ತಮ್ಮ ಪತ್ನಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್ ರೌತ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ವಿರೋಧಿಗಳ ಕುಟುಂಬ ಸದಸ್ಯರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು "ಅಸ್ತ್ರವಾಗಿ" ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸುವ ಒತ್ತಡಕ್ಕೆ ಮಣಿಯದ ಕಾರಣ ಇಡಿ ಸಮನ್ಸ್ ನೀಡಿರುವುದು ಬಿಜೆಪಿಯ ಹತಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಜಯ್ ರೌತ್ ಹೇಳಿದ್ದಾರೆ.
ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಶಿವಸೇನಾ ನೀಡುತ್ತದೆ ಎಂದಿರುವ ರೌತ್, "ನನ್ನ ಹೆಂಡತಿ ಹತ್ತು ವರ್ಷಗಳ ಹಿಂದೆ ಸ್ನೇಹಿತರಿಂದ ಮನೆ ಖರೀದಿಸಲು ತೆಗೆದುಕೊಂಡ 50 ಲಕ್ಷ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಕಳೆದ ಒಂದೂವರೆ ತಿಂಗಳಿನಿಂದ ನಾನು ಜಾರಿ ನಿರ್ದೇಶನಾಲಯದೊಂದಿಗೆ(ಇಡಿ) ನಿಯಮಿತವಾಗಿ ಪತ್ರವ್ಯವಹಾರ ಮಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಸಾಲಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಈಗಾಗಲೇ ಪತ್ರ ವ್ಯವಹಾರದ ಸಮಯದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ, ಅದಾಗ್ಯೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಮನ್ಸ್ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವಿಷಯದ ಕುರಿತಂತೆ ಪ್ರತಿಕ್ರಿಯಿಸಿರುವ ಯುವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಕೂಡಾ ಸಂಜಯ್ ರೌತ್ ಅವರ ಪತ್ನಿಗೆ ಇಡಿ ನೀಡಿರುವ ಸಮನ್ಸ್ ಅನ್ನು "ರಾಜಕೀಯ ಪ್ರೇರಿತ" ಎಂದು ಹೇಳಿದ್ದಾರೆ.
ಪಿಎಂಸಿ ಬ್ಯಾಂಕ್ ಹಣ ವರ್ಗಾವಣೆ ಪ್ರಕರಣದ ಸಂಬಂಧ ಡಿಸೆಂಬರ್ 29 ರಂದು ವಿಚಾರಣೆಗೆ ಹಾಜರಾಗುವಂತೆ ಸಂಜಯ್ ಪತ್ನಿ ವರ್ಷಾ ರೌತ್ ಅವರಿಗೆ ಸಮನ್ಸ್ ಅನ್ನು ಜಾರಿ ನಿರ್ದೇಶನಾಲಯ ನೀಡಿತ್ತು.
ನರೇಂದ್ರ ಮೋದಿಯವರ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಮಣಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಾರೆ ಎನ್ನುವ ಆರೋಪ ಹೊಸದೇನಲ್ಲ. ಈ ಹಿಂದೆಯೂ ಹಲವಾರು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಇಡಿ ಮೊದಲಾದ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂತೂ ಕೇಂದ್ರದ ಬಹುತೇಕ ಎಲ್ಲಾ ತನಿಖಾ ಸಂಸ್ಥೆಗಳ ತೀವ್ರ ವಿಚಾರಣೆಗೆ ಗುರಿಯಾಗಿದ್ದರು. ಸೆರೆವಾಸವನ್ನೂ ಅನುಭವಿಸಿದ್ದರು.