ಟಿಕ್ರಿ ಗಡಿ ರಣಭೂಮಿ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು!

ಈ ವಾರಾಂತ್ಯಕ್ಕೆ ಪಂಜಾಬ್, ಹರ್ಯಾಣ, ರಾಜಸ್ತಾನದಲ್ಲಿ ಸುಗ್ಗಿ ಮುಗಿಯಲಿದ್ದು, ಸೋಮವಾರದಿಂದ ಇನ್ನೂ ಹತ್ತಾರು ಸಾವಿರ ರೈತರು ಹೋರಾಟಗಾರರು ದೆಹಲಿಯ ಗಡಿಗಳಿಗೆ ಮುತ್ತಿಗೆ ಹಾಕಲಿದ್ದಾರೆ.
ಟಿಕ್ರಿ ಗಡಿ ರಣಭೂಮಿ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು!

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟ ಒಂದು ತಿಂಗಳು ಪೂರೈಸಿದೆ. ಕೊರೆವ ಚಳಿ, ಗಾಳಿಯ ನಡುವೆ ದೆಹಲಿ ಸಂಪರ್ಕಿಸುವ ಹೆದ್ದಾರಿಗಳಲ್ಲೇ ಈ ಮೂವತ್ತು ದಿನಗಳನ್ನು ಕಳೆದಿರುವ ಹೋರಾಟಗಾರರು, ಮೈನಸ್ 4 ಡಿಗ್ರಿಯಷ್ಟು ಕಡುಶೀತದ ಹೊತ್ತಲ್ಲೂ ಹೋರಾಟದಿಂದ ಕದಲಿಲ್ಲ. ವಿಷಮ ವಾತಾವರಣ ಮತ್ತು ರಸ್ತೆ ಅಪಘಾತಗಳಿಗೆ ಈಗಾಗಲೇ 48 ಮಂದಿ ಹೋರಾಟನಿರತ ಅನ್ನದಾತರು ಬಲಿಯಾಗಿದ್ದಾರೆ. ಆದಾಗ್ಯೂ ಹೋರಾಟವನ್ನು ಹಿಮ್ಮೆಟ್ಟಿಸುವ ಸರ್ಕಾರದ ಜಲಫಿರಂಗಿ, ಅಶ್ರುವಾಯು, ಲಾಠಿ ಪ್ರಹಾರ, ರಸ್ತೆ ಅಗೆತದಂತಹ ತಂತ್ರಗಳಿಗೂ ರೈತರು ಜಗ್ಗಿಲ್ಲ.

