ಮಹಾರಾಷ್ಟ್ರ; MPSC ಪರೀಕ್ಷೆ ವಿಳಂಬದಿಂದ ಎರಡೇ ತಿಂಗಳಲ್ಲಿ 6 ಅಭ್ಯರ್ಥಿಗಳು ಆತ್ಮಹತ್ಯೆ

ಕೇವಲ 2020ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳೆರಡರಲ್ಲೇ MPSC ಪರೀಕ್ಷೆಗೆ ಸಂಬಂಧಿಸಿದಂತೆ ಆರು ಆತ್ಮಹತ್ಯೆಗಳು ನಡೆದದ್ದು ಬೆಳಕಿಗೆ ಬಂದಿವೆ
ಮಹಾರಾಷ್ಟ್ರ; MPSC ಪರೀಕ್ಷೆ ವಿಳಂಬದಿಂದ ಎರಡೇ ತಿಂಗಳಲ್ಲಿ 6 ಅಭ್ಯರ್ಥಿಗಳು ಆತ್ಮಹತ್ಯೆ

ನವೆಂಬರ್ 28 2020 ಮಹಾರಾಷ್ಟ್ರದ ರತ್ನಗಿರಿಯ ಲಾಂಜಾ ಪೊಲೀಸ್ ಠಾಣೆಗೆ 26 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕರೆ ಬಂತು. ಪರಿಶೀಲಿಸಿದಾಗ 'ರಾಜ್ಯ ಸರ್ಕಾರ ಮಹಾರಾಷ್ಟ್ರ ಪಬ್ಲಿಕ್ ಸರ್ವಿಸ್ ಕಮಿಷನ್ (MPSC) ಪರೀಕ್ಷಾ ದಿನಾಂಕಗಳನ್ನು ಘೋಷಿಸುವುದನ್ನು ಕಾದು ಸಾಕಾಯ್ತು' ಎಂದು ಆತ್ಮಹತ್ಯೆ ಮಾಡಿಕೊಂಡ ಮಹೇಶ್ ಝೋರ್ ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದರು.

ಮುಂಬೈ ನಿವಾಸಿ ಝೋರ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲೆಂದೇ ಮುಂಬೈಯಿಂದ ರತ್ನಗಿರಿಗೆ ತನ್ನ ವಾಸ ಬದಲಿಸಿದ್ದರು. 2500 ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ಹುದ್ದೆಗಳಿಗಾಗಿ ಸರ್ಕಾರ ಪ್ರತಿ ವರ್ಷ ಪರೀಕ್ಷೆ ನಡೆಸುತ್ತದೆ. 2019ರಲ್ಲಿ ಝೋರ್ ಕೇವಲ ಎರಡು ಅಂಕಗಳಿಂದ ಸರ್ಕಾರಿ ಹುದ್ದೆ ತಪ್ಪಿಸಿಕೊಂಡಿದ್ದರು. ಆದರೆ ಈ ವರ್ಷದ ನೇಮಕಾತಿಯ ಬಗ್ಗೆ ಪೂರ್ತಿ ಭರವಸೆ ಇಟ್ಟುಕೊಂಡಿದ್ದ ಅವರು ಪರೀಕ್ಷಾ ದಿನಗಳ ಘೋಷಣೆಯನ್ನೇ ಕಾಯುತ್ತಿದ್ದರು. ಆದರೆ ಸರ್ಕಾರ ಐದು ಬಾರಿ ಪರೀಕ್ಷೆ ರದ್ದು ಪಡಿಸಿತು. ಇದರಿಂದ ಹತಾಶರಾದ ಝೋರ್ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸ್ ಅಧಿಕಾರಿಗಳು ತನಿಖೆಯಲ್ಲಿ ಕಂಡುಕೊಂಡಿದ್ದಾರೆ ಎಂದು 'ದಿ ವೈರ್' ವರದಿ ಮಾಡಿದೆ.‌

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೊಂದು ಘಟನೆ ಮಾತ್ರ ಅಲ್ಲ. ಕೇವಲ 2020ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳೆರಡರಲ್ಲೇ MPSC ಪರೀಕ್ಷೆಗೆ ಸಂಬಂಧಿಸಿದಂತೆ ಆರು ಆತ್ಮಹತ್ಯೆಗಳು ನಡೆದದ್ದು ಬೆಳಕಿಗೆ ಬಂದಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅನೇಕ ವರ್ಷಗಳಿಂದ ತಯಾರಾಗುವ ಅಭ್ಯರ್ಥಿಗಳಿಗೆ ಹೀಗೆ ಏಕಾಏಕಿ ಪರೀಕ್ಷೆ ರದ್ದಾದಾಗ ಮಾನಸಿಕ ಒತ್ತಡವನ್ನು ನಿರ್ವಹಿಸಲಾಗದೆ ಆತ್ಮಹತ್ಯೆಯ ಮೊರೆ ಹೋಗುತ್ತಾರೆ ಎನ್ನುತ್ತಾರೆ ಪೊಲೀಸರು.

