ಕರೋನಾ ಸೋಂಕು: ತಪ್ಪು ಮಾಡಿಯೂ ಬುದ್ದಿ ಕಲಿಯದ ಭಾರತದ ಆಡಳಿತ ವ್ಯವಸ್ಥೆ

ಕಳೆದ ಬಾರಿ ಲಾಕ್‌ಡೌನ್‌ ಆಗಿದ್ದ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದವರಿಗೆ ನರಕ ದರ್ಶನವಾಗಿತ್ತು. ಬೆಳಿಗ್ಗೆ 9.30ಕ್ಕೆ ದೆಹಲಿ ಏರ್‌ಪೋರ್ಟ್‌ನಲ್ಲಿ ಬಂದಿಳಿದವರಿಗೆ ಕನಿಷ್ಟ ಕುಡಿಯಲು ನೀರು ದೊರಕಿದ್ದು ರಾತ್ರಿ 10 ಗಂಟೆಯ ನಂತರ. ಈ ಬಾರಿಯೂ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ
ಕರೋನಾ ಸೋಂಕು: ತಪ್ಪು ಮಾಡಿಯೂ ಬುದ್ದಿ ಕಲಿಯದ ಭಾರತದ ಆಡಳಿತ ವ್ಯವಸ್ಥೆ
ಸಾಂದರ್ಭಿಕ ಚಿತ್ರ

ಕರೋನಾ ಸೋಂಕನ್ನು ಎದುರಿಸಲು ಭಾರತ ಎಷ್ಟು ಸಜ್ಜಾಗಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದಾಗಲೇ, ಕರೋನಾ ಕರಿನೆರಳು ಭಾರತವನ್ನು ಆವರಿಸಿಬಿಟ್ಟಿತ್ತು. ಭಾರತ ಅದರ ವಿರುದ್ದ ಹೋರಾಡಲು ಸಿದ್ದವೇ ಇರಲಿಲ್ಲ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗಾಗಿ ಸರತಿ ಸಾಲಿನಲ್ಲಿ ಕೂತು ಸೊರಗಿದ ಮಂದಿಯೆಷ್ಟೋ. ಆದರೆ, ಈ ಎಲ್ಲಾ ಘಟನೆಗಳಿಂದ ಭಾರತ ಸರ್ಕಾರ ಪಾಠ ಕಲಿತಿದೆಯೇ, ಎಂದು ಪ್ರಶ್ನಿಸಿದರೆ, ಅದಕ್ಕೆ ಸಿಗುವ ಸ್ಪಷ್ಟ ಉತ್ತರ ಇಲ್ಲ ಎಂದು.

ಕಳೆದ ಬಾರಿ ಲಾಕ್‌ಡೌನ್‌ ಆದಾಗ ದೆಹಲಿ ಅಂತರಾಷ್ಟ್ರೀಯ ವಿಮಾನದಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರು 12 ಗಂಟೆಗಳಿಗೂ ಹೆಚ್ಚು ಕಾಲ ಅನ್ನಾಹಾರವಿಲ್ಲದೇ ಪರಿತಪಿಸಿದ ಕುರಿತು ಪ್ರತಿಧ್ವನಿ ವಿಶೇಷವಾದ ವರದಿ ಪ್ರಕಟಿಸಿತ್ತು. ಕನ್ನಡಿಗರಾದ ಸಂಘರ್ಷ್‌ ನಾವಡ ಎಂಬವರು, ದೆಹಲಿಯಲ್ಲಿ ತಾವು ಪಟ್ಟ ಪಾಡನ್ನು ಕಣ್ಣಿಗೆ ಕಟ್ಟುವ ರೀತಿ ವಿವರಿಸಿದ್ದರು.

ಸಾಂದರ್ಭಿಕ  ಚಿತ್ರ
ಊಟ ಕೇಳಿದರೆ FIR ಹಾಕ್ತೀವಿ: ಅನಿವಾಸಿ ಭಾರತೀಯರ ಮೇಲೆ ದೆಹಲಿ ಪೊಲೀಸರ ದರ್ಪ

ಈಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್‌ ಎರಡನೇ ಅಲೆ ಯುಕೆಯಲ್ಲಿ ಆರಂಭವಾದಾಗ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಸರ್ಕಾರ, ಪ್ರಯಾಣಿಕರನ್ನು ತಾಸುಗಟ್ಟಲೆ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳುವಂತೆ ಮಾಡಿದೆ. ಕರೋನಾ ತಪಾಸಣಾ ಪರೀಕ್ಷೆ ನಡೆಸದೇ ಪ್ರಯಾಣಿಕರು ಏರ್‌ಪೋರ್ಟ್‌ನಿಂದ ಹೊರ ಬರುವಹಾಗಿಲ್ಲ ಎಂಬ ಕಟ್ಟಪ್ಪಣೆಯನ್ನೂ ಸರ್ಕಾರ ವಿಧಿಸಿದೆ.

