ʼಒಂದು ದೇಶ ಒಂದು ಚುನಾವಣೆʼ ಪರವಾಗಿ ಸರಣಿ ವೆಬಿನಾರು ಆಯೋಜಿಸುತ್ತಿರುವ ಬಿಜೆಪಿ

ಒಂದೇ ಚುನಾವಣೆಯು ದೇಶದ ಹಣಕಾಸಿನ ದೃಷ್ಟಿಯಿಂದ ಉತ್ತಮ ಯೋಚನೆಯಾದರೂ ಪ್ರಾಯೋಗಿಕವಾಗಿ ಕಾರ್ಯ ಸಾಧುವಲ್ಲ. ಅನುಕೂಲತೆ, ಸ್ಥಳೀಯ ಸಮಸ್ಯೆಗಳು, ವಿಚಾರ ಬೇರೆ ಬೇರೆಯಾಗಿರುವ ಹಲವು ರಾಜ್ಯಗಳ ಒಕ್ಕೂಟದಂತಹ ನಮ್ಮ ದೇಶದಲ್ಲಿ ಇದನ್ನು ಜಾರಿಗೆ ತರುವುದೇ ಕಷ್ಟ.
ʼಒಂದು ದೇಶ ಒಂದು ಚುನಾವಣೆʼ ಪರವಾಗಿ ಸರಣಿ ವೆಬಿನಾರು ಆಯೋಜಿಸುತ್ತಿರುವ ಬಿಜೆಪಿ

'ಒಂದು ದೇಶಕ್ಕೆ ಒಂದೇ ಚುನಾವಣೆ' ಎನ್ನುವ ಪರಿಕಲ್ಪನೆಯ ಮೇಲೆ ಬಿಜೆಪಿ ಸರಣಿ ವೆಬಿನಾರ್ಗಳನ್ನು ಆಯೋಜಿಸಿದೆ. ಗುರುವಾರದ ವೆಬಿನಾರ್ನಲ್ಲಿ ಬಿಜೆಪಿಯ ವಕ್ತಾರ ಅನಿಲ್ ಬಲೂನಿ ಅವರು "ದೇಶದ ಒಂದಲ್ಲ ಒಂದು ಭಾಗದಲ್ಲಿ ಪ್ರತಿದಿನ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದೇ ಇರುತ್ತದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತವೆ ಮತ್ತು ಸಾರ್ವಜನಿಕ ದುಡ್ಡನ್ನು ಪೋಲು ಮಾಡಿದಂತಾಗುತ್ತದೆ" ಎಂದಿದ್ದಾರೆ.

ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ಪಕ್ಷದ ಮತ್ತೊಬ್ಬ ನಾಯಕ ಸುಧಾಂಶು ತ್ರಿವೇದಿ " ಒಂದು ದೇಶ, ಒಂದೇ ಚುನಾವಣೆಯಿಂದ ಪಕ್ಷವಾರು ರಾಜಕೀಯಕ್ಕೆ ಯಾವುದೇ ತೊಂದರೆ ಇಲ್ಲ, ಇದು 'ಸ್ವಚ್ಛ ಭಾರತ್'ನಂತೆ ಕಾರ್ಯ ನಿರ್ವಹಿಸಲಿದ್ದು ಇಡೀ ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಯಲಿದೆ" ಎಂದಿದ್ದಾರೆ. "ತೀವ್ರ ಸ್ಪರ್ಧಾತ್ಮಕವಾಗಿರುವ ಚುನಾವಣೆಗಳಲ್ಲಿ ಪದೇ ಪದೇ ಜಾತೀಯತೆ ಮತ್ತು ಕೋಮುವಾದ ತಲೆ ಹಾಕುತ್ತದೆ. ಇದು ಸಾಮಾಜಿಕ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ" ಎಂದೂ ಹೇಳಿದ್ದಾರೆ.

ಒಂದೇ ಚುನಾವಣೆಯಿಂದಾಗಿ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ ಎಂಬುವುದನ್ನು ನಿರಾಕರಿಸಿದ ಅವರು ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆ ನಡೆದ ಹಲವು ಸಂದರ್ಭಗಳಲ್ಲಿ ಮತದಾರರು ಎರಡು ಬೇರೆ ಬೇರೆ ಸರ್ಕಾರಗಳನ್ನು ಆರಿಸಿದ ನಿದರ್ಶನಗಳೂ ಇವೆ ಎಂದಿದ್ದಾರೆ.

ಇನ್ನೊಂದು ವೆಬಿನಾರಿನಲ್ಲಿ ಬಿಜೆಪಿಯ ಟಾಮ್ ವೆದಕ್ಕನ್ ಅವರು ಒಂದೇ ಚುನಾವಣೆಯಿಂದಾಗಿ ಸರ್ಕಾರಿ ವೆಚ್ಚಗಳು ಕಡಿಮೆಯಾಗಲಿದ್ದು ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಹಿರಿಯ ವಕೀಲರಾದ ರಾಕೇಶ್ ಗೊಸೈನ್ ಅವರು ಒಂದು ದೇಶಕ್ಕೆ ಒಂದೇ ಚುನಾವಣೆ ಎನ್ನುವ ಪರಿಕಲ್ಪನೆ ಪ್ರಜಾಪ್ರಭುತ್ವ ವಿರೋಧಿ ಅಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಹಲವು ಬಾರಿ ಮಾತನಾಡಿದ್ದು 2019ರ ಚುನಾವಣಾ ಪ್ರಣಾ ಳಿಕೆಯಲ್ಲೂ ಒಂದೇ ಚುನಾವಣೆಯ ಬಗ್ಗೆ ಪ್ರಸ್ತಾಪಿಸಲಾಗಿದೆ.

ಒಂದೇ ಚುನಾವಣೆ ಎನ್ನುವುದು ಭಾರತಕ್ಕೆ ಹೊಸತೇನೂ ಅಲ್ಲ. 1967ರ ವರೆಗೆ ಭಾರತದಲ್ಲಿ ಏಕಕಾಲಕ್ಕೆ ಲೋಕಸಭೆಗೆ ಮತ್ತು ವಿಧಾನಸಭೆಗೆ ಚುನಾವಣೆ ನಡೆಯುತ್ತಿತ್ತು. 1968ರಲ್ಲಿ ಕೆಲವು ವಿಧಾನ ಸಭೆಗಳು ಮತ್ತು 1970ರಲ್ಲಿ ಲೋಕಸಭೆಯು ಅಕಾಲದಲ್ಲಿ ವಿಸರ್ಜನೆಯಾದ ನಂತರ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲು ಆರಂಭಿಸಲಾಯಿತು.

ಒಂದೇ ಚುನಾವಣೆಯು ದೇಶದ ಹಣಕಾಸಿನ ದೃಷ್ಟಿಯಿಂದ ಉತ್ತಮ ಯೋಚನೆಯಾದರೂ ಪ್ರಾಯೋಗಿಕವಾಗಿ ಕಾರ್ಯ ಸಾಧುವಲ್ಲ. ಅನುಕೂಲತೆ, ಸ್ಥಳೀಯ ಸಮಸ್ಯೆಗಳು, ವಿಚಾರ ಬೇರೆ ಬೇರೆಯಾಗಿರುವ ಹಲವು ರಾಜ್ಯಗಳ ಒಕ್ಕೂಟದಂತಹ ನಮ್ಮ ದೇಶದಲ್ಲಿ ಇದನ್ನು ಜಾರಿಗೆ ತರುವುದೇ ಕಷ್ಟ.

1998ರಲ್ಲಿ ಲೋಕಸಭೆಯು ಕೇವಲ 13 ದಿನಗಳಲ್ಲಿ ವಿಸರ್ಜನೆಯಾದಂತೆ ವಿಸರ್ಜನೆಯಾದರೆ ಇಡೀ ದೇಶದ ಚುನಾವಣೆಯನ್ನು ಎಷ್ಟು ಕಾಲದ ವರೆಗೆ ಮುಂದೂಡಬಹುದು? ಅಥವಾ ಒಂದು ದೇಶಕ್ಕೆ ಒಂದೇ ಚುನಾವಣೆ ಎನ್ನುವ ನಿಯಮದಡಿ ದೇಶದ ಎಲ್ಲಾ ರಾಜ್ಯ ಸರ್ಕಾರಗಳನ್ನು ವಿಸರ್ಜನೆ ಮಾಡಿ ಹೊಸದಾಗಿ ಲೋಕಸಭೆಯೊಂದಿಗೇ ಚುನಾವಣೆ ನಡೆಸುವುದೇ? ದೇಶವನ್ನು ರಾಷ್ಟ್ರಪತಿ ಆಡಳಿತದಡಿ ತರುವುದೇ?

ರಾಜ್ಯಗಳಲ್ಲಿ ಈಗ ಮೈತ್ರಿ ಸರ್ಕಾರಗಳೇ ಹೆಚ್ಚಾಗಿವೆ. ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಪಕ್ಷಗಳು ಯಾವುದಾದರೊಂದು ರಾಜ್ಯ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನು ವಾಪಾಸು ಪಡೆದುಕೊಂಡರೆ ಆ ರಾಜ್ಯದ ಚುನಾವಣೆಯನ್ನು ಲೋಕಸಭೆಗೆ ಚುನಾವಣೆ ನಡೆಯುವ ವರೆಗೆ ಮುಂದೂಡಿ ರಾಜ್ಯಪಾಲರ ಆಡಳಿತ ಹೇರುವುದೇ? ಇದು ಭಾರತದಂತಹ ಸಂಯುಕ್ತ ವ್ಯವಸ್ಥೆಯನ್ನು ಹೊಂದಿರುವ ಸಂವಿಧಾನಕ್ಕೆ ಮಾರಕವಲ್ಲವೇ?

ಚುನಾವಣೆಗಳು, ಸರ್ಕಾರದ ಆಯ್ಕೆ ಸ್ಥಳೀಯ ಸಮಸ್ಯೆಗಳು ಮತ್ತು ಆದ್ಯತೆಗಳ ಮೇಲೆ ಅವಲಂಬಿತವಾಗಿರಬೇಕು. ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲುವುದು ಪ್ರತಿನಿಧಿಗಳ ಮತ್ತು ಜನರ ಸಂವಹನದಿಂದ. ಏಕ ಚುನಾವಣೆಯಿಂದಾಗಿ ಸ್ಥಳೀಯ ಆದ್ಯತೆಗಳು ಮತ್ತು ರಾಷ್ಟ್ರೀಯ ವಿಚಾರಗಳು ಮಿಶ್ರಣವಾಗುವ, ಜನ ಗೊಂದಲಕ್ಕೊಳಗಾಗುವ ಎಲ್ಲಾ ಸಾಧ್ಯತೆಗಳು ಇವೆ. ಈಗಾಗಲೇ ಧರ್ಮ, ರಾಷ್ಟ್ರೀಯತೆ, ಧಾರ್ಮಿಕ ಅಸ್ಮತೆಗಳು ಮತಬೇಟೆಯ ಮೂಲವಾಗಿರುವ ಭಾರತದಲ್ಲಿ 'ಒಂದು ದೇಶಕ್ಕೆ ಒಂದೇ ಚುನಾವಣೆ' ಎನ್ನುವ ಕಲ್ಪನೆಯು ಮತ್ತೊಂದು ಸುತ್ತಿನ ಸಾಂಸ್ಕೃತಿಕ ಪಲ್ಲಟಗಳಿಗೆ, ಸ್ಥಳೀಯತೆಯು ಮೂಲೆಗುಂಪಾಗುವುದಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com