ಅರಣ್ಯ ರಕ್ಷಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಸುಪ್ರೀಂ ಕೋರ್ಟ್ ಸೂಚನೆ

ವಿಶ್ವದಲ್ಲಿ ಭಾರತದಲ್ಲೆ ಅತ್ಯಂತ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ಹತ್ಯೆಗೀಡಾಗುತಿದ್ದಾರೆ ಎಂದು ಕೇಳಿದ ಸುಪ್ರೀಂ ಕೋರ್ಟು ಶುಕ್ರವಾರ ಕೇಂದ್ರ ಸರ್ಕಾರವು ಅರಣ್ಯ ಅಧಿಕಾರಿಗಳಿಗೆ ಗುಂಡು ನಿರೋಧಕ ಜಾಕೆಟ್ ಮತ್ತು ಸೂಕ್ತ ಶಸ್ತ್ರಾಸ್ತ್ರ ಗಳನ್ನು ಒದಗಿಸುವಂತೆ ಸೂಚಿಸಿದೆ.
ಅರಣ್ಯ ರಕ್ಷಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಸುಪ್ರೀಂ ಕೋರ್ಟ್ ಸೂಚನೆ

ಇಂದು ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನೀಡಿರುವುದೆಲ್ಲವನ್ನೂ ಮಲಿನಗೊಳಿಸಿದ್ದಾನೆ ಇಲ್ಲವೇ ನಾಶ ಮಾಡಿದ್ದಾನೆ. ಈಗ ಉಳಿದಿರುವುದು ನಮ್ಮ ಅರಣ್ಯ ಸಂಪತ್ತು ಮತ್ತು ಅಮೂಲ್ಯವಾದ ವನ್ಯ ಜೀವಿಗಳು. ಮಾನವ ಅದನ್ನೂ ತನ್ನ ಬಾಯಿ ಚಪಲಕ್ಕಾಗಿ ಅಥವಾ ಮೂಢನಂಬಿಕೆಗಾಗಿ ಕೊಲ್ಲುತಿದ್ದಾನೆ. ಇಂದು ಜಾಗತಿಕವಾಗಿ ನೂರಾರು ದೇಶಗಳು ವನ್ಯ ಜೀವಿಗಳ ದೇಹದ ಅವಯವ , ಮಾಂಸ ಮಾರಾಟವನ್ನು ನಿಷೇಧಿಸಿವೆ, ಆದರೂ ಕೂಡ ಕಳ್ಳ ಬೇಟೆಗಾರರ ಮಾಫಿಯಾ ಪ್ರಬಲವಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನೇ ಯಾಮಾರಿಸಿ ಬೇಟೆಯಲ್ಲಿ , ಕಳ್ಳ ಸಾಗಾಟದಲ್ಲಿ ತೊಡಗಿದ್ದಾರೆ, ಒಮ್ಮೆ ದೇಶದ ಗಡಿ ದಾಟಿದರೆ ಈ ವನ್ಯ ಜೀವಿ ಚರ್ಮ , ಹುಲಿ ಉಗುರು, ಆನೆ ದಂತ ಇತ್ಯಾದಿಗಳಿಗೆ ಕೋಡಿಗಟ್ಟಲೆ ಡಾಲರ್ ಬೆಲೆ ಇದೆ. ಇದೇ ಕಳ್ಳ ಬೇಟೆ ಹೆಚ್ಚಲು ಕಾರಣವಾಗಿದೆ. ಆದರೆ ಈ ಬೇಟೆಗಾರರ ವಿರುದ್ದ ಹೋರಾಡಬೇಕಾದ ಅರಣ್ಯ ಇಲಾಖೆ ಮಾತ್ರ ಇನ್ನೂ ಓಬೀರಾಯನ ಕಾಲದ ಆಐಉಧಗಳು ಮತ್ತು ಸ್ವರಕ್ಷಣಾ ಉಪಕರಣಗಳನ್ನು ಹೊಂದಿದೆ. ಶುಕ್ರವಾರ ಅರಣ್ಯ ಅಪರಾಧದ ಕುರಿತು ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಅರಣ್ಯ ಇಲಾಖೆಯನ್ನು ಸುಸಜ್ಜಿತಗೊಳಿಸಲು ಕೇಂದ್ರ ಸರ್ಕಾರವನ್ನೇ ಒತ್ತಾಯಿಸಿದೆ. ಬಹಳ ದೀರ್ಘ ಕಾಲ ನಡೆದ ಈ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಏ ಬೊಬ್ಡೆ ಅವರು ಅರಣ್ಯ ಅಧಿಕಾರಿಗಳ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.


