ಈಗ ಕೋವಾಕ್ಸಿನ್ ಲಸಿಕೆಗೆ ಗಿನಿ ಪಿಗ್ ಆಗಲಿದ್ದಾರೆಯೇ ಭಾರತೀಯರು?

ಕರೋನಾ ವೈರಾಣು ದೇಶಕ್ಕೆ ಬರದಂತೆ ತಡೆಯುವಲ್ಲಿ ಎಡವಿದ, ಆ ಬಳಿಕ ಕರೋನಾ ಮತ್ತು ಆ ಕುರಿತ ಲಾಕ್ ಡೌನ್ ನಿರ್ವಹಣೆಯಲ್ಲೂ ಸಾಲುಸಾಲು ಯಡವಟ್ಟುಗಳನ್ನು ಮಾಡಿ ಜನರನ್ನು ಹೈರಾಣು ಮಾಡಿದ ಪ್ರಧಾನಿ ಮೋದಿಯವರ ಆಡಳಿತ, ಕನಿಷ್ಟ ಲಸಿಕೆಯ ವಿಷಯದಲ್ಲಿ ಪ್ರಾಮಾಣಿಕತೆ ತೋರಬಹುದು, ದೇಶದ ಜನರ ಜೀವದ ವಿಷಯದಲ್ಲಾದರೂ ಕಾಳಜಿಯಿಂದ ಹೊಣೆಗಾರಿಕೆಯಿಂದ ವರ್ತಿಸಬಹುದು ಎಂಬ ನಿರೀಕ್ಷೆಗಳು ಈ ಬೆಳವಣಿಗೆ ಹುಸಿಗೊಳಿಸಿದೆ.
ಈಗ ಕೋವಾಕ್ಸಿನ್ ಲಸಿಕೆಗೆ ಗಿನಿ ಪಿಗ್ ಆಗಲಿದ್ದಾರೆಯೇ ಭಾರತೀಯರು?

ಸದ್ಯ ದೇಶದಲ್ಲಿ ಕರೋನಾ ಮಹಾ ಸಾಂಕ್ರಾಮಿಕದ ಸಾವು-ನೋವಿಗಿಂತ ಹೆಚ್ಚು ಚರ್ಚೆಯಾಗುತ್ತಿರುವುದು ಕರೋನಾ ಲಸಿಕೆಯ ಸಂಗತಿ. ಲಸಿಕೆಯ ವಿಷಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ಲಸಿಕೆಯ ವಿಶ್ವಾಸಾರ್ಹತೆ, ಲಸಿಕೆಯ ಲಭ್ಯತೆ ಮತ್ತು ಆದ್ಯತೆಗಳು ದೊಡ್ಡ ಚರ್ಚೆಗೆ ಕಾರಣವಾಗಿವೆ.

ಈ ನಡುವೆ ಆಕ್ಸಫರ್ಡ್ ಯೂನಿವರ್ಸಿಟಿ ಮತ್ತು ಅಸ್ಟ್ರಾಜೆನೆಕಾ ಸಂಸ್ಥೆಗಳು ಭಾರತೀಯ ಸೀರಂ ಇನ್ಸ್ ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ತಯಾರಿಸಿರುವ ಕೋವಿಶೀಲ್ಡ್ ಮತ್ತು ದೇಸೀಯ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಗಳಿಗೆ ಭಾನುವಾರ ಭಾರತೀಯ ಔಷಧ ಮಹಾನಿಯಂತ್ರಕರು(ಡಿಸಿಜಿಐ) ತುರ್ತುಬಳಕೆಯ ಅನುಮೋದನೆ ನೀಡಿದ್ದಾರೆ. ಆ ಮೂಲಕ ಆ ಎರಡೂ ಲಸಿಕೆಗಳು ಸಾಮೂಹಿಕ ಜನಬಳಕೆಗೆ ಬಂದಿವೆ.

