ಕೋವಿಶೀಲ್ಡ್ ಜನಬಳಕೆ ವಿರುದ್ಧ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಮರ!

ವಾಸ್ತವವಾಗಿ ಸ್ವಾಮಿ ಎತ್ತಿರುವ ಪ್ರಶ್ನೆಗಳು ಭಾರತೀಯ ಆಡಳಿತ ಸ್ವಯಂ ಕೇಳಿಕೊಳ್ಳಬೇಕಾದ ಪ್ರಶ್ನೆಗಳೇ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆ ಮತ್ತು ಪ್ರಕರಣಗಳ ಸಂಖ್ಯೆ ಕೂಡ ಹಿಂದಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಹೊತ್ತಿನಲ್ಲಿ ಇಷ್ಟೊಂದು ತರಾತುರಿಯಲ್ಲಿ ಲಸಿಕೆ ಜನಬಳಕೆಗೆ ಮುಂದಾಗುವುದರ ಹಿಂದಿನ ಔಚಿತ್ಯವೇನು? ಎಂಬ ಪ್ರಶ್ನೆ ಎದ್ದಿದೆ.
ಕೋವಿಶೀಲ್ಡ್ ಜನಬಳಕೆ ವಿರುದ್ಧ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಮರ!

ಭಾರತದ ಔಷಧ ಗುಣಮಟ್ಟ ನಿಯಂತ್ರಣ ಕುರಿತ ತಜ್ಞರ ಸಮಿತಿ ಕೋವಿಶೀಲ್ಡ್ ಲಸಿಕೆ ಜನಬಳಕೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ಆ ಕುರಿತು ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲೇ ಅಪಸ್ವರ ಎದ್ದಿದೆ.

ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಅಸ್ಟ್ರಾಜೆನೆಕಾ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಬಳಸಲು ಶುಕ್ರವಾರವಷ್ಟೇ ಉನ್ನತ ಮಟ್ಟದ ತಜ್ಞರ ಸಮಿತಿ ಹಸಿರು ನಿಶಾನೆ ತೋರಿತ್ತು. ಅದರ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕ ಹಾಗೂ ಅರ್ಥಶಾಸ್ತ್ರಜ್ಞ ಸುಬ್ರಮಣಿಯನ್ ಸ್ವಾಮಿ ಅವರು, ಆ ಲಸಿಕೆಯನ್ನು ಭಾರತದಲ್ಲಿ ಜನಬಳಕೆಗೆ ನೀಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಆ ಲಸಿಕೆಗೆ ಈವರೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿಲ್ಲ. ಹಾಗಾಗಿ ಅಂತಹ ಲಸಿಕೆಯನ್ನು ಭಾರತೀಯರ ಮೇಲೆ ಪ್ರಯೋಗಿಸಲು ಭಾರತೀಯರು ಪ್ರಯೋಗ ಪಶುಗಳಲ್ಲ ಎಂದು ಅವರು ಸರಣಿ ಟ್ವೀಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬಹುನಿರೀಕ್ಷಿತ ಕೋವಿಡ್ ಲಸಿಕೆ ದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಜನಬಳಕೆಗೆ ಲಭ್ಯವಾಗುವ ಹೊಸ್ತಿಲಲ್ಲಿ ಇರುವಾಗ, ಸ್ವಾಮಿ ಅವರು ಆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ದೇಶದ ಜನರನ್ನು ವಿದೇಶಿ ಔಷಧ ಮತ್ತು ಲಸಿಕೆ ತಯಾರಿಕಾ ಕಂಪನಿಗಳು ಗಿನಿ ಪಿಗ್(ಔಷಧ ಪ್ರಯೋಗಗಳಲ್ಲಿ ಬಳಸುವ ಪ್ರಾಣಿ) ರೀತಿ ಬಳಸಿಕೊಳ್ಳುತ್ತಿವೆ. ಲಸಿಕೆಯ ವಿಷಯದಲ್ಲಿ ಭಾರತ ಎಚ್ಚರಿಕೆ ವಹಿಸಬೇಕಾಗಿದೆ. ಇಂತಹ ವಿಷಯದಲ್ಲಿ ನಿಜವಾದ ಆತ್ಮನಿರ್ಭರ ಭಾರತ ಎಂಬುದು ಮುಖ್ಯವಾಗಬೇಕು. ಏಕೆಂದರೆ, ಅದು ದೇಶದ ಜನರ ಜೀವದ ಪ್ರಶ್ನೆ ಎಂದು ಸ್ವಾಮಿ ಪರೋಕ್ಷವಾಗಿ ಪ್ರಧಾನಿ ಮೋದಿಯವರಿಗೆ ಕಿವಿಮಾತು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಾಸ್ತವವಾಗಿ ಆಕ್ಸ್ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾದ ಲಸಿಕೆಯನ್ನು ಭಾರತದಲ್ಲಿ ಸೀರಂ ಇನ್ಸ್ ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಜೊತೆಗೆ ಭಾರತೀಯ ಮೂಲದ ಭಾರತ್ ಬಯೋಟೆಕ್ ಉತ್ಪಾದಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅನುಮೋದನೆಗೂ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶಕರರಿಗೆ ಮನವಿ ಮಾಡಲಾಗಿತ್ತು. ಆದರೆ, ಶುಕ್ರವಾರ ನಡೆದ ತಜ್ಞರ ಸಮಿತಿ ಸಭೆಯಲ್ಲಿ ‘ಕೋವಿಶೀಲ್ಡ್’ ಲಸಿಕೆಗೆ ಮಾತ್ರ ಅನುಮೋದನೆ ನೀಡಿದ್ದು, ಭಾರತ್ ಬಯೋಟೆಕ್ ಲಸಿಕೆ ಇನ್ನೂ ಮೂರನೇ ಹಂತ್ರದ ಕ್ಲಿನಿಕಲ್ ಪ್ರಯೋಗದಲ್ಲಿರುವುದರಿಂದ ಅದರ ಕುರಿತ ಇನ್ನಷ್ಟು ವಿವರಗಳು ಬೇಕು ಎಂದು ಮಾಹಿತಿ ಕೋರಿದೆ. ಆ ಹಿನ್ನೆಲೆಯಲ್ಲಿ ಸದ್ಯ ಭಾರತದಲ್ಲಿ ಕೋವಿಶೀಲ್ಡ್ ಮಾತ್ರ ಜನಬಳಕೆಗೆ ತಜ್ಞರ ಸಮಿತಿಯ ಅನುಮೋದನೆ ಪಡೆದಿದೆ.

