ಕೇರಳದ ಮೊದಲ ಲಿಂಗ ಪರಿವರ್ತಿತ ಮಹಿಳಾ ವೈದ್ಯೆ ಡಾ. ಪ್ರಿಯಾ

ಗಂಡಸಿನಂತೆ‌ ನಡೆಯುವುದರಿಂದ ಹಿಡಿದು ಅವರಂತೆಯೇ ವಸ್ತ್ರ ಧರಿಸುವುದರವರೆಗೆ ನನ್ನ ಗುರುತನ್ನು ಮರೆಮಾಚಬೇಕಿತ್ತು, ತನಗೆ ವೈದ್ಯೆಯಾಗಬೇಕು ಅನ್ನುವುದಕ್ಕಿಂತ ಓರ್ವ ಮಹಿಳೆಯಾಗಬೇಕೆನ್ನುವುದೇ ದೊಡ್ಡ ಕನಸಾಗಿತ್ತು
ಕೇರಳದ ಮೊದಲ ಲಿಂಗ ಪರಿವರ್ತಿತ ಮಹಿಳಾ ವೈದ್ಯೆ ಡಾ. ಪ್ರಿಯಾ


"ಇತರ ತೃತೀಯ ಲಿಂಗಿಗಳಿಗಿಲ್ಲದ ಸವಲತ್ತೊಂದು ನನಗಿತ್ತು. ನನ್ನ ಪೋಷಕರು ಪರಿವರ್ತನೆ ಹೊಂದುವ ನನ್ನ ಕನಸನ್ನು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬೆಂಬಲಿಸಿದರು. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ" ಎನ್ನುತ್ತಾರೆ ಕೇರಳದ ಮೊದಲ ತೃತೀಯ ಲಿಂಗಿ ಆಯುರ್ವೇದಿಕ್ ವೈದ್ಯರಾದ ಡಾ. ವಿಎಸ್ ಪ್ರಿಯಾ.


ಹುಟ್ಟುತ್ತಾ ಗಂಡು ಎಂದೇ ಗುರುತಿಸಿಕೊಂಡ ಪ್ರಿಯಾ, ಬಾಲ್ಯದಲ್ಲಿ ತನ್ನೊಳಗಿನ ಸ್ತ್ರೀತ್ವವನ್ನು ಗುರುತಿಸಿದ್ದರು. ಹಾಗಾಗಿಯೇ ತನ್ನದಲ್ಲದ ದೇಹದಲ್ಲಿ ಬದುಕುತ್ತಿರುವುದು ಕಿರಿ ಕಿರಿ ಅನ್ನಿಸುತ್ತಿತ್ತು. ಆದರೆ ಸಮಾಜಕ್ಕೆ ಅಂಜಿ ಅವರು ತಮ್ಮ ನಿಜದ ಗುರುತನ್ನು ತನ್ನ‌ ಹೆತ್ತವರಿಗೂ ಬಹಿರಂಗ ಪಡಿಸಿರಲಿಲ್ಲ. "ಈ ಸುದ್ದಿಯನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಬಗ್ಗೆ ನನಗೆ ಭಯವಿತ್ತು. ಆ ಸಮಯದಲ್ಲಿ ನನಗೆ ಮಾಡಲು ಸಾಧ್ಯವಿದ್ದುದು ಒಂದೇ -ನನ್ನ ಸಮಸ್ಯೆಗಳನ್ನು ಒಂದು ಡೈರಿಯಲ್ಲಿ ಬರೆದಿಡುವುದು" ಎಂದು ಹೇಳುತ್ತಾರೆ.