ಆದರೆ, ಇದಕ್ಕೆ ಎರಡು ದಿನಗಳ ಮುನ್ನ ಈ ಎರಡು ಲಸಿಕೆಗಳು ಜನಬಳಕೆ ಕುರಿತ ಮನವಿಯ ಬಗ್ಗೆ ಸಭೆ ನಡೆಸಿದ್ದ ಡಿಸಿಜಿಐನ ಉನ್ನತಮಟ್ಟದ ಸಭೆ, ಎಲ್ಲಾ ಹಂತದ ಪ್ರಯೋಗಗಳನ್ನು ಪೂರೈಸಿ, ಪ್ರಯೋಗ ಫಲಿತಾಂಶ ಮತ್ತು ದತ್ತಾಂಶಗಳನ್ನು ಪೀರ್ ಕಮಿಟಿ ವಿಶ್ಲೇಷಣೆಗೊಳಪಡಿಸಿ ಅಂತಿಮಗೊಂಡಿರುವ ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ನೀಡಿ, ಈವರೆಗೆ ತನ್ನ ಪ್ರಯೋಗಗಳ ಫಲಿತಾಂಶ ಕುರಿತ ಮಾಹಿತಿ ಮತ್ತು ದತ್ತಾಂಶವನ್ನು ಬಹಿರಂಗಪಡಿಸದಿರುವ ಮತ್ತು ಇನ್ನೂ ಮೂರನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸದೇ ಇರುವ ಹಿನ್ನೆಲೆಯಲ್ಲಿ ಕೋವಾಕ್ಸಿನ್ ಲಸಿಕೆಗೆ ಅನುಮತಿ ನಿರಾಕರಿಸಿತ್ತು. ಭಾರತ್ ಬಯೋಟೆಕ್ ನ ಈ ಲಸಿಕೆಗೆ ಅನುಮೋದನೆ ನೀಡಲು ಅಗತ್ಯ ಪ್ರಮಾಣದ ದತ್ತಾಂಶ ಮತ್ತು ಮಾಹಿತಿ ಇನ್ನೂ ತನಗೆ ಸಿಕ್ಕಿಲ್ಲ. ಮಾನವರ ಮೇಲಿನ ಮೂರನೇ ಹಂತದ ಪ್ರಯೋಗ ಇನ್ನೂ ಪೂರ್ಣಗೊಂಡಿಲ್ಲ ಎಂದು ಉನ್ನತ ಸಮಿತಿ ಆ ವೇಳೆ ಹೇಳಿತ್ತು.

ಈಗ ಕೋವಾಕ್ಸಿನ್ ಲಸಿಕೆಗೆ ಗಿನಿ ಪಿಗ್ ಆಗಲಿದ್ದಾರೆಯೇ ಭಾರತೀಯರು?
ಭಾರತದಲ್ಲಿ ಜನಬಳಕೆಗೆ ಅನುಮೋದನೆ ಪಡೆಯುವ ಹೊಸ್ತಿಲಲ್ಲಿ ಕೋವಿಶೀಲ್ಡ್!

