ಟಿಕ್ರಿ- ಸಿಂಘು ಗಡಿಗಳು: ರೈತ ಹೋರಾಟದ ಕುದಿ ಬಿಂದುಗಳು

40 ದಿನಗಳಿಂದ ಈ ಎರಡು ಗಡಿಗಳಲ್ಲಿ ಸೇರಿರುವ ರೈತರ ಸಂಖ್ಯೆ ಲಕ್ಷಕ್ಕೂ ಹೆಚ್ಚು. ಮುಖ್ಯವಾಗಿ ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಗಳಲ್ಲಿ ಲಕ್ಷಾಂತರ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತ ಹೋರಾಟ ಬೆಂಬಲಿಸಿ ವಿವಿಧ ವೃತ್ತಿ ಹಿನ್ನೆಲೆಯ ಜನರು ನೆಲೆಸಿದ್ದಾರೆ.
ಟಿಕ್ರಿ- ಸಿಂಘು ಗಡಿಗಳು: ರೈತ ಹೋರಾಟದ ಕುದಿ ಬಿಂದುಗಳು

ದೇಶದ ರಾಜಧಾನಿ ದೆಹಲಿಯನ್ನು ಈಗ ರೈತರು ಸುತ್ತುವರೆದಿದ್ದಾರೆ. ಕೇಂದ್ರ ಸರ್ಕಾರದ ಮೂರು ಮಸೂದೆಗಳನ್ನು ಖಂಡಿಸಿ ಪಂಜಾಬಿನಲ್ಲಿ ಆರಂಭಗೊಂಡ ಪ್ರತಿಭಟನೆ, ಹೋರಾಟಗಳಿಗೆ ಯಾವುದೇ ರೀತಿ ಸರ್ಕಾರ ಸ್ಪಂದಿಸದೇ ಇದ್ದಾಗ ದೆಹಲಿಗೆ ಹೊರಡಲು ನಿರ್ಧರಿಸಿದರು. ಸಾಗರೋಪಾದಿಯಲ್ಲಿ ಬಂದ ರೈತರನ್ನು ಎದುರಿಸಲಾಗದ ಸರ್ಕಾರ ಎರಡು ಗಡಿ ಕೇಂದ್ರಗಳಲ್ಲಿ ತಡೆದು ನಿಲ್ಲಿಸಿದೆ. 40 ದಿನಗಳಿಂದ ಈ ಎರಡು ಗಡಿಗಳಲ್ಲಿ ಸೇರಿರುವ ರೈತರ ಸಂಖ್ಯೆ ಲಕ್ಷಕ್ಕೂ ಹೆಚ್ಚು. ಮುಖ್ಯವಾಗಿ ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಗಳಲ್ಲಿ ಲಕ್ಷಾಂತರ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತ ಹೋರಾಟ ಬೆಂಬಲಿಸಿ ವಿವಿಧ ವೃತ್ತಿ ಹಿನ್ನೆಲೆಯ ಜನರು ನೆಲೆಸಿದ್ದಾರೆ.ಸಿಂಘು ಗಡಿ: ದೆಹಲಿಯ ಉತ್ತರ ಭಾಗದಲ್ಲಿರುವ ಕಡೆಯ ಹಳ್ಳಿಯ ಸಿಂಘು. ಈ ಗಡಿಯನ್ನು ದಾಟಿದರೆ ಹರ್ಯಾಣ ಪ್ರವೇಶಿಸಿದಂತೆ. ಸುಮಾರು 250 ಹಳ್ಳಿಗಳಿರುವ ಈ ಹಳ್ಳಿಯು ದೆಹಲಿಯ ಕುಂಡ್ಲಿ, ನರೇಲಾ ಕೈಗಾರಿಕಾ ಪ್ರದೇಶಗಳಿಗೆ ಹತ್ತಿರವಾಗಿದೆ. ತೇಗ್‌ಬಹದ್ದೂರ್‌ ಸ್ಮಾರಕ, ರಾಜೀವ್‌ ಗಾಂಧಿ ಕ್ರೀಡಾ ಸಂಕೀರ್ಣಗಳು ಹತ್ತಿರದಲ್ಲೇ ಇರುವುದರಿಂದ ಈ ಗ್ರಾಮದ ಭೂಮಿಗೆ ಹೆಚ್ಚು ಬೆಲೆಯು ಸಿಕ್ಕಿದೆ. ಹಾಗಾಗಿ ಈ ಹಳ್ಳಿಯ ಆರ್ಥಿಕತೆ ಕೊಂಚ ಉತ್ತಮವಾಗಿದೆ. ಆದರೆ ಅರ್ಧಕ್ಕೂ ಹೆಚ್ಚು ನಿವಾಸಿಗಳು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಸಣ್ಣ ಹಿಡುವಳಿದಾರರೇ ಹೆಚ್ಚಿರುವ ಈ ಗ್ರಾಮದಲ್ಲಿ ಗೋಧಿ, ಹಕ್ಕಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತಮ್ಮ ಬೆಳೆಯನ್ನು ನರೇಲಾದ ಎಪಿಎಂಸಿಯಲ್ಲಿ ಮಾರುತ್ತಿದ್ದ ಇವರು ಹೊಸ ಮಸೂದೆಗಳಿಂದ ಕನಿಷ್ಠ ಬೆಂಬಲ ಬೆಲೆ, ಎಪಿಎಂಸಿ ಎಲ್ಲವೂ ಸ್ಥಗಿತಗೊಳ್ಳುತ್ತವೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ವರ್ಷ ನವೆಂಬರ್‌ 28ರಿಂದ ರೈತ ಪ್ರತಿಭಟನೆ ನಡೆಯುತ್ತಿದೆ. 42 ದಿನಗಳಿಂದ ರೈತರು ಇಲ್ಲಿ ನೆರೆಯುತ್ತಿದ್ದು, ಪ್ರತಿ ದಿನ ಹೋರಾಟ ತೀವ್ರವಾಗುತ್ತಲೇ ಇದೆ. ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಆದರೆ ಇದು ಹೋರಾಟಗಾರರ ಉತ್ಸಾಹವನ್ನು ಕಡಿಮೆ ಮಾಡಿಲ್ಲ. ಪಂಜಾಬ್‌, ಹರ್ಯಾಣ, ರಾಜಸ್ತಾನಗಳಿಂದ ವಿವಿಧ ಸಂಘಟನೆಗಳು ಇಲ್ಲಿ ರೈತರು, ರೈತರ ಪರ ಹೋರಾಡುತ್ತಿರುವ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿವೆ.541 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ಹೋರಾಟಕ್ಕೆ ನೇತೃತ್ವ ನೀಡುತ್ತಿವೆ.

