ರೈತರ ಪ್ರತಿಭಟನೆಗೆ  ಬೆಂಬಲವಾಗಿ ಬ್ರಿಟನ್ ನ 100ಕ್ಕೂ ಹೆಚ್ಚು ಸಂಸದರ ಪತ್ರ

ರೈತರ ಪ್ರತಿಭಟನೆಗೆ ಬೆಂಬಲವಾಗಿ ಬ್ರಿಟನ್ ನ 100ಕ್ಕೂ ಹೆಚ್ಚು ಸಂಸದರ ಪತ್ರ

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುವಂತೆ 100ಕ್ಕೂ ಹೆಚ್ಚು ಬ್ರಿಟನ್ ನ ಸಂಸದರು ಪಕ್ಷಾತೀತರಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಒತ್ತಾಯಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯು ಇಡೀ ವಿಶ್ವದ ಪ್ರಮುಖ ಸುದ್ದಿ ಆಗಿದೆ. ಬಹುತೇಕ ದೇಶಗಳ ಪತ್ರಿಕೆಗಳಲ್ಲೂ ಇದು ಪ್ರಕಟಗೊಂಡಿದ್ದು ದಿನೇ ದಿನೇ ಪ್ರತಿಭಟನೆಯು ಕಾವೇರುತ್ತಿದೆ. ಇತ್ತ ಕೇಂದ್ರ ಸರ್ಕಾರವೂ ಮಸೂದೆ ಹಿಂತೆಗೆತಕ್ಕೆ ಒಪ್ಪುತ್ತಿಲ್ಲ ಪ್ರತಿಭಟನಾನಿರತ ರೈತರೂ ಭರವಸೆಯನ್ನು ಒಪ್ಪಿ ಪ್ರತಿಭಟನೆ ಹಿಂತೆಗೆದುಕೊಂಡು ಮನೆಗೆ ಹೋಗಲು ಒಪ್ಪುತ್ತಿಲ್ಲ. ಈಗಾಗಲೇ ರೈತರ ಜತೆ 8 ಸುತ್ತಿನ ಮಾತುಕತೆ ನಡೆಸಿದ್ದರೂ ಫಲಿತಾಂಶ ಶೂನ್ಯವಾಗಿದೆ.

ಇದೀಗ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಗೆತ್ತಿಕೊಳ್ಳುವಂತೆ 100ಕ್ಕು ಹೆಚ್ಚು ಬ್ರಿಟನ್ ನ ಸಂಸದರು ಪಕ್ಷಾತೀತರಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರವೊಂದರಲ್ಲಿ, ಸಂಸದರು ಜಾನ್ಸನ್ರನ್ನು ಪ್ರಸ್ತುತ ಅವ್ಯವಸ್ಥೆಯ ತ್ವರಿತ ಪರಿಹಾರ ಮತ್ತು ಶಾಂತಿಯುತವಾಗಿ ಪ್ರತಿಭಟಿಸಲು ನಾಗರಿಕರ ಪ್ರಜಾಪ್ರಭುತ್ವದ ಮಾನವ ಹಕ್ಕನ್ನು ಖಾತ್ರಿಗೊಳಿಸಲು ಭಾರತವನ್ನು ಒತ್ತಾಯಿಸುವಂತೆ ಕೇಳಿಕೊಂಡಿದ್ದಾರೆ. ಈ ಸಂಸದರಲ್ಲಿ ಭಾರತೀಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದ್ದು ಅನೇಕರು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

ದೆಹಲಿಯ ಗಡಿಯಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಈಗ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಚಳುವಳಿಯನ್ನು ಹತ್ತಿಕ್ಕಲು ಸರ್ಕಾರ ನವೆಂಬರ್ ನಲ್ಲಿ ಸಿಂಘೂ ಗಡಿಯಲ್ಲಿ ಪೋಲೀಸರ ಮೂಲಕ ಜಲ ಫಿರಂಗಿಗಳನ್ನು ನಿಯೋಜಿಸಿತ್ತು ಮತ್ತು ಗಡಿಯನ್ನು ತಲುಪಿದಾಗ ಪೊಲೀಸರು ರೈತರ ಮೇಲೆ ಅನೇಕ ಸುತ್ತಿನ ಅಶ್ರುವಾಯು ಗುಂಡುಗಳನ್ನೂ ಹಾರಿಸಿದ್ದರು.

