ದೇಶದ ರಾಜಧಾನಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು ಕೇಂದ್ರ ಸರ್ಕಾರ ಸೋಮವಾರ 40 ರೈತ ಸಂಘಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿ ಪತ್ರ ಕಳುಹಿಸಿದೆ.
ಸರ್ಕಾರ ಮತ್ತು ರೈತರ ನಡುವೆ ಐದು ಹಂತದ ಮಾತುಕತೆಗಳು ಈಗಾಗಲೇ ನಡೆದಿದ್ದು ಒಮ್ಮತದ ತೀರ್ಮಾನಕ್ಕೆ ಬರಲಾಗಿರಲಿಲ್ಲ. ಈಗ ರೈತರೂ ಮಾತುಕತೆಗೆ ಒಪ್ಪಿದ್ದು ಡಿಸೆಂಬರ್ 30ರಂದು ವಿಜ್ಞಾನ ಭವನದಲ್ಲಿ ನಡೆಸಲುದ್ದೇಶಿಸಿರುವ ಮಾತುಕತೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.
ಕೃಷಿ ಇಲಾಖೆಯ ನಿರ್ದೇಶಕರಾದ ಸಂಜಯ್ ಅಗರ್ವಾಲ್ ರೈತ ಸಂಘವನ್ನು ಉದ್ದೇಶಿಸಿ " ರೈತರ ಎಲ್ಲಾ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡಹಿಡಿಯಲು ಸರ್ಕಾರ ಬದ್ಧವಾಗಿದೆ " ಎಂದು ಪತ್ರ ಬರೆದಿದ್ದಾರೆ. ಇದಕ್ಕೂ ಮೊದಲು ಶನಿವಾರ ರೈತ ಸಂಘಗಳು ಮಾತುಕತೆಗೆ ಒಪ್ಪಿ ಕೇಂದ್ರ ಕೃಷಿ ಸಚಿವಾಲಯಕ್ಕೆ ಪತ್ರ ಬರೆದಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರ ತರಲಿಚ್ಛಿಸಿರುವ ಮೂರೂ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕು, ರೈತರ ಬೆಳೆಗಳಿಗೆ ಸಾಮಾನ್ಯ ಕನಿಷ್ಠ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದರು. ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು" ಕೃಷಿ ಕಾಯ್ದೆಯ ಪ್ರಾಮುಖ್ಯತೆಯನ್ನು ರೈತರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
"ರೈತರ ಮೂರು ಮೂಲ ಬೇಡಿಕೆಗಳಲ್ಲದೆ ಇತರ ಬೇಡಿಕೆಗಳಿದ್ದರೂ ಮುಕ್ತ ಮನಸ್ಸಿನಿಂದ ಮಾತುಕತೆಗೆ ಸರ್ಕಾರ ಸಿದ್ಧವಿದೆ" ಎಂದೂ ಸಂಜಯ್ ಅಗರ್ವಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಕಳೆದೊಂದು ದಶಕದಲ್ಲೇ ಅತಿ ದೊಡ್ಡ ಪ್ರತಿಭಟನೆಯೆಂದು ಗುರುತಿಸಿಕೊಂಡಿದೆ. ಇದರಿಂದ ತೀವ್ರ ಮುಜುಗರಕ್ಕೊಳಗಾದ ಸರ್ಕಾರ ಬಿಜೆಪಿಯ ಹಿರಿಯ ನಾಯಕರೂ ಮಂತ್ರಿಗಳೂ ಆಗಿರುವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮ್, ತಾವರ್ ಚಂದ್ ಗೆಹ್ಲೋಟ್, ಶಿಕ್ಷಣ ಸಚಿವ ರಮೇಶ್ ಪ್ರೋಖಿಯಾಲ್ ಅವರನ್ನು ದೇಶವಿಡೀ ಸಂಚರಿಸಲು ಹೇಳಿ ಜನರ ಮನವೊಲಿಸುವ ಯೋಜನೆ ರೂಪಿಸಿದೆ.