ಈ ನಡುವೆ, ಪ್ರಧಾನಿ ಮೋದಿ ಸೇರಿದಂತೆ ಸರ್ಕಾರದ ಚುಕ್ಕಾಣಿ ಹಿಡಿದ ಮಂದಿ ರೈತ ವಿರೋಧಿ ಕಾಯ್ದೆಗಳ ವಿಷಯದಲ್ಲಿ ಹಠಮಾರಿತನ ಮುಂದುವರಿಸಿದ್ದರೆ, ಅಂತಹ ಧೋರಣೆಯನ್ನು ವಿರೋಧಿಸಿ ಅವರದೇ ಮಿತ್ರಪಕ್ಷಗಳು ಒಂದೊಂದಾಗಿ ಹೊರನಡೆಯತೊಡಗಿವೆ. ಶನಿವಾರ ಕೂಡ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಹೊರಹೋಗುವುದಾಗಿ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಘೋಷಿಸಿದೆ. ಶಹಜಹಾನ್ ಪುರ ಗಡಿಯಲ್ಲಿ ಈ ವಿಷಯವನ್ನು ಘೋಷಿಸಿರುವ ಆ ಪಕ್ಷದ ಸಂಸದ ಹನುಮಾನ್ ಬೆನಿವಾಲ್, ಸರ್ಕಾರ ರೈತರ ವಿಷಯದಲ್ಲಿ ತೋರುತ್ತಿರುವ ಪ್ರತಿಷ್ಠೆಯನ್ನು ವಿರೋಧಿಸಿ ತಾವು ಎನ್ ಡಿಎ ಯಿಂದ ಹೊರಬರುತ್ತಿರುವುದಾಗಿಯೂ, ಸಾವಿರಾರು ರೈತರೊಂದಿಗೆ ಶನಿವಾರದಿಂದಲೇ ದೆಹಲಿ ಚಲೋ ಆರಂಭಿಸುವುದಾಗಿಯೂ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ, ರೈತರ ಹೋರಾಟ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಬ್ರಿಟನ್, ಅಮೆರಿಕದಂತಹ ರಾಷ್ಟ್ರಗಳ ಸಂಸದರು ಕೂಡ ಈ ಬಗ್ಗೆ ಭಾರತ ಸರ್ಕಾರವನ್ನು ಪ್ರಶ್ನಿಸತೊಡಗಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ಡಿ.29ರಂದು ಮತ್ತೊಂದು ಸುತ್ತಿನ ಮಾತುಕತೆಗೆ ರೈತ ನಾಯಕರನ್ನು ಆಹ್ವಾನಿಸಿದ್ದು, ಮೂರೂ ಕಾಯ್ದೆಗಳನ್ನು ವಾಪಸು ಪಡೆಯಬೇಕು ಮತ್ತು ಬೆಂಬಲ ಬೆಲೆ ವ್ಯವಸ್ಥೆಯನ್ನು ಶಾಶ್ವತಗೊಳಿಸಲು ಸೂಕ್ತ ಕಾನೂನು ರೂಪಿಸಬೇಕು ಎಂಬ ತಮ್ಮ ಮೂಲ ಬೇಡಿಕೆಗೆ ಒಪ್ಪಿದರೆ ಮಾತುಕತೆಗೆ ಹಾಜರಾಗುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ್ ಟಿಕಾಯತ್ ಮತ್ತು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಇಂತಹ ಬೆಳವಣಿಗೆಗಳ ನಡುವೆ, ಕರ್ನಾಟಕದಿಂದ ಈ ಐತಿಹಾಸಿಕ ರೈತ ಕ್ರಾಂತಿಯನ್ನು ಬೆಂಬಲಿಸಿ ಕರ್ನಾಟಕ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಒಕ್ಕೂಟದ ತಂಡ ದೆಹಲಿಗೆ ತಲುಪಿದ್ದು, ಕಳೆದ ಎರಡು ದಿನಗಳಿಂದ ದೆಹಲಿಯ ಗಡಿಯ ವಿವಿಧ ಹೋರಾಟ ಸ್ಥಳಗಳಿಗೆ ಭೇಟಿ ನೀಡಿ ಧರಣಿನಿರತ ರೈತರಿಗೆ ರಾಜ್ಯ ರೈತ, ದಲಿತ ಮತ್ತು ಕಾರ್ಮಿಕ ಸಮುದಾಯದ ಬೆಂಬಲ ಘೋಷಿಸಿದೆ. ಜೊತೆಗೆ ಅವರ ಹೋರಾಟದ ಕೆಚ್ಚಿಗೆ ಶರಣು ಹೇಳಿದೆ.

‘ಪ್ರತಿಧ್ವನಿ’ ಸುದ್ದಿಜಾಲತಾಣಕ್ಕಾಗಿ ದೆಹಲಿಯ ಹರ್ಯಾಣ-ಪಂಜಾಬ್ ಗಡಿಯ ಪ್ರಮುಖ ಪ್ರತಿಭಟನಾ ಸ್ಥಳ ಟಿಕ್ರಿಗೆ ಭೇಟಿ ನೀಡಿದಾಗ ಕಂಡುಬಂದ ನೋಟ, ರೈತ ಹೋರಾಟದ ಸಂಘಟಿತ ವ್ಯವಸ್ಥೆ, ನಿರಂತರ ಹೋರಾಟಕ್ಕೆ ಅವರು ಸಜ್ಜಾಗಿ ಬಂದಿರುವ ರೀತಿ ಅಚ್ಚರಿ ಹುಟ್ಟಿಸಿತು.

ಬಹುಶಃ ದೇಶದ ಇತಿಹಾಸದಲ್ಲೇ ಇಷ್ಟೊಂದು ವ್ಯವಸ್ಥಿತವಾದ ಸಂಘಟಿತ ಹೋರಾಟ ಇದೇ ಮೊದಲಿರಬಹುದು. ಟಿಕ್ರಿ ಗಡಿಯಲ್ಲಿ ಕಿ.ಮೀಗಟ್ಟಲೆ ಸಾಲುಗಟ್ಟಿ ನಿಂತಿರುವ ರೈತರ ಟ್ಯಾಕ್ಟರು, ಲಗೇಜ್ ಆಟೋ, ಕಾರು, ಮಿನಿ ಬಸ್ ಮುಂತಾದ ವಾಹನಗಳ ನಡುವೆಯೇ ರಸ್ತೆಯ ಮಧ್ಯಭಾಗದಲ್ಲಿ ಜನ ಓಡಾಟಕ್ಕೆ ದಾರಿ ಮಾಡಿಕೊಂಡು, ಅದರ ಆಸುಪಾಸಿನಲ್ಲಿ ಉದ್ದಕ್ಕೂ ಡೇರೆಗಳನ್ನು ಹಾಕಲಾಗಿದೆ. ಆ ಡೇರೆಗಳಲ್ಲಿ ದೆಹಲಿ ಚಳಿಯಿಂದ ಜೀವ ಹಿಡಿದುಕೊಳ್ಳಲು ಬೇಕಾದ ಉಣ್ಣೆಯ ಶಾಲು, ಟೊಪ್ಪಿ, ಹೊದಿಕೆ, ಹಾಸಿಗೆ, ನಿತ್ಯ ಬಳಕೆಯ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ನಾನ ಮತ್ತು ಶೌಚಕ್ಕೆ ಮೊಬೈಲ್ ಬಾತ್ ರೂಂ- ಟಾಯ್ಲೆಟ್ ವ್ಯವಸ್ಥೆಗಳಿವೆ.

ಪ್ರತಿ 500 ಮೀಟರಿಗೊಂದು ಪ್ರತ್ಯೇಕ ಅಡುಗೆ ಮತ್ತು ಊಟದ ಲಂಗರುಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಯಾರು ಬೇಕಾದರೂ ಹೋಗಿ ಊಟ ಮಾಡಬಹುದು ಮತ್ತು ಉತ್ತಮ ಪೌಷ್ಟಿಕ ರುಚಿಕಟ್ಟಾದ ಆಹಾರ ನೀಡಲಾಗುತ್ತಿದೆ. ಚಹಾ, ತಿಂಡಿ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಅದೇ ರೀತಿಯ ಟಿಕ್ರಿ ಗಡಿಯಲ್ಲಿ ಒಂದು ಮುಖ್ಯ ವೇದಿಕೆ ಮೂಲಕ ಪ್ರತಿಭಟನಾ ಭಾಷಣ, ಧರಣಿಗಳನ್ನು ನಡೆಸಲಾಗುತ್ತಿದ್ದರೂ, ಅಲ್ಲಿ ಸೇರಿರುವ ಸುಮಾರು ನೂರಾರು ವಿವಿಧ ರೈತ, ಕಾರ್ಮಿಕ, ದಲಿತ ಸಂಘಟನೆಗಳು ತಮ್ಮ ತಮ್ಮ ವಾಸ್ತವ್ಯದ ಟೆಂಟ್ ಬಳಿಯೇ ನಿತ್ಯದ ಸಭೆ, ಚರ್ಚೆ, ಹಾಡು, ನೃತ್ಯಗಳಿಗಾಗಿ ಪ್ರತ್ಯೇಕ ಚಿಕ್ಕಚಿಕ್ಕ ವೇದಿಕೆಗಳನ್ನೂ ಮಾಡಿಕೊಂಡಿವೆ.

ಅಲ್ಲಿ ನಾಯಕರು, ಅನುಯಾಯಿಗಳು ಎಂಬ ಬೇಧಭಾವವೇ ಇಲ್ಲ. ಶಾಸಕರಿಂದ ಹಿಡಿದು ಪಂಚಾಯ್ತಿ ಪ್ರಮುಖರು, ಸಾಮಾನ್ಯ ರೈತರು ಕೂಡ ಇಡೀ ಹೋರಾಟದ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಶಾಸಕಿಯೊಬ್ಬರು ಎಲ್ಲರಂತೆ ತಮ್ಮ ತಂಡದವರಿಗೆ ರೊಟ್ಟಿ ತಟ್ಟುತ್ತಿದ್ದರೆ, ಮತ್ತೊಬ್ಬ ಗ್ರಾಮ ಮುಖಂಡರು ಅಡುಗೆ ಮಾಡಲು ಕಟ್ಟಿಗೆ ಹೊರೆ ಹೊತ್ತು ಸಾಗುತ್ತಿದ್ದರು. ಇಂತಹ ನೋಟಗಳು ಅಲ್ಲಿ ನೂರಾರು!

ಅಡುಗೆ, ವಸತಿಗಳಿಗೆ ಸಣ್ಣ ಸಣ್ಣ ತಂಡಗಳನ್ನು ರಚಿಸಲಾಗಿದ್ದು, ಆ ತಂಡದವರು ನಿತ್ಯ ತಮ್ಮ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿ ಹೋರಾಟದ ಮುಖ್ಯವೇದಿಕೆಗೆ ಧಾವಿಸುತ್ತಾರೆ. ಅಡುಗೆಗೆ ತರಕಾರಿ ವ್ಯವಸ್ಥೆ ಮಾಡುವುದು, ಧವಸ ಧಾನ್ಯ ಜೋಡಿಸುವುದು, ಕಟ್ಟಿಗೆ ಸರಬರಾಜು ಮಾಡುವುದು, ನೀರು ಒದಗಿಸುವುದು, ಸ್ನಾನ- ಶೌಚದ ನೀರಿನ ವ್ಯವಸ್ಥೆ, ಬಟ್ಟೆ ಒಗೆಯುವ ಯಂತ್ರಗಳ ನಿಭಾಯಿಸುವುದು, ಊಟದ ಲಂಗರುಗಳ ಸ್ವಚ್ಛತೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳನ್ನು ಪ್ರತ್ಯೇಕ ತಂಡಗಳಿಗೆ ವಹಿಸಲಾಗಿದೆ.

ಪ್ರತಿಭಟನಾನಿರತ ರೈತರಿಗೆ ಬೇಕಾದ ದಿನಬಳಕೆ ವಸ್ತುಗಳನ್ನು ಉಚಿತವಾಗಿ ಸರಬರಾಜು ಮಾಡಲು ಖಾಲ್ಸಾ ಏಡ್ ಎಂಬ ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಘಟನೆ, ಪ್ರತ್ಯೇಕ ಮಾಲ್ ಸ್ಥಾಪಿಸಿದ್ದು, ಅಲ್ಲಿ ಟೂತ್ ಪೇಸ್ಟ್ ನಿಂದ ಹಿಡಿದು ಮಪ್ಲರ್, ಶಾಲು, ಹೊದಿಕೆ, ಸೋಪು, ಎಣ್ಣೆಗಳವರೆಗೆ ಎಲ್ಲವನ್ನು ಉಚಿತವಾಗಿ ಧರಣಿನಿರತರಿಗೆ ನೀಡಲಾಗುತ್ತಿದೆ!

ಟಿಕ್ರಿ ಪ್ರತಿಭಟನಾನಿರತ ರೈತರ ನೆರವಿಗೆ ಅಲ್ಲಿನ ಬಹುತೇಕ ಹೋರಾಟಗಾರರು ಸೇರಿರುವ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ಕಡೆಯಿಂದ ಮಾತ್ರವಲ್ಲದೆ, ದೇಶದ ಮೂಲೆಮೂಲೆಯಿಂದ ಆಹಾರ ಧಾನ್ಯ, ಹೊದಿಕೆ, ಟೂತ್ ಪೇಸ್ಟ್, ಬ್ರಷ್, ಸಾಕ್ಸ್, ಟೊಪ್ಪಿ, ಶ್ವೆಟರ್ ಮುಂತಾದ ವಿವಿಧ ಸಾಮಗ್ರಿಗಳ ನೆರವು ಹರಿದುಬರುತ್ತಿದೆ. ಶನಿವಾರ ನಮ್ಮ ನೆರೆಯ ಕೇರಳದಿಂದ ರೈತರು ಬರೋಬ್ಬರಿ 200 ಕ್ವಿಂಟಾಲ್ ಅನಾನಸ್ ಕಳಿಸಿದ್ದರು.

ಇಡೀ ಹೋರಾಟದಲ್ಲಿ ಯಾವುದೇ ವಯೋಮಾನ, ಲಿಂಗ, ಬಡವ- ಬಲ್ಲಿದ ಎಂಬ ಬೇಧವಿಲ್ಲದೆ ಸಾವಿರಾರು ಜನ ಟೆಕ್ರಿಯಲ್ಲಿ ಜಮಾಯಿಸಿದ್ಧಾರೆ. ಕೃಷಿ ಹಿನ್ನೆಲೆಯ ವಿದ್ಯಾರ್ಥಿಗಳು, ವಿವಿಧ ವೃತ್ತಿನಿರತರು, ಮಹಿಳೆಯರು, ವಯೋವೃದ್ಧರು ಹೋರಾಟದ ಸಾಗರಕ್ಕೆ ಧುಮುಕಿದ್ದಾರೆ. ಈ ವಾರಾಂತ್ಯಕ್ಕೆ ಪಂಜಾಬ್, ಹರ್ಯಾಣ, ರಾಜಸ್ತಾನದಲ್ಲಿ ಸುಗ್ಗಿ ಮುಗಿಯಲಿದ್ದು, ಸೋಮವಾರದಿಂದ ಇನ್ನೂ ಹತ್ತಾರು ಸಾವಿರ ರೈತರು ಹೋರಾಟಗಾರರು ದೆಹಲಿಯ ಗಡಿಗಳಿಗೆ ಮುತ್ತಿಗೆ ಹಾಕಲಿದ್ದಾರೆ.

ಸದ್ಯ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಂಯುಕ್ತ ಕಿಸಾನ್ ಮೋರ್ಚಾದ ಅಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಶನಿವಾರ ಒಂದೇ ದಿನ ಟಿಕ್ರಿ ಪ್ರತಿಭಟನಾ ಮುಖ್ಯ ವೇದಿಕೆಯಲ್ಲಿ 200ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರಮುಖರು ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಆ ಪೈಕಿ ಕರ್ನಾಟಕದ ರೈತ- ದಲಿತ-ಕಾರ್ಮಿಕ ಐಕ್ಯ ಹೋರಾಟ ಒಕ್ಕೂಟದ ನಾಯಕರೂ ಸೇರಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com