ದ್ರಾವಿಡ ನೆಲದ ರಾಜಕೀಯ ನಿರೀಕ್ಷೆಗಳಿಗೆ ದಿಢೀರ್ ತೆರೆ ಎಳೆದ ರಜನಿ ಘೋಷಣೆ

ತಮಿಳರ ತಲೈವರ್​ ರಾಜಕೀಯ ಪ್ರವೇಶ ಬಿಜೆಪಿಗೆ ಆ ರಾಜ್ಯದಲ್ಲಿ ಹೆಬ್ಬಾಗಿಲು ತೆರೆಯುವ ಒಂದು ತಂತ್ರವೆಂಬ ಮಾತುಗಳೂ ಕೇಳಿಬಂದಿದ್ದವು. ಇದು ಸಹಜವಾಗೇ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಲ್ಲಿ ತಲ್ಲಣ ಮೂಡಿಸಿತ್ತು.
ದ್ರಾವಿಡ ನೆಲದ ರಾಜಕೀಯ ನಿರೀಕ್ಷೆಗಳಿಗೆ ದಿಢೀರ್ ತೆರೆ ಎಳೆದ ರಜನಿ ಘೋಷಣೆ

ಇನ್ನೆರಡು ದಿನದಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಹೇಳಿದ್ದ ಸೂಪರ್ ಸ್ಟಾರ್ ರಜನಿಕಾಂತ್, ದಿಢೀರನೇ ಯೂ ಟರ್ನ್ ಹೊಡೆದಿದ್ದಾರೆ.

"ರಾಜಕೀಯಕ್ಕೆ ಪ್ರವೇಶ ಮಾಡದೆ ಜನರಿಗೆ ನಾನು ಮಾಡಬಹುದಾದ ಎಲ್ಲಾ ಸಹಾಯಗಳನ್ನು ಮಾಡುತ್ತೇನೆ. ಚುನಾವಣಾ ರಾಜಕಾರಣಕ್ಕೆ ನೇರವಾಗಿ ಬರಲಾಗದ್ದಕ್ಕಾಗಿ ಅಭಿಮಾನಿಗಳು ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನನ್ನ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ರಜಿನಿಕಾಂತ್​ ತಮ್ಮ ಅಭಿಮಾನಿಗಳಿಗೆ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳುನಾಡಿನ ಜನರಲ್ಲಿ ಮನವಿ ಮಾಡಿದ್ದಾರೆ.

ಆ ಮೂಲಕ ಬಹುತೇಕ ಎರಡು ದಶಕದ ಅವರ ರಾಜಕೀಯ ಪ್ರವೇಶದ ನಿರೀಕ್ಷೆಗಳಿಗೆ ತೆರೆ ಎಳೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ 2017ರಲ್ಲಿ ತಮ್ಮದೇ ಹೆಸರಿನ ರಾಜಕೀಯ ಪಕ್ಷ ಕಟ್ಟುವುದಾಗಿ ಹೇಳುವ ಮೂಲಕ ಸಮೀಪಿಸುತ್ತಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಹವಾ ಎಬ್ಬಿಸುವ ನಿರೀಕ್ಷೆ ಹುಟ್ಟಿಸಿದ್ದರು. ಆ ಮೂಲಕ ಸದ್ಯ ತಮಿಳುನಾಡು ರಾಜಕಾರಣದ ಘಟಾನುಘಟಿ ಪಕ್ಷಗಳು ಮತ್ತು ನಾಯಕರಲ್ಲಿ ಆತಂಕ ಮೂಡಿಸಿದ್ದರು.

