ಮದ್ರಸಾಗಳನ್ನು ರದ್ದು ಪಡಿಸುವ ನಿರ್ಧಾರ ಮಾಡಿದ ಅಸ್ಸಾಂ ಸರ್ಕಾರ

ಮದ್ರಸಾಗಳ 'ಆಧುನೀಕರಣ'ವು ಸದಾ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಕೇಳಿ ಬರುವ ಮತ್ತೊಂದು ಮಾತಾಗಿದೆ. ಆದರೆ ಜಸ್ಟಿಸ್ ರಾಜೇಂದರ್ ಸಾಚಾರ್ ಅವರ ಕಮಿಟಿ ಸಲ್ಲಿಸಿರುವ ವರದಿಯ ಪ್ರಕಾರ ಕೇವಲ ನಾಲ್ಕು ಶೇಕಡಾದಷ್ಟು ಮಕ್ಕಳು ಮಾತ್ರ ಮದ್ರಸಾ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಾಗಾಗಿ ಮದ್ರಸಾಗಳ 'ಆಧುನೀಕರಣ' ಮತ್ತು 'ಮುಖ್ಯ ವಾಹಿನಿ'ಗೆ ತರುವುದು ಎನ್ನುವುದು ಕೇವಲ ಓಟ್‌ಬ್ಯಾಂಕ್ ರಾಜಕಾರಣ ಎಂದು ಪರಿಗಣಿಸಬಹುದು.
ಮದ್ರಸಾಗಳನ್ನು ರದ್ದು ಪಡಿಸುವ ನಿರ್ಧಾರ ಮಾಡಿದ ಅಸ್ಸಾಂ ಸರ್ಕಾರ

ಅಸ್ಸಾಂ ಸರ್ಕಾರವು ರಾಜ್ಯ ಸರ್ಕಾರದ ಅಧೀನದಲ್ಲಿರುವ ಮತ್ತು ಸ್ಥಳೀಯರ ಧನ ಸಹಾಯದಿಂದ ನಡೆಯುವ ಮದ್ರಸಾಗಳನ್ನು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಸರ್ಕಾರದ ಕ್ರಮವನ್ನು ಬೆಂಬಲಿಸಿರುವ ಅಲ್ಲಿನ ಶಿಕ್ಷಣ ಸಚಿವ ಶಿಕ್ಷಣ ಪದ್ಧತಿಯನ್ನು ಜಾತ್ಯಾತೀತಗೊಳಿಸುವ ಉದ್ದೇಶ ಮಾತ್ರ ಸರ್ಕಾರಕ್ಕಿರುವದು ಅಂದಿದ್ದಾರೆ.


ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿರುವ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು AIUDF ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿವೆ. ತಮ್ಮ ವಾದಕ್ಕೆ ಪುಷ್ಟೀಕರಣ ಒದಗಿಸಲು ಶಿಕ್ಷಣ ಸಚಿವ ಹಿಂದೊಮ್ಮೆ ನೀಡಿದ್ದ 'ಮುಂಬರುವ ಚುನಾವಣೆಯು ಅಸ್ಸಾಮಿನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಉಳಿಸುವ ಹೋರಾಟ' ಎಂಬ ಹೇಳಿಕೆಯನ್ನು ಬಳಸಿಕೊಳ್ಳುತ್ತಿವೆ.

2011ರ ಜನಗಣತಿ ಪ್ರಕಾರ ಅಸ್ಸಾಮಿನಲ್ಲಿ 61.47 ಶೇಕಡಾದಷ್ಟು ಹಿಂದುಗಳಿದ್ದು 34.22 ಶೇಕಡಾದಷ್ಟು ಮುಸ್ಲಿಮರಿದ್ದಾರೆ. ರಾಜ್ಯದ ಜನಸಂಖ್ಯಾ ಶಾಸ್ತ್ರವನ್ನು ಉಲ್ಲೇಖಿಸಿ 'ಶೇಕಡಾ 60ಕ್ಕಿಂತಲೂ ಹೆಚ್ಚಿರುವ ಹಿಂದುಗಳು ಒಟ್ಟಾಗಿ ಸಂಸ್ಕೃತಿ-ನಾಗರಿಕತೆಯ ಹೊಸ ಕಲ್ಪನೆಯ ವಿರುದ್ಧ ಹೋರಾಡಲಿದ್ದಾರೆ' ಎಂದಿದ್ದರು.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಅಥವಾ ಸ್ಥಳೀಯರ ಧನ ಸಹಾಯದಿಂದ ನಡೆಯುತ್ತಿರುವ ಮದ್ರಸಾಗಳು ಮೊದಲಿನಿಂದಲೂ ಬಿಜೆಪಿಯ ಸುಲಭ ಟಾರ್ಗೆಟ್. ಯಾವುದೇ ಆಧಾರ, ಸಾಕ್ಷಿಗಳಿಲ್ಲದೆ ಬಿಜೆಪಿ ಸದಾ ಮದ್ರಸಾಗಳ ವಿರುದ್ಧ ಭಯೋತ್ಪಾದನೆಯ ಆರೋಪವನ್ನು ಹೊರಿಸುತ್ತಾ ಬಂದಿದೆ. ಆದರೆ ಸಂಘ ಪರಿವಾರದ ಶಿಕ್ಷಣ ಸಂಸ್ಥೆಗಳಾದ 'ಏಕಲ್ ಅಭಿಯಾನ್' ಅಥವಾ 'ವಿದ್ಯಾ ಭಾರತಿ'ಯ ವಿರುದ್ಧ ಅಂತಹ ಆರೋಪಗಳನ್ನು ಸುಲಭವಾಗಿ ಮಾಡಲು ಎಲ್ಲಾ ರಾಜಕೀಯ ಪಕ್ಷಗಳೂ ಹಿಂಜರಿಯುತ್ತವೆ. ರಾಜಕೀಯ ಪಕ್ಷಗಳ ಈ‌ ನಡೆ ಜಾತ್ಯಾತೀತ ತತ್ವವನ್ನು ಅವಹೇಳಿಸುವಂತಿದ್ದು ಸಂಘ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ 'ಪ್ರತಿಯೋರ್ವ ಹಿಂದುವು ಸಹಜವಾಗಿಯೇ ಭಾರತೀಯನಾಗುತ್ತಾನೆ ಮುಸ್ಲಿಮನೊಬ್ಬ ತನ್ನ ಪ್ರತಿ ಹೆಜ್ಜೆಯಲ್ಲೂ ತನ್ನ ಭಾರತೀಯತೆಯನ್ನು ಸಾಬೀತು ಪಡಿಸುತ್ತಲೇ ಇರಬೇಕು' ಎನ್ನುವ ತತ್ವವನ್ನು‌ ಪ್ರೋತ್ಸಾಹಿಸುವಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಲವು ವಿದ್ವಾಂಸರು ಸರ್ಕಾರದ ಈ ಕ್ರಮವನ್ನು ಶಿಕ್ಷಣವನ್ನು‌ ಕೇಸರೀಕರಣಗೊಳಿಸುವ ಅಜೆಂಡಾದ ಭಾಗವೆಂದು ಕರೆದಿದ್ದು ಹೊಸ ಶಿಕ್ಷಣ‌‌‌ ಪದ್ಧತಿ (new education policy 2020)ಯು ಪ್ರಚುರ ಪಡಿಸುವ 'ಪುರಾತನ ಹಿಂದೂ ನಾಗರಿಕತೆ ಭಾರತದ ನಾಗರಿಕತೆ' ಎಂದು ಬಿಂಬಿಸುವುದರ ಮುಂದುವರಿದ ಭಾಗ ಇದು ಎನ್ನುತ್ತಾರೆ.

