ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಆಂತರಿಕ ಬದಲಾವಣೆಗಳನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟೀಕಿಸಿದ್ದಾರೆ.
ಪಕ್ಷವನ್ನು ಪುನರುಜ್ಜೀವನಗೊಳಿಸುವ ಹಿನ್ನೆಲೆಯಲ್ಲಿ 32 ಉಪಾಧ್ಯಕ್ಷರನ್ನೂ, 57 ಪ್ರಧಾನ ಕಾರ್ಯದರ್ಶಿ ಹಾಗೂ 104 ಕಾರ್ಯದರ್ಶಿಗಳನ್ನು ಒಳಗೊಂಡ ಬೃಹತ್ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ.
ಇದನ್ನು ಟ್ವಿಟರಿನಲ್ಲಿ ಟೀಕಿಸಿರುವ ಕಾರ್ತಿ ಚಿದಂಬರಂ, ಇಂತಹ ಬೃಹತ್ ಸಮಿತಿಗಳಿಂದ ಯಾವುದೇ ಪ್ರಯೋಜನವಿಲ್ಲ, 32 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿ ಹಾಗೂ 104 ಕಾರ್ಯದರ್ಶಿಗಳಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ ಎಂದಿದ್ದಾರೆ.ಅವರು ಮಾಡಿರುವ ಟ್ವೀಟಿನಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರನ್ನು ಉಲ್ಲೇಖಿಸಿದ್ದಾರೆ.
ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿ, ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, ಪ್ರದೇಶ ಚುನಾವಣಾ ಸಮಿತಿ, ಚುನಾವಣಾ ಸಮನ್ವಯ ಸಮಿತಿ, ಚುನಾವಣಾ ಪ್ರಚಾರ ಸಮಿತಿ, ಪ್ರಣಾಳಿಕೆ ನೇಮಕ ಮಾಡುವ ಸಮಿತಿ ಪ್ರಸ್ತಾಪಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ನೀಡಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್ ನ (ಟಿಎನ್ಸಿಸಿ) ಮಾಧ್ಯಮ ಸಮನ್ವಯ ಸಮಿತಿ ಹಾಗೂ ಚುನಾವಣಾ ನಿರ್ವಹಣಾ ತಂಡ ತಿಳಿಸಿದೆ.
ಪಕ್ಷವು ರಚಿಸಿರುವ 56 ಸದಸ್ಯರ ಕಾರ್ಯಕಾರಿ ಸಮಿತಿಯು ಟಿಎನ್ಸಿಸಿ ಅಧ್ಯಕ್ಷ ಕೆ.ಎಸ್.ಅಲಗಿರಿ ಅವರ ನೇತೃತ್ವದಲ್ಲಿದೆ ಮತ್ತು ಮಾಜಿ ಕೇಂದ್ರ ಸಚಿವರಾದ ಚಿದಂಬರಂ ಮತ್ತು ಅಯ್ಯರ್ ಮತ್ತು ಸಂಸದರಾದ ಎ ಚೆಲ್ಲಕುಮಾರ್, ಬಿ ಮಾಣಿಕಂ ಟ್ಯಾಗೋರ್, ಕಾರ್ತಿ ಚಿದಂಬರಂ, ಎಸ್ ಜೋತಿಮಣಿ, ಕೆ ಜಯಕುಮಾರ್ ಮುಂತಾದವರು ಸದಸ್ಯರಾಗಿದ್ದಾರೆ.