ಡಾ. ಪ್ರಿಯಾ
ಡಾ. ಪ್ರಿಯಾ


ತನಗಿರುವ ಸ್ತ್ರೀತ್ವದ ಕುರುಹನ್ನು ಇತರರಿಗೆ ತಿಳಿಸುವಾಗಿನ ಹೆಣಗಾಟವನ್ನು ನೆನಪಿಸಿಕೊಳ್ಳುವ ಪ್ರಿಯಾ 'ಮಾನಸಿಕ ತಜ್ಞರು ನನಗೆ ಸಹಾಯ ಮಾಡುತ್ತಾರೇನೋ ಅಂದುಕೊಂಡು ನನ್ನ ಹೆತ್ತವರು ನನ್ನನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅದೃಷ್ಟವಶಾತ್ ಡಾಕ್ಟರ್ ನನ್ನ ಪರಿಶೀಲಿಸಿ ನನಗೆ ಯಾವುದೇ ಮಾನಸಿಕ ಸಮಸ್ಯೆಗಳಿಲ್ಲ ಎಂದರು. ಆದರೆ ನನ್ನ ನಿಜ ಗುರುತನ್ನು ಸಮಾಜದ ಮುಂದೆ ಪ್ರಕಟಪಡಿಸಿದರೆ ಅಪಹಾಸ್ಯಕ್ಕೆ ಮತ್ತು ಹಿಂಸೆಗೆ ಒಳಗಾಗುತ್ತೇನೆ ಎನ್ನುವುದು ನನಗೆ ಹದಿನೈದನೇ ವಯಸ್ಸಿನಲ್ಲೇ ಅರ್ಥವಾಗಿತ್ತು" ಎನ್ನುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅವರ ಅಸ್ತಿತ್ವವನ್ನು ಶಾಲೆಯಲ್ಲಿ ತೆರೆದಿಡುವುದು ಮತ್ತು ಅಡಗಿಸಿಡುವುದು ಎರಡೂ ತೀರಾ ಕಷ್ಟ ಆಗುತ್ತಿತ್ತು.‌ ಕೇವಲ ಮಹಿಳೆಯಾಗಿ ಬದುಕುವುದಕ್ಕೆ ಎಲ್ಲವನ್ನೂ ಬಿಟ್ಟು ದೂರ ಹೋಗಿ ಬಿಡಬೇಕು ಎಂದು ಎಷ್ಟೋ ಬಾರಿ ಅಂದುಕೊಂಡದ್ದಿದೆ. ಆದರೆ ಹೆತ್ತವರನ್ನು ಬಿಟ್ಟಿರಲಾರದೆ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತಿರಲಿಲ್ಲ. "ನನ್ನ ಅಪ್ಪ ಅಮ್ಮ ಇಬ್ಬರೂ ದಾದಿಯರು. ಹಾಗಾಗಿ ನಾನು ಮತ್ತು ನನ್ನ ಸಹೋದರ ವೈದ್ಯರಾಗಬೇಕೆಂದು ಅವರು ಬಯಸಿದ್ದರು. ಸಹೋದರ ಎಂ.ಬಿ.ಬಿ.ಎಸ್ ಮುಗಿಸಿ ಈಗ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಟೀಚರ್ ಆಗಬೇಕೆಂಬುವುದು ನನ್ನಿಚ್ಛೆಯಾಗಿತ್ತು. ಆದರೆ ಹೆತ್ತವರಿಗಾಗಿ ಡಾಕ್ಟರ್ ಆಗಲು ನಿರ್ಧರಿಸಿ ಒಳ್ಳೂರಿನ 'ವೈದರತ್ನಂ ಆಯುರ್ವೇದ ಕಾಲೇಜಿಗೆ ಸೇರಿದೆ. BAMS ಡಿಗ್ರಿ ಪಡೆದುಕೊಂಡದ್ದೂ ಗಂಡಾಗಿಯೇ. ಮದುವೆಗೆ ಸಂಬಂಧಿಸಿದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲೆಂದೇ ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಪಡೆದುಕೊಳ್ಳಲು ಮಂಗಳೂರಿನ ಕಾಲೇಜಿನಲ್ಲಿ ದಾಖಲಾದೆ" ಎನ್ನುತ್ತಾರೆ.