ಸದ್ಯ ಭಾರತೀಯ ಉತ್ಪಾದನೆಯ ಲಸಿಕೆಗಳಲ್ಲೇ, ಪ್ರಯೋಗದ ಹಂತದಲ್ಲಿ ಉತ್ತಮ ಪ್ರಗತಿ ಕಂಡಿರುವ ಕೋವಾಕ್ಸಿನ್ ದೇಶೀಯ ಲಸಿಕೆ. ಆ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಮಹತ್ವ ಪಡೆದುಕೊಂಡಿದ್ದು, ವಿದೇಶಿ ಸಂಸ್ಥೆಯ ಲಸಿಕೆಯನ್ನು ಭಾರತೀಯರ ಮೇಲೆ ತರಾತುರಿಯಲ್ಲಿ ಪ್ರಯೋಗಿಸುವ ಮೂಲಕ ನಮ್ಮ ಜನರನ್ನು ಅವರ ಲಸಿಕೆ ಪರೀಕ್ಷೆಗೆ ಪ್ರಯೋಗಪಶುಗಳನ್ನಾಗಿಸುವುದು ಬೇಡ. ಇನ್ನು ಒಂದೆರಡು ತಿಂಗಳಲ್ಲಿ ನಮ್ಮದೇ ದೇಸಿ ಲಸಿಕೆ ಸಿದ್ಧವಾಗುವವರೆಗೆ ಕಾಯುವುದು ಕ್ಷೇಮ ಎಂಬುದು ಸ್ವಾಮಿ ಅವರ ಸರಣಿ ಟ್ವೀಟ್ ನ ಒಟ್ಟಾರೆ ಸಾರಾಂಶ. ಜೊತೆಗೆ ಎಲ್ಲಾ ವಿಷಯದಲ್ಲಿಯೂ ಆತ್ಮನಿರ್ಭರ ಮಂತ್ರ ಪಠಿಸುವ ಮೋದಿಯವರ ಸರ್ಕಾರ, ಈ ಬಹುಕೋಟಿ ಲಸಿಕೆಯ ವಿಷಯದಲ್ಲಿ ಯಾಕೆ ಪರದೇಸಿ ಪ್ರೇಮ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ದೇಶಾದ್ಯಂತ ಡ್ರೈ ರನ್ ಮೂಲಕ ಲಸಿಕೆ ನೀಡಿಕೆಗೆ ಈಗಾಗಲೇ ಪೂರ್ವಭಾವಿ ತಾಲೀಮುಗಳನ್ನು ನಡೆಸುವ ಮೂಲಕ ದೇಶದ ಆಡಳಿತ ಮತ್ತು ವೈದ್ಯಕೀಯ ವಲಯ ಭರ್ಜರಿ ಸಿದ್ಧತೆ ನಡೆಸಿರುವ ನಡುವೆಯೇ ಆ ಲಸಿಕೆಯು ಭಾರತೀಯರ ಮೇಲೆ ಪ್ರಯೋಗಕ್ಕೆ ಬಳಕೆಯಾಗುತ್ತಿದೆ ಎಂಬ ಸ್ವಾಮಿ ಅವರ ಈ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಅದರಲ್ಲೂ ಅವರು ಗಿನಿ ಪಿಗ್ ಎಂಬ ಪದ ಬಳಕೆಯ ಜೊತೆಗೆ, ಈ ಲಸಿಕೆಯ ಜನಬಳಕೆಗೆ ಪ್ರಧಾನಿ ಮೋದಿಯವರ ಆಡಳಿತ ಅನುಮೋದನೆ ನೀಡಿರುವುದು ದೇಶದ ಆಂತರಿಕ ಭದ್ರತೆಯ ಕುರಿತ ಆತಂಕಕಾರಿ ಬೆಳವಣಿಗೆ ಎಂಬ ಮಾತನ್ನೂ ಸೇರಿಸಿದ್ದಾರೆ. ಹಾಗಾಗಿ ಸಹಜವಾಗೇ ಲಸಿಕೆಯ ವಿಷಯದಲ್ಲಿ ಮೋದಿಯವರ ಸರ್ಕಾರ ದೇಶದ ಜನರ ಜೀವದ ಜೊತೆ ರಾಜೀಮಾಡಿಕೊಂಡಿದೆಯೇ? ಆ ಮೂಲಕ ದೇಶದ ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ಕೂಡ ಮೋದಿ ಆಡಳಿತ ರಾಜೀ ಮಾಡಿಕೊಂಡುಬಿಟ್ಟಿದೆಯೇ ? ಎಂಬ ಪ್ರಶ್ನೆಗಳೂ ಎದ್ದಿವೆ.