2020ರಲ್ಲಿ‌ ಪ್ರತಿಬಾರಿ ಪರೀಕ್ಷೆ ಮುಂದೂಡಿದಾಗಲೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನಿಯಮಿತವಾಗಿ ಹರಡುತ್ತಿರುವ ಕೋವಿಡ್‌ನ ಕಾರಣ ನೀಡಿದ್ದರು. ಆದರೆ ವಾಸ್ತವವಾಗಿ ಅವರು ಹಿಂಜರಿಯುತ್ತಿದ್ದುದು 'ಮರಾಠಾ' ಜಾತಿಗೆ ಮೀಸಲಾತಿ ನೀಡಬೇಕೋ ಬೇಡವೋ ಎನ್ನುವ ನಿರ್ಧಾರ ಇನ್ನೂ ಬಾಕಿ ಉಳಿದಿರುವುದಕ್ಕೆ. ಮರಾಠಾ ನಾಯಕರು ಅದರಲ್ಲೂ ಬಿಜೆಪಿಯ ಮರಾಠಾ ನಾಯಕರು ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಹಿಂದಿನ ಬಿಜೆಪಿ-ಶಿವಸೇನೆ ಸರ್ಕಾರ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ತೀರ್ಮಾನವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಸರ್ಕಾರ ಮರಾಠಾ ಸಮುದಾಯಕ್ಕೆ ಮತ್ತೊಂದು ಬಾಗಿಲು ತೆರೆದಿದ್ದು 'ಆರ್ಥಿಕವಾಗಿ ದುರ್ಬಲ ವಿಭಾಗ'ದ ಅಡಿಯಲ್ಲಿ ಪರೀಕ್ಷೆ ಬರೆಯುವಂತೆ ಹೇಳಿದೆ. "ಸುಪ್ರೀಂ ಕೋರ್ಟ್ ಒಙದು ನಿರ್ಧಾರಕ್ಕೆ ಬರುವ ಮುನ್ನವೇ MPSC ಅದರದೇ ಆದ ತೀರ್ಪು ನೀಡಿದ ಹಾಗೆ ಇದು" ಎನ್ನುತ್ತಾರೆ ಮರಾಠಾ ವಿದ್ಯಾರ್ಥಿ ಪರಿಷತ್‌ನ ವಿಶ್ವಾಂಬರ್ ಭೋಪಲೆ.

ಪ್ರತಿವರ್ಷ 2500 ಹುದ್ದೆಗಳಿಗೆ ಸುಮಾರು ಹನ್ನೆರಡು ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. MPSC ಗ್ರೂಪ್ A ಗ್ರೂಪ್ B ಮತ್ತು ಗ್ರೂಪ್C ಗಳಿಗೆ ಮಾತ್ರ ಪರೀಕ್ಷೆ ನಡೆಸುತ್ತದೆ. ಬಹುಪಾಲು ಅಭ್ಯರ್ಥಿಗಳು ವರ್ಷಗಟ್ಟಲೆ ಈ‌ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಾರೆ. ಅದರಲ್ಲಿ ಗ್ರೂಪ್ B ಮತ್ತು C ಹುದ್ದೆಗಳು ಬಡತನವನ್ನು ಹೋಗಲಾಡಿಸಲಿರುವ ಹುದ್ದೆಗಳು ಎಂದೇ ಪರಿಗಣಿಸಲ್ಪಡುತ್ತದೆ. ವಿದರ್ಭIAS ಅಕಾಡೆಮಿಯ ಸಾಗರ್ ಭಂಸೆ " ಈ ಪರೀಕ್ಷೆಗಳು ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲಿರುವ ಏಕೈಕ ಅವಕಾಶ" ಎನ್ನುತ್ತಾರೆ ಎಂದು 'ದಿ ವೈರ್' ವರದಿ ಮಾಡುತ್ತದೆ.

ಪರೀಕ್ಷೆ ಅನಿಯಮಿತವಾಗಿ ಮುಂದೂಡಲ್ಪಡುವುದು ಮಹಿಳೆಯರ ಪರಿಸ್ಥಿತಿಯನ್ನು ಮತ್ತೊಂದು ರೀತಿಯಲ್ಲಿ ಪ್ರಭಾವಿಸುತ್ತಿದೆ. ಬೇಗ ಮದುವೆಯಾಗುವಂತೆ ಅವರ ಮೇಲಿರುವ ಸಾಮಾಜಿಕ ಒತ್ತಡವು MPSC ಕನಸನ್ನು ತ್ಯಾಗ ಮಾಡುವಂತೆ ಮಾಡುತ್ತದೆ. ಪುಣೆಯ 27 ವರ್ಷದ ಶಮಾ ಶೇಖ್ "ಕೆಲವೇ ಪ್ರಯತ್ನಗಳ ನಂತರ ಮಹಿಳೆಯರು ಮೇಲೆ ಮದುವೆಯಾಗುವಂತೆ ಒತ್ತಡ ಹೇರಲಾಗುತ್ತದೆ. ಇದು ಅವರ ಕನಸುಗಳನ್ನೇ ಕೊನೆಯಾಗಿಸುತ್ತದೆ" ಎನ್ನುತ್ತಾರೆ. ಕಳೆದ ಆರು ವರ್ಷಗಳಿಂದ ಪರೀಕ್ಷೆಗೆ ತಯಾರಾಗುತ್ತಿರುವ ಅವರು ಒಂದು ವರ್ಷ ತಡವಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂಬುವುದು ಮಹಿಳೆಯರ ಮೇಲೆ ಬಹುದೊಡ್ಡ ಪ್ರಭಾವ ಬೀರಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com