ಬಿಹಾರ: ತೃತೀಯಲಿಂಗಿಗಳ ಪ್ರತ್ಯೇಕ ಪೊಲೀಸ್‌ ಬೆಟಾಲಿಯನ್ ರಚಿಸಲು ಚಿಂತನೆ

ಅಂದುಕೊಂಡಂತೆ ಎಲ್ಲವೂ ನಡೆದುಬಿಟ್ಟರೆ, ಬಿಹಾರವು ʼತೃತೀಯಲಿಂಗಿಗಳ ಪ್ರತ್ಯೇಕ ಪೊಲೀಸ್‌ ಬೆಟಾಲಿಯನ್‌ʼ ಹೊಂದಿದ ಮೊದಲ ರಾಜ್ಯವಾಗುತ್ತದೆ.
ಬಿಹಾರ: ತೃತೀಯಲಿಂಗಿಗಳ ಪ್ರತ್ಯೇಕ ಪೊಲೀಸ್‌ ಬೆಟಾಲಿಯನ್ ರಚಿಸಲು ಚಿಂತನೆ

ಅಂದುಕೊಂಡಂತೆ ಎಲ್ಲವೂ ನಡೆದುಬಿಟ್ಟರೆ, ಬಿಹಾರವು ʼತೃತೀಯಲಿಂಗಿಗಳ ಪ್ರತ್ಯೇಕ ಪೊಲೀಸ್‌ ಬೆಟಾಲಿಯನ್‌ʼ ಹೊಂದಿದ ಮೊದಲ ರಾಜ್ಯವಾಗುತ್ತದೆ. ಇದುವರೆಗೂ ತೃತೀಯಲಿಂಗಿಗಳನ್ನು ಪೊಲೀಸ್‌ ಹುದ್ದೆಗೆ ನೇಮಕಾತಿ ಮಾಡಲು ಯಾವುದೇ ನಿರ್ದಿಷ್ಟ ಅಥವಾ ಪ್ರತ್ಯೇಕ ನೀತಿಯನ್ನು ರಾಜ್ಯ ಸರ್ಕಾರ ಇದುವರೆಗೂ ಹೊಂದಿಲ್ಲ. ಹಾಗಾಗಿ ಈ ಕುರಿತು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾದೊಂದಿಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅಮೀರ್‌ ಸುಭಾನಿ, ತೃತೀಯಲಿಂಗಿಗಳಿಗೆ ಮೀಸಲದ ಪೊಲೀಸ್‌ ಬೆಟಾಲಿಯನ್‌ ಯೋಜನೆ ರಾಜ್ಯ ಸರ್ಕಾರದ ಮುಂದಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. “ಸದ್ಯಕ್ಕೆ ಈ ವಿಷಯದ ಕುರಿತು ಮಾತನಾಡುವುದು ಅಕಾಲಿಕವಾಗುತ್ತದೆ. ಆದರೆ ಈ ಬೆಟಾಲಿಯನ್‌ ಯೋಜನೆ ರಾಜ್ಯ ಸರ್ಕಾರದ ಪರಿಗಣನೆಯಡಿಯಲ್ಲಿ ಇದೆ” ಎಂದು ಅವರು ಹೇಳಿರುವುದಾಗಿ TOI ವರದಿ ಮಾಡಿದೆ.

ಇದುವರೆಗೂ ಬಿಹಾರ ಪೊಲೀಸರಲ್ಲಿ ಯಾವುದೇ ತೃತೀಯಲಿಂಗಿಗಳನ್ನು ನೇಮಕ ಮಾಡಿಲ್ಲ. “ಅವರಿಗೆ ಬೆಟಾಲಿಯನ್ ನಿರ್ಮಿಸಲು ಸರ್ಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸರ್ಕಾರವು ಅನುಮೋದನೆ ನೀಡಿದ ನಂತರ, ಅವರ ನೇಮಕಾತಿಗಾಗಿ ಆಯ್ಕೆ ಮತ್ತು ಇತರ ತಾಂತ್ರಿಕ ಅಂಶಗಳ ಬಗ್ಗೆ ವಿಷಯಗಳನ್ನು ಅಂತಿಮಗೊಳಿಸಲಾಗುತ್ತದೆ” ಎಂದು ಎಡಿಜಿ (ಪ್ರಧಾನ ಕಚೇರಿ) ಜಿತೇಂದ್ರ ಕುಮಾರ್ ಹೇಳಿದ್ದಾರೆ.

ರಾಜ್ಯ ಪೊಲೀಸ್‌ ಇಲಾಖೆಗೆ ಸುಮಾರು 8,000 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡುವಾಗ ತೃತೀಯಲಿಂಗಿಗಳಿಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ ವೀರ ಯಾದವ್ ಅವರು ಅರ್ಜಿ ಸಲ್ಲಿಸಿದ ನಂತರ ಈ ಕ್ರಾಂತಿಕಾರಿ ಕ್ರಮ ಕೈಗೊಂಡಿದೆ. ನೇಮಕಾತಿ ಪ್ರಕ್ರಿಯೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ‘ಪುರುಷ’ ಮತ್ತು ‘ಸ್ತ್ರೀ’ ಆಯ್ಕೆ ಮಾತ್ರ ಲಭ್ಯವಿದ್ದ ಹಿನ್ನೆಲೆಯಲ್ಲಿ ವೀರ ಯಾದವ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ರಾಜ್ಯ ಪೊಲೀಸರಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಕ ಮಾಡುವ ಕುರಿತು ನೀತಿ ರೂಪಿಸಲು ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲು ಕಳೆದ ಒಂದು ವಾರದಲ್ಲಿ ಉನ್ನತ ಅಧಿಕಾರಿಗಳು ಹಲವಾರು ಸಭೆಗಳನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ.

"ಆಡಳಿತ ಇಲಾಖೆ ಈ ವಿಷಯದಲ್ಲಿ ನೀತಿಯನ್ನು ರೂಪಿಸುತ್ತದೆ. ಅಧಿಕಾರಿಗಳ ಒಪ್ಪಿಗೆಯ ನಂತರ, ಅದರ ಅನುಮೋದನೆಗಾಗಿ ಫೈಲ್ ಅನ್ನು ರಾಜ್ಯ ಕ್ಯಾಬಿನೆಟ್ ಮುಂದೆ ಇಡಲಾಗುವುದು, ಇದು ಪೊಲೀಸ್‌ ಇಲಾಖೆಗೆ ತೃತೀಯಲಿಂಗಿಗಳ ಪ್ರವೇಶಕ್ಕೆ ಭದ್ರ ಬುನಾದಿಯನ್ನು ನೀಡುತ್ತದೆ, ”ಎಂದು ಅಧಿಕಾರಿ ಹೇಳಿದರು.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹೈಕೋರ್ಟ್‌ನ, ನೇಮಕಾತಿ ಕುರಿತು ಸೆಂಟ್ರಲ್ ಸೆಲೆಕ್ಷನ್ ಬೋರ್ಡ್ ಆಫ್ ಕಾನ್‌ಸ್ಟೆಬಲ್ (ಸಿಎಸ್‌ಬಿಸಿ) ಯ ಜಾಹೀರಾತು ಸಾಂವಿಧಾನಿಕ ಆದೇಶವನ್ನು ಪೂರ್ಣಗೊಳಿಸುವುದಿಲ್ಲ ಎಂದು ಗಮನಿಸಿದೆ. ತೃತೀಯಲಿಂಗಿಗಳ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) 2019 ಕಾಯ್ದೆಯಡಿ ಬರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದೇ ಇಲ್ಲವೇ ಎಂಬುದರ ಕುರಿತು ಜಾಹಿರಾತಿನಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಹಾಗಾಗಿ ತಕ್ಷಣ ಪರಿಶೀಲಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಡಿಸೆಂಬರ್ 14 ರಂದು ಹೈಕೋರ್ಟ್ ಸೂಚಿಸಿತ್ತ. ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಹಾಜರಾಗಲು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವುದನ್ನು ಸದ್ಯ ನ್ಯಾಯಾಲಯವು ನಿರ್ಬಂಧಿಸಿದೆ.

ಪೊಲೀಸ್ ಇಲಾಖೆಯಲ್ಲಿ ಪ್ರಮುಖ ನೀತಿ ಬದಲಾವಣೆಗಳನ್ನು ಮಾಡಲು ಬಿಹಾರ ರಾಜ್ಯ ಸರ್ಕಾರ ಯೋಜಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷ ಫೆಬ್ರವರಿ 26 ರಂದು ರಾಜ್ಯ ಪೊಲೀಸರಲ್ಲಿ ಬುಡಕಟ್ಟು ಮಹಿಳೆಯರು ಮತ್ತು ಬಾಲಕಿಯರ ‘ಸ್ವಾಭೀಮಾನ್ ವಾಹಿನಿ’ ಯನ್ನು ಬೆಳೆಸುವ ನಿರ್ಧಾರವು ದೇಶದಲ್ಲಿ ನಡೆದ ಮೊದಲ ಕ್ರಮವಾಗಿದೆ.

ಮುಖ್ಯವಾಗಿ, ಮೀಸಲಾತಿ ಇರುವ ಮತ್ತು ಮೀಸಲಾತಿ ಇಲ್ಲದ ಎಲ್ಲಾ ವರ್ಗದ ಮಹಿಳೆಯರಿಗೆ ರಾಜ್ಯ ಪೊಲೀಸ್ ಪಡೆಯಲ್ಲಿ 35% ಮೀಸಲಾತಿ ಇದೆ, ಇದು ಕೂಡಾ ಬೇರೆ ಯಾವುದೇ ರಾಜ್ಯಕ್ಕಿಂತ ಬಿಹಾರವನ್ನು ವ್ಯತ್ಯಸ್ಥ ರೀತಿಯಲ್ಲಿ ನಿಲ್ಲಿಸುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com