ಆದರೆ, ಕಳೆದ ವಾರ ದಿಢೀರ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಬೆನ್ನಲ್ಲೇ ಇದೀಗ ಮಂಗಳವಾರ ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ತಾವು ಸಕ್ರಿಯ ರಾಜಕಾರಣಕ್ಕೆ ಧುಮುಕುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಸೋಮವಾರ ತಮ್ಮ ಆಪ್ತೇಷ್ಟರೊಂದಿಗೆ ಸಮಾಲೋಚನೆ ನಡೆಸಿ, ತಮ್ಮ ಆರೋಗ್ಯ ಮತ್ತು ಸದ್ಯದ ರಾಜಕೀಯದ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕುವುದರ ಸಾಧಕ ಬಾಧಕದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು.

ಆ ಬಳಿಕ, ತಾವು ರಾಜಕೀಯಕ್ಕೆ ಪದಾರ್ಪಣೆ ಮಾಡದೆ ತಮಿಳುನಾಡಿನ ಜನತೆಗೆ ತಮ್ಮ ಕೈಲಾದ ಎಲ್ಲಾ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ತಮ್ಮ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಟ್ವಿಟರ್​ನಲ್ಲಿ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಎರಡು ತಿಂಗಳ ಹಿಂದೆಯೇ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದ್ದ ರಜಿನಿಕಾಂತ್ ಡಿ.31 ರಂದು ತಮ್ಮ ಹೊಸ ರಾಜಕೀಯ ಪಕ್ಷ ಘೋಷಿಸುವ ಬಗ್ಗೆ ನಿರ್ಧಾರ ತಿಳಿಸುತ್ತೇನೆ ಎಂದಿದ್ದರು.

ಈ ನಡುವೆ ತಮಿಳುನಾಡು ರಾಜಕಾರಣದಲ್ಲಿ ಹಲವು ಮಹತ್ವದ ಬೆಳವಣಿಗೆಗಳಿಗೂ ಚಾಲನೆ ಸಿಕ್ಕಿತ್ತು. ಅದರಲ್ಲೂ ಅವರು ಬಲಪಂಥೀಯ ಧೋರಣೆ ಕಡೆ ಹೆಚ್ಚು ವಾಲಿರುವುದು ಮತ್ತು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಅವರು ಹೊಂದಿದ್ದ ನಂಟಿನ ಹಿನ್ನೆಲೆಯಲ್ಲಿ ತಮಿಳರ ತಲೈವರ್​ ರಾಜಕೀಯ ಪ್ರವೇಶ ಬಿಜೆಪಿಗೆ ಆ ರಾಜ್ಯದಲ್ಲಿ ಹೆಬ್ಬಾಗಲು ತೆರೆಯುವ ಒಂದು ತಂತ್ರವೆಂಬ ಮಾತುಗಳೂ ಕೇಳಿಬಂದಿದ್ದವು. ಇದು ಸಹಜವಾಗೇ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಲ್ಲಿ ತಲ್ಲಣ ಮೂಡಿಸಿತ್ತು. ಆದರೆ ಈಗ ರಜನಿಯ ಈ ಘೋಷಣೆ ಈವರೆಗಿನ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನೂ ತಲೆಕೆಳಗು ಮಾಡಿದೆ.

"ಕಳೆದ ಹಲವು ದಿನಗಳಿಂದ ನನ್ನ ಆರೋಗ್ಯ ಹದಗೆಟ್ಟಿದೆ. ಈ ನಡುವೆ ಕೊರೋನಾ ಆರ್ಭಟದ ನಡುವೆಯೇ ವೈದ್ಯರ ಸಲಹೆಯನ್ನೂ ಮೀರಿ ನಾನು ಹೈದ್ರಾಬಾದ್​ನಲ್ಲಿ ನಡೆಯುತ್ತಿದ್ದ 'ಅನ್ನಾತೆ' ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದೆ. ಆ ವೇಳೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ನಮ್ಮ ಚಿತ್ರೀಕರಣ ತಂಡದ ನಾಲ್ವರಿಗೆ ಸೋಂಕು ತಗುಲಿತ್ತು".