ವಿಶ್ವದಲ್ಲಿ ಭಾರತದಲ್ಲೆ ಅತ್ಯಂತ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ಹತ್ಯೆಗೀಡಾಗುತಿದ್ದಾರೆ ಎಂದು ಕೇಳಿದ ಸುಪ್ರೀಂ ಕೋರ್ಟು ಶುಕ್ರವಾರ ಕೇಂದ್ರ ಸರ್ಕಾರವು ಅರಣ್ಯ ಅಧಿಕಾರಿಗಳಿಗೆ ಗುಂಡು ನಿರೋಧಕ ಜಾಕೆಟ್ ಮತ್ತು ಸೂಕ್ತ ಶಸ್ತ್ರಾಸ್ತ್ರ ಗಳನ್ನು ಒದಗಿಸುವಂತೆ ಸೂಚಿಸಿದೆ. ಶುಕ್ರವಾರ ವಿಚಾರಣೆಯೊಂದರ ಸಂಬಂದ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಎ. ಬೊಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು , ವಿಶ್ವದ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಭಾರತದ ಅರಣ್ಯ ಸಿಬ್ಬಂದಿಗಳ ಸಾವು ನೋವಿನ ಪಾಲು ಶೇಕಡಾ 30% ಇದೆ ಎಂದು ತಿಳಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಆಗ ನ್ಯಾಯಮೂರ್ತಿ ಬೊಬ್ಡೆ ಅವರು ಅರಣ್ಯ ಅಧಿಕಾರಿಗಳು ಅತ್ಯಂತ ಶಕ್ತಿಯುತ ಶಕ್ತಿಯ ವಿರುದ್ಧ ಕರ್ತವ್ಯ ನಿರ್ವಹಿಸುತಿದ್ದಾರೆ ಎಂದರಲ್ಲದೆ ಅರಣ್ಯ ಅಪರಾಧಗಳ ಮೌಲ್ಯ ಮಿಲಿಯನ್ ಗಟ್ಟಲೆ ಡಾಲರ್ ಗಳಲ್ಲಿದೆ. ಇದು ಅಂತರರಾಷ್ಟ್ರೀಯ ಅಪರಾಧ ಆಗಿದೆ. ಪ್ಯಾಂಗೊಲಿನ್ ಚರ್ಮದ ವ್ಯಾಪಾರವು ಚೀನಾಕ್ಕೆ ವಿಸ್ತರಿಸಿದೆ ಎಂದು ಇತ್ತೀಚೆಗೆ ನನಗೆ ತಿಳಿಸಲಾಯಿತು ಏಕೆಂದರೆ ಪಾಂಗೋಲಿನ್ ಚರ್ಮವು ಕೆಲವು ವಿಷಯಗಳಿಗೆ ಒಳ್ಳೆಯದು ಎಂದು ಜನರು ನಂಬುತ್ತಾರೆ, ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರಲ್ಲದೆ ಅರಣ್ಯ ಸಿಬ್ಬಂದಿಗೆ ಸಹಾಯ ಮಾಡಲು ಸಿಬಿಐನಂತಹ ಪ್ರಮುಖ ಸಂಸ್ಥೆಗಳನ್ನು ಬಳಸಿಕೊಳ್ಳಲು ಕೇಂದ್ರವು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