ಆದರೆ, ಅದಾಗಿ ಒಂದೇ ದಿನದ ಬಳಿಕ ಭಾನುವಾರ ಡಿಸಿಜಿಐ ವಿ ಜಿ ಸೊಮಾನಿ ಅವರು, ಅಧಿಕೃತ ಹೇಳಿಕೆಯಲ್ಲಿ ಎರಡೂ ಲಸಿಕೆಗಳನ್ನು ಜನಬಳಕೆಗೆ ಅನುಮೋದಿಸಿರುವುದಾಗಿ ಘೋಷಿಸಿದ್ಧಾರೆ. ಅಷ್ಟೇ ಅಲ್ಲ; ಈ ಲಸಿಕೆಗಳು “ಶೇ.110 ರಷ್ಟು ಸುರಕ್ಷಿತ”ಎಂದೂ ಅವರು ಹೇಳಿದ್ದಾರೆ. ಆದರೆ, ದೇಶದ 130 ಕೋಟಿ ಜನರ ಜೀವದ ಪ್ರಶ್ನೆಯಾದ ಈ ಮಹತ್ವದ ಲಸಿಕೆಗಳ ವಿಷಯದಲ್ಲಿ 8 ನಿಮಿಷಗಳ ಸಿದ್ಧ ಹೇಳಿಕೆಯನ್ನು ಓದಿದ್ದು ಬಿಟ್ಟರೆ, ಡಿಸಿಜಿಐ ಅವರು ಮಾಧ್ಯಮದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಧಾನವನ್ನೇ ತೋರದೇ, ತಮ್ಮ ಮಾತು ಮುಗಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಾಗಿ, ಭಾರತ್ ಬಯೋಟೆಕ್ ಮತ್ತು ಸೀರಂ ಇನ್ಸ್ ಸ್ಟಿಟ್ಯೂಟ್ ಸಂಸ್ಥೆಗಳೆರಡರ ಲಸಿಕೆಗಳ ಕುರಿತು ಸಾರ್ವಜನಿಕ ವಲಯದಲ್ಲಿ ಈ ಹಿಂದಿನಿಂದಲೂ ಕೇಳಿಬರುತ್ತಿದ್ದ ಹಲವಾರು ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದಿವೆ. ಈ ನಡುವೆ ಪ್ರಧಾನಿ ಮೋದಿಯವರು ಈ ಎರಡು ಲಸಿಕೆಗಳು ದೇಶದ ‘ಗೇಮ್ ಚೇಂಜರ್’ ತಮ್ಮ ಸಿದ್ಧ ಮಾದರಿಯ ಹೇಳಿಕೆ ನೀಡಿ, ಭಾರತ್ ಬಯೋಟೆಕ್ ಲಸಿಕೆ ಅದ್ಭುತ ಫಲಿತಾಂಶದೊಂದಿಗೆ ಜನಬಳಕೆಗೆ ಸಮರ್ಪಣೆಯಾಗಿದ್ದು, ಆತ್ಮನಿರ್ಭರ ಭಾರತದ ಯಶೋಗಾಥೆಯ ಧ್ಯೋತಕವಾಗಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

ಆದರೆ, ಪ್ರತಿಪಕ್ಷಗಳು ಈ ಲಸಿಕೆಗಳನ್ನು ನಿಯಮಾನುಸಾರ ಅನುಮೋದನೆ ನೀಡಿಲ್ಲ. ಅದರಲ್ಲೂ ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಅನುಮೋದನೆ ವಿಷಯದಲ್ಲಿ ಸರ್ಕಾರ ಅವಸರ ತೋರಿದೆ. ಲಸಿಕೆಯ ಸಮಗ್ರ ಪ್ರಯೋಗ ಪೂರ್ಣಗೊಂಡು, ಅದರ ಕಾರ್ಯಕ್ಷಮತೆ, ಸುರಕ್ಷತೆ ಕುರಿತ ಸಂಪೂರ್ಣ ಫಲಿತಾಂಶದ ದತ್ತಾಂಶ ಮತ್ತು ಮಾಹಿತಿ ಬಹಿರಂಗಗೊಳ್ಳುವ ಮುನ್ನವೇ ತರಾತುರಿಯಲ್ಲಿ ಅದನ್ನು ಜನರ ಮೇಲೆ ಬಳಕೆಗೆ ಅನುಮೋದನೆ ನೀಡಲಾಗಿದೆ. ಕೋವಾಕ್ಸಿನ್ ಅನುಮೋದನೆ ವಿಷಯದಲ್ಲಿ ಲಸಿಕೆಯ ಕುರಿತ ಈವರೆಗಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಮಾಡಿರುವ ಯಡವಟ್ಟು. ಆದರೆ, ದೇಶದ ಪ್ರಾಣಕ್ಕಿಂತ ತನಗೆ ಪ್ರಚಾರ ಮತ್ತು ಜನಪ್ರಿಯತೆಯೇ ಮುಖ್ಯ ಎಂಬುದನ್ನು ಮೋದಿ ಮತ್ತೊಮ್ಮೆ ಸಾಬೀತುಮಾಡಿದ್ದಾರೆ ಎಂದು ಕಾಂಗ್ರೆಸ್, ಸಿಪಿಎಂ, ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.ಕೋವಿಶೀಲ್ಡ್ ಜನಬಳಕೆ ವಿರುದ್ಧ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಮರ!