"ನಾನೂ ಪರೀಕ್ಷೆಗೆ ಒಳಗಾಗಿದ್ದೆ. ಫಲಿತಾಂಶ ನೆಗೆಟೀವ್​ ಬಂದಿತ್ತಾದರೂ, ನನ್ನ ರಕ್ತದ ಒತ್ತಡದಲ್ಲಿ ಏರುಪೇರಾಗಿತ್ತು. ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ಹಿಂದೆ ನಾನು ಡಿ.31 ರಂದು ಸಕ್ರಿಯ ರಾಜಕೀಯಕ್ಕೆ ಧುಮುಕುವುದಾಗಿಯೂ, ನನ್ನದೆ ಹೊಸ ಪಕ್ಷ ಘೋಷಣೆ ಮಾಡುವುದಾಗಿಯೂ ಹೇಳಿದ್ದೆ. ಆದರೆ, ಕಡಿಮೆ ಸಂಖ್ಯೆಯ ಚಿತ್ರೀಕರಣದ ಸೆಟ್​ನಲ್ಲೇ ಅನೇಕರಿಗೆ ಕೊರೋನಾ ಸೋಂಕು ತಗುಲಿದೆ ಎಂದರೆ, ಸಾವಿರಾರು ಸಂಖ್ಯೆಯಲ್ಲಿ ಜನಸೇರುವ ರಾಜಕೀಯ ಸಮಾವೇಶಗಳಲ್ಲಿ ಎಷ್ಟು ಜನರಿಗೆ ಸೋಂಕು ತಗುಲಬಹುದು? ಎಂಬ ಆಲೋಚನೆಯೇ ನನ್ನನ್ನು ದಿಗ್ಬ್ರಾಂತಗೊಳಿಸಿದೆ".

ಹಾಗಾಗಿ ಹೊಸ ಪಕ್ಷ ಕಟ್ಟಿ, ಅದಕ್ಕಾಗಿ ರಾಜಕೀಯ ಸಮಾವೇಶಗಳನ್ನು ಆಯೋಜಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದರೆ, ಇಂತಹ ಸಮಾವೇಶಗಳನ್ನು ನಡೆಸದೆ ರಾಜಕೀಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸುವುದು ಅಸಾಧ್ಯ. ಇಂತಹ ಗೆಲುವು ಸಿಗದಿದ್ದರೆ ನನ್ನ ದೂರದೃಷ್ಟಿಯ ರಾಜಕೀಯ ಬದಲಾವಣೆ ತರುವುದು ಸಾಧ್ಯವೇ ಇಲ್ಲ. ಹೀಗಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ನನ್ನ ತೀರ್ಮಾನವನ್ನು ಕೈಬಿಡಲು ನಾನು ನಿರ್ಧರಿಸಿದ್ದೇನೆ".

ಸಕ್ರಿಯ ರಾಜಕಾರಣಕ್ಕೆ ಬರದಿದ್ದರೂ ಸಹ ನನ್ನ ನಾಡಿನ ಜನರಿಗೆ ನನ್ನಿಂದಾಗುವ ಸಹಾಯವನ್ನು ಖಂಡಿತ ಮಾಡುತ್ತೇನೆ. ಈ ನನ್ನ ತೀರ್ಮಾನವನ್ನು ನನ್ನ ಅಭಿಮಾನಿಗಳು ಮತ್ತು ತಮಿಳರು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ" ಎಂದು ರಜನಿ ಬರೆದಿದ್ಧಾರೆ.

ಆ ಮೂಲಕ ದ್ರಾವಿಡ ನೆಲದಲ್ಲಿ, ಇತ್ತೀಚಿನ ಕಮಲ್ ಹಾಸನ್ ಬಳಿಕ ಮತ್ತೊಬ್ಬ ಸೂಪರ್ ಸ್ಟಾರ್ ರಾಜಕೀಯ ಬಿರುಗಾಳಿ ಎಬ್ಬಿಸಲಿದ್ದಾರೆ ಎಂಬ ಅಭಿಮಾನಿಗಳು ಮತ್ತು ರಾಜಕೀಯ ಚಿಂತಕರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com