ಅಷ್ಟಾಗಿಯೂ ತನ್ನದಲ್ಲದ ಬದುಕನ್ನು ಬದುಕುವುದು ಕಷ್ಟಕರವಾಗಿತ್ತು. "ಗಂಡಸಿನಂತೆ‌ ನಡೆಯುವುದರಿಂದ ಹಿಡಿದು ಅವರಂತೆಯೇ ವಸ್ತ್ರ ಧರಿಸುವುದರವರೆಗೆ ನನ್ನ ಗುರುತನ್ನು ಮರೆಮಾಚಬೇಕಿತ್ತು, ತನಗೆ ವೈದ್ಯೆಯಾಗಬೇಕು ಅನ್ನುವುದಕ್ಕಿಂತ ಓರ್ವ ಮಹಿಳೆಯಾಗಬೇಕೆನ್ನುವುದೇ ದೊಡ್ಡ ಕನಸಾಗಿತ್ತು" ಎಂದು ಮೀಡಿಯಾ ಒನ್‌ ಸಂಸ್ಥೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಾ. ಪ್ರಿಯಾ
ಡಾ. ಪ್ರಿಯಾ

2018ರಲ್ಲಿ ತ್ರಿಶೂರಿನ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸತೊಡಗಿದ ಅವರು "ನನ್ನ ಹೆತ್ತವರಿಗೆ ನನ್ನ ಬಗ್ಗೆ ಹೆಮ್ಮೆ ಇತ್ತು, ನನಗೂ ನನ್ನ ಬದುಕಿನ ಬಗ್ಗೆ ಖುಷಿ ಇತ್ತು. ಆದರೆ ನನ್ನ ಗುರುತು ಸದಾ ನನ್ನನ್ನು ಕಾಡುತ್ತಿತ್ತು. ಆಗಲೇ ನಾನವರಿಗೆ ನನ್ನ ಗುರುತಿನ ಬಗ್ಗೆ ತಿಳಿಸಲು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಿಳಿಸಲು ನಿರ್ಧರಿಸಿದೆ" ಎಂದು ನೆನಪಿಸಿಕೊಳ್ಳುತ್ತಾರೆ. " ನನ್ನ ಹೆತ್ತವರು ನನ್ನ ನಿರ್ಧಾರವನ್ನು ದೂಷಿಸಲಿಲ್ಲ. ನನ್ನ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನನ್ನೊಂದಿಗೆ ಇದ್ದದ್ದೇ ಅಮ್ಮ" ಎಂದು ಹೇಳಿದ್ದಾರೆ.

ಈಗಾಗಲೇ ಆರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಡಾ.ಪ್ರಿಯಾ " ಇನ್ನು ಧ್ವನಿ ಚಿಕಿತ್ಸೆ ಮತ್ತು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಬೇಕಿದೆ. ಸಾಮಾನ್ಯವಾಗಿ ಕಸಿ ಶಸ್ತ್ರಚಿಕಿತ್ಸೆಗಳಿಗೆ ಮೂರು ಲಕ್ಷ ತಗುಲುತ್ತದೆ. ಆದರೆ ನಾನು ಎಂಟು ಲಕ್ಷಗಳ ತುಸು ದುಬಾರಿ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಉಳಿತಾಯದ ಹಣವನ್ನು ಶಸ್ತ್ರಚಿಕಿತ್ಸೆಗಳಿಗೆ ಬಳಸಿಕೊಂಡಿದ್ದೇನೆ. ಆದರೆ ಶೇಕಡಾ 95ರಷ್ಟು ಹಣ ಒದಗಿಸಿದ್ದು ನನ್ನ ಹೆತ್ತವರೇ" ಎನ್ನುವುದನ್ನು ಕೃತಜ್ಞತಾ ಭಾವದಿಂದ ನೆನಪಿಸುತ್ತಾರೆ.