ಭಾರತೀಯ ಕಿಸಾನ್‌ ಯೂನಿಯನಿನ ವಿವಿಧ ಬಣಗಳು, ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ, ರಾಷ್ಟ್ರೀಯ ಕಿಸಾನ್‌ ಮೋರ್ಚಾ, ಪೆಂಡು ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ, ರಾಜಸ್ಥಾನ, ಖೇತಿ ಬವಾಚೊ ಸಂಘರ್ಷ ಸಮಿತಿ ಹರ್ಯಾಣ, ಫಾರ್ಮರ್‌ ಸ್ಟ್ರಗಲ್‌ ಕಮಿಟಿ, ಕಿಸಾನ್‌ ಸಂಘರ್ಷ ಸಮಿತಿ ಮುಂತಾದವು ಇದರ ಭಾಗವಾಗಿವೆ. ಪಂಜಾಬ್ ಮತ್ತು ಹರಿಯಾಣದ ರೈತರು ಬೃಹತ್ ಸಂಖ್ಯೆಯಲ್ಲಿದ್ದು ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಇನ್ನು ಕೆಲವು ರಾಜ್ಯಗಳಿಂದ ನೂರಕ್ಕೂ ರೈತ-ರೈತ ಪರ ಸಂಘಟನೆಗಳು ಸಿಂಘುಗಡಿಯಲ್ಲಿ ಕೂಗೂಡಿಸಿವೆ.