“ಆತ್ಮನಿರ್ಭರ ಭಾರತ ಎಂಬ ತನ್ನ ಘೋಷಣೆಗೆ ಭಾರತ ಸರ್ಕಾರ ನಿಜವಾಗಿಯೂ ಬದ್ಧವಾಗಿದ್ದರೆ, ಅದು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುವ ಲಸಿಕೆಯನ್ನು ಮಾತ್ರ ಬಳಸಬೇಕು. ನಾವು ಅದಕ್ಕಾಗಿ ಕೆಲವು ತಿಂಗಳು ಕಾಯಬೇಕಾಗಬಹುದು, ಆದರೂ, ವಿದೇಶಿಯರು ಭಾರತೀಯರನ್ನು ಗಿನಿ ಪಿಗ್ ಆಗಿ ಬಳಸುತ್ತಿರುವುದನ್ನು ಗಮನಿಸಿದರೆ, ಹಾಗೆ ಕಾಯುವುದು ದೊಡ್ಡದಲ್ಲ. ಇಂತಹ ವಿಷಯಗಳು ದೇಶದ ಆಂತರಿಕ ಭದ್ರತೆಯ ಕುರಿತ ಆತಂಕಕಾರಿ ಬೆಳವಣಿಗೆ. ಆ ಹಿನ್ನೆಲೆಯಲ್ಲಿ ನಮಗೆ ಈಗ ಲಸಿಕೆಯ ವಿಷಯದಲ್ಲಿ ಆತ್ಮನಿರ್ಭರ ಭಾರತವೊಂದೇ ಇರುವ ಸುರಕ್ಷಿತ ದಾರಿ” ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ವಾಸ್ತವವಾಗಿ ಸ್ವಾಮಿ ಎತ್ತಿರುವ ಪ್ರಶ್ನೆಗಳು ಭಾರತೀಯ ಆಡಳಿತ ಸ್ವಯಂ ಕೇಳಿಕೊಳ್ಳಬೇಕಾದ ಪ್ರಶ್ನೆಗಳೇ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆ ಮತ್ತು ಪ್ರಕರಣಗಳ ಸಂಖ್ಯೆ ಕೂಡ ಹಿಂದಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಹೊತ್ತಿನಲ್ಲಿ ಇಷ್ಟೊಂದು ತರಾತುರಿಯಲ್ಲಿ ಲಸಿಕೆ ಜನಬಳಕೆಗೆ ಮುಂದಾಗುವುದರ ಹಿಂದಿನ ಔಚಿತ್ಯವೇನು? ಅದರ ಹಿಂದೆ ನೈಜ ಜನಪರ ಕಾಳಜಿ ಕೆಲಸ ಮಾಡುತ್ತಿದೆಯೇ? ಅಥವಾ ವ್ಯಾವಹಾರಿಕ ಹಿತಾಸಕ್ತಿಗಳು, ಔಷಧ ಕಂಪನಿಗಳ ಲಾಭಿ ಮೇಲುಗೈ ಪಡೆದಿದೆಯೇ ಎಂಬ ಗಂಭೀರ ಪ್ರಶ್ನೆಗಳಿಗೆ ಸ್ವಾಮಿ ಅವರು ಎತ್ತಿರುವ ಆತಂಕ ಇಂಬು ನೀಡಿದೆ.

ಹಾಗೇ ಸ್ವಾಮಿ ಅವರ ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅವರು ಮತ್ತು ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಪ್ರಾಯೋಕತ್ವ ವಹಿಸಿರುವ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಷನ್ ನಡುವಿನ ದಶಕಗಳ ವೈಮನಸ್ಯ ಕೂಡ ಕೆಲಸ ಮಾಡಿದೆ ಎಂಬ ಮಾತುಗಳೂ ಕೇಳಿಬಂದಿವೆ. ಏಕೆಂದರೆ; ವಾಸ್ತವವಾಗಿ ಭಾರತದಲ್ಲಿ ಸೀರಂ ಇನ್ಸ್ ಸ್ಟಿಟ್ಯೂಟ್ ಆಕ್ಸ್ಫರ್ಡ್ ಲಸಿಕೆ ಉತ್ಪಾದಿಸುತ್ತಿದ್ದರೂ ಅದಕ್ಕೆ ಬಿಲ್ ಗೇಟ್ಸ್ ಫೌಂಡೇಷನ್ ಸುಮಾರು 150 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ದೊಡ್ಡ ಮೊತ್ತದ ಹಣಕಾಸು ನೆರವು ನೀಡಿದೆ. ಬಿಲ್ ಗೇಟ್ಸ್ ಫೌಂಡೇಷನ್ ಕುರಿತ ಸ್ವಾಮಿ ಅವರ ಟೀಕೆ ಮತ್ತು ಆರೋಪಗಳಿಗೆ ದಶಕಗಳ ಇತಿಹಾಸವಿದೆ. ತೀರಾ ಇತ್ತೀಚೆಗೆ 2017ರಲ್ಲಿ ಆರ್ ಬಿಐ ಮಂಡಳಿಯಲ್ಲಿ ತನ್ನ ಪರ ಲಾಬಿ ಮಾಡುವವರನ್ನು ತೂರಿಸುವ ಮೂಲಕ ಬಿಲ್ ಗೇಟ್ಸ್ ಫೌಂಡೇಷನ್ ಅಮೆರಿಕದ ಪರೀಕ್ಷೆಗೊಳಗಾದ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗಿಸುವ ಸಂಚು ಮಾಡಿದೆ ಎಂದು ಟ್ವೀಟ್ ಮಾಡಿದ್ದರು.

ಅಲ್ಲದೆ, ಅವರು ಈ ಹಿಂದೆ 2018ರಲ್ಲಿ ಚಿಕೂನ್ ಗುನ್ಯಾ ಮತ್ತು ಡೆಂಗೆ ಹರಡುವ ಸೊಳ್ಳೆ ನಿಯಂತ್ರಣಕ್ಕೆ ಭಾರತದಲ್ಲಿ ವಂಶವಾಹಿ ತಿರುಚಿದ ಸೊಳ್ಳೆಗಳ ಪ್ರಯೋಗ ನಡೆಸುವ ಬಗ್ಗೆ ಪ್ರತಿಕ್ರಿಯಿಸುತ್ತಾ ಭಾರತೀಯರನ್ನು ವಿದೇಶಿ ಕಂಪನಿಗಳು ಗಿನಿ ಪಿಗ್ ಆಗಿ ಬಳಸಿಕೊಳ್ಳುತ್ತಿವೆ ಎಂಬ ಮಾತನ್ನೂ ಆಡಿದ್ದರು. ಆ ಹಿನ್ನೆಲೆಯಲ್ಲಿ ಅವರ ಈಗಿನ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪರ-ವಿರೋಧದ ಅಭಿಪ್ರಾಯಗಳ ಬಿರುಗಾಳಿ ಎಬ್ಬಿಸಿದೆ.

--

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com