ದೇಶದ ಕಿರಿಯ ಮೇಯರ್‌ ಆಗಿ 21 ವರ್ಷದ ಆರ್ಯ ರಾಜೇಂದ್ರನ್‌ ಆಯ್ಕೆ

ಆರ್ಯ ಅವರು ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ, ಅವರ ತಂದೆ ರಾಜೇಂದ್ರನ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಹಾಗೂ ತಾಯಿ ಶ್ರೀಲತಾ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ
ದೇಶದ ಕಿರಿಯ ಮೇಯರ್‌ ಆಗಿ 21 ವರ್ಷದ ಆರ್ಯ ರಾಜೇಂದ್ರನ್‌ ಆಯ್ಕೆ

21 ವರ್ಷದ ಕಾಲೇಜು ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ತಿರುವನಂತಪುರಂ ನಗರ ಪಾಲಿಕೆಯ ಮುಂದಿನ ಮೇಯರ್ ಆಗಲಿದ್ದಾರೆ. ಆ ಮೂಲಕ ದೇಶದ ಕಿರಿಯ ಮೇಯರ್ ಆಗಿ ದಾಖಲೆ ಮಾಡಿದ್ದಾರೆ.

ಶುಕ್ರವಾರ ಸಭೆ ಸೇರಿದ ಸಿಪಿಎಂ ಜಿಲ್ಲಾ ಸಮಿತಿಯು ಆರ್ಯ ಅವರನ್ನು ಈ ಹುದ್ದೆಗೆ ನಾಮಕರಣ ಮಾಡಿದೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಪಕ್ಷವು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಆರ್ಯ ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನ ಬಿಎಸ್ಸಿ ಗಣಿತ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುದವನ್ಮುಗಲ್ ವಾರ್ಡ್‌ನ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಅವರು ಯುಡಿಎಫ್‌‌ ಅಭ್ಯರ್ಥಿ ಶ್ರೀಕಲರನ್ನು 2,872 ಮತಗಳಿಂದ ಸೋಲಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಾಲಾ ಸಂಘದ ರಾಜ್ಯ ಅಧ್ಯಕ್ಷರಾಗಿದ್ದ ಆರ್ಯ, ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯೂ ಹೌದು.

ಮೇಯರ್ ಹುದ್ದೆಗೆ ಯುವ ನಾಯಕರನ್ನು ಪರಿಗಣಿಸಲು ಪಕ್ಷ ನಿರ್ಧರಿಸಿದ್ದರಿಂದ ಬಿಎಸ್ಸಿ ವಿದ್ಯಾರ್ಥಿನಿಯ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.ಪಕ್ಷದ ಸಭೆಯಲ್ಲಿ ಪೆರೂರ್‌ ಕಡಾದಿಂದ ಗೆದ್ದ ಜಮೀಲಾ ಶ್ರೀಧರನ್ ಮತ್ತು ವಂಚಿಯೂರ್ ವಾರ್ಡ್‌ನ ಗಾಯತ್ರಿ ಬಾಬು ಅವರನ್ನು ಮೇಯರ್ ಹುದ್ದೆಗೆ ಪರಿಗಣಿಸಲಾಗಿತ್ತು.‌ ಕೊನೆಗೆ ಆರ್ಯ ಅವರನ್ನು ಮೇಯರ್‌ ಹುದ್ದೆಗೆ ಆಯ್ಕೆ ಮಾಡಲಾಗಿದೆಯೆಂದು ಮನೋರಮಾ ವರದಿ ಮಾಡಿದೆ.

ಈ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರ್ಯ ʼಪಕ್ಷವು ತನಗೆ ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಂತೋಷವಾಗುತ್ತಿದೆʼ ಎಂದು ತಿಳಿಸಿದ್ದಾರೆ.

ಆರ್ಯ ಅವರು ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ, ಅವರ ತಂದೆ ರಾಜೇಂದ್ರನ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಹಾಗೂ ತಾಯಿ ಶ್ರೀಲತಾ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಲಯಾಳಿ ಮಾಧ್ಯಮಗಳು ವರದಿ ಮಾಡಿವೆ.

ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ಹಾಗೂ ಬಿಜೆಪಿಯ ನಡುವೆ ಪ್ರಬಲ ಹಣಾಹಣಿ ನಡೆದಿತ್ತು. ಕೊನೆಯಲ್ಲಿ, ಎಲ್ಡಿಎಫ್ ಸರಳ ಬಹುಮತವನ್ನು (51 ಸ್ಥಾನಗಳು) ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದೇ ವೇಳೆ ಎನ್‌ಡಿಎ ತನ್ನ ಹಿಂದಿನ 35 ಸ್ಥಾನವನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ (ಈ ಬಾರಿ ಅದು ಕೇವಲ 34 ಸ್ಥಾನ ಮಾತ್ರ ಗೆದ್ದಿದೆ). ಕಳೆದ ಬಾರಿ 21 ಸ್ಥಾನಗಳನ್ನು ಹೊಂದಿದ್ದ ಯುಡಿಎಫ್ ಈ ಬಾರಿ ಕೇವಲ 10 ಸ್ಥಾನಕ್ಕೆ ಇಳಿದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com