ರೈತ ಸಂಘಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಎಂಟು ಸುತ್ತಿನ ಮಾತುಕತೆ ನಡೆಸಿದರೂ ಕೃಷಿ ಕಾನೂನುಗಳ ಗೊಂದಲ ಇನ್ನೂ ಮುಂದುವರೆದಿದೆ. ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ. ಬ್ರಿಟನ್ ಸಂಸದರು ಜನವರಿ 5 ರಂದು ಬರೆದಿರುವ ಪತ್ರವನ್ನು ಸಂಸದ ತನ್ಮಂಜೀತ್ ಸಿಂಗ್ ಧೇಸಿ ಶುಕ್ರವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಅದೇ ದಿನ ಬೋರಿಸ್ ಜಾನ್ಸನ್ ಗಣರಾಜ್ಯೋತ್ಸವದಂದು ಮುಖ್ಯ ಅತಿಥಿಯಾಗಿ ಭಾರತಕ್ಕೆ ತೆರಳುವ ತನ್ನ ನಿಗದಿತ ಪ್ರವಾಸವನ್ನು ರದ್ದುಗೊಳಿಸಿದರು. ಬ್ರಿಟನ್ ನಲ್ಲಿ ಕರೋನಾ ವೈರಸ್ ಸಾಂಕ್ರಮಿಕದ ಹರಡುವಿಕೆಯ ಹೊಸ ಒತ್ತಡದಿಂದ ಉಂಟಾದ ಬಿಕ್ಕಟ್ಟಿನ ಮಧ್ಯೆ ಬೋರಿಸ್ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಸಂಸದರ ಪತ್ರದಲ್ಲಿ ಅನೇಕ ರೈತ ಸಂಘಟನೆಗಳು ವಿಶೇಷವಾಗಿ ಪಂಜಾಬ್ ಮತ್ತು ಭಾರತದ ಇತರ ಭಾಗಗಳಿಂದ ಬಂದಿರುವ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಸಾವಿರಾರು ರೈತರ ಮೇಲೆ ಜಲ ಫಿರಂಗಿಗಳು, ಅಶ್ರುವಾಯು ಮತ್ತು ವಿವೇಚನಾರಹಿತ ಶಕ್ತಿಯನ್ನು ಬಳಸಿರುವುದನ್ನು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವಿಷಯವು ಭಾರತೀಯ ವಲಸೆಗಾರ ಸಮುದಾಯವನ್ನು, ವಿಶೇಷವಾಗಿ ಪಂಜಾಬಿ ಅಥವಾ ಸಿಖ್ ಹಿನ್ನೆಲೆಯವರನ್ನು ಮತ್ತು ಭಾರತದಲ್ಲಿ ಕೃಷಿಗೆ ಭೂಮಿ ಅಥವಾ ಕೃಷಿಕ ಸಂಪರ್ಕವನ್ನು ಹೊಂದಿರುವ ಇತರರು ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್ನಾದ್ಯಂತ ಅನೇಕ ಪಟ್ಟಣಗಳು ಮತ್ತು ನಗರಗಳು ಸೇರಿದಂತೆ ಜಾಗತಿಕ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ ಎಂದು ಪತ್ರ ತಿಳಿಸಿದೆ.