"ಕಳ್ಳ ಬೇಟೆಗಾರರ ಅಪರಾಧಗಳು ಮತ್ತು ಅವರ ಅಪರಾಧಗಳ ಆದಾಯವನ್ನು ಪತ್ತೆಹಚ್ಚಲು ಮತ್ತು ತನಿಖೆ ಮಾಡಲು ಪ್ರಾಮಾಣಿಕ ಅಧಿಕಾರಿಗಳೊಂದಿಗೆ ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ಅಥವಾ ವನ್ಯಜೀವಿ ವಿಭಾಗ ಇರಬೇಕು. ಅರಣ್ಯ ಅಪರಾಧಗಳಲ್ಲಿ ಒಳಗೊಂಡಿರುವ ಮೊತ್ತವು ದೊಡ್ಡದಾಗಿರುವುದರಿಂದ ಪ್ರತ್ಯೇಕ ವಿಭಾಗವು ಅವಶ್ಯಕ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಕೇಂದ್ರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಹೇಳಿದರು. ಅಲ್ಲದೆ ಬೊಬ್ಡೆ ಅವರು ಅಸ್ಸಾಂನ ಅರಣ್ಯ ರೇಂಜರ್ಗಳು ಶಸ್ತ್ರಸಜ್ಜಿತರಾಗಿದ್ದು ಯಾರೂ ಅವರ ಹತ್ತಿರ ಬರುವ ಧೈರ್ಯ ಮಾಡುವುದಿಲ್ಲ ಎಂದೂ ಹೇಳೀದರು. ಆದರೆ ಮಧ್ಯಪ್ರದೇಶದಂತಹ ರಾಜ್ಯದಲ್ಲಿ ಅವರು ಲಾಠಿಗಳನ್ನು ಹೊಂದಿರುತ್ತಾರೆ.
ಕರ್ನಾಟಕದಲ್ಲಿ, ಅರಣ್ಯ ವಾಚರ್ ಗಳು ಚಪ್ಪಲ್ಲಿ ಧರಿಸಿದ್ದು ಕೇವಲ ಲಾಠಿಗಳನ್ನು ಹೊಂದಿದ್ದಾರೆ ಎಂದೂ ಬೊಬ್ಡೆ ಹೇಳಿದರು. ಅವರು ವಕೀಲ ರಾಹುಲ್ ಚಿಟ್ನಿಸ್ ಅವರನ್ನು ಮಹಾರಾಷ್ಟ್ರದ ಅರಣ್ಯ ಅಧಿಕಾರಿಗಳು ಏಕೆ ಶಸ್ತ್ರಸಜ್ಜಿತರಾಗಿಲ್ಲ ಎಂದು ಕೇಳಿದರು. ರಾಜ್ಯದಿಂದ ರಾಜ್ಯಕ್ಕೆ ಅರಣ್ಯ ಅಧಿಕಾರಿಗಳಲ್ಲಿ ಈ ಅಸಮಾನ ಪರಿಸ್ಥಿತಿ ಏಕೆ ಇದೆ?


ನಗರಗಳಲ್ಲಿನ ಪೊಲೀಸ್ ಅಧಿಕಾರಿಗಳಿಗಿಂತ ಅರಣ್ಯ ಅಧಿಕಾರಿಗಳಿಗೆ ದೊಡ್ಡ ಜವಾಬ್ದಾರಿಗಳಿವೆ. ಅವರು ಜನವಸತಿಯಿಲ್ಲದ ಕಾಡುಗಳ ದೊಡ್ಡ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ. ಅರಣ್ಯ ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದಲ್ಲಿ ಏಕಾಂಗಿಯಾಗಿರುತ್ತಾರೆ, ನಗರದ ಪೊಲೀಸ್ ಅಧಿಕಾರಿಯು ನೆರವಿಗಾಗಿ ಕೂಡಲೇ ಕರೆ ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. ಅಮಿಕಸ್ ಕ್ಯೂರಿ ಎ.ಡಿ.ಎನ್. ರಾವ್ ಅವರು ಅರಣ್ಯ ಪಡೆಗಳನ್ನು ಶಸ್ತ್ರಸಜ್ಜಿತಗೊಳಿಸಲು ರಾಜ್ಯಗಳು ಹಣವನ್ನು ಬಳಸಿಕೊಂಡಿಲ್ಲ ಎಂದು ಹೇಳಿದರು. ಕಳ್ಳ ಬೇಟೆಗಾರರ ಹಿಂದೆ ಕಾರ್ಯನಿರ್ವಹಿಸುತ್ತಿರುವ ಬಲಶಾಲಿ ಜನರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾಗ ಧೈರ್ಯದಿಂದ ಕ್ರಮ ಕೈಗೊಳ್ಳುವ ಅರಣ್ಯ ಅಧಿಕಾರಿಗಳಿಗೆ ಎದುರೇಟು ನೀಡುತಿದ್ದಾರೆ ಎಂದು ಶ್ಯಾಮ್ ದಿವಾನ್ ಹೇಳಿದರು.

ನಿರ್ದಿಷ್ಟ ಶ್ರೇಣಿಯ ಮೇಲಿರುವ ಅರಣ್ಯ ಅಧಿಕಾರಿಗಳಿಗೆ ಸ್ವರಕ್ಷಣೆಗಾಗಿ ಬುಲೆಟ್ ಪ್ರೂಫ್ ಜಾಕೆಟ್ , ಹೆಲ್ಮೆಟ್ , ಶಸ್ತ್ರಾಸ್ತ್ರ ಮತ್ತು ವಾಹನಗಳನ್ನು ಒದಗಿಸಬೇಕಿದೆ ಏಕೆಂದರೆ ಪರಿಸ್ಥಿತಿ ಗಂಭೀರವಾಗಿದೆ. ಅರಣ್ಯ ಪಡೆ ಸಿಬ್ಬಂದಿಗಳು ಅಸಹಾಯಕರಾಗಿದ್ದಾರೆ ಮತ್ತು ಅಪಾಯದಲ್ಲಿದ್ದಾರೆ, ಆದರೆ ಕಳ್ಳ ಬೇಟೆಗಾರರು ದುಷ್ಕೃತ್ಯಗಳನ್ನು ಮಾಡಿ ಲಾಭವನ್ನು ಪಡೆದುಕೊಳ್ಳುತ್ತಾರೆ. ಭಾರಿ ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರ ವಿರುದ್ಧ ನಿರಾಯುಧರಾಗಿರುವ ಅರಣ್ಯ ಸಿಬ್ಬಂದಿಯು ಯಾವುದೇ ಕಾನೂನನ್ನು ಹೇಗೆ ಜಾರಿಗೊಳಿಸಬಹುದು ಎಂದು ಊಹಿಸಿಕೊಳ್ಳುವುದು ಕಷ್ಟ ಎಂದೂ ಬೊಬ್ಡೆ ಹೇಳಿದರು. ನ್ಯಾಯಾಲಯವು ಸಾಲಿಸಿಟರ್ ಜನರಲ್, ರಾವ್ ಮತ್ತು ಶ್ಯಾಮ್ ದಿವಾನ್ ಅವರನ್ನು ಅರಣ್ಯ ಸಿಬ್ಬಂದಿಯು ಭಯವಿಲ್ಲದೆ ತಮ್ಮ ಕರ್ತವ್ಯವನ್ನು ಹೇಗೆ ಮಾಡಬಹುದು ಎಂಬ ಕ್ರಮಗಳ ಬಗ್ಗೆ ಜಂಟಿ ವರದಿ ಸಲ್ಲಿಸುವಂತೆ ಸೂಚಿಸಿ ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com