ಕಡೆಯ ಅವಕಾಶವನ್ನೂ ಕಳೆದುಕೊಂಡ ರಜನಿಕಾಂತ್

ರಾಜಕೀಯ ಪ್ರವೇಶ ಮಾಡುವ ಬಗ್ಗೆ, ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ಬದಲಾವಣೆ ತರುವ ಬಗ್ಗೆ ಹಲವು ಬಾರಿ ಮಾತನಾಡಿರುವ ರಜನಿಕಾಂತ್ 'Now or Never' (ಈಗಲ್ಲದಿದ್ದರೆ ಎಂದಿಗೂ ಸಾಧ್ಯವಿಲ್ಲ) ಎಂದು ಹೇಳುತ್ತಿದ್ದರು. ಅದನ್ನವರು ಹೇಳುತ್ತಿದ್ದುದು 'ಈಗ ಸಾಧಿಸಿಯೇ ತೀರುತ್ತೇನೆ' ಎಂಬ ಅರ್ಥದಲ್ಲಿ. ಆದರೀಗ ಅದಕ್ಕೆ ವ್ಯತಿರಿಕ್ತವಾಗಿ 'ಈಗಲೂ ಇಲ್ಲ, ಮುಂದೆಯೂ ಮಾಡುವುದಿಲ್ಲ' ಎಂದು ವಿಮುಖರಾಗಿದ್ದಾರೆ.
ಕಡೆಯ ಅವಕಾಶವನ್ನೂ ಕಳೆದುಕೊಂಡ ರಜನಿಕಾಂತ್

ಚಿತ್ರನಟರಾಗಿ ರಜನಿಕಾಂತ್ ಮೊದಲು ನಟನೆಗೆ ಒತ್ತು ನೀಡಿದ್ದರು. ಆದರೆ ಕ್ರಮೇಣ ಅವರು ನಟನೆಗಿಂತ 'ಸ್ಟೈಲ್'ಗೆ ಹೆಚ್ಚು ಆದ್ಯತೆ ನೀಡಿದರು. ಅವರ ಈ 'ಬದಲಾವಣೆ'ಗೆ ಮೊದಲು ಮಾನ್ಯತೆ ಸಿಕ್ಕಿತಾದರೂ ನಂತರದಲ್ಲಿ ಜನಮನ್ನಣೆ ಗಳಿಸಲಿಲ್ಲ. ಇದು ರಜನಿಕಾಂತ್ ಸಿನಿಜಗತ್ತಿನ ಸ್ಥಿತ್ಯಂತರದ ಸಂಕ್ಷಿಪ್ತ ವಿವರ. ಕ್ರಮೇಣ ಅವರು ರಾಜಕಾರಣ ಪ್ರವೇಶ ಮಾಡುತ್ತಾರೆ ಎಂಬ ವದಂತಿ ಆಗಾಗ ಹಬ್ಬುತ್ತಿತ್ತು. ರಜನಿಕಾಂತ್ ಕೆಲವೊಮ್ಮೆ ಮೌನವಾಗಿ, ಕೆಲವೊಮ್ಮೆ ರಾಜಕೀಯ ಪ್ರವೇಶ ನಿರಾಕರಿಸುವ ಮೂಲಕ ಚರ್ಚೆಯನ್ನು ಜೀವಂತವಾಗಿ ಉಳಿಸಿದ್ದರು. ಇತ್ತೀಚೆಗೆ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಇದೇ ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ರೂಪುರೇಷೆಯನ್ನು ಪ್ರಕಟಿಸುವುದಾಗಿ ತಿಳಿಸಿದ್ದರು. ಈಗ 'ಪ್ರವೇಶಕ್ಕೂ ಮುನ್ನವೇ ರಾಜಕೀಯಕ್ಕೆ ವಿದಾಯ' ಘೋಷಿಸಿದ್ದಾರೆ.

ಅಳೆದು ತೂಗಿ ರಾಜಕೀಯ ಅಖಾಡಕ್ಕಿಳಿದಿದ್ದ ರಜನಿಕಾಂತ್ ಆರಂಭದಲ್ಲೇ ಸೋತಿದ್ದರು. ಅವರ ಸೋಲು ಇರುವುದು ಹಿಂಜರಿಕೆಯ ಗುಣದಿಂದ. ರಾಜಕಾರಣಿಗೆ ಇರಬೇಕಾದ ಮುನ್ನುಗ್ಗುವ ಗುಣ ಅವರಲ್ಲಿ ಎಂದೂ ಕಂಡುಬರಲಿಲ್ಲ. ಸಿನಿಮಾ ನಟರಾಗಿಯೂ ಅವರು ಇದೇ ರೀತಿ ಸದಾ 'ಸೇಫ್ ಝೋನ್'ನಲ್ಲಿ ಇದ್ದವರು. ತಮ್ಮ ಸಮಕಾಲೀನ ನಟ ಕಮಲ್ ಹಸನ್ ಅವರಂತೆ ರಜನಿಕಾಂತ್ ಎಂದೂ ತಮ್ಮ ಸಿನಿಮಾಗಳಲ್ಲಿ, ನಟನೆಯಲ್ಲಿ ಪ್ರಯೋಗ ಮಾಡಿದವರಲ್ಲ. ಮೂಲ ವೃತ್ತಿಯಲ್ಲೇ ಪ್ರಯೋಗ ಮಾಡದ ರಜನಿಕಾಂತ್ ರಾಜಕಾರಣದಲ್ಲಿ ಪ್ರಯೋಗ ಮಾಡುತ್ತೇನೆ ಎಂದಿದ್ದರು. 'ಆದ್ಮತ್ಮದ ರಾಜಕಾರಣ' ಮಾಡುತ್ತೇನೆ ಎಂದಿದ್ದರು. ಆದರೆ ಮಾಡಿದ್ದು ಮಾತ್ರ ಪಲಾಯನವಾದ.