ಈ ಹಿಂದೆಯೇ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಸಂಸದರು ಪತ್ರವನ್ನು ಕಳುಹಿಸಲಾಗಿದ್ದು, ಈ ವಿಷಯವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರಿಗೆ ಭರವಸೆ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದಾಗ ರಾಬ್ ಅದನ್ನು ಮಾಡಲು ವಿಫಲರಾಗಿದ್ದಾರೆ ಎಂದು ಜಾನ್ಸನ್ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಂಸದರು ಈಗ ಬ್ರಿಟನ್ನ ಪ್ರಧಾನ ಮಂತ್ರಿಯವರನ್ನು ಮೋದಿಯವರೊಂದಿಗೆ ಶೀಘ್ರವಾಗಿ ಚರ್ಚಿಸುವಂತೆ ಕೇಳಿಕೊಂಡಿದ್ದಾರೆ. ಈ ವಿಷಯದ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸದಸ್ಯರ ಆತಂಕಗಳನ್ನು ಗೊಂದಲಗಳನ್ನೂ ಶೀಘ್ರವಾಗಿ ಪರಿಹರಿಸಬೇಕೆಂಬ ನಮ್ಮ ಆಶಯಗಳು ಮತ್ತು ಶಾಂತಿಯುತವಾಗಿ ನಾಗರಿಕರ ಪ್ರಜಾಪ್ರಭುತ್ವದ ಮಾನವ ಹಕ್ಕಿನ ಮಹತ್ವವನ್ನು ನೀವು ಖಂಡಿತವಾಗಿಯೂ ಭಾರತೀಯ ಪ್ರಧಾನ ಮಂತ್ರಿಗೆ ತಿಳಿಸುವಿರಿ ಎಂದು ನಾವು ನಂಬಬಹುದೇ ಎಂದೂ ಪತ್ರದಲ್ಲಿ ಕೇಳಲಾಗಿದೆ.

ಇದಲ್ಲದೆ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಜಾನ್ಸನ್ ‘ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ. ಡಿಸೆಂಬರ್ 9 ರಂದು ಬ್ರಿಟನ್ ಸಂಸತ್ತಿನಲ್ಲಿ ಸಂಸದ ಧೇಸಿ ಅವರು ಭಾರತದಲ್ಲಿ ನಡೆದಿರುವ ಪ್ರತಿಭಟನೆಯ ಪ್ರಶ್ನೆಗೆ ಉತ್ತರಿಸುವಾಗ ಜಾನ್ಸನ್ ಅವರು ಪಾಕಿಸ್ತಾನವನ್ನು ತೋರಿಸಿದರು ಮತ್ತು ಆ ಎರಡು ಸರ್ಕಾರಗಳು ಇತ್ಯರ್ಥಪಡಿಸುವುದು ಎಂದು ಹೇಳಿದರು. ಈಗ ಪ್ರತಿಭಟನೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಸಂಸದರು ಈಗ ಜಾನ್ಸನ್ರನ್ನು ಕೇಳಿದ್ದಾರೆ.

ಈ ಪ್ರಮುಖ ವಿಷಯದ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಸ್ಪಷ್ಟಪಡಿಸಲು ದಯವಿಟ್ಟು ಪ್ರತಿಕ್ರಿಯಿಸಬಹುದೇ? ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕಿದೆ ಎಂದು ನೀವು ನಿಜವಾಗಿಯೂ ಒಪ್ಪುತ್ತೀರಾ? ಎಂದು ಪತ್ರದಲ್ಲಿ ಕೇಳಲಾಗಿದೆ. ಪ್ರಧಾನಿ ಜಾನ್ಸನ್ ಅವರೊಂದಿಗೆ ಈ ವಿಷಯವನ್ನು ಚರ್ಚಿಸುವಂತೆ ಅನೇಕ ರೈತ ಘಟಕಗಳು ತಮ್ಮ ಸಂಸದರನ್ನು ಕೇಳಿಕೊಂಡಿದ್ದಾರೆ ಎಂದು ಧೇಸಿ ಹೇಳಿದ್ದು ಪ್ರಸ್ತುತ ಸರ್ಕಾರ ಮತ್ತು ರೈತರ ನಡುವಿನ ಸಂಘರ್ಷಕ್ಕೆ ತ್ವರಿತ ಪರಿಹಾರಕ್ಕಾಗಿ ಬ್ರಿಟನ್ ಪ್ರಧಾನಿ ಜಾನ್ಸನ್ ಶ್ರಮಿಸಲಿದ್ದಾರೆ ಎಂದು ಧೇಸಿ ಭರವಸೆ ವ್ಯಕ್ತಪಡಿಸಿದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com