ನೂರಾರು ಪ್ರಯಾಣಿಕರು ಲಂಡನ್‌ನಿಂದ ಭಾರತಕ್ಕೆ ಮರಳುವವರಿದ್ದಾರೆ ಎಂಬ ವಿಚಾರ ತಿಳಿದಿದ್ದರೂ, ಏರ್‌ಪೋರ್ಟ್‌ ಸಿಬ್ಬಂದಿ ಮಾತ್ರ ತಮ್ಮ ದಿವ್ಯ ನಿರ್ಲಕ್ಷ್ಯವನ್ನು ಮತ್ತೆ ಬಿಚ್ಚಿಟ್ಟಿದ್ದಾರೆ. ಈ ಬಾರಿ ಯುಕೆಯಿಂದ ಮರಳಿದ ಪ್ರಯಾಣಿಕರು ಸುಮಾರು ಎಂಟು ತಾಸು ತಮ್ಮ ಕೋವಿಡ್‌ ಪರೀಕ್ಷೆಯ ವರದಿಗೆ ಕಾದು ಕುಳಿತಿದ್ದಾರೆ.

ಹೊಸ ತಳಿಯ ಕರೋನಾ ವೈರಾಣು ಯುಕೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಡಿಸೆಂಬರ್‌ 22ರಿಂದ 31ರವರೆಗೆ ಯುಕೆಯಿಂದ ಭಾರತಕ್ಕೆ ಮರಳುವ ಎಲ್ಲಾ ವಿಮಾನಯಾನವನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧ ಹೇರುವ ಮೊದಲು ಟಿಕೆಟ್‌ ಪಡೆದಿದ್ದ ಪ್ರಯಾಣಿಕರ ಆಗಮನಕ್ಕೆ ಅವಕಾಶವಿದ್ದು, ಅವರ ಪರೀಕ್ಷೆಗೆ ಸರಿಯಾದ ವ್ಯವಸ್ಥೆಯನ್ನು ಮಾಡುವ ಗೋಜಿಗೆ ನಿಲ್ದಾಣದ ಅಧಿಕಾರಿಗಳು ಹೋಗಲಿಲ್ಲ.

ಈ ಕುರಿತಾಗಿ ತಮ್ಮ ವೇದನೆ ಹೇಳಿಕೊಂಡಿರುವ ಪ್ರಯಾಣಿಕರೊಬ್ಬರು, ಕಳೆದ ರಾತ್ರಿಯಿಂದ ಏರ್‌ಪೋರ್ಟ್‌ನಲ್ಲಿ ಇದ್ದೇವೆ. ಸುಮಾರು 500ಕ್ಕೂ ಹೆಚ್ಚು ಜನರು ಇಲ್ಲಿದ್ದಾರೆ. ಏರ್‌ಪೋರ್ಟ್‌ ಹೊರಗಡೆಯೂ ಹೋಗಲು ಬಿಡುತ್ತಿಲ್ಲ. ಇಲ್ಲಿಯ ಸಾಮಾಜಿಕ ಅಂತರ ಪಾಲಿಸಲು ಸಾಧ್ಯವಾಗುತ್ತಿಲ್ಲ, ಎಂದು ಹೇಳಿದ್ದಾರೆ.

ಇದಕ್ಕೆ ಟ್ವಿಟರ್‌ ಮೂಲಕ ಉತ್ತರ ನೀಡಿದ್ದ ದೆಹಲಿಯ ಇಂದಿರಾ ಗಾಂಧಿ ಏರ್‌ಪೋರ್ಟ್‌ ಆಡಳಿತ ಮಂಡಳಿಯು, ಆದಷ್ಟು ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿತ್ತು.

ಕಳೆದ ಬಾರಿ ಲಾಕ್‌ಡೌನ್‌ ಆಗಿದ್ದ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದವರಿಗೆ ನರಕ ದರ್ಶನವಾಗಿತ್ತು. ಬೆಳಿಗ್ಗೆ 9.30ಕ್ಕೆ ದೆಹಲಿ ಏರ್‌ಪೋರ್ಟ್‌ನಲ್ಲಿ ಬಂದಿಳಿದವರಿಗೆ ಕನಿಷ್ಟ ಕುಡಿಯಲು ನೀರು ದೊರಕಿದ್ದು ರಾತ್ರಿ 10 ಗಂಟೆಯ ನಂತರ. ಅಲ್ಲಿದ್ದ ವೃದ್ದರು ಹಾಗೂ ಮಕ್ಕಳ ಪಾಡು ಮಾತ್ರ ಹೇಳತೀರದು.

ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ, ಕಣ್ಣ ಮುಂದೆಯೇ ನಾವು ಕಲಿಯಬೇಕಾದ ಪಾಠವಿದ್ದರೂ ಸರ್ಕಾರ ಮತ್ತು ಕಾರ್ಯಾಂಗ ತನ್ನ ಕಣ್ಣುಮುಚ್ಚಿಕೊಂಡು ಇನ್ನೊಮ್ಮೆ ತಟ್ಟೆ ಬಾರಿಸಿ ದೀಪ ಹಚ್ಚಲು ಹೇಳಿದರೂ ಅದರಲ್ಲಿ ಆಶ್ಚರ್ಯಪಡುವಂತದ್ದು ಏನೂ ಇಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com