ಸಿಂಘುವಿನಿಂದ ದೆಹಲಿಗೆ ಸಂಪರ್ಕ ಬೆಸೆಯುವ ಮೆಟ್ರೋ ಮಾರ್ಗದ ಉದ್ದಕ್ಕೂ ರೈತರ ಟ್ರ್ಯಾಕ್ಟರ್‌, ಲಾರಿ, ಟ್ರೇಲರ್‌ಗಳು ಸಾಲುಗಟ್ಟಿವೆ. ಇಂಗ್ಲೆಂಡಿನ ಖಾಲ್ಸಾಏಡ್‌ ಎಂಬ ಸರ್ಕಾರೇತರ ಸಂಸ್ಥೆ ಎಲ್ಲ ರೀತಿಯ ನೆರವುಗಳನ್ನು ಒದಗಿಸಿದೆ. ವಿಶೇಷವಾಗಿ ಮಾಲ್‌ವೊಂದನ್ನು ಸ್ಥಾಪಿಸಿದ್ದು ಇಲ್ಲಿ ಹೋರಾಟ ನಿರತರಿಗೆ ಅಗತ್ಯವಾದ ಎಲ್ಲ ದಿನಸಿ, ತಿನಿಸು ಪದಾರ್ಥಗಳು ಲಭ್ಯವಿದೆ. ಇವೆಲ್ಲವೂ ಉಚಿತವಾಗಿ ಪೂರೈಸುತ್ತಿದೆ.
ಸಿಂಘು ಗಡಿಯ ಪ್ರತಿಭಟನಾ ಪ್ರದೇಶದಲ್ಲಿ ವಿವಿಧ ಸಣ್ಣ ವೇದಿಕೆಗಳಲ್ಲಿ ಕ್ರಾಂತಿಗೀತೆಗಳು, ಘೋಷಣೆಗಳು, ಭಾಷಣಗಳು ನಿರಂತರವಾಗಿ ನಡೆಯುತ್ತಿವೆ. ಮೂರು ದಿನಗಳ ಹಿಂದೆ ಮಹಿಳಾ ಕಬಡ್ಡಿ ಆಟಗಾರರು, ಕಬಡ್ಡಿ ಪಂದ್ಯವನ್ನು ಆಯೋಜಿಸಿ, ಹೋರಾಟಗಾರರಲ್ಲಿ ಹುರುಪು ತುಂಬಲು ಯತ್ನಿಸಿದರು.ಟಿಕ್ರಿ ಗಡಿ: ದೆಹಲಿಯ ಪಶ್ಚಿಮ ಭಾಗದಲ್ಲಿರುವ ಟಿಕ್ರಿ ಗಡಿ, ದೆಹಲಿ ಮತ್ತು ಹರ್ಯಾಣ ರಾಜ್ಯಗಳನ್ನು ಬೆಸೆಯುತ್ತದೆ. ಇದೀಗ ರೈತ ಹೋರಾಟದ ಬಹುಮುಖ್ಯ ಕೇಂದ್ರವೂ ಆಗಿದೆ. ರಾಜಧಾನಿಯ ಕೇಂದ್ರಭಾಗದಿಂದ ಸುಮಾರು ಒಂದು ತಾಸು ಪ್ರಯಾಣದಷ್ಟು ದೂರವಿರುವ ಟಿಕ್ರಿಯಲ್ಲಿ ಸುಮಾರು 100ಕ್ಕೂ ರೈತ ಸಂಘಟನೆಗಳು ಲಕ್ಷಾಂತರ ರೈತರನ್ನು ಸಂಘಟಿಸಿವೆ. ಟಿಕ್ರಿಯ ಉದ್ದಕ್ಕೂ ಮೆಟ್ರೋ ಮಾರ್ಗವಿದ್ದು, ಅದರ ಬೃಹತ್‌ ಕಂಬಗಳಡಿಯಲ್ಲಿ ರೈತರು ಬಿಡಾರ ಹೂಡಿದ್ದಾರೆ.

ಸುಮಾರು 15 ಕಿಮೀ ಉದ್ದಕ್ಕೂ ವಾಹನಗಳು ಸಾಲುಗಟ್ಟಿದ್ದು, ಕೆಲವು ವಾಹನಗಳು ರೈತ ಹೋರಾಟಗಾರರಿಗೆ ಅಗತ್ಯವಾದ ಎಲ್ಲ ರೀತಿಯ ಸಾಮಾಗ್ರಿಗಳನ್ನು ಹೊತ್ತು ನಿಂತಿವೆ. ಇನ್ನು ಕೆಲವು ಆಶ್ರಯತಾಣಗಳಾಗಿವೆ. ಇನ್ನೂ ಅನೇಕರು ಮೆಟ್ರೋ ಮಾರ್ಗಕ್ಕೆಂದು ನಿರ್ಮಿಸಲಾಗಿರುವ ಕಂಬಗಳ ಅಡಿ ಆಶ್ರಯ ಪಡೆದುಕೊಂಡಿದ್ದಾರೆ.