ತನ್ನ ವೈದ್ಯ ವೃತ್ತಿಗೆ ಮರಳುವ ಬಗ್ಗೆ ಮಾತಾಡುತ್ತಾ ಅವರು ಆಸ್ಪತ್ರೆಯ ಅಧಿಕಾರಿಗಳಿಗೆ ತನ್ನ ಶಸ್ತ್ರಚಿಕಿತ್ಸೆ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದೇನೆ "ಆಸ್ಪತ್ರೆಯ ಮ್ಯಾನೇಜ್‌ಮೆಂಟ್ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರ ಬಗ್ಗೆ ನನಗೆ ಆತಂಕವಿತ್ತು. ಆದರೆ ಸ್ಟಾಫ್‌ನಿಂದ ಹಿಡಿದು ಎಮ್‌ಡಿ ವರೆಗೆ ಎಲ್ಲರೂ ನನ್ನನ್ನು ಬೆಂಬಲಿಸಿದರು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಸಹೋದ್ಯೋಗಿಗಳು ಹಾಗೂ ಆಸ್ಪತ್ರೆ ಅಧಿಕಾರಿಗಳು ಮಾತ್ರವಲ್ಲದೆ ತಮ್ಮ ರೋಗಿಗಳು ಈ ನಿರ್ಧಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಬಗ್ಗೆಯೂ ಆತಂಕವಿದ್ದ ಅವರು ರೋಗಿಗಳಿಗೂ ಮೊದಲೇ ಮಾಹಿತಿ ನೀಡಿದ್ದರು. ಹಾಗಾಗಿ ರೋಗಿಗಳೂ ಅವರ ಲಿಂಗ ಪರಿವರ್ತನೆಯ ಬಗ್ಗೆ ಕುತೂಹಲ ಹೊಂದಿದ್ದರು. ಅವನ್ನೆಲ್ಲಾ ಸಾವಧಾನವಾಗಿ ನಿವಾರಿಸಿದ ಪ್ರಿಯಾ, "ರೋಗಿಗಳ ಎಲ್ಲಾ ಸಂಶಯಗಳನ್ನೂ ಅದೊಂದು ಸಾಮಾಜಿಕ ಜವಾಬ್ದಾರಿ ಎನ್ನುವ ನೆಲೆಯಲ್ಲಿ ನಾನು ನಿವಾರಿಸಿದ್ದೇನೆ" ಎಂದು ಹೇಳುತ್ತಾರೆ.

ಡಾ. ತ್ರಿನೇತ್ರ
ಡಾ. ತ್ರಿನೇತ್ರ

ನಮ್ಮ ಸಮಾಜ ನಿಧಾನವಾಗಿ ಬದಲಾಗುತ್ತಿದೆ, ಜನ ತೃತೀಯ ಲಿಂಗಿಗಳನ್ನೂ ಸ್ವೀಕರಿಸುತ್ತಿದ್ದಾರೆ. ಹಾಗಿದ್ದರೂ ನಾವು ಹೋಗ ಬೇಕಾಗಿರುವ ದಾರಿ ತುಂಬಾ ದೊಡ್ಡದು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಮೊದಲು ಜಿನು ಶಶಿಧರನ್ ಎಂದು ಕರೆಸಿಕೊಳ್ಳುತ್ತಿದ್ದ ಅವರು 'ಎಲ್ಲರಿಂದ ಪ್ರೀತಿಸಲ್ಪಡುವ' ಎನ್ನುವ ಅರ್ಥದ ಪ್ರಿಯಾ ಹೆಸರು ಇಷ್ಟಪಟ್ಟು ಆರಿಸಿಕೊಂಡಿದ್ದೇನೆ ಎನ್ನುತ್ತಾರೆ.

