ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಡೆ; ಅಧ್ಯಯನಕ್ಕೆ ನಾಲ್ವರ ಸಮಿತಿ ರಚನೆ

ಈಗಾಗಲೇ ಕೃಷಿ ಕಾನೂನುಗಳನ್ನು ಹಾಗೂ ಮೋದಿಯ ಇತರೆ ನಿರ್ಧಾರಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡವರನ್ನು ಅಧ್ಯಯನ ಸಮಿತಿಗೆ ಸೇರಿಸಿಕೊಂಡಿರುವ ಕುರಿತು ಅಪಸ್ವರ ಎದ್ದಿವೆ
ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಡೆ; ಅಧ್ಯಯನಕ್ಕೆ ನಾಲ್ವರ ಸಮಿತಿ ರಚನೆ

ಕಳೆದ ಹಲವು ವಾರಗಳಿಂದ ದೆಹಲಿಯಲ್ಲಿ ರೈತರ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ವಿವಾದಿತ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ. ಬಿಕ್ಕಟ್ಟನ್ನು ಕೊನೆಗೊಳಿಸಲು ರೈತರೊಂದಿಗೆ ಮಾತುಕತೆ ನಡೆಸಲು ಕೃಷಿ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ

ಮುಂದಿನ ಆದೇಶದವರೆಗೆ ಮೂರು ಕಾನೂನುಗಳಿಗೆ ತಡೆ ನೀಡಲಾಗುತ್ತಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಹೇಳಿದ್ದಾರೆ.

ಕಾನೂನುಗಳು ಎರಡು ದಶಕಗಳ ಚರ್ಚೆಗಳ ಫಲಿತಾಂಶವಾಗಿದೆ, ಅವುಗಳನ್ನು "ಅವಸರದಿಂದ ಜಾರಿಗೆ ತಂದಿಲ್ಲ" ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.

ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತಿದೆ ಮತ್ತು ಕಾನೂನುಗಳನ್ನು ಅಮಾನತುಗೊಳಿಸುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ನಾವು ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮಲ್ಲಿರುವ ಒಂದು ಅಧಿಕಾರವೆಂದರೆ ಕಾನೂನನ್ನು ಅಮಾನತುಗೊಳಿಸುವುದು" ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

"ನಾವು ಸಮಸ್ಯೆಯನ್ನು ಪರಿಹರಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿಯೇ ನಾವು ಸಮಿತಿಯನ್ನು ರಚಿಸುತ್ತಿದ್ದೇವೆ. ಹೆಸರುಗಳನ್ನು ನಮಗೆ ನೀಡಿ, ನಾವು ನಿರ್ಧರಿಸುತ್ತೇವೆ. ಇದು ರಾಜಕೀಯವಲ್ಲ. ರಾಜಕೀಯ ಮತ್ತು ನ್ಯಾಯಾಂಗದ ನಡುವೆ ವ್ಯತ್ಯಾಸವಿದೆ ಮತ್ತು ನೀವು ಸಹಕರಿಸಬೇಕಾಗುತ್ತದೆ" ಎಂದು ಸುಪ್ರೀಂ ಕೋರ್ಟ್‌ ರೈತ ಸಂಘಗಳಿಗೆ ಹೇಳಿದೆ.

ಅಲ್ಲದೆ ದೆಹಲಿ ಪೊಲೀಸರ ಮನವಿ ಮೇರೆಗೆ, ಜನವರಿ 26 ರ ರೈತರ ಟ್ರಾಕ್ಟರ್‌ ಪರೇಡ್‌ ನಡೆಸದಂತೆ ಸುಪ್ರೀಂ ರೈತ ಸಂಘಗಳಿಗೆ ನೋಟಿಸ್‌ ನೀಡಿದೆ. ಗಣರಾಜ್ಯೋತ್ಸವದ ರಾಜಧಾನಿಯಲ್ಲಿ ರೈತರು ಟ್ರಾಕ್ಟರ್‌ ಪೆರೇಢ್‌ ನಡೆಸುವುದು "ರಾಷ್ಟ್ರಕ್ಕೆ ಮುಜುಗರವನ್ನುಂಟು ಮಾಡುತ್ತದೆ" ಎಂದು ಕೇಂದ್ರವು ನ್ಯಾಯಾಲಯಕ್ಕೆ ನೀಡಿದ ಉತ್ತರದಲ್ಲಿ ಹೇಳಿದೆ.

ಅಧ್ಯಯನಕ್ಕೆ ನಾಲ್ವರ ಸಮಿತಿ ರಚನೆ

ಸದ್ಯ, ಅಶೋಕ್ ಗುಲಾಟಿ, ಪ್ರಮೋದ್ ಜೋಶಿ, ಅನಿಲ್ ಘನ್ವಾತ್ ಮತ್ತು ಭೂಪಿಂದರ್ ಸಿಂಗ್ ಮನ್ ಅವರನ್ನು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ವಿಪರ್ಯಾಸವೆಂದರೆ ಸಮಿತಿಯ ಇಬ್ಬರು ಸದಸ್ಯರು ಈಗಾಗಲೇ ಕೃಷಿ ಕಾನೂನುಗಳನ್ನು ಹಾಗೂ ಮೋದಿಯ ಇತರೆ ನಿರ್ಧಾರಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡವರು.

2015 ರಲ್ಲಿ ಪದ್ಮಶ್ರೀ ಪಡೆದ ಅಶೋಕ್ ಗುಲಾಟಿ ಅವರು ಈ ಹಿಂದೆಯೇ ಕೃಷಿ ಕಾನೂನುಗಳ ಪರ ವಕಾಲತ್ತು ವಹಿಸಿ, ಪ್ರತಿಪಕ್ಷಗಳು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದವರು. ಅಲ್ಲದೆ, ನೋಟ್‌ ಬ್ಯಾನ್‌ ಕೂಡಾ ಮೋದಿಯವರ ಉತ್ತಮ ನಿರ್ಧಾರವೆಂದು ಅಶೋಕ್‌ ಗುಲಾಟಿ ಹೇಳಿದ್ದರು.

ಇನ್ನೋರ್ವ ಸದಸ್ಯ ಅನಿಲ್ ಘನ್ವಾತ್ ಅವರ ಶೆಟ್ಕರಿ ಸಂಘಟನೆ ಕೂಡಾ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಂಡಿತ್ತು. ಕೃಷಿ ತಿದ್ದುಪಡಿ ಕಾನೂನುಗಳು ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಸ್ವಾತಂತ್ರ್ಯ ಒದಗಿಸುತ್ತದೆ ಎಂದು ಸಂಘಟನೆ ಹೇಳಿತ್ತು.

ಈಗಾಗಲೇ ಕೃಷಿ ಕಾನೂನುಗಳನ್ನು ಹಾಗೂ ಮೋದಿಯ ಇತರೆ ನಿರ್ಧಾರಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡವರನ್ನು ಅಧ್ಯಯನ ಸಮಿತಿಗೆ ಸೇರಿಸಿಕೊಂಡಿರುವ ಕುರಿತು ಅಪಸ್ವರ ಎದ್ದಿವೆ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com