ಯುನೈಟೆಡ್ ಕಿಂಗ್ಡಂ, ಜಪಾನ್ ಹಾಗೂ ಆಫ್ರಿಕಾದಲ್ಲಿ ಹೊಸ ತಳಿಯ ಕರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಭಾರತವು 7ನೇ ಗಣರಾಜ್ಯೋತ್ಸವಕ್ಕೆ ಯಾವುದೇ ವಿದೇಶಿ ವಿಶೇಷ ಅತಿಥಿಯನ್ನು ಆಹ್ವಾನಿಸದಿರಲು ನಿರ್ಧರಿಸಿದೆ.
ಹಾಗಾಗಿ, ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ಮುಖ್ಯ ಅತಿಥಿಯಿಲ್ಲದೆಯೇ ಜರುಗಲಿದೆ. ಈಗಾಗಲೇ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಕೊನೇ ಕ್ಷಣದಲ್ಲಿ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರು. ಹಾಗಾಗಿ ಬದಲಿ ಅತಿಥಿಯನ್ನು ಆಹ್ವಾನಿಸದಿರಲು ಭಾರತ ನಿರ್ಧರಿಸಿದೆ.
ಕಳೆದ ಐದು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ವಿದೇಶಿ ಗಣ್ಯರನ್ನು ಹೊಂದಿರುವುದಿಲ್ಲ. 1966 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮರಣಹೊಂದಿದ ವರ್ಷದಲ್ಲಿ ಹಾಗೂ 1952 ಮತ್ತು 1953 ರ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ವಿದೇಶಿ ಗಣ್ಯರು ಹಾಜರಿರಲಿಲ್ಲ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜ.26 ರ ಪರೇಡಿನಲ್ಲಿ ಧ್ವಜವಂದನೆ ಪಡೆಯಲಿದ್ದಾರೆ.
ಕೊನೆ ಕ್ಷಣದಲ್ಲಿ ಮುಖ್ಯ ಅತಿಥಿಗೆ ಬದಲಿಯಾಗಿ ಬೇರೆ ಗಣ್ಯರನ್ನು ಆಹ್ವಾನಿಸುವುದು ಅತಿಥಿಗಳಿಗೆ ಇರಿಸು-ಮುರಿಸು ತರಿಸಬಹುದು. ಮರಳಿ ತಾಯ್ನಾಡಿಗೆ ಮರಳುವಾಗ ತಮ್ಮನ್ನು ʼಬದಲಿ ಅತಿಥಿʼ ಯಾಗಿ ಗಮನಿಸಬಹುದು. 1950 ರಿಂದ ಕೇವಲ ಎರಡು ಬಾರಿ ಹೀಗೆ ಅತಿಥಿಗಳನ್ನು ಕೊನೆ ಘಳಿಗೆಯಲ್ಲಿ ಬದಲಿ ಮಾಡಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹಿಂದುಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.