ಟ್ಯಾಕ್ಟರು, ಲಗೇಜ್ ಆಟೋ, ಕಾರು, ಮಿನಿ ಬಸ್ ಮುಂತಾದ ವಾಹನಗಳ ನಡುವೆಯೇ ರಸ್ತೆಯ ಮಧ್ಯಭಾಗದಲ್ಲಿ ಜನ ಓಡಾಟಕ್ಕೆ ದಾರಿ ಮಾಡಿಕೊಂಡು, ಅದರ ಆಸುಪಾಸಿನಲ್ಲಿ ಉದ್ದಕ್ಕೂ ಡೇರೆಗಳನ್ನು ಹಾಕಲಾಗಿದೆ. ಆ ಡೇರೆಗಳಲ್ಲಿ ದೆಹಲಿ ಚಳಿಯಿಂದ ಜೀವ ಹಿಡಿದುಕೊಳ್ಳಲು ಬೇಕಾದ ಉಣ್ಣೆಯ ಶಾಲು, ಟೊಪ್ಪಿ, ಹೊದಿಕೆ, ಹಾಸಿಗೆ, ನಿತ್ಯ ಬಳಕೆಯ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ 500 ಮೀಟರಿಗೊಂದು ಪ್ರತ್ಯೇಕ ಅಡುಗೆ ಮತ್ತು ಊಟದ ಲಂಗರುಗಳನ್ನು ನಿರ್ಮಿಸಲಾಗಿದೆ. ಸ್ನಾನ ಮತ್ತು ಶೌಚಕ್ಕೆ ಮೊಬೈಲ್ ಬಾತ್ ರೂಂ- ಟಾಯ್ಲೆಟ್ ವ್ಯವಸ್ಥೆಗಳಿವೆ.

ಟಿಕ್ರಿ ಗಡಿಯಲ್ಲಿ ಒಂದು ಮುಖ್ಯ ವೇದಿಕೆ ಮೂಲಕ ಪ್ರತಿಭಟನಾ ಭಾಷಣ, ಧರಣಿಗಳನ್ನು ನಡೆಸಲಾಗುತ್ತಿದ್ದರೂ, ಅಲ್ಲಿ ಸೇರಿರುವ ಸುಮಾರು ನೂರಾರು ವಿವಿಧ ರೈತ, ಕಾರ್ಮಿಕ, ದಲಿತ ಸಂಘಟನೆಗಳು ತಮ್ಮ ತಮ್ಮ ವಾಸ್ತವ್ಯದ ಟೆಂಟ್ ಬಳಿಯೇ ನಿತ್ಯದ ಸಭೆ, ಚರ್ಚೆ, ಹಾಡು, ನೃತ್ಯಗಳಿಗಾಗಿ ಪ್ರತ್ಯೇಕ ಚಿಕ್ಕಚಿಕ್ಕ ವೇದಿಕೆಗಳನ್ನೂ ಮಾಡಿಕೊಂಡಿವೆ. 200ಕ್ಕೂ ಹೆಚ್ಚು ಸಂಘಟನೆಗಳು ರೈತ ಹೋರಾಟಕ್ಕೆ ದನಿಗೂಡಿಸಿವೆ.

ಸದ್ಯದ ರೈತರ ಹೋರಾಟವನ್ನು ಹಲವು ಮಾಧ್ಯಮಗಳು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ. ಹೀಗಿರುವಾಗ ಇಂದಿನ ರೈತರ ಹೋರಾಟದ ಕೂಗನ್ನು ಜನರಿಗೆ ತಲುಪಿಸುವ ಜವಾಬ್ದಾರಿ "ಮಾಸ್‌ ಮೀಡಿಯಾ ಫೌಂಡೇಷನ್‌" ಹೊತ್ತಿದೆ. ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್ʼ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ ಸಿದ್ಧಪಡಿಸಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com