ಆಧುನಿಕ ಜಗತ್ತಿನ ಮಹಾದುರಂತ ʼಹಿಂದೂ ಮಹಾಸಾಗರದ ಸುನಾಮಿʼಗೆ 16 ವರ್ಷ; ಭಾರತ ಕೈಗೊಂಡ ಎಚ್ಚರಿಕಾ ಕ್ರಮಗಳು

ಸುನಾಮಿ ಬಂದ ಮೂರೇ ವಾರದಲ್ಲಿ 168 ರಾಷ್ಟ್ರಗಳ ಪ್ರತಿನಿಧಿಗಳು ಸಭೆ ಸೇರಿ ಜಾಗತಿಕ ವಿಪತ್ತುಗಳ ಹಾನಿಯನ್ನು ಅಪಾಯವನ್ನು ಕಡಿಮೆಗೊಳಿಸಲು ಜಾಗತಿಕ ಸಹಕಾರಕ್ಕಾಗಿ Hyogo Framework for Action ಗೆ ಸಹಿ ಹಾಕಿದರು
ಆಧುನಿಕ ಜಗತ್ತಿನ ಮಹಾದುರಂತ ʼಹಿಂದೂ ಮಹಾಸಾಗರದ ಸುನಾಮಿʼಗೆ 16 ವರ್ಷ; ಭಾರತ ಕೈಗೊಂಡ ಎಚ್ಚರಿಕಾ ಕ್ರಮಗಳು

ಡಿಸೆಂಬರ್‌ 26, ಜಗತ್ತು ಒಂದು ಮಹಾ ದುರಂತಕ್ಕೆ ಸಾಕ್ಷಿಯಾದ ದಿನ. ಹೌದು, ಆಧುನಿಕ ಇತಿಹಾಸದಲ್ಲಿ ಮಹಾದುರಂತವಾಗಿ ಪರಿಗಣಿಸುವ, ದಕ್ಷಿಣ ಏಷಿಯಾದ ಕಡಲ ಕಿನಾರೆಯಲ್ಲಿದ್ದ ಸುಮಾರು 2 ಲಕ್ಷದ 30 ಸಾವಿರ ಜನರನ್ನು ಬಲಿ ಪಡೆದುಕೊಂಡ ಮಹಾಸುನಾಮಿಗೆ 16 ವರ್ಷ ಕಳೆಯಿತು.

ಸಮುದ್ರ ನಡುವೆ ಉಂಟಾದ 9.1 ರೆಕ್ಟರ್ ತೀವ್ರತೆಯ ಭೂಕಂಪನವು ಹಿಂದೂ ಮಹಾಸಾಗರದಲ್ಲಿ ಸುಮಾರು 100 ಅಡಿಗಳಷ್ಟು ಎತ್ತರದ ಭಾರೀ ಗಾತ್ರದ ರಕ್ಕಸ ಅಲೆಗಳನ್ನು ಸೃಷ್ಟಿಸಿತ್ತು.

ಸುಮಾತ್ರ, ಇಂಡೋನೇಷಿಯಾ ಸಮೀಪ ಉಂಟಾದ ಭೂಕಂಪವು ಸೃಷ್ಟಿಸಿದ ತ್ಸುನಾಮಿ ಥಾಯ್‌ಲ್ಯಾಂಡ್‌, ಶ್ರೀಲಂಕಾ, ಭಾರತ ಹಾಗೂ ಇಂಡೋನೇಷಿಯಾದ ಕಡಲ ಕಿನಾರೆಗೆ ಬಂದಪ್ಪಳಿಸುವಾಗ ಬಹುತೇಕ ಜನರು ಕ್ರಿಸ್‌ಮಸ್‌ ಸಡಗರದಲ್ಲಿ ಮುಗಿಸಿ ಕೆಲವೇ ದಿನಗಳಲ್ಲಿ ಬರುವ ಹೊಸ ವರ್ಷವನ್ನು ಎದುರು ನೋಡುತ್ತಿದ್ದರು…ಬಂದಿದ್ದು ಸುನಾಮಿ.

ಇಡೀ ನಾಗರಿಕ ಜಗತ್ತನ್ನೇ ಬೆಚ್ಚಿ ಬೀಳಿಸಿದ ಈ ಸುನಾಮಿ, ಭಾರತ ಸೇರಿದಂತೆ ಸಾಗರ ತೀರದ ಎಲ್ಲಾ ದೇಶಗಳಿಗೆ ಕಣ್ಣು ತೆರೆಯುವ ಅವಕಾಶವನ್ನು ಮಾಡಿಕೊಟ್ಟಿತು. ಅದುವರೆಗೂ ಸಮುದ್ರದ ಇಂತಹ ಭೀಕರತೆಯನ್ನು ಕಾಣದ ನಾಗರಿಕ ದೇಶಗಳು ಸುನಾಮಿಗೆ ಎಚ್ಚೆತ್ತುಕೊಳ್ಳಲು ವಿವಿಧ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ಸುನಾಮಿ ಬಂದ ಮೂರೇ ವಾರದಲ್ಲಿ 168 ರಾಷ್ಟ್ರಗಳ ಪ್ರತಿನಿಧಿಗಳು ಸಭೆ ಸೇರಿ ಜಾಗತಿಕ ವಿಪತ್ತುಗಳ ಹಾನಿಯನ್ನು ಅಪಾಯವನ್ನು ಕಡಿಮೆಗೊಳಿಸಲು ಜಾಗತಿಕ ಸಹಕಾರಕ್ಕಾಗಿ Hyogo Framework for Action ಗೆ ಸಹಿ ಹಾಕಿದರು.

ಸಮುದ್ರದ ನಡುವೆ ಉಂಟಾಗುವ ಭೂಕಂಪನಗಳನ್ನು ಪತ್ತೆ ಹಚ್ಚಲು ಹಾಗೂ ತಕ್ಷಣ ಅಪಾಯದ ಮುನ್ಸೂಚನೆ ಅರಿಯಲು ಸಂಶೋಧನೆಗಳು ಕ್ಷಿಪ್ರವಾಗಿ ನಡೆದವು. ದುರಂತಗಳನ್ನು ತಕ್ಕ ಮಟ್ಟಿಗೆ ಎದುರಿಸಲು ಹಾಗೂ ಪರಿಹಾರ ಕಾರ್ಯಗಳಿಗೆ ಸ್ಥಳೀಯ ಜನರನ್ನು ಸನ್ನದ್ಧುಗೊಳಿಸಲಾಯಿತು.

2007 ರಲ್ಲಿ ಭಾರತೀಯ ಭೂಸಚಿವಾಲಯವು ಸುನಾಮಿ ಆರಂಭಿಕ ಎಚ್ಚರಿಕಾ ವ್ಯವಸ್ಥೆಯನ್ನು (ITEWS) ಹೈದರಾಬಾದಿನಲ್ಲಿರುವ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆ (INCOIS)ಯಲ್ಲಿ ಸ್ಥಾಪಿಸಿತು.

ಭಾರತದ ವಿಜ್ಞಾನಿಗಳು ಬಾಟಮ್ ಪ್ರೆಶರ್ ರೆಕಾರ್ಡರ್ಸ್ (BPR), ಉಬ್ಬರವಿಳಿತದ ಮಾಪಕಗಳು ಮತ್ತು 24x7 ಕಾರ್ಯಾಚರಣೆಯ ಸುನಾಮಿ ಎಚ್ಚರಿಕೆ ವ್ಯವಸ್ಥೆಯೊಂದಿಗೆ ನೈಜ-ಸಮಯದ ಭೂಕಂಪನ ಮೇಲ್ವಿಚಾರಣೆಯ ಮೂಲಕ ಭಾರತೀಯ ಸಾಗರದಲ್ಲಿ ಚಲನೆಯನ್ನು ನಿಗಾವಹಿಸಲು ಮತ್ತು ಯೋಜಿಸಲು ಈಗ ಸಮರ್ಥರಾಗಿದ್ದಾರೆ.

ಸಾರ್ವಜನಿಕ, ಸಮುದಾಯ ಮುಖಂಡರು ಮತ್ತು ರಾಷ್ಟ್ರೀಯ ಮತ್ತು ಸ್ಥಳೀಯ ತುರ್ತುಸ್ಥಿತಿ ನಿರ್ವಹಣಾ ಏಜೆನ್ಸಿಗಳನ್ನು ಸಕ್ರಿಯವಾಗಿ ಒಳಗೊಳ್ಳುವ ಮೂಲಕ ಸುನಾಮಿ ಸನ್ನದ್ಧತೆಯನ್ನು ಉತ್ತೇಜಿಸಲು ಯುನೆಸ್ಕೋದ ಇಂಟರ್ ಗವರ್ನಮೆಂಟಲ್ ಓಷಿಯೋಗ್ರಾಫಿಕ್ ಕಮಿಷನ್ (IOC) ಸಮುದಾಯ ಕಾರ್ಯಕ್ಷಮತೆ ಆಧಾರಿತ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. UNESCO - IOC ಭಾಗವಾಗಿ, ITEWC ಈಗ ಎಲ್ಲಾ ಹಿಂದೂ ಮಹಾಸಾಗರದ ತೀರ ದೇಶಗಳಿಗೆ ಸಲಹೆಗಳನ್ನು ನೀಡುತ್ತದೆ. ಸುನಾಮಿ ಪತ್ತೆಗಾಗಿ ಆರಂಭಿಕ ಎಚ್ಚರಿಕೆ ವ್ಯವಸ್ಥೆಯನ್ನು ಸ್ಥಾಪಿಸಿದ ಮೊದಲ ದೇಶ ಭಾರತವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com