ಹಠಮಾರಿ ಸರ್ಕಾರ - ಪಟ್ಟು ಬಿಡದ ರೈತರು; ಸಂಧಾನ ಮತ್ತೆ ವಿಫಲ

ಕಾನೂನನ್ನು ಹಿಂಪಡೆಯಲೇಬೇಕೆಂಬ ರೈತರ ಒತ್ತಾಯವನ್ನು ಗಣನೆಗೆ ತೆಗೆದುಕೊಳ್ಳದ ಸರ್ಕಾರ ಹೊಸ ಕಾನೂನಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ವಿವರಿಸಲು ಪ್ರಯತ್ನಿಸಿದೆ.
ಹಠಮಾರಿ ಸರ್ಕಾರ - ಪಟ್ಟು ಬಿಡದ ರೈತರು; ಸಂಧಾನ ಮತ್ತೆ ವಿಫಲ

ಏಳನೇ ಸುತ್ತಿನ ಚರ್ಚೆಗಳಲ್ಲಿಯೂ ಕೇಂದ್ರ ಸರ್ಕಾರಕ್ಕೆ ಮತ್ತು ರೈತರಿಗೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಜನವರಿ 8 ರಂದು ಮತ್ತೆ ಸಭೆ ಸೇರಲು ಉಭಯ ಪಕ್ಷಗಲು ಸಮ್ಮತಿಸಿವೆ. ಹಾಗಾಗಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುವ ಗೊಂದಲವು ಮತ್ತೆ ಮುಂದುವರೆದಿದೆ.

ರೈತರೊಂದಿಗೆ ಸರ್ಕಾರ ನಡೆಸಿದ ಸಭೆ ಮತ್ತೆ ವಿಫಲವಾಗಿದ್ದು, ನೂತನ ಕೃಷಿ ಕಾನೂನನ್ನು ಹಿಂಪಡೆಯಬೇಕೆಂಬ ಪಟ್ಟು ಹಿಡಿದಿರುವ ರೈತರು, ಸರ್ಕಾರದ ಹಠಮಾರಿ ಧೋರಣೆಗೆ ರಾಜಿಯಾಗುತ್ತಿಲ್ಲ. ಕಾನೂನನ್ನು ಹಿಂಪಡೆಯಲೇಬೇಕೆಂಬ ರೈತರ ಒತ್ತಾಯವನ್ನು ಗಣನೆಗೆ ತೆಗೆದುಕೊಳ್ಳದ ಸರ್ಕಾರ ಹೊಸ ಕಾನೂನಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ವಿವರಿಸಲು ಪ್ರಯತ್ನಿಸಿದೆ. ಆದರೆ ರೈತರು ತಮ್ಮ ಅಚಲ ನಿಲುವಿನಿಂದ ಹಿಂದೆ ಸರಿಯದ ಕಾರಣ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಭೆ ವಿಫಲಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಳೆಗಳ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವ ಬಗ್ಗೆ ಚರ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ, ಆದರೆ ರೈತ ಸಂಘಗಳ ಮುಖಂಡರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚಿಸಲು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನವರಿ 26 ರಂದು ಗಣರಾಜ್ಯೋತ್ಸವದಂದು ರ್ಯಾಲಿ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.

ನಮ್ಮ ಬೇಡಿಕೆ ಕಾನೂನುಗಳನ್ನು ರದ್ದುಪಡಿಸುವುದು. ಸಮಿತಿಯ ರಚನೆಯಂತಹ ಯಾವುದೇ ಪರ್ಯಾಯಗಳನ್ನು ನಾವು ಒಪ್ಪುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕಾನೂನುಗಳನ್ನು ರದ್ದುಪಡಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯದ ಕುರಿತು ಚರ್ಚೆಯನ್ನು ನಾವು ಬಯಸುವುದಿಲ್ಲ. ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆಗಳನ್ನು ಹಿಂಪಡೆಯಲಾಗುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

ರೈತ ಸಂಘಗಳು ಷರತ್ತುವಾರು ಮೂರು ಕಾನೂನುಗಳನ್ನು ಚರ್ಚಿಸಬೇಕೆಂದು ನಾವು ಬಯಸಿದ್ದೇವೆ. ಕಾನೂನುಗಳನ್ನು ರದ್ದುಪಡಿಸುವಲ್ಲಿ ರೈತ ಸಂಘವು ಅಚಲವಾಗಿ ಇರುವುದರಿಂದ ನಮಗೆ ಯಾವುದೇ ಪರಿಹಾರವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಹೇಳಿದ್ದಾರೆ.

ಜ.05 ರಂದು ರೈತ ಒಕ್ಕೂಟದ ಆಂತರಿಕ ಸಭೆ ನಡೆಯಲಿದ್ದು, ರೈತರ ಮುಂದಿನ ನಡೆಯ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com