ಎರಡನೇ ಸೋಲು ಕಾಣುತ್ತಿರುವುದು ಅವರು ಮಾಡಲೊರಟ ಪ್ರಯೋಗದ ವಿಷಯದಲ್ಲಿ. ಇಡೀ ದೇಶದಲ್ಲಿ ಅತಿಹೆಚ್ಚು ಚುನಾವಣಾ ಭ್ರಷ್ಟಾಚಾರ ನಡೆಯುವ ರಾಜ್ಯಗಳ ಪೈಕಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಜೊತೆಗೆ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಪೆರಿಯಾರ್ ಹುಟ್ಟುಹಾಕಿದ ದ್ರಾವಿಡ ಸಂಸ್ಕೃತಿ ಇನ್ನೂ ಢಾಳವಾಗಿದೆ. ಇನ್ನೊಂದೆಡೆ ಅತಿಹೆಚ್ಚು ದೇವಸ್ಥಾನಗಳನ್ನು ಹೊಂದಿರುವ ತಮಿಳುನಾಡು ಅದರದೇಯಾದ ಭಕ್ತಿ ಪರಂಪರೆಯನ್ನೂ ಹೊಂದಿದೆ. ಇಂಥ ವಿಶಿಷ್ಟ ನೆಲದಲ್ಲಿ ರಜನಿಕಾಂತ್ 'ಆದ್ಯಾತ್ಮದ ರಾಜಕಾರಣ' ಮಾಡುತ್ತೇನೆ ಎಂದಿದ್ದರು. ಇದು ಯಾವ ರೀತಿಯಿಂದಲೂ ಪ್ರಯೋಗ ಮಾಡಲು ಸೂಕ್ತ ವಿಷಯವಾಗಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಜನಿ ಎಂಬ ಗೊಂದಲದ ಗೂಡು

ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದರಿಂದ ವಿದಾಯ ಹೇಳುವವರಗೆ ರಜನಿಕಾಂತ್ ಹಲವು ವಿರೋಧಾಭಾಸಗಳನ್ನು ಸೃಷ್ಟಿಸಿದ್ದಾರೆ. ರಾಜಕಾರಣಿಗಳು ರಾಜಕೀಯ ಮಾಡಲೆಂದು ಕೆಲವೊಮ್ಮೆ ಗೊಂದಲ ಸೃಷ್ಟಿಸುವುದುಂಟು. ಹಾಗೆ ಮಾಡಿದಾಗ ಇಂತಹ 'ಉದ್ದೇಶಪೂರಿತ ಗೊಂದಲಗಳಿಂದ' ಹೊರಬರುವುದು ಹೇಗೆಂದು ಅವರಿಗೆ ಗೊತ್ತಿರುತ್ತದೆ. ಆದರೆ ಈ 'ಕಲೆ' ಕಲಾವಿದರಾದ ರಜನಿಕಾಂತ್ ಅವರಿಗೆ ಸಿದ್ಧಿಸಿಲ್ಲ ಎಂಬುದು ಅವರ ನಡೆಗಳಿಂದ ವೇದ್ಯವಾಗುತ್ತದೆ. 'ಮಕ್ಕಳ ಮಂದ್ರಮ್' ಪಕ್ಷ ಕಟ್ಟಿದ ಅವರು ಅದರ ಮೂಲಕ ಭಿನ್ನ ರಾಜಕಾರಣ ಮಾಡುತ್ತೇನೆ ಎಂದರು. ತಾನು ಚುನಾವಣೆಗೆ ನಿಲ್ಲದೆ, ಗದ್ದುಗೆ ಹಿಡಿಯದೆ ಬದಲಾವಣೆ ತರುತ್ತೇನೆ ಎಂದರು. ವಾಸ್ತವವಾಗಿ ಚುನಾವಣೆಗೆ ಸ್ಪರ್ಧೆಯನ್ನೇ ಮಾಡದೆ ಪಕ್ಷವನ್ನು ಅಧಿಕಾರಕ್ಕೆ ತರುವ ವಿಷಯದಲ್ಲೇ ಅವರಿಗೆ ಹಲವು ಗೊಂದಲಗಳಿದ್ದವು. 'ತಾನು ಸೋತರೇ?' ಎಂಬ ಭಯ ಇತ್ತು. ಅದು ಏಕಕಾಲಕ್ಕೆ ಗೆಲುವಿನ ಬಗ್ಗೆ ಇದ್ದ ಗೊಂದಲವೂ ಆಗಿತ್ತು. ಅದನ್ನು ಸಂಶಯ ಎಂತಲೂ ವ್ಯಾಖ್ಯಾನಿಸಬಹುದು.