ಪ್ರಿಯಾ ಮಾತ್ರವಲ್ಲದೆ, ಕರ್ನಾಟಕದಲ್ಲೂ ಒಬ್ಬರು ಲಿಂಗ ಪರಿವರ್ತಿತ ವೈದ್ಯೆಯಿದ್ದಾರೆ. ಅವರ ಹೆಸರು ತ್ರಿನೇತ್ರ ಹಲ್ದಾರ್‌ ಗುಮ್ಮರಾಜು. ಅವರು ಮಣಿಪಾಲ್‌ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್ ವ್ಯಾಸಂಗ ಪೂರೈಸಿದ್ದಾರೆ. ಕಳೆದ ವರ್ಷವಷ್ಟೇ ವಿದೇಶದಲ್ಲಿ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಲಿಂಗಪರಿವರ್ತಿಸಿಕೊಂಡಿದ್ದರು. ‌

ಲಿಂಗ ಪರಿವರ್ತಿತ ಮಂದಿಯನ್ನು ಅಪಹಾಸ್ಯ ಮಾಡಲು ಬಳಸುವ ಪದಗಳಿಂದ ನನ್ನನ್ನು ಕರೆಯುತ್ತಿದ್ದರು, ಈಗ ʼಡಾಕ್ಟರ್‌ʼ ಎಂದು ಸಂಬೋಧಿಸಬೇಕುʼ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ತ್ರಿನೇತ್ರ ಅವರ ಕತೆಯೂ ಬಹುತೇಕ ಪ್ರಿಯಾ ಅವರ ರೀತಿಯೇ, ತಾವು ಮಾಡದ ತಪ್ಪಿಗೆ, ಅಥವಾ ಆಗೇ ಇಲ್ಲದ ತಪ್ಪಿಗೆ ಸಮಾಜದ ಅವಹೇಳನಕ್ಕೆ, ಅಪಮಾನಕ್ಕೆ ಗುರಿಯಾದವರು. ಅವಮಾನಗಳ ಕುಲುಮೆಯಲ್ಲಿ ಬದುಕು ಕಟ್ಟಿದವರು.

ಡಾ. ತ್ರಿನೇತ್ರ
ಡಾ. ತ್ರಿನೇತ್ರ

ಬದಲಾವಣೆ ಅನ್ನುವುದು ಒಂದು ಪ್ರಕ್ರಿಯೆ, ಅದು ನಿಧಾನವಾಗಿ ಜರುಗುತ್ತವೆ. ಆ ಬದಲಾವಣೆಗಳೊಂದಿಗೆ ಸಮಾಜದ ದೃಷ್ಟಿಕೋನಗಳು ನಿಧಾನವಾಗಿ ಬದಲಾಗುತ್ತವೆ. ಭಿನ್ನ ಭಿನ್ನ ಆಲೋಚನೆಗಳು, ಆಯಾಮಗಳೂ ಸಮಾಜದಲ್ಲಿ ಸ್ಥಾನ ಪಡೆಯುತ್ತಿದೆ. ಮಂಗಳಮುಖಿಯರೆಂದು ಕರೆಯಲ್ಪಡುವ ಸಮಾಜದ ಅಂಚಿಗೇ ತಲ್ಲಲ್ಪಟ್ಟ ವಿಭಾಗದ ಮಂದಿಯೂ ವೈದ್ಯಕೀಯ, ಪೊಲೀಸ್, ವ್ಯವಹಾರ‌ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆಶದಾಯಕ ಬೆಳವಣಿಗೆಯೇನೋ ಹೌದು. ಆದರೆ, ಅವರು ಇನ್ನಷ್ಟು ಸಾರ್ವಜನಿಕ ರಂಗದಲ್ಲಿ ತೊಡಗಿಕೊಳ್ಳುವಂತೆ ಆ ಮೂಲಕ ಘನತೆ ಹಾಗೂ ಭದ್ರತೆಯುಳ್ಳ ಜೀವನ ಕಟ್ಟಿಕೊಳ್ಳುವುದಕ್ಕೆ ಆಡಳಿತವೂ ಅವಕಾಶ ಸೃಷ್ಟಿಸಿಕೊಡಬೇಕು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com