ಮದ್ರಸಾಗಳ 'ಆಧುನೀಕರಣ'ವು ಸದಾ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಕೇಳಿ ಬರುವ ಮತ್ತೊಂದು ಮಾತಾಗಿದೆ. ಆದರೆ ಜಸ್ಟಿಸ್ ರಾಜೇಂದರ್ ಸಾಚಾರ್ ಅವರ ಕಮಿಟಿ ಸಲ್ಲಿಸಿರುವ ವರದಿಯ ಪ್ರಕಾರ ಕೇವಲ ನಾಲ್ಕು ಶೇಕಡಾದಷ್ಟು ಮಕ್ಕಳು ಮಾತ್ರ ಮದ್ರಸಾ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಾಗಾಗಿ ಮದ್ರಸಾಗಳ 'ಆಧುನೀಕರಣ' ಮತ್ತು 'ಮುಖ್ಯ ವಾಹಿನಿ'ಗೆ ತರುವುದು ಎನ್ನುವುದು ಕೇವಲ ಓಟ್‌ಬ್ಯಾಂಕ್ ರಾಜಕಾರಣ ಎಂದು ಪರಿಗಣಿಸಬಹುದು.


ಇತ್ತೀಚಿನ ಬೆಳವಣಿಗೆಯೊಂದರಲ್ಲಿ ವಿಹಿಂಪ ಮತ್ತು ಇತರ ಹಿಂದು ಸಂಘಟನೆಗಳು, ಅಲ್ಪಸಂಖ್ಯಾತರಿಗೆ ತಮ್ಮ ಸಂಸ್ಕೃತಿ,ಭಾಷೆಯನ್ನು ಸಂರಕ್ಷಿಸಿಕೊಳ್ಳಲು ಮತ್ತು ತಮ್ಮದೇ ಆದ ವಿದ್ಯಾಸಂಸ್ಥೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ಸಂವಿಧಾನದ 29 ಮತ್ತು 30ನೇ ವಿಧಿಯನ್ನು ತಿದ್ದುಪಡಿ ಮಾಡುವಂತೆ ಆಗ್ರಹಿಸಿ ರ‌್ಯಾಲಿ ಆಯೋಜನೆ ಮಾಡಿದ್ದವು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಸಹ ಆರ್ಟಿಕಲ್ 30ನ್ನು ಹಿಂದುಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದರು. ಈಗ ಅಸ್ಸಾಮಿನ ಮುಸ್ಲಿಂ ಸಂಘಟನೆಗಳು ಸಂವಿಧಾನದ ಇದೇ ವಿಧಿಯ ಆಧಾರದ ಮೇಲೆ ಮದ್ರಸಾಗಳನ್ನು ರದ್ದು ಪಡಿಸದಂತೆ ಕೋರ್ಟಿನ ಮೊರೆ ಹೋಗಿದ್ದಾರೆ.

ಅಸ್ಸಾಂ ಸರ್ಕಾರದ ನೀತಿ ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುತ್ತದೋ ಬಿಡುತ್ತದೋ ಆದರೆ ಈ ದೇಶದ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಮತ್ತೊಂದು ರೂಪವಾಗಿ ತೋರುತ್ತಿದೆ. ಧಾರ್ಮಿಕ ಸಂಗತಿಗಳು, ಅಸ್ಮಿತೆಗಳು‌ ಪ್ರತಿ ಚುನಾವಣಾ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮುನ್ನಲೆಗೆ ಬರುವುದವು ಭಾರತದಂತಹ ಬಹುತ್ವದ ದೇಶಕ್ಕೆ, ಸಂವಿಧಾನಕ್ಕೆ ಖಂಡಿತಾ ಒಳ್ಳೆಯದಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com