಳನ್ನು ವಿತರಿಸಲು ಆರಂಭಿಸಿವೆ. ರೈತರು ರಾತ್ರಿ ವಿಶ್ರಾಂತಿ ಪಡೆಯಲು ಸಿಂಘು ಗಡಿಯಲ್ಲಿ ಸುಮಾರು 200ರಷ್ಟು ಟೆಂಟ್‌ಗಳನ್ನೂ ನಿರ್ಮಿಸಿಕೊಟ್ಟಿವೆ. ಕೆಲವು ಸ್ವಯಂ ಸೇವಕರು ಹಿರಿಯ‌‌ ಪ್ರತಿಭಟನಾಕಾರರಿಗೆ ದೊಡ್ಡ ದೊಡ್ಡ ಹಂಡೆಗಳಲ್ಲಿ ನೀರು ಕಾಯಿಸಿಕೊಡುತ್ತಿದ್ದಾರೆ. ಇಷ್ಟಾಗಿಯೂ "ನಾವು ಚಳಿಗೆ ಹೆದರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ" ಎನ್ನುತ್ತಾರೆ. ಆದರೆ ದೆಹಲಿಯ ಚಳಿಯು ರೈತರ ಸಾವಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com