ಇನ್ನೂ ತನ್ನ ಪ್ರಯೋಗಗಳ ಮಾಹಿತಿಯನ್ನೇ ಬಹಿರಂಗಪಡಿಸದ, ತನ್ನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ದಾಖಲೆ ಸಹಿತ ಬಹಿರಂಗಪಡಿಸದ, ಅಷ್ಟೇ ಅಲ್ಲದೆ ಮೂರನೇ ಹಂತದ ಮಾನವ ಪ್ರಯೋಗವನ್ನೇ ಪೂರ್ತಿಗೊಳಸದೇ ಇರುವ ಒಂದು ಲಸಿಕೆಯನ್ನು ಕೇವಲ ಆತ್ಮನಿರ್ಭರ ಭಾರತ ಎಂಬ ಬಾಯುಪಚಾರದ ಘೋಷಣೆಯ ಸಮರ್ಥನೆಗಾಗಿ ಅನುಮೋದನೆ ನೀಡಿ, ದೇಶದ ಅಮಾಯಕ ಜನರ ಜೀವದ ಜೊತೆ ಚಿನ್ನಾಟವಾಡುವ ಆಡಳಿತದ ಧೋರಣೆ ಬಗ್ಗೆ ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲದೆ, ದೇಶದ ವೈದ್ಯಕೀಯ ಮತ್ತು ವಿಜ್ಞಾನ ವಲಯದಿಂದಲೂ ಆಘಾತ ಮತ್ತು ಆತಂಕದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಆರೋಗ್ಯ ವಲಯದ ಕಣ್ಗಾವಲು ಸಂಸ್ಥೆ ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ ಈ ಕೋವಾಕ್ಸಿನ್ ಅನುಮೋದನೆ ಬಗ್ಗೆ ಪ್ರತಿಕ್ರಿಯಿಸಿ, “ಇದು ಆಘಾತಕಾರಿ ಸಂಗತಿ” ಎಂದಿದೆ. “ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಯ ಕುರಿತ ದತ್ತಾಂಶಗಳೇ ಇಲ್ಲದಿರುವಾಗ ಇಂತಹ ಅನುಮೋದನೆ ನೀಡಿರುವುದು ಆತಂಕದ ವಿಷಯ. ಅದರಲ್ಲೂ ಇಂತಹ ನಿರ್ಧಾರಗಳು ನಮ್ಮ ವೈಜ್ಞಾನಿಕ ಸಂಸ್ಥೆಗಳ ಕುಸಿಯುತ್ತಿರುವ ವಿಶ್ವಾಸಾರ್ಹತೆಗೆ ದೊಡ್ಡ ಪೆಟ್ಟು ಕೊಡಲಿವೆ. ಪೂರ್ಣ ಪ್ರಮಾಣದ ಪ್ರಯೋಗವನ್ನೇ ಮಾಡದೆ ಇರುವ ಒಂದು ಲಸಿಕೆಯನ್ನು ಜನಬಳಕೆಗೆ ಅನುಮೋದಿಸಿರುವುದರ ಹಿಂದಿನ ವೈಜ್ಞಾನಿಕ ತರ್ಕವೇನು ಎಂಬುದು ಅರ್ಥವಾಗುತ್ತಿಲ್ಲ” ಎಂದು ಹೇಳಿದೆ(ಬಿಬಿಸಿ ವರದಿ).

ಹಾಗೇ ಭಾರತದ ಪ್ರಮುಖ ವೈದ್ಯಕೀಯ ಪರಿಣಿತರಲ್ಲಿ ಒಬ್ಬರಾದ ಡಾ ಗಗನದೀಪ್ ಕಾಂಗ್, “ಈ ಹಿಂದೆ ಎಂದೂ ಇಂಥಹದ್ದನ್ನು ಕಂಡಿಲ್ಲ. ಈ ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಯ ಕುರಿತು ಈವರೆಗೆ ಯಾವುದೇ ದತ್ತಾಂಶ, ಮಾಹಿತಿ ಬಹಿರಂಗಗೊಂಡಿಲ್ಲ. ಯಾವುದೇ ರೀತಿಯಲ್ಲೂ ಪ್ರಕಟಣೆ ಕಂಡಿಲ್ಲ. ಹಾಗಾಗಿದ್ದರೂ ಯಾವ ಆಧಾರದ ಮೇಲೆ ಇದನ್ನು ಜನಬಳಕೆಗೆ ಅನುಮೋದಿಸಲಾಗಿದೆ ಎಂಬುದು ಒಗಟು” ಎಂದಿದ್ದಾರೆ(ಟೈಮ್ಸ್ ಆಫ್ ಇಂಡಿಯಾ ವರದಿ).

ಈಗ ಕೋವಾಕ್ಸಿನ್ ಲಸಿಕೆಗೆ ಗಿನಿ ಪಿಗ್ ಆಗಲಿದ್ದಾರೆಯೇ ಭಾರತೀಯರು?
ಕೋವಿಶೀಲ್ಡ್ ಜನಬಳಕೆ ವಿರುದ್ಧ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಮರ!

ಈ ನಡುವೆ, ರಾಜಕೀಯ ವಲಯದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪ್ರತಿಪಕ್ಷಗಳ ಟೀಕೆಯ ಹಿಂದೆ ಸ್ಥಾಪಿತ ಹಿತಾಕಸ್ತಿಗಳ ಕೈವಾಡವಿದೆ. ಭಾರತೀಯವಾದ ಯಾವುದನ್ನೂ ಒಪ್ಪಿಕೊಳ್ಳದ ಮನಸ್ಥಿತಿ ಅವರದ್ದು ಎಂದು ಎಂದಿನ ಶೈಲಿಯಲ್ಲಿ ಟೀಕಿಸಿದ್ದಾರೆ. ಅವರ ಆ ಟೀಕೆಯಲ್ಲಿ ಪ್ರತಿಪಕ್ಷಗಳು ಎತ್ತಿರುವ ಲಸಿಕೆಯ ಪ್ರಯೋಗ, ಫಲಿತಾಂಶ, ಸುರಕ್ಷತೆ ಕುರಿತ ಯಾವ ಪ್ರಶ್ನೆಗಳಿಗೂ ಆಧಾರಸಹಿತ, ದಾಖಲೆಸಹಿತ ಸಮಜಾಯಿಷಿ ಇಲ್ಲ. ಸ್ವತಃ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದು, ಅವರ ಹೇಳಿಕೆಯಲ್ಲಿ ಕೂಡ ಇಂತಹ ಮಹತ್ವದ ವಿಷಯದಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂಬ ತಥಾಕಥಿತ ರಾಜಕೀಯ ವರಸೆ ಇದೆಯೇ ವಿನಃ, ಯಾಕೆ ಆ ಲಸಿಕೆಯ ಕುರಿತ ಪ್ರತಿಪಕ್ಷಗಳ ಟೀಕೆ ಆಧಾರರಹಿತ ಮತ್ತು ಅನಪೇಕ್ಷಿತ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಲಸಿಕೆ ಅನುಮೋದನೆ ಪ್ರೋಟೋಕಾಲ್ ಪ್ರಕಾರವೇ ಆಗಿದೆ ಎಂದಿರುವ ಸಚಿವರು, ಆ ಲಸಿಕೆಯ ಪರಿಣಾಮ, ಸುಕರಕ್ಷತೆ ಮತ್ತು ಅದರ ಎಲ್ಲಾ ಹಂತದ ಪ್ರಯೋಗಗಳು ಪೂರ್ತಿಯಾಗಿವೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಹಾಗಾಗಿ, ಆತ್ಮನಿರ್ಭರ ಭಾರತದ ತಮ್ಮ ಘೋಷಣೆಯನ್ನು ತಾವೇ ಸಮರ್ಥಿಸಿಕೊಳ್ಳುವ ಭರದಲ್ಲಿ ಒಂದು ದಿನ ಮುನ್ನ ಅನುಮೋದನೆ ನಿರಾಕರಿಸಿದ್ದ ಕೋವಾಕ್ಸಿನ್ ಲಸಿಕೆಯನ್ನು ದಿಢೀರನೇ ಅನುಮೋದಿಸಲಾಯಿತೆ? ಡಿಸಿಜಿಐ ಹೀಗೆ ದಿಢೀರ್ ಯೂಟರ್ನ್ ಹೊಡೆದಿರುವ ಹಿಂದೆ ಯಾರ ಒತ್ತಡ, ಯಾರ ಪ್ರಭಾವ ಕೆಲಸ ಮಾಡಿದೆ? ಇಂತಹ ರಾಜಕೀಯ ಮಹತ್ವಾಕಾಂಕ್ಷೆ, ಜನಪ್ರಿಯತೆಯ ಹಪಾಹಪಿಯ ಕಾರಣಕ್ಕಾಗಿ ಈಗಾಗಲೇ ಕರೋನಾದಿಂದ ಬಳಲಿರುವ ದೇಶದ ಜನಸಾಮಾನ್ಯರ ಬದುಕು ಮತ್ತೊಮ್ಮೆ ಲಸಿಕೆಯಿಂದ ಹೈರಾಣಾಗುವುದೆ ? ಎಂಬ ಪ್ರಶ್ನೆಗಳು ಎದ್ದಿವೆ.

ಕರೋನಾ ವೈರಾಣು ದೇಶಕ್ಕೆ ಬರದಂತೆ ತಡೆಯುವಲ್ಲಿ ಎಡವಿದ, ಆ ಬಳಿಕ ಕರೋನಾ ಮತ್ತು ಆ ಕುರಿತ ಲಾಕ್ ಡೌನ್ ನಿರ್ವಹಣೆಯಲ್ಲೂ ಸಾಲುಸಾಲು ಯಡವಟ್ಟುಗಳನ್ನು ಮಾಡಿ ಜನರನ್ನು ಹೈರಾಣು ಮಾಡಿದ ಪ್ರಧಾನಿ ಮೋದಿಯವರ ಆಡಳಿತ, ಕನಿಷ್ಟ ಲಸಿಕೆಯ ವಿಷಯದಲ್ಲಿ ಪ್ರಾಮಾಣಿಕತೆ ತೋರಬಹುದು, ದೇಶದ ಜನರ ಜೀವದ ವಿಷಯದಲ್ಲಾದರೂ ಕಾಳಜಿಯಿಂದ ಹೊಣೆಗಾರಿಕೆಯಿಂದ ವರ್ತಿಸಬಹುದು ಎಂಬ ನಿರೀಕ್ಷೆಗಳು ಈ ಬೆಳವಣಿಗೆ ಹುಸಿಗೊಳಿಸಿದೆ. ಹಾಗಾಗಿ ಈಗ ಪ್ರಯೋಗ ಪೂರ್ಣಗೊಳ್ಳದ ಲಸಿಕೆಯೊಂದರ ಮುಂದೆ ಹರಕೆ ಕುರಿಯಾಗುವ ಸರದಿ ದೇಶದ ಜನರದ್ದು!

ಎರಡು ದಿನದ ಹಿಂದೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಕೋವಿಶೀಲ್ಡ್ ವಿಷಯದಲ್ಲಿ ಪ್ರಧಾನಿ ಮೋದಿಯವರು ದೇಶದ ಜನರನ್ನು ಗಿನಿ ಪಿಗ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದರು. ವಿಪರ್ಯಾಸವೆಂದರೆ, ಅವರು ಅಂದು ಆತ್ಮನಿರ್ಭರ ಭಾರತದ ಆಶಯದ ಲಸಿಕೆ ಎಂದಿದ್ದ ಕೋವಾಕ್ಸಿನ್ ವಿಷಯದಲ್ಲೇ ಇದೀಗ ಅವರ ಆ ಮಾತು ಅಕ್ಷರಶಃ ನಿಜವಾಗುವ ಅಪಾಯ ಎದುರಾಗಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com