ಕೋಮು ಘರ್ಷಣೆ ಬಳಿಕ ಅಭಿವೃದ್ಧಿ ಹೆಸರಿನಲ್ಲಿ ಮನೆಗಳನ್ನು ಒಡೆದ ಅಧಿಕಾರಿಗಳು

ಇಂದೋರ್ ನ ಚಂದಂಖೇಡ್ ಗ್ರಾಮದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಗುಂಪೊಂದು ರಾಮ ಮಂದಿರ ನಿರ್ಮಾಣ ಕುರಿತು ನಿಧಿ ಸಂಗ್ರಹಣೆಯಲ್ಲಿ ತೊಡಗಿತ್ತು. ಆಗ ಮಸೀದಿಯೊಂದರ ಮುಂದೆ ನಿಂತು ಹನುಮಾನ್ ಚಾಲೀಸಾ ಪಠಿಸಿ ಮಸೀದಿಗೆ ಹಾನಿ ಮಾಡಲು ಯತ್ನಿಸಿತು ಎಂದು ಆರೋಪಿಸಲಾಗಿದೆ.
ಕೋಮು ಘರ್ಷಣೆ ಬಳಿಕ ಅಭಿವೃದ್ಧಿ ಹೆಸರಿನಲ್ಲಿ ಮನೆಗಳನ್ನು ಒಡೆದ ಅಧಿಕಾರಿಗಳು

ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಅಲ್ಪ ಸಂಖ್ಯಾತರಿಗೆ ಸೂಕ್ತ ರಕ್ಷಣೆ ಇಲ್ಲ ಎಂಬ ಆರೋಪ ಕೇಳಿ ಬರುತ್ತಿರುವ ಸಮಯದಲ್ಲೇ ಸರ್ಕಾರೀ ಅಧಿಕಾರಿಗಳು ಒಂದು ವರ್ಗದ ಪರ ಕೆಲಸ ಮಾಡುತ್ತಿರುವುದು ಅಲ್ಪ ಸಂಖ್ಯಾತರಲ್ಲಿ ಆತಂಕ ಸೃಷ್ಟಿಸುತ್ತಿದೆ. ಸಾಕಷ್ಟು ಸಂದರ್ಭಗಳಲ್ಲಿ ಅಧಿಕಾರಿ ವರ್ಗ ಮತ್ತು ಆಡಳಿತ ಯಂತ್ರ ಕಾನೂನು ಜಾರಿಗೊಳಿಸುವಿಕೆಯಲ್ಲಿ ತಾರತಮ್ಯ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇತ್ತೀಚೆಗೆ ಇಂತಹುದೇ ಒಂದು ನಿದರ್ಶನ ಮಧ್ಯ ಪ್ರದೇಶದ ಇಂದೋರ್ ನಿಂದ ವರದಿ ಆಗಿದೆ.

ಇಂದೋರ್ ನಲ್ಲಿ ಕಳೆದ ಡಿಸೆಂಬರ್ 29 ರಂದು ಕೋಮು ಘರ್ಷಣೆ ಸಂಭವಿಸಿದ ನಂತರ ಮಾರನೇ ದಿನವೇ ಸರ್ಕಾರಿ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕಾಗಿ 80 ಮನೆಗಳನ್ನು ಧ್ವಂಸ ಮಾಡಿರುವುದಾಗಿ ಪತ್ರಿಕಾ ವರದಿಗಳು ತಿಳಿಸಿವೆ.

ಸ್ಥಳೀಯ ನಿವಾಸಿಗಳ ಹೇಳಿಕೆ ಪ್ರಕಾರ, ಮನೆಗಳನ್ನು ಧ್ವಂಸಗೊಳಿಸುವ ಕೆಲವೇ ಗಂಟೆಗಳ ಮೊದಲು ನಿವಾಸಿಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೊದಲೇ ಘರ್ಷಣೆಯಿಂದ ತತ್ತರಿಸಿದ್ದ ನಿವಾಸಿಗಳಿಗೆ ಅಧಿಕಾರಿಗಳ ಈ ಅಚಾನಕ್‌ ಆದೇಶ ಆಘಾತ ನೀಡಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯೊಬ್ಬರು ʼಅಭಿವೃದ್ಧಿ ಕಾರ್ಯಗಳಿಗೆ ನಾವು ವಿರೋಧಿಗಳಲ್ಲ. ಆದರೆ ಘರ್ಷಣೆ ನಡೆದ ಪ್ರದೇಶದಲ್ಲಿ ಒಂದು ಸಮುದಾಯವನ್ನು ಗುರಿ ಮಾಡಬಾರದು, ಪಕ್ಷಪಾತ ಮಾಡಬಾರದುʼ ಎಂದಷ್ಟೇ ನಾವು ಬಯಸುತ್ತೇವೆ ಎಂದಿದ್ದಾರೆ.

ಕೋಮುಗಲಭೆ ನಡೆದ ಪ್ರದೇಶದ ರಸ್ತೆ ಸಮೀಪದ ಮುಸ್ಲಿಮರ ಮನೆಗಳನ್ನು ರಸ್ತೆ ಅಗಲೀಕರಣದ ಹೆಸರಿನಲ್ಲಿ ಧ್ವಂಸಗೊಳಿಸಿತ್ತು ಎಂದು ಕ್ಲಾರಿಯನ್‌ ಇಂಡಿಯಾ ವರದಿ ಮಾಡಿದೆ.

ಇಂದೋರ್ ನ ಚಂದಂಖೇಡ್ ಗ್ರಾಮದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಗುಂಪೊಂದು ರಾಮ ಮಂದಿರ ನಿರ್ಮಾಣ ಕುರಿತು ನಿಧಿ ಸಂಗ್ರಹಣೆಯಲ್ಲಿ ತೊಡಗಿತ್ತು. ಆಗ ಮಸೀದಿಯೊಂದರ ಮುಂದೆ ನಿಂತು ಹನುಮಾನ್ ಚಾಲೀಸಾ ಪಠಿಸಿ ಮಸೀದಿಗೆ ಹಾನಿ ಮಾಡಲು ಯತ್ನಿಸಿತು ಎಂದು ಆರೋಪಿಸಲಾಗಿದೆ. ಹಿಂದೂ ಕಾರ್ಯಕರ್ತರ ಗುಂಪು ಉಜ್ಜಯಿನಿಯಲ್ಲಿ ಗಲಭೆ ನಡೆಸಿದ ನಂತರ ರಾಜ್ಯದಲ್ಲಿ ನಡೆಸಿದ ಎರಡನೇ ಕೋಮು ಘರ್ಷಣೆ ಇದಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ
ಹಿರಿಯ ಪೋಲೀಸ್ ಅಧಿಕಾರಿಗಳ ಪ್ರಕಾರ ಗೌತಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಂಖೇಡ್ ಗ್ರಾಮದ ಮಸೀದಿಯ ಹೊರಗೆ ಸುಮಾರು 200 ಜನ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಿಂತು ಘೋಷಣೆಗಳನ್ನು ಕೂಗಿದರು, ಇದರಿಂದಾಗಿ ಮಸೀದಿಯ ಒಳಗಿದ್ದ ಜನರು ಮತ್ತು ಅವರ ನಡುವೆ ಮಾತಿನ ಚಕಮಕಿ ಮತ್ತು ಕಲ್ಲು ತೂರಾಟ ನಡೆಯಿತು . ಈ ಘರ್ಷಣೆಯ ಮಧ್ಯೆ, ಕೆಲವರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಾ ಮಸೀದಿಯ ಮಿನಾರ್ ಮೇಲೆ ಹತ್ತಿದರು ಮತ್ತು ಅದನ್ನು ಧ್ವಂಸ ಮಾಡಲು ಪ್ರಯತ್ನಿಸಿದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಮಾಧ್ಯಮಕ್ಕೆ ಲಭ್ಯವಿರುವ ಕೆಲವು ವೀಡಿಯೋ ದೃಶ್ಯಾವಳಿಗಳಲ್ಲಿ ಮಸೀದಿ ಪ್ರವೇಶಿಸಿದ ಹಲವಾರು ಯುವಕರು ಈ ಪ್ರದೇಶದ ಮನೆಗಳ ಮೇಲೆ ಹತ್ತುವುದು ಮತ್ತು ಕೇಸರಿ ಧ್ವಜಗಳನ್ನು ಹಾರಿಸುವುದನ್ನು ತೋರಿಸುತ್ತದೆ.

ಈ ಘರ್ಷಣೆಯ ಕುರಿತು ಮಾತನಾಡಿದ ಇಂದೋರ್‌ ನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಯೋಗೇಶ್ ದೇಶ್ಮುಖ್ ಅವರು ಇಲಾಖೆಯು ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಹಳ್ಳಿಯಿಂದ ಇಪ್ಪತ್ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡಿದೆ. ಎರಡೂ ಗುಂಪುಗಳ ಕಡೆಗಳಲ್ಲಿ ಹೆಚ್ಚಿನ ಬಂಧನಗಳು ನಡೆಯಲಿವೆ ಮತ್ತು ಮಸೀದಿಯ ಮೇಲೆ ಹತ್ತಿದ ಆರೋಪಿಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು ಮೊಕದ್ದಮೆ ದಾಖಲಿಸಲಾಗುವುದು ಎಂದರು. ಸ್ಥಳೀಯ ವರದಿಗಳ ಪ್ರಕಾರ, ಜಿಲ್ಲಾ ಕಲೆಕ್ಟರ್ ಮನೀಶ್ ಸಿಂಗ್ ಮತ್ತು ಎಸ್ಎಸ್ಪಿ ಹರಿನಾರಾಯಣ್ ಚಾರಿ ಮಿಶ್ರಾ ಅವರು ಮಂಗಳವಾರ ತಡರಾತ್ರಿವರೆಗೂ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದು ಉದ್ವಿಗ್ನತೆಯನ್ನು ತಗ್ಗಿಸಲು ಪ್ರಯತ್ನಿಸಿದರು. ನಗರದ ಕೆಲವು ಭಾಗಗಳಾದ ಚಂದಂಖೇಡ್, ಧರ್ಮತ್, ರುದ್ರಾಖ್ಯಾ, ಸುನಾಲಾ, ದುಧಖೇಡಿ ಮತ್ತು ಗೌತಂಪುರ ಮತ್ತು ಸ್ಯಾನ್ವೆರ್ ಪುರಸಭೆಗಳೂ ಸೇರಿದಂತೆ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಇದಾದ ನಂತರ ಬುಧವಾರ ರಸ್ತೆ ಅಭಿವೃದ್ದಿ ಮಾಡುವ ಕಾರಣ ನೀಡಿ ಸರ್ಕಾರೀ ಅದಿಕಾರಿಗಳು ಗ್ರಾಮದಲ್ಲಿ ಕನಿಷ್ಟ 80 ಮನೆಗಳ ಮುಂಭಾಗವನ್ನು ಒಡೆದು ಹಾಕಿದ್ದಾರೆ. ಆದರೆ ಸ್ಥಳಿಯ ನಿವಾಸಿಗಳ ಪ್ರಕಾರ ಈ ರಸ್ತೆ ಅಗಲೀಕರಣವು ಮಂಗಳವಾರ ನಡೆದ ಕೋಮು ಘರ್ಷಣೆಗೆ ಪ್ರತೀಕಾರವಾಗಿ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ.

ಈ ರಸ್ತೆ ಅಗಲೀಕರಣ ಕಾರ್ಯಾಚರಣೆಯನ್ನು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನೋಡಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ಸೋಂಕರ್ ಹೇಳುತ್ತಾರೆ. ಅವರ ಪ್ರಕಾರ ಇದು ಚಂದಂಖೇಡಿ ಗ್ರಾಮದ ಮುಖ್ಯ ರಸ್ತೆಯಾಗಿದ್ದು, ಇದು ಇತರ ಅನೇಕ ಹಳ್ಳಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಕಿರಿದಾಗಿದ್ದು ಅಗಲೀಕರಣ ಅನಿವಾರ್ಯವೂ ಆಗಿದ್ದು ಅನೇಕ ವರ್ಷಗಳಿಂದ ಅಗಲೀಕರಣಕ್ಕೆ ಸ್ಥಳಿಯರ ಒತ್ತಾಯ ಇತ್ತು. ಇದರಿಂದಾಗಿ ಸುಗಮ ಸಂಚಾರ ಸಾದ್ಯವಾಗುತ್ತದೆ ಆದರೆ ಇದನ್ನು ನಿರ್ದಿಷ್ಟ ಸಮುದಾಯದ ವಿರುದ್ದ ಕಾರ್ಯಾಚರಣೆ ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಮಧ್ಯ ಪ್ರದೇಶದಲ್ಲಿ ಒಂದೇ ವಾರದ ಅವಧಿಯಲ್ಲಿ ಎರಡು ಕೋಮು ಘರ್ಷಣೆಗಳು ನಡೆದಿರುವುದು ನಿರ್ದಿಷ್ಟ ಸಮುದಾಯವನ್ನು ಅಭದ್ರತೆಯ ಅಂಚಿಗೆ ತಂದು ನಿಲ್ಲಿಸಿದೆ. ಅಲ್ಪಸಂಖ್ಯಾತರು ತಮಗೆ ಸೂಕ್ತ ಸಮಯದಲ್ಲಿ ರಕ್ಷಣೆ ದೊರೆಯುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತಿದ್ದಾರೆ. ಆದರೆ ಕೋಮು ಭಾವನೆಗಳನ್ನೆ ಕೆರಳಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ಶಕ್ತಿಗಳಿಗೆ ಒಂದು ವರ್ಗದ ಆತಂಕ ಅರ್ಥವಾಗುತ್ತಿಲ್ಲ. ಅಥವಾ ಅರ್ಥವಾದರೂ ಕೂಡ ತಮ್ಮದೇ ರಾಜಕೀಯ ಲಾಭಕ್ಕಾಗಿ ಮೌನಧರಿಸಿವೆ ಎನ್ನಬಹುದು. ಈ ಕುರಿತು ಆಳುವ ಸರ್ಕಾರಗಳು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡು ಅಲ್ಪ ಸಂಖ್ಯಾತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com