ಚೆನ್ನೈ ಸಮಾವೇಶಕ್ಕೆ ಒವೈಸಿಗೆ ಆಹ್ವಾನ ನೀಡಿದ DMK

ಶುಕ್ರವಾರ ಮಸ್ತಾನ್ ಮತ್ತು ಅಹ್ಮದ್ ಅವರು ಒವೈಸಿ ಅವರನ್ನು ಆಹ್ವಾನಿಸಲು ಹೈದರಾಬಾದ್ಗೆ ತೆರಳಿದ್ದರು ಎನ್ನುವ ಮಾಹಿತಿ ಇದೆ. ವಿಡಿಯೋದಲ್ಲಿ ಮಸ್ತಾನ್ ಅವರ ಉಪಸ್ಥಿತಿಯಲ್ಲಿ ಒವೈಸಿ ಚೆನ್ನೈ ಸಮಾವೇಶದಲ್ಲಿ ಭಾಗಿಯಾಗುವ ಬಗ್ಗೆ ಯಾರೊಂದಿಗೋ ಮಾತಾಡುತ್ತಿರುವಂತಿದೆ.
ಚೆನ್ನೈ ಸಮಾವೇಶಕ್ಕೆ ಒವೈಸಿಗೆ ಆಹ್ವಾನ ನೀಡಿದ DMK

ನಟ ರಜನಿಕಾಂತ್ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸದಿರುವ ನಿರ್ಧಾರದ ಹಿಂದೆ DMK ಇದೆ ಎನ್ನುವ ಆರೋಪದ ನಡುವೆಯೇ ಆ ಪಕ್ಷ ಚೆನ್ನೈಯ YMCA ಮೈದಾನದಲ್ಲಿ ಜನವರಿ ಆರರಂದು ನಡೆಸಲು ಉದ್ದೇಶಿಸಿರುವ ಸಮಾವೇಶಕ್ಕೆ AIMIM ಮುಖ್ಯಸ್ಥ ಅಸಾಸುದ್ದೀನ್ ಒವೈಸಿ ಅವರನ್ನು ಆಹ್ವಾನಿಸಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

DMKಯ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಡಿ.ಮಸ್ತಾನ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಮಸ್ತಾನ್ರನ್ನು ಒಳಗೊಂಡಂತೆ ಡಿಎಂಕೆಯ ಹಲವು ಮುಸ್ಲಿಂ ನಾಯಕರು ಮತ್ತು AIMIMನ ರಾಜ್ಯಾಧ್ಯಕ್ಷ ವಕ್ಕಿಲ್ ಅಹ್ಮದ್ ಜೊತೆಯಲ್ಲಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶುಕ್ರವಾರ ಮಸ್ತಾನ್ ಮತ್ತು ಅಹ್ಮದ್ ಅವರು ಒವೈಸಿ ಅವರನ್ನು ಆಹ್ವಾನಿಸಲು ಹೈದರಾಬಾದ್ಗೆ ತೆರಳಿದ್ದರು ಎನ್ನುವ ಮಾಹಿತಿ ಇದೆ. ವಿಡಿಯೋದಲ್ಲಿ ಮಸ್ತಾನ್ ಅವರ ಉಪಸ್ಥಿತಿಯಲ್ಲಿ ಒವೈಸಿ ಚೆನ್ನೈ ಸಮಾವೇಶದಲ್ಲಿ ಭಾಗಿಯಾಗುವ ಬಗ್ಗೆ ಯಾರೊಂದಿಗೋ ಮಾತಾಡುತ್ತಿರುವಂತಿದೆ. ಆದರೆ ಈ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಮಸ್ತಾನ್ "ಒವೈಸಿ ಅವರನ್ನು ನಾವು ಸಮಾವೇಶಕ್ಕೆ ಆಹ್ವಾನಿಸಿಲ್ಲ. ಅಷ್ಟು ಮಾತ್ರ ಅಲ್ಲ ಮೈತ್ರಿ ಕೂಟದಿಂದ ಹೊರಗಿರುವ ಯಾವ ಮುಸ್ಲಿಂ ಪಕ್ಷಗಳನ್ನೂ ನಾವು ಆಹ್ವಾನಿಸಿಲ್ಲ" ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವ ತಮಿಳುನಾಡಿನಲ್ಲಿ AIMIM ಗೆ ಹೈದರಾಬಾದ್ ಮತ್ತು ಬಿಹಾರ್ನಲ್ಲಿರುವಂತೆ ನಿರ್ದಿಷ್ಟವಾಗಿ ಯಾವುದೇ ವೋಟ್ ಬ್ಯಾಂಕ್ ಇಲ್ಲ. ಬಿಹಾರ ಚುನಾವಣೆಯ ನಂತರ ತಮಿಳುನಾಡಿನ ಮುಸ್ಲಿಂ ಪಕ್ಷಗಳಿಂದ ಬಿಜೆಪಿಯ ಬಿ ಟೀಂ ಎಂದು ಕರೆಸಿಕೊಳ್ಳುತ್ತಿರುವ AIMIM ಬಿಹಾರದಲ್ಲಿ ಮತ ವಿಭಜಿಸಿದೆ ಎನ್ನುವ ಆರೋಪ ಎದುರಿಸುತ್ತಿದೆ. RSSನ ಖಾಕಿ ಚಡ್ಡಿ ತೊಟ್ಟಿರುವ ಒವೈಸಿಯ ರೇಖಾ ಚಿತ್ರ ಇಂಟರ್ನೆಟ್ನಾದ್ಯಂತ ಓಡಾಡುತ್ತಿದೆ.

ಟೀಕೆಗಳ ಮಧ್ಯೆಯೂ ಉರ್ದು ಮಾತಾಡುವ ತಮಿಳುನಾಡಿನ ಮುಸ್ಲಿಮರ ಮತ ಸೆಳೆಯುವ ಶಕ್ತಿ ಒವೈಸಿಗಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಆದರೆ ಡಿಎಂಕೆ ಮತ್ತದರ ಮೈತ್ರಿ ಕೂಟದಲ್ಲಿರುವ ಇತರ ಮುಸ್ಲಿಂ ಪಕ್ಷಗಳಿಂದಲೇ ಪಕ್ಷ ಟೀಕೆ ಎದುರಿಸುತ್ತಿದೆ. "ನಮ್ಮ ಪಕ್ಷದೊಳಗಿರುವ ಬಲಪಂಥೀಯರ ಕೆಲಸವಿದು" ಎಂದು ಅಭಿಪ್ರಾಯ ಪಡುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು. ಅವರ ಪ್ರಕಾರ ಒವೈಸಿಯ ಉಪಸ್ಥಿತಿಯ ಪಕ್ಷದ ಮುಸ್ಲಿಂ ಅಭ್ಯರ್ಥಿಗಳ ಮತ್ತು ಮೈತ್ರಿ ಕೂಟದಲ್ಲಿನ ಇತರ ಮುಸ್ಲಿಂ ಅಭ್ಯರ್ಥಿಗಳ ಸ್ಥೈರ್ಯವನ್ನು ಉಡುಗಿಸುತ್ತದೆ. ಅಲ್ಲದೆ ತಮಿಳುನಾಡಿನ ಮುಸ್ಲಿಮರು ಧಾರ್ಮಿಕ ಮೂಲಭೂತವಾದಿಗಳಲ್ಲ, ಅವರು ಸದಾ ದ್ರಾವಿಡ ಚಳವಳಿ ಮತ್ತು ಸಿದ್ಧಾಂತಗಳೊಂದಿಗೆ ಸದಾ ಸಹಮತ ವ್ಯಕ್ತಪಡಿಸುವವರು. ಹಾಗಾಗಿ ಒವೈಸಿಯಂಥವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ.

1962ರಲ್ಲಿ ಮೊದಲ ಬಾರಿ ಡಿಎಂಕೆಯು ಕ್ವೈದ್ ಮಿಲ್ಲತ್ ಅವರ ನೇತೃತ್ವದ IUML ಜೊತೆ ಮೈತ್ರಿ ಮಾಡಿಕೊಂಡಿತ್ತು. ತಮಿಳುನಾಡಿನ ಬಹುಪಾಲು ಹಿಂದುಗಳು ಮುಸ್ಲಿಂ ಪಕ್ಷಗಳನ್ನು ಮೂಲಭೂತವಾದಿಗಳೆಂದು ನೋಡುವುದಿಲ್ಲ. ಈ ರಾಜ್ಯದ ಮುಸ್ಲಿಮರು ಧಾರ್ಮಿಕವಾಗಿ ಧ್ರುವೀಕರಣಗೊಂಡರೂ ರಾಜಕೀಯವಾಗಿ ಧ್ರುವೀಕರಣಕ್ಕೆ ಒಳಗಾಗಿಲ್ಲ. ಹಾಗಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಅಭ್ಯರ್ಥಿಗಳನ್ನು ಅಲ್ಲಿನ ಮುಸ್ಲಿಮರು ಆರಿಸುತ್ತಾರೆ.

"ನಮ್ಮ ಪಕ್ಷದ ನಾಯಕರು ಒವೈಸಿಯ ಬೆಂಬಲ ಬಯಸಿದ್ದು ತಪ್ಪಲ್ಲ. ಆದರೆ ಅದಕ್ಕೂ ಮುನ್ನ ಪಕ್ಷದ ಮುಸ್ಲಿಂ ನಾಯಕರನ್ನು ಮತ್ತು ಮೈತ್ರಿ ಪಕ್ಷಗಳ ಮುಸ್ಲಿಂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು" ಎಂದು ಹೆಸರು ಹೇಳಲಿಚ್ಛಿಸದ ಡಿಎಂಕೆ ನಾಯಕರೊಬ್ಬರು ಹೇಳುತ್ತಾರೆ. ದ್ರಾವಿಡ ಚಳವಳಿ ಸದಾ ಮುನ್ನಲೆಯಲ್ಲಿರುವ, ಹಿಂದಿ ಹೇರಿಕೆಯನ್ನು ಲಗಾಯ್ತಿನಿಂದಲೂ ವಿರೋಧಿಸುತ್ತಲೇ ಬಂದಿರುವ, ಕೋಮುವಾದಿ ಶಕ್ತಿಗಳ ತೆಕ್ಕೆಗೆ ಸಿಗದ ತಮಿಳುನಾಡು ಈಗ ಕರುಣಾನಿಧಿ ಮತ್ತು ಜಯಲಲಿತಾರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಿದೆ. ಈ ಇಬ್ಬರು ನಾಯಕರ ಅಸ್ತಿತ್ವವೇ ಅಲ್ಲಿ ಮತ ಬೇಟೆಗೆ ಮತ್ತು ಚುನಾವಣೆ ರಂಗು ಏರುವುದಕ್ಕೆ ಕಾರಣವಾಗುತ್ತಿತ್ತು. ಈಗ ಇಬ್ಬರೂ ಇಲ್ಲದಿರುವುದರಿಂದ ಈ ಬಾರಿಯ ಚುನಾವಣೆ ಯಾವ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ ಎಂಬುವುದನ್ನು ಕಾದು ನೋಡಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com