ಲವ್‌ ಜಿಹಾದ್‌ ಕಾನೂನು: ಅಮಾಯಕ ಮುಸ್ಲಿಮರನ್ನು ಜೈಲಿಗಟ್ಟಲು ಹಿಂದೂ ಸಂಘಟನೆಗಳಿಂದ ಮನಬಂದಂತೆ ಕಾಯ್ದೆ ಬಳಕೆ

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಎನ್ನುವ ಅಸಾಂವಿಧಾನಿಕ ಪದ ಬಳಸಿ ಅಮಾಯಕ ಮುಸ್ಲಿಮರನ್ನು ಜೈಲಿಗೆ ಕಳಿಸಲಾಗುತ್ತಿದೆ. ಈ ಕಾನೂನನ್ನು ಹಿಂದೂ ಸಂಘಟನೆಗಳು ಸ್ವೇಚ್ಚೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲವ್‌ ಜಿಹಾದ್‌ ಕಾನೂನು: ಅಮಾಯಕ ಮುಸ್ಲಿಮರನ್ನು ಜೈಲಿಗಟ್ಟಲು ಹಿಂದೂ ಸಂಘಟನೆಗಳಿಂದ ಮನಬಂದಂತೆ ಕಾಯ್ದೆ ಬಳಕೆ

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದ ಇಂದಿನವರೆಗೂ ಒಂದಲ್ಲ ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಹಲವರ ವಿರೋಧದ ನಡುವೆಯೂ ಯೋಗಿ ಆದಿತ್ಯನಾಥ್ ಸೋಕಾಲ್ಡ್‌ ಲವ್ ಜಿಹಾದ್ ವಿರುದ್ಧ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು. ಈ ಕಾಯ್ದೆ ಜಾರಿಯಾಗುತ್ತಿದ್ದಂತೆಯೇ ಬೇಕಂತಲೇ ಉತ್ತರಪ್ರದೇಶದಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಟಾರ್ಗೆಟ್‌ ಜೈಲಿಗಟ್ಟಲಾಗುತ್ತಿದೆ. ಹೀಗಾಗಿ ಇದು ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಜಾರಿ ಮಾಡಲಾಗಿರುವ ಕಾಯ್ದೆ ಎಂದು ಕಾಂಗ್ರೆಸ್‌ ಸೇರಿದಂತೆ ಹಲವು ವಿರೋಧ ಪಕ್ಷಗಳು ಆರೋಪಿಸಿವೆ. ಉತ್ತರ ಪ್ರದೇಶ ಸರ್ಕಾರದ ಕಾನೂನು ಬಾಹಿರ ಮತಾಂತರ ನಿಷೇಧ ಕಾಯ್ದೆಯೂ ಧರ್ಮಗಳ ದ್ವೇಷ ರಾಜಕೀಯದ ಮೂಲಕ ರಾಜ್ಯವನ್ನು ವಿಭಜನೆ ಮಾಡುತ್ತಿದೆ ಎಂದು ಕಿಡಿಕಾರಿವೆ. ಈ ಸುದ್ದಿ ಈಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಬಿಜೆಪಿ ಸರ್ಕಾರವು ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಿ ಒಂದು ತಿಂಗಳಲ್ಲೇ ಉತ್ತರ ಪ್ರದೇಶ ಪೊಲೀಸರು 14 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸುಮಾರು 51 ಮಂದಿಯನ್ನು ಬಂಧಿಸಲಾಗಿದೆ. ಈ 14 ಪ್ರಕರಣಗಳ ಪೈಕಿ 13 ಪ್ರಕರಣಗಳು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡಲು ಒತ್ತಡ ಹೇರಲಾಗಿದೆ ಎನ್ನುವ ಆರೋಪದಡಿ ದಾಖಲಿಸಲಾಗಿದೆ. ಇಂತಹ 12 ಪ್ರಕರಣಗಳಲ್ಲಿ ಸಂಬಂಧಿಕರು ದೂರು ದಾಖಲಿಸಿದರೆ, ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಸ್ವತಃ ಮಹಿಳೆಯರೇ ದೂರು ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಕೇಸ್‌ನಲ್ಲಿ ಮಹಿಳೆ ಮಾತ್ರ ವಯಸ್ಕಳು. ಇನ್ನು ಎಂಟು ಪ್ರಕರಣಗಳಲ್ಲಿ ಒಂದು ಜೋಡಿ ತಾವು ಸ್ನೇಹಿತರು ಎಂದು ಹೇಳಿಕೊಂಡಿದೆ. ಇನ್ನೊಂದು ಜೋಡಿ ತಾವು ಪ್ರೀತಿಯಲ್ಲಿದ್ದು, ಮದುವೆಯಾಗುವುದಾಗಿ ತಿಳಿಸಿದೆ. ಹೀಗಿದ್ದರೂ ಹಿಂದೂ ಬಲಪಂಥೀಯ ಸಂಘಟನೆಗಳಾದ ಆರ್‌ಎಸ್‌ಎಸ್‌, ವಿಎಚ್‌ಪಿ, ಬಜರಂಗ ದಳ ಕಾರ್ಯಕರ್ತರು ಮಧ್ಯಪ್ರವೇಶಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಸ್ಲಿಂ ಹುಡುಗನನ್ನು ಹಿಂದೂ ಹುಡುಗಿ ಮದುವೆಯಾಗಲು ನಾವು ಬಿಡುವುದಿಲ್ಲ ಎಂದು ಹಿಂದೂಪರ ಸಂಘಟನೆಗಳು ಪ್ರತಿಭಟಿಸುತ್ತಿವೆ.

ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಅಕ್ರಮ ಮತಾಂತರ, ಬಲವಂತ ಅತ್ಯಾಚಾರ ಸೇರಿದಂತೆ ಹಲವು ಆರೋಪದಡಿ ಕೇಸುಗಳು ದಾಖಲಿಸಲಾಗಿದೆ. ಹೀಗೆ ಕೇಸ್‌ ದಾಖಲಿಸಿದ ಹಲವರ ಪೈಕಿ ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯರೇ ಬಹುತೇಕರು.ಇತ್ತೀಚೆಗೆ 27 ವರ್ಷದ ಮೊಹಮ್ಮದ್‌ ಸಾಯೀದ್‌ ಎಂಬಾತನ ಹಿಂದೂ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ತನ್ನನ್ನು ಮತಾಂತರಕ್ಕೆ ಬಲವಂತ ಮಾಡಿದ ಮತ್ತು ಅತ್ಯಾಚಾರ ಮಾಡಿದ ಆರೋಪದಡಿ ಕೇಸ್‌ ದಾಖಲಿಸಲಾಗಿತ್ತು. ಆದರೆ, ಸ್ಥಳೀಯರು ಮಾತ್ರ ಇದು ಇಬ್ಬರ ಪ್ರೀತಿಯ ವಿಚಾರ. ಇಬ್ಬರ ನಡುವೆ ಬಿರುಕು ಬಂದ ಬಳಿಕ ಹೀಗೆ ಲವ್‌ ಜಿಹಾದ್‌ ಎಂದು ಹೇಳಲಾಗುತ್ತಿದೆ. ಇದೊಂದು ಸುಳ್ಳು ಆರೋಪ ಎಂದು ಹಿಂದೂ ಮಹಿಳೆ ದೂರನ್ನು ಅಲ್ಲೆಗೆಳೆದಿದ್ದಾರೆ.

ರಾಜ್ಯದಲ್ಲಿ ‘ಲವ್ ಜಿಹಾದ್’ ಎನ್ನುವ ಅಸಾಂವಿಧಾನಿಕ ಪದ ಬಳಸಿ ಅಮಾಯಕ ಮುಸ್ಲಿಮರನ್ನು ಜೈಲಿಗೆ ಕಳಿಸಲಾಗುತ್ತಿದೆ. ಈ ಕಾನೂನನ್ನು ಹಿಂದೂ ಸಂಘಟನೆಗಳು ಸ್ವೇಚ್ಚೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ತಲೆ ಕೆಡೆಸಿಕೊಳ್ಳುತ್ತಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com