ಇದಲ್ಲದೆ ತಾವು ರಾಜಕೀಯ ಪ್ರವೇಶ ಮಾಡುವ ಬಗ್ಗೆ, ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ಬದಲಾವಣೆ ತರುವ ಬಗ್ಗೆ ಹಲವು ಬಾರಿ ಮಾತನಾಡಿರುವ ರಜನಿಕಾಂತ್ 'Now or Never' (ಈಗಲ್ಲದಿದ್ದರೆ ಎಂದಿಗೂ ಸಾಧ್ಯವಿಲ್ಲ) ಎಂದು ಹೇಳುತ್ತಿದ್ದರು. ಅದನ್ನವರು ಹೇಳುತ್ತಿದ್ದುದು 'ಈಗ ಸಾಧಿಸಿಯೇ ತೀರುತ್ತೇನೆ' ಎಂಬ ಅರ್ಥದಲ್ಲಿ. ಆದರೀಗ ಅದಕ್ಕೆ ವ್ಯತಿರಿಕ್ತವಾಗಿ 'ಈಗಲೂ ಇಲ್ಲ, ಮುಂದೆಯೂ ಮಾಡುವುದಿಲ್ಲ' ಎಂದು ವಿಮುಖರಾಗಿದ್ದಾರೆ.

ರಾಜಕಾರಣ ಎಂಬುದು ಸಿನಿಮಾದಂಥಲ್ಲ. ಚಿತ್ರರಂಗದ ಒಂದೇ ಒಂದು ಸಿನಿಮಾ ಮತ್ತು ಡೈಲಾಗ್ ದಿನ ಬೆಳಗಾಗುವುದರಲ್ಲಿ 'ಹೀರೋ' ಅನ್ನು ಸೃಷ್ಟಿಮಾಡಿಬಿಡುತ್ತದೆ. ರಾಜಕಾರಣದಲ್ಲಿ ಗೆಲುವಿನ ಬೆಳೆ ಬೆಳೆಯಲು ಬೆವರು ಹರಿಸಲೇಬೇಕು. ರಜನಿಕಾಂತ್ ಈಗ ರಾಜಕೀಯದಿಂದ ದೂರ ಸರಿಯಲು ಆರೋಗ್ಯದ ನೆಪ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ವಯಸ್ಸಾಗಿಲ್ಲವಾ? ಅಥವಾ ಅವರ ಆರೋಗ್ಯ ಬಹಳ ಚೆನ್ನಾಗಿದೆಯಾ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಿವಿ ಕೇಳಿಸುವುದಿಲ್ಲ, ಆರೋಗ್ಯ ಸರಿ ಇಲ್ಲ ಎನ್ನಲಾಗುತ್ತದೆ. ಆದರೂ ಅವರು ಛಲಬಿಡದ ವಿಕ್ರಮನಂತೆ ಆಪರೇಷನ್ ಕಮಲ ಮಾಡಿಯಾದರೂ ಗದ್ದುಗೆ ಏರಲಿಲ್ಲವೇ? (ನೈತಿಕವಾಗಿ ಅದು ಸರಿಯಾದ ಕ್ರಮವೇ ಎಂಬುದು ಪ್ರತ್ಯೇಕ ಚರ್ಚಾರ್ಹ ವಿಷಯ) ಒರಿಯಾ ಭಾಷೆಯೇ ಗೊತ್ತಿಲ್ಲದೆ (ಈಗ ಸ್ವಲ್ಪ ಕಲಿತಿದ್ದಾರೆ) ನವೀನ್ ಪಾಟ್ನಾಯಕ್ ಒರಿಸ್ಸಾದ ಮುಖ್ಯಮಂತ್ರಿ ಆಗಿಲ್ಲವೇ? ರಾಜಕೀಯ ಮಾಡಲು ಬೇಕಿರುವುದು ಇಚ್ಛಾಶಕ್ತಿ. ಅದು ರಜನಿಕಾಂತ್ ಅವರಲ್ಲಿ ಹಿಂದೆಯೂ ಕಂಡಿರಲಿಲ್ಲ. ಈಗಲೂ ಕಾಣಸಿಗಲಿಲ್ಲ. ಹಾಗಾಗಿಯೇ ಅವರು ರಾಜಕೀಯ ಮಾಡಲು ಇದ್ದ ಕಡೆಯ ಅವಕಾಶವನ್ನೂ ಕೈಚೆಲ್ಲಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com