ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ನರೇಂದ್ರ ಮೋದಿ, ನಮ್ಮ ನಾಗರಿಕರಿಗೆ ಪರಿಣಾಮಕಾರಿ ಲಸಿಕೆಗಳನ್ನು ಒದಗಿಸಲು ದೇಶದ ವಿಜ್ಞಾನಿಗಳು ಮತ್ತು ವೈದ್ಯಕೀಯ ತಜ್ಞರು ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ, ಹಾಗಾಗಿ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ನಿಯಂತ್ರಿಸುವಂತೆ ರಾಜ್ಯಗಳಿಗೆ ನಿರ್ದೇಶನ ಮಾಡಿದ್ದಾರೆ.
ಜನವರಿ 16 ರಿಂದ ಪ್ರಾರಂಭವಾಗಲಿರುವ ಮೊದಲ ಹಂತದ ಕೋವಿಡ್ -19 ಲಸಿಕೆ ವೆಚ್ಚವನ್ನು ಕೇಂದ್ರವು ಭರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
"ಮೂರು ಕೋಟಿ ಕರೋನಾ ವಾರಿಯರ್ಸ್ ಮತ್ತು ಮುಂಚೂಣಿ ಕಾರ್ಮಿಕರಿಗೆ ಮೊದಲ ಹಂತದ ವ್ಯಾಕ್ಸಿನೇಷನ್ ವೆಚ್ಚವನ್ನು ಕೇಂದ್ರವು ಭರಿಸಲಿದೆ" ಎಂದು ಮುಖ್ಯಮಂತ್ರಿಗಳೊಂದಿಗಿನ ಸಭೆಯ ನಂತರ ಪಿಎಂ ಮೋದಿ ಅವರು ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರು - ಸರ್ಕಾರಿ ಮತ್ತು ಖಾಸಗಿ - ನೈರ್ಮಲ್ಯ ಕಾರ್ಮಿಕರು, ಇತರ ಮುಂಚೂಣಿ ಕಾರ್ಮಿಕರು, ರಕ್ಷಣಾ ಪಡೆ, ಪೊಲೀಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
"ಎರಡನೇ ಹಂತದಲ್ಲಿ, 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಸ್ವಸ್ಥ ಸ್ಥಿತಿಯಲ್ಲಿರುವವರಿಗೆ ಲಸಿಕೆ ನೀಡಲಾಗುವುದು" ಎಂದು ಅವರು ಹೇಳಿದ್ದಾರೆ
ನಮ್ಮ ನಾಗರಿಕರಿಗೆ ಪರಿಣಾಮಕಾರಿಯಾದ ಲಸಿಕೆಗಳನ್ನು ಒದಗಿಸಲು ದೇಶದ ವಿಜ್ಞಾನಿಗಳು ಮತ್ತು ವೈದ್ಯಕೀಯ ತಜ್ಞರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಲಸಿಕೆ ತೆಗೆದುಕೊಂಡ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ದೇಶದ ನಾಗರಿಕರಿಗೆ ಅವರು ಕೇಳಿಕೊಂಡಿದ್ದಾರೆ.
ಭಾರತದ ಔಷಧ ನಿಯಂತ್ರಕ ಮಂಡಳಿಯು ಇತ್ತೀಚೆಗೆ ಎರಡು ಲಸಿಕೆಗಳನ್ನು ಅನುಮೋದಿಸಿದೆ - ಆಕ್ಸ್ಫರ್ಡ್-ಅಜ್ರಾಜೆನೆಕಾದ ಕೋವಿಶೀಲ್ಡ್ ಮತ್ತು ದೇಶದಲ್ಲಿ ನಿರ್ಬಂಧಿತ ತುರ್ತು ಬಳಕೆಗಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್ನ ಕೊವಾಕ್ಸಿನ್ ಎರಡು ಅನುಮೋದಿತ ಲಸಿಕೆಗಳು.
"ಜಾಗತಿಕವಾಗಿ ಇಲ್ಲಿಯವರೆಗೆ ಕೇವಲ 2.5 ಕೋಟಿ ಜನರು ಮಾತ್ರ ಲಸಿಕೆ ಹಾಕಿದ್ದಾರೆ; ಮುಂದಿನ ಕೆಲವು ತಿಂಗಳುಗಳಲ್ಲಿ ನಾವು 30 ಕೋಟಿ ನಾಗರಿಕರಿಗೆ ಲಸಿಕೆ ನೀಡಬೇಕಾಗಿದೆ" ಎಂದು ಪ್ರಧಾನಿ ಹೇಳಿದ್ದಾರೆ.
ವ್ಯಾಕ್ಸಿನೇಷನ್ ಬಗ್ಗೆ ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳಬೇಕೆಂದು ಅವರು ರಾಜ್ಯ ಗಳಿಗೆ ನಿರ್ದೇಶನ ನೀಡಿದ ಅವರು, ಇದರಲ್ಲಿ ಸಾಮಾಜಿಕ, ಧಾರ್ಮಿಕ ಗುಂಪುಗಳು ಭಾಗಿಯಾಗಬೇಕಿದೆ ಎಂದು ಕರೆ